For Quick Alerts
ALLOW NOTIFICATIONS  
For Daily Alerts

ಅಷ್ಟಕ್ಕೂ, ದಿನಕ್ಕೆಷ್ಟು ಬಾರಿ ಮುಖ ತೊಳೆಯ ಬೇಕು..?

By Arshad
|

ಮುಖದ ತ್ವಚೆ ಅತಿಸೂಕ್ಷ್ಮ ಹಾಗೂ ಹೆಚ್ಚು ಸಂವೇದಿಯಾಗಿರುವ ಕಾರಣ ಹೆಚ್ಚಿನ ಆರೈಕೆ ಅಗತ್ಯ. ಈ ಆರೈಕೆಯಲ್ಲಿ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು ಪ್ರಮುಖವಾಗಿದೆ. ಇದರಿಂದ ಗಾಳಿಯಲ್ಲಿದ್ದ ಧೂಳು, ಸೂಕ್ಷ್ಮ ಕಣಗಳು ಮುಖದ ಚರ್ಮದ ಸೂಕ್ಷ್ಮರಂಧ್ರಗಳಲ್ಲಿ ತುಂಬಿಕೊಳ್ಳುವುದನ್ನು ತಡೆಯುವುದರ ಜೊತೆಗೇ ಚರ್ಮದ ಗ್ರಂಥಿಗಳಿಂದ ಒಸರಿದ್ದ ಹೆಚ್ಚುವರಿ ತೈಲದ ಅಂಶವನ್ನೂ ನಿವಾರಿಸಿ ಎಣ್ಣೆಚರ್ಮವಾಗುವುದನ್ನೂ ತಡೆಯಬಹುದು.

ಇಂದು ಮುಖವನ್ನು ತೊಳೆಯಲೆಂದೇ ವಿಶೇಷವಾದ ಫೇಸ್ ವಾಶ್ ಎಂಬ ಸೋಪು ಅಥವಾ ದ್ರಾವಣ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಚರ್ಮದ ಸೂಕ್ಷ್ಮರಂಧ್ರಗಳ ಒಳಗೂ ನುಸುಳಿ ಅಲ್ಲಿಂದ ಕಲ್ಮಶವನ್ನು ಹೊರತೆಗೆಯುತ್ತದೆ ಎಂದು ಸಾರಲಾಗುತ್ತದೆ. ಇರಬಹುದು, ಆದರೆ ಇದರ ಪ್ರಭಾವ ಕೊಂಚ ಹೆಚ್ಚಾದರೂ ಇದು ಕಲ್ಮಶಗಳ ಜೊತೆಗೇ ಚರ್ಮದ ಅಡಿಯಲ್ಲಿ ಚರ್ಮದ ಪೋಷಣೆಗೆ ಅಗತ್ಯವಿರುವ ತೈಲವನ್ನೂ ಹೊತ್ತೊಯ್ಯಬಹುದು! ಇದರಿಂದ ಒಣಚರ್ಮ, ಚರ್ಮ ಬಿರುಕು ಬಿಡುವುದು, ಪರೆ ಏಳುವುದು, ಚಿಕ್ಕ ಚಿಕ್ಕ ಗುಳ್ಳೆಗಳಾಗುವುದು, ಗುಳಿ ಬೀಳುವುದು ಮೊದಲಾದ ತೊಂದರೆಗಳು ಎದುರಾಗಬಹುದು. ಅಲ್ಲದೇ ನೆರಿಗೆ ಬೀಳುವುದು ಮತ್ತು ಸೂಕ್ಷ್ಮ ಗೆರೆಗಳು ಮೂಡುವ ಮೂಲಕ ವಯಸ್ಸು ಇರುವುದಕ್ಕಿಂತಲೂ ಹೆಚ್ಚಾಗಿ ತೋರಬಹುದು.

How many times should you wash your face in a day?

ಆದ್ದರಿಂದ ಸೌಂದರ್ಯತಜ್ಞರ ಪ್ರಕಾರ ಫೇಸ್ ವಾಶ್ ಗಳನ್ನು ಉಪಯೋಗಿಸುವುದಾದರೆ ಇದರ ಬಳಕೆ ದಿನಕ್ಕೆ ಎರಡು ಬಾರಿಗಿಂತ ಹೆಚ್ಚಾಗಕೂಡದು. ಇದು ಬೆಳಿಗ್ಗೆ ಎದ್ದ ಬಳಿಕ ಮತ್ತು ರಾತ್ರಿ ಮಲಗುವ ಮುನ್ನ ಇದ್ದರೆ ಉತ್ತಮ. ಒಂದು ವೇಳೆ ನಿತ್ಯವೂ ಮೇಕಪ್ ಬಳಸುವವರಾದರೆ ರಾತ್ರಿಯ ಬದಲು ಸಂಜೆ ಮನೆಗೆ ಹಿಂದಿರುಗಿದ ಬಳಿಕ ಮೇಕಪ್ ನಿವಾರಿಸಿದ ಬಳಿಕ ಉಪಯೋಗಿಸಬಹುದು.

ಹಾಗಾದರೆ ದಿನದ ಇತರ ಅವಧಿಯಲ್ಲಿ ಮುಖದಲ್ಲಿ ಕಂಡುಬರುವ ಎಣ್ಣೆ ಜಿಡ್ಡನ್ನು ನಿವಾರಿಸುವುದು ಹೇಗೆ? ಇದಕ್ಕೆ ಹೆಚ್ಚು ಕಷ್ಟಪಡಬೇಕಾಗಿಲ್ಲ. ನೀರನ್ನು ಹೀರುವ ಟಿಷ್ಯೂ ಅಥವಾ ಹೀರುಕಾಗದವನ್ನು ಬಳಸಿ ಈ ಎಣ್ಣೆಯಂಶವನ್ನು ಹೀರಿಕೊಳ್ಳುವಂತೆ ಮಾಡಿ. ಅಥವಾ ಲಘುವಾದ ಟೋನರ್ ದ್ರವದಲ್ಲಿ ಹತ್ತಿಯುಂಡೆಯನ್ನು ಮುಳುಗಿಸಿ ನಯವಾಗಿ ಒರೆಸುವ ಮೂಲಕ ಹೆಚ್ಚು ಎನಿಸಿದ ಎಣ್ಣೆಯಂಶವನ್ನು ನಿವಾರಿಸಬಹುದು. ಬಳಿಕ ಕೇವಲ ನೀರಿನಿಂದ ತೊಳೆದುಕೊಂಡು ಸ್ವಚ್ಛವಾದ ಟವೆಲ್ಲಿನಿಂದ ಒತ್ತಿಕೊಂಡು ಒಣಗಿಸಿದರೆ ಸಾಕು.

ಎಣ್ಣೆಚರ್ಮದ ಆರೈಕೆಗಾಗಿ ಕೆಲವು ಉಪಯುಕ್ತ ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ
* ಮುಖವನ್ನು ತೊಳೆಯಲು ಅತಿ ಸೌಮ್ಯವಾದ, ನೊರೆಬರದ ಕ್ಲೀನ್ಸರ್ ದ್ರಾವಣವನ್ನೇ ಬಳಸಿ. ನಿಮ್ಮ ಚರ್ಮಕ್ಕೆ ಸೂಕ್ತವಾದ ಫೇಸ್ ವಾಶ್ ಖರೀದಿಸುವುದು ಜಾಣತನ. ಒಂದು ವೇಳೆ ನಿಮ್ಮ ಚರ್ಮ ಸೂಕ್ಷ್ಮ ಸಂವೇದಿಯಾಗಿದ್ದರೆ ಯಾವುದೇ ಉತ್ಪನ್ನ ಕೊಳ್ಳುವ ಮೊದಲು ಇದರ ಪರಿಣಾಮಗಳನ್ನು ಮತ್ತು ಅಡಕವಾಗಿರುವ ಸಾಮಾಗ್ರಿಗಳನ್ನು ಪರಿಶೀಲಿಸಿ. ಇನ್ನೂ ಉತ್ತಮ ಎಂದರೆ ಪರಿಣಿತರ ಅಥವಾ ಚರ್ಮವೈದ್ಯರ ಸಲಹೆಯಂತೆಯೇ ಖರೀದಿಸಿ.
* ಪ್ರತಿಬಾರಿ ಮುಖ ತೊಳೆಯುವಾಗಲೂ ಉಗುರುಬೆಚ್ಚನೆಯ ನೀರನ್ನು ಮಾತ್ರ ಬಳಸಿ. ಬಿಸಿನೀರು ಬಳಸಿದರೆ ಚರ್ಮದ ನೈಸರ್ಗಿಕ ಎಣ್ಣೆಯಂಶವೂ ಸೋರಿ ಹೋಗಬಹುದು.
* ಫೇಸ್ ವಾಶ್ ಬಳಸುವಾಗ ಮುಖದ ಚರ್ಮವನ್ನು ಪಾತ್ರೆ ತೊಳೆದಂತೆ ಗಸಗಸ ತಿಕ್ಕಬೇಡಿ. ಏಕೆಂದರೆ ಇದರಿಂದ ಚರ್ಮ ಸಡಿಲವಾಗಿ ಅಗತ್ಯವಿರುವ ಜೀವಕೋಶಗಳೇ ನಾಶವಾಗಬಹುದು. ಬದಲಿಗೆ ನಯವಾಗಿ ಕೊಂಚವೇ ಹೊತ್ತು ಉಜ್ಜಿ ತಕ್ಷಣ ತಣ್ಣೀರಿನಿಂದ ತೊಳೆದುಕೊಳ್ಳಿ. ತಜ್ಞರ ಪ್ರಕಾರ ಗರಿಷ್ಟ ಎರಡು ನಿಮಿಷಗಳ ಒಳಗೇ ನಿಮ್ಮ ಮುಖ ತೊಳೆಯುವ ಕಾರ್ಯ ಮುಗಿಯಬೇಕು.

Story first published: Tuesday, March 8, 2016, 13:11 [IST]
X
Desktop Bottom Promotion