For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ತ್ವಚೆ ಒಣಗುವುದನ್ನು ತಡೆಗಟ್ಟಲು ಕೆಲ ಬ್ಯೂಟಿ ಟಿಪ್ಸ್

|

ಚುಮು ಚಳಿ ಅದಾಗಲೇ ಅಡಿಯಿಟ್ಟಾಗಿದೆ! ಚಳಿಗಾಲ ಶುರುವಾಗ್ತಿದ್ದ ಹಾಗೇನೇ ಹಲವಾರು ಆರೋಗ್ಯ ಸಮಸ್ಯೆಗಳನ್ನೂ ತನ್ನ ಜೊತೇಗೇನೇ ಕರ್ಕೋಂಡೇ ಬರುತ್ತೆ! ಕೆಮ್ಮು, ಶೀತ, ಜ್ವರ, ಕಫ಼ ಕಟ್ಟೋದು, ಉಬ್ಬಸ ಮೊದಲಾದ ಉಸಿರಾಟಕ್ಕೆ ಸಂಬಂಧಿಸಿರೋವಂಥವು, ಮಲಬದ್ಧತೆಯಂತಹ ಜೀರ್ಣಕ್ರಿಯೆಗೆ ಸಂಬಂಧಿಸಿರೋವಂಥವು, ಸಂದುನೋವು, ಕೀಲುನೋವು, ವಾತದ ತೊಂದರೆ ಇತ್ಯಾದಿಗಳೆಲ್ಲ ಹೆಚ್ಚಾಗೋದು ಚಳಿಗಾಲದಲ್ಲೇ.

ಇದುವರೆಗೂ ಹೇಳಿರೋ ಇವೆಲ್ಲ ತೊಂದರೆಗಳು ಶರೀರದ ಒಳಭಾಗದಲ್ಲಿ ಆಗೋವಂಥವು. ಆದ್ರೆ ಈ ಚಳಿಗಾಲ ಅನ್ನೋದು ದೇಹದ ಹೊದಿಕೆ ಅಂತಾ ಅನ್ನಿಸ್ಕೊಂಡಿರೋ ಚರ್ಮವನ್ನೂ ಬಿಡೋಲ್ಲ!! ಚರ್ಮ ಸುಕ್ಕುಗಟ್ಟೋದು, ತುಟಿಗಳಲ್ಲಿ ಬಿರುಕು ಉಂಟಾಗೋದು, ಚರ್ಮ ಒಣಗೋದು ಇಂಥ ಎಲ್ಲ ಕಿರಿಕಿರಿಗಳುಂಟಾಗೋದು ಚಳಿಗಾಲದಲ್ಲೇ. ಚಳಿಗಾಲದಲ್ಲಿ ಚರ್ಮದ ಆರೋಗ್ಯಾನಾ ಕಾಪಾಡ್ಕೊಳ್ಳೋದು ಅಂದ್ರೆ ಅದು ನಿಜಕ್ಕೂ ಒಂದು ಸವಾಲೇ.

ಹಾಗಾಗಿ, ವಿಶೇಷವಾಗಿ ನಿಮ್ಮ ಚರ್ಮದ ಆರೋಗ್ಯಾನಾ ಕಾಪಾಡ್ಕೊಳ್ಳೋಕೆ ನೆರವಾಗೋದಕ್ಕಂತಾನೇ ನಾವು ಈ ಲೇಖನಾನಾ ಸಿದ್ಧಪಡಿಸಿದ್ದೀವಿ. ಲೇಖನದಲ್ಲಿರೋ ಪರಿಹಾರೋಪಾಯಗಳನ್ನ ಅನುಸರಿಸಿದ್ರೆ ಒಣಚರ್ಮದ ಕಿರಿಕಿರಿಯಿಂದ ನೀವು ಪಾರಾಗ್ಬೋದು!!

ಮೈ ಕೊರೆಯೋ ಚಳಿಯಿಂದ ಮೈನಾ ಬೆಚ್ಚಗಾಗಿಸಿಕೊಳ್ಳೋಕೆ ಒಂದು ಕಪ್ ನಷ್ಟು ಬಿಸಿಯಾದ ಚಾಕಲೇಟ್ ಪೇಯ ಒಂದು ಪರಿಪೂರ್ಣ ಆಯ್ಕೆಯೇನೋ ಸರಿ, ಆದರೆ ಚಳಿಗಾಲದಲ್ಲಿ ನಮ್ಮ ಶರೀರವಷ್ಟೇ ಅಲ್ಲ ಬದಲಿಗೆ ನಮ್ಮ ತ್ವಚೆಗೂ ಸಾಕಷ್ಟು ಉಪಚಾರದ ಅಗತ್ಯ ಇದೆ. ಯಾರದೇ ಚರ್ಮ ಅದ್ಯಾವುದೇ ಥರದ್ದಾಗಿರಲೀ, ಚಳಿಗಾಲದಲ್ಲಿ ಒಣಚರ್ಮದ ಕಿರಿಕಿರಿ ಉಂಟಾಗೋದು ಸರ್ವೇಸಾಮಾನ್ಯ. ಚಳಿಗಾಲದ ತಂಗಾಳಿ ಮೊದಲೇ ಶುಷ್ಕವಾಗಿರುತ್ತೆ. ಚಳಿಯಿಂದ ತಪ್ಪಿಸ್ಕೋಬೇಕೂ ಅಂತಾ ಮನೆಯನ್ನ ಬೆಚ್ಚಗೆ ಇಡೋವಂತಹ ಶಾಖವ್ಯವಸ್ಥೆಯನ್ನ ಮಾಡ್ಕೊಂಡಿರ್ತೀವಿ. ಈ ಶಾಖ ಚರ್ಮದ ಮೇಲ್ಪದರದ ತೇವಾಂಶವನ್ನ ಹೀರಿ ಚರ್ಮವನ್ನ ಮತ್ತಷ್ಟು ಶುಷ್ಕವಾಗಿಸಿಬಿಡುತ್ತೆ.

"ನಿಮ್ಮ ಚರ್ಮವನ್ನ ಆರೈಕೆ ಮಾಡ್ಕೋಳ್ಳೋವಂತಹ ದಿನನಿತ್ಯದ ಚಟುವಟಿಕೆ ತೀರಾ ಪ್ರಯಾಸಕರದ್ದಾಗಿರಬೇಕೆಂದೇನೂ ಇಲ್ಲ ಅಥವಾ ಚರ್ಮದ ಆರೈಕೆಗೆ ನೂರೆಂಟು ಉತ್ಪನ್ನಗಳ ಅಗತ್ಯಾನೂ ಇಲ್ಲ. ನೀವು ನಿಮ್ಮ ತ್ವಚೆಯ ಮೇಲೆ ಹಚ್ಚಿಕೊಳ್ಳುವಂತಹದ್ದು ಮತ್ತು ದೇಹಾನಾ ಒಳಗಿನಿಂದಲೇ ಪೋಷಿಸೋದಕ್ಕೆ ದೇಹದೊಳಗೆ ನೀವು ಇಳಿಸಿಕೊಳ್ಳುವಂತಹದ್ದು - ಇವೆರಡರ ನಡುವೆ ಸಮತೋಲನವನ್ನ ಕಾಯ್ದುಕೊಳ್ಳೋದೇ ಚರ್ಮವನ್ನ ಆರೋಗ್ಯವಾಗಿಟ್ಟುಕೊಳ್ಳೋದರ ಗುಟ್ಟು. ತ್ವಚೆಯ ಆರೈಕೆಯ ನಿಮ್ಮ ದಿನನಿತ್ಯದ ಚಟುವಟಿಕೆ; ಅದೆಷ್ಟೇ ಚಿಕ್ಕದಿರಲೀ ಇಲ್ಲವೇ ಅದೆಷ್ಟೇ ದೊಡ್ಡದಾಗಿರಲೀ ಅದನ್ನ ನೀವು ನಿರಂತರವಾಗಿ ಪಾಲಿಸೋದನ್ನ ಖಚಿತಪಡಿಸಿಕೊಳ್ಳಿ. ಅಷ್ಟಕ್ಕೂ ಸಾವಿರ ಮೈಲುಗಳ ಪಯಣ ಒಂದು ಹೆಜ್ಜೆಯಿಂದಲೇ ಆರಂಭ ಆಗೋದಲ್ಲವೇ ?" ಅಂತಾ ಪ್ರಶ್ನಿಸುತ್ತಾರೆ ಸೌಂದರ್ಯ ತಜ್ಞೆ ಶ್ರದ್ಧಾ ಗುರುಂಗ್.

ಶುಷ್ಕ ತ್ವಚೆಯ ಕಿರಿಕಿರಿಯಿಂದ ಪಾರಾಗೋದಕ್ಕೆ ಇಲ್ಲೊಂದಿಷ್ಟು ಪರಿಹಾರೋಪಾಯಗಳನ್ನ ಪಟ್ಟಿ ಮಾಡಿದ್ದೇವೆ ನೋಡಿ....

 ಮುಖವನ್ನು ಆಗಾಗ ತೊಳೆಯಬೇಡಿ

ಮುಖವನ್ನು ಆಗಾಗ ತೊಳೆಯಬೇಡಿ

ನಿಮ್ಮ ಮುಖವನ್ನ ಅತಿಯಾಗಿ ತೊಳೆದುಕೊಳ್ಳೋಕೆ ಹೋಗ್ಬೇಡಿ. ಒಣಹವೆ ಈಗಾಗ್ಲೇ ಕಾಲಿಟ್ಟಾಗಿದೆ, ಇಂತಹ ಪರಿಸ್ಥಿತೀಲೀ ಮುಖಾನೇ ಪದೇ ಪದೇ ತೊಳ್ಕೊಳ್ತಾ ಇದ್ರೆ ಅದರಿಂದ ಮುಖದ ತ್ವಚೆಗೆ ಹಾನಿಯಾಗೋದೇ ಹೆಚ್ಚು. ದಿನಕ್ಕೆ ಎರಡು ಬಾರಿ ಹದವಾಗಿ ಮುಖಾನಾ ತೊಳ್ಕೊಂಡ್ರೆ ಸಾಕು. ಅಥವಾ ಈ ವಿಚಾರದಲ್ಲಿ ನಿಮ್ಮ ಚರ್ಮರೋಗ ತಜ್ಞರ ಸಲಹೆಯಂತೆ ನಡೆದುಕೊಳ್ಳಿ

ತುಂಬಾ ಬಿಸಿ ನೀರಿನ ಸ್ನಾನ ಒಳ್ಳೆಯದಲ್ಲ

ತುಂಬಾ ಬಿಸಿ ನೀರಿನ ಸ್ನಾನ ಒಳ್ಳೆಯದಲ್ಲ

ತೀರಾ ಬಿಸಿಯಾಗಿರೋ ನೀರಿನಿಂದ ಸ್ನಾನ ಮಾಡೋ ಬದ್ಲು ಉಗುರು ಬೆಚ್ಚಗಿನ ನೀರಿನಿಂದ ಸ್ನಾನಮಾಡಿ ಮತ್ತೆ ಹಾಗೇನೇ ಸ್ನಾನವನ್ನ ಬೇಗ ಮುಗಿಸೋದರ ಕಡೆ ಗಮನ ಕೊಡಿ. ತುಂಬಾ ಹೊತ್ತಿನವರೆಗೆ ತೀರಾ ಬಿಸಿಯಾಗಿರೋ ನೀರಿನಿಂದ ಸ್ನಾನ ಮಾಡಿದ್ರೆ, ಆ ಬಿಸಿನೀರು ನಿಮ್ಮ ಮೈಯಿಂದ ನೈಸರ್ಗಿಕ ತೈಲಾಂಶವನ್ನ ಹೋಗಲಾಡಿಸಿಬಿಡುತ್ತೆ. ಹೀಗಾದ್ರೆ ಚರ್ಮ ಇನ್ನಷ್ಟು ಶುಷ್ಕವಾಗುತ್ತೆ.

ಮಾಯಿಶ್ಚರೈಸರ್ ಹಚ್ಚಿ

ಮಾಯಿಶ್ಚರೈಸರ್ ಹಚ್ಚಿ

ಇನ್ನಷ್ಟು ದಪ್ಪಗಿರೋ ಮೊಶ್ಚರೈಸರ್ ನಿಂದ ನಿಮ್ಮ ಮೈಕೈನಾ ಮಾಲೀಸು ಮಾಡಿ. ಜೊತೆಗೆ ಸೀರಮ್ ಗಳನ್ನ ಮತ್ತು/ಅಥವಾ ಫ಼ೇಷಿಯಲ್ ಆಯಿಲ್ ಗಳನ್ನ ಬಳಸಿಕೊಳ್ಳಿ

ಒಂದೈದು ನಿಮಿಷ ಪುರುಸೊತ್ತು ಮಾಡ್ಕೊಂಡು, ನೀವು ಉಪಯೋಗಿಸ್ತಾ ಇರೋ ಫ಼ೇಷಿಯಲ್ ಆಯಿಲ್ ಗಳ ಹಿನ್ನೆಲೇನಾ ಒಂದ್ಸಲ ಪರೀಕ್ಷೆ ಮಾಡಿ. ಮೈಕೈ ಮೇಲಿರೋ ಸೂಕ್ಷ್ಮ ರಂಧ್ರಗಳನ್ನ ಮುಚ್ಚದೇ ಇರೋ ರೀತೀಲಿ ಶರೀರಕ್ಕೆ ತೈವಾಂಶವನ್ನ ಕೋಡೋವಂತಾ ತೈಲಗಳನ್ನ ಆರಿಸಿಕೊಳ್ಳಿ. ಅವಕಾಡೋ ಮತ್ತು ಕುಸುಂಬೆ ಗಿಡದ ತೈಲಗಳು ಮೈ ಮಾಲೀಸು ಮಾಡ್ಕೊಳ್ಳೋದಕ್ಕೆ ತುಂಬಾನೇ ಉತ್ತಮ.

ನಿಮ್ಮ ಮುಖವನ್ನ ಮೊಯಿಶ್ಚರೈಸ್ ಮಾಡ್ಕೊಳ್ಳೋ ಹಾಗೇನೇ ನಿಮ್ಮ ಮೈಯನ್ನೂ ಮೊಯಿಶ್ಚರೈಸ್ ಮಾಡ್ಕೊಳ್ಳಿ. ಮೊಯಿಶ್ಚರೈಸಿಂಗ್ ಷವರ್ ಜೆಲ್ ಗಳು ಈ ನಿಟ್ಟಿನಲ್ಲಿ ಅತ್ಯಂತ ಸೂಕ್ತ. ನಿಮ್ಮ ಚರ್ಮ ಎಷ್ಟು ಒಣಕಲಾಗಿದೆ ಅನ್ನೋದನ್ನ ಅವಲಂಬಿಸಿಕೊಂಡು ಜೆಲ್ ನ ಬಳಕೆಯ ನಂತರ ಬಾಡಿ ಲೋಶನ್/ಬಾಡಿ ಬಟರ್ ಅನ್ನ ಶರೀರಕ್ಕೆ ಲೇಪಿಸಿಕೊಳ್ಳಬೇಕು.

ಧಾರಾಳವಾಗಿ ನೀರು ಕುಡೀರಿ ಮತ್ತು ಚೆನ್ನಾಗಿ ತಿನ್ನಿರಿ (ಹಸಿರುಸೊಪ್ಪು, ಹಸಿರು ತರಕಾರಿಗಳು, ದಾಳಿಂಬೆ ಇತ್ಯಾದಿ). ನಿಮ್ಮ ದೇಹವನ್ನ ಒಳಗಿನಿಂದ ನೀವು ಪೋಷಣೆ ಮಾಡದೇ ಇದ್ರೆ ಮತ್ತು ಚೆನ್ನಾಗಿ ದ್ರವ ಪದಾರ್ಥಗಳನ್ನ ಸೇವಿಸದೇ ಇದ್ರೆ, ತ್ವಚೆಯ ಆರೈಕೆಯ ಉತ್ಪನ್ನಗಳು ತಾವೇ ತಾವಾಗಿ ನಿಮಗೆ ಏನೂ ಸಹಾಯ ಮಾಡಲಾರವು

ನಿಮ್ಮ ಮೈಮೇಲೆ ನೀವು ಹಚ್ಚಿಕೊಳ್ಳೋ ಉತ್ಪನ್ನದ ಮೊದಲನೇ ಪದರದೊಂದಿಗೆ ಫ಼ೇಷಿಯಲ್ ಆಯಿಲ್/ಮೊಯಿಶ್ಚರೈಸರ್ ಅನ್ನ ಬೆರೆಸಿಕೊಂಡ್ರೆ ನಿಜಕ್ಕೂ ತುಂಬಾ ಉತ್ತಮ. ನಿಮ್ಮ ಚರ್ಮ ಒಣಕಲಾಗದ ರೀತಿಯಲ್ಲಿ ಸೌಂದರ್ಯವರ್ಧಕಗಳನ್ನ ಉಪಯೋಗಿಸಿ.

ಲಿಪ್‌ಬಾಮ್ ಹಚ್ಚಿ

ಲಿಪ್‌ಬಾಮ್ ಹಚ್ಚಿ

ಒಣಕಲಾಗಿ ಬಿರುಕು ಬಿಟ್ಟಿರುವ ತುಟಿಗಳಿಗೆ ತುಪ್ಪ ಹಚ್ಚಿ. "ತುಟಿ ಮಾಸ್ಕ್ ನ ರೀತಿಯಲ್ಲಿ, ತುಪ್ಪವನ್ನ ತುಟಿಗಳಿಗೆ ಹಚ್ಚಿ ಅದನ್ನ ರಾತ್ರಿಯಿಡೀ ನಾನು ಹಾಗೆಯೇ ಇರಗೊಡುತ್ತೇನೆ. ಬೆಳಗ್ಗೆ ಎದ್ದಾಗ ತುಟಿಗಳು ಆರೋಗ್ಯಯುತವಾಗಿ, ಜಲಾಂಶ ತುಂಬಿಕೊಂಡು, ಎಳೆಯದಾಗಿರುತ್ತವೆ. ತುಪ್ಪದಲ್ಲಿರೋ ಕೊಬ್ಬಿನಾಮ್ಲಗಳು ತುಟಿಗಳನ್ನ ಸುಸ್ಥಿತಿಯಲ್ಲಿಟ್ಟು ಅವುಗಳಿಗೆ ಪೋಷಣೆ ಒದಗಿಸುತ್ತವೆ" ಅಂತಾ ಹೇಳ್ತಾರೆ ಗುರುಂಗ್ ಅವರು.

ವಾತಾವರಣದಲ್ಲಿ ತೇವಾಂಶವನ್ನ ಉಳಿಸಿಕೊಳ್ಳೋ ನಿಟ್ನಲ್ಲಿ ಹ್ಯೂಮಿಡಿಫ಼ಯರ್ ಅನ್ನ ಸೇರಿಸೋದೂ ತುಂಬಾನೇ ಸಹಕಾರಿಯಾಗಿರುತ್ತೆ. ಹೀಗೆ ಮಾಡಿದಲ್ಲಿ ನಿಮ್ಮ ಚರ್ಮ ಒಣಕಾಲಗೋದನ್ನ ಅದು ತಡೆಯುತ್ತೆ.

ಪಾದಗಳ ಬಿರುಕು ತಡೆಗಟ್ಟುವುದು ಹೇಗೆ?

ಪಾದಗಳ ಬಿರುಕು ತಡೆಗಟ್ಟುವುದು ಹೇಗೆ?

ತುಂಬಾ ಜನರ ವಿಷಯದಲ್ಲಿ ಈ ಚಳಿಗಾಲದ ಇನ್ನೊಂದು ದೊಡ್ಡ ಕಿರಿಕಿರಿ ಅಂದ್ರೆ ಅದು ಶುಷ್ಕವಾದ, ಒಡೆದ ಹಿಮ್ಮಡಿಗಳು. ಈ ಕಿರಿಕಿರಿಯಿಂದ ಪಾರಾಗೋಕೆ ಇರೋ ಅತ್ಯಂತ ಸುಲಭವಾದ ದಾರಿ ಯಾವುದಂದ್ರೆ, ಮಲಗೋದಕ್ಕಿಂತ ಮೊದಲು ಹಿಮ್ಮಡಿಗಳಿಗೆ ದಪ್ಪವಾದ ಮೊಯಿಶ್ಚರೈಸರ್ ಅನ್ನ ಹಚ್ಚೋದು ಮತ್ತು ರಾತ್ರಿಯಿಡೀ ಸಾಕ್ಸ್ ಗಳನ್ನ ಹಾಕ್ಕೊಂಡಿರೋದು. ಈ ರೀತಿ ಸ್ವಲ್ಪ ದಿನ ಮಾಡಿದ್ರೆ ನಿಮ್ಮ ಹಿಮ್ಮಡಿಗಳ ಪರಿಸ್ಥಿತಿ ಅದೆಷ್ಟೋ ಸುಧಾರಿಸುತ್ತೆ, ಅದೂ ಬಹಳ ಬೇಗನೇ!

ತ್ವಚೆಯ ಆರೈಕೆಯ ನಿಮ್ಮ ದಿನಚರಿಗೆ ಹಯಾಲ್ಯುರೋನಿಕ್ ಆಮ್ಲವನ್ನ ಸೇರಿಸಿಕೊಂಡ್ರೆ ಅದಂತೂ ಜಾದೂ ಥರ ಕೆಲ್ಸ ಮಾಡುತ್ತೆ. ಮಾರುಕಟ್ಟೆಯಲ್ಲಿ ಬಗೆಬಗೆಯ ಸೀರಮ್ ಗಳು ಸಿಗುತ್ವೆ. ಇವುಗಳನ್ನ ನಿಮ್ಮ ತ್ವಚೆಯ ಆರೈಕೆಯ ದಿನಚರಿಗೆ ಸೇರಿಸಿಕೊಳ್ಳೋದು ನಿಜಕ್ಕೂ ಒಳ್ಳೇ ಆಲೋಚನೆ.

ಚಳಿಗಾಲದಲ್ಲಿ ಚರ್ಮ ಒಣಕಲಾಗೋದು ತೀರಾ ಸಾಮಾನ್ಯವಾಗಿರೋ ಸಂಗತಿ. ನಾವು ಈ ಮೇಲೆ ಕೊಟ್ಟಿರೋ ಸಲಹೆಗಳು ನಿಮಗೆ ನೆರವಾಗುತ್ತವೆಯಾದ್ರೂ ಕೂಡ, ಕೆಲವೊಂದ್ಸಲ ಈ ಒಣಕಲು ತ್ವಚೆ ಅನ್ನೋದು ಶರೀರದೊಳಗಿರಬಹುದಾದ ಇತರೇ ತೊಂದರೆಗಳ ಕಾರಣದಿಂದಾನೂ ಉಂಟಾಗೋ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ ಯಾವಾಗಲೂ ಓರ್ವ ನುರಿತ ಚರ್ಮರೋಗ ತಜ್ಞರನ್ನ ಕಾಣೋದು ಒಂದು ಅತ್ಯುತ್ತಮ ಯೋಚ್ನೇನೇ ಆಗಿರುತ್ತೆ.

English summary

Beauty Hacks for Dry Skin This Winter

Here are beauty hacks for dry skin this winter, read on,
X
Desktop Bottom Promotion