For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಪುರುಷರ ತ್ವಚೆಯ ಆರೈಕೆಗೆ ಸಲಹೆಗಳು

|

ಚಳಿಯಿಂದ ಚರ್ಮ ಒಣಗುತ್ತದೆ ಎಂದು ನಮಗೆಲ್ಲಾ ಗೊತ್ತು. ಆದರೆ ಚಳಿಗೇ ಏಕೆ ಒಣಗಬೇಕು? ಅಷ್ಟಕ್ಕೂ ಒಣಗಲು ನಾವು ಬಿಸಿಲಿಗೆ ಚರ್ಮವನ್ನು ಒಡ್ಡಿಕೊಳ್ಳಲಿಲ್ಲವಲ್ಲ? ಇದು ಹಲವರ ಪ್ರಶ್ನೆಯಾಗಿದೆ. ಇದನ್ನು ಅರ್ಥ ಮಾಡಿಕೊಳ್ಳಲು ನಮ್ಮ ತ್ವಚೆಯ ರಚನೆಯನ್ನು ಕೊಂಚ ತಿಳಿದಿರುವುದು ಉತ್ತಮ. ನಮ್ಮ ಚರ್ಮ ಪ್ರಮುಖವಾದ ಮೂರು ಪದರಗಳಿಂದ ಮಾಡಲ್ಪಟ್ಟಿದ್ದು ಹೊರಪದರ ವಾಸ್ತವದಲ್ಲಿ ಅತಿ ಸೂಕ್ಷ್ಮ ರಂಧ್ರಗಳಿಂದ ಕೂಡಿದ ಜಾಲಿಯಾಗಿದೆ. ಈ ಸೂಕ್ಷ್ಮರಂಧ್ರಗಳ ಮೂಲಕ ಚರ್ಮಕ್ಕೆ ಗಾಳಿಯಲ್ಲಿರುವ ಆರ್ದ್ರತೆ ದೊರಕುತ್ತದೆ. ಆರ್ದ್ರತೆ ಎಂದರೆ, ನೆಲದ ಮೇಲೆ ಚೆಲ್ಲಿದ ನೀರು ಕೊಂಚ ಹೊತ್ತಿಗೇ ಒಣಗುತ್ತದೆಯಲ್ಲ, ಈ ನೀರು ತೇವಾಂಶದ ರೂಪದಲ್ಲಿ ಗಾಳಿಯಲ್ಲಿ ತೇಲುತ್ತಿರುತ್ತದೆ. ಈ ಆರ್ದ್ರತೆ ನಮ್ಮ ತ್ವಚೆಗೆ ಅತ್ಯಂತ ಅವಶ್ಯಕವಾಗಿದೆ. ಚಳಿಗಾಲದಲ್ಲಿ, ಹೊರಗಿನ ತಾಪಮಾನ ತಣ್ಣಗಿದ್ದು ಬಿಸಿಲು ಸಹಾ ಅಷ್ಟೊಂದು ಪ್ರಖರವಾಗಿರದ ಕಾರಣ ನೆಲದ ಮೇಲಿರುವ ನೀರು ಒಣಗುವುದೇ ಇಲ್ಲ. ಬಟ್ಟೆ ಒಣಗಲೂ ಅತಿಹೆಚ್ಚಿನ ಸಮಯ ತೆಗೆದುಕೊಳ್ಳುವುದಕ್ಕೂ ಇದೇ ಕಾರಣ. ಹಾಗಾಗಿ ಗಾಳಿಯಲ್ಲಿ ಆರ್ದ್ರತೆ ಅತಿ ಕಡಿಮೆ ಇರುತ್ತದೆ. ಇದನ್ನೇ ನಾವು ಒಣಹವೆ ಎಂದು ಕರೆಯುತ್ತೇವೆ. ಈ ಹವೆಯಲ್ಲಿ ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ದೊರಕದ ಕಾರಣ ಒಣಗುತ್ತದೆ. ಮೊದಲಾಗಿ ಚರ್ಮದ ಹೊರಪದರ ಒಣಗಿ ಸಂಕುಚಿತಗೊಳ್ಳುತ್ತದೆ ಪರಿಣಾಮವಾಗಿ ಕರ್ನಾಟಕದ ಭೂಪಟದಲ್ಲಿ ಜಿಲ್ಲೆಗಳು ಕಾಣಿಸುವಂತೆ ಬಿರಿಯುತ್ತದೆ.

Men Winter Skin-Care Tip

ಚಳಿಗಾಲದಲ್ಲಿ ಈ ಪರಿ ಎದುರಾಗದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ. ಸಾಮಾನ್ಯವಾಗಿ ಮಹಿಳೆಯರು ಸ್ವತಃ ತಮ್ಮ ತ್ವಚೆಯ ಕಾಳಜಿ ವಹಿಸುತ್ತಾರಾದರೂ ಹೆಚ್ಚಿನ ಪುರುಷರು ಎಲ್ಲಿಯವರೆಗೆ ಚರ್ಮ ಒಣಗಿ ಬಿರಿದು ಉರಿ ಪ್ರಾರಂಭವಾಗುವುದಿಲ್ಲವೋ ಅಲ್ಲಿಯವರೆಗೂ ಸಂಪೂರ್ಣ ಅಸಡ್ಡೆ ತೋರುತ್ತಾರೆ. ಆದರೆ ಪುರುಷರೂ ಚಳಿಗಾಲದಲ್ಲಿ ಸೂಕ್ತ ಆರೈಕೆಯನ್ನು ನೀಡುವ ಮೂಲಕ ಚಳಿಗಾಲದ ಪ್ರಭಾವ ತ್ವಚೆಯ ಮೇಲಾಗುವುದನ್ನು ತಡೆಗಟ್ಟಬಹುದು. ಇವು ಯಾವುವು, ಬನ್ನಿ ನೋಡೋಣ:

1: ತ್ವಚೆಯನ್ನು ಸ್ವಚ್ಛಗೊಳಿಸುವುದು

1: ತ್ವಚೆಯನ್ನು ಸ್ವಚ್ಛಗೊಳಿಸುವುದು

ಇದು ವರ್ಷದ ಎಲ್ಲಾ ಕಾಲಕ್ಕೂ ಆಗಬೇಕಾದ ಕಾರ್ಯವಾದರೂ ಚಳಿಗಾಲದಲ್ಲಿ ಮಾತ್ರ ಇತರ ದಿನಗಳಂತಹ ವಿಧಾನವನ್ನು ಬಳಸಲು ಸಾಧ್ಯವಿಲ್ಲ. ಮೊದಲೇ ಆರ್ದ್ರತೆ ಇಲ್ಲದೇ ತನ್ನ ಬಲವನ್ನು ಕಳೆದುಕೊಂಡಿರುವ ತ್ವಚೆಗೆ ಬೇಸಿಗೆಯಲ್ಲಿ ಬಳಸುವ ಸೋಪು ಮತ್ತು ಇತರ ಮಾರ್ಜಕಗಳನ್ನು ಬಳಸಿದರೆ ಇವು ಇದ್ದ ಕೊಂಚ ಆರ್ದ್ರತೆಯನ್ನೂ ಹೀರಿ ತೆಗೆದುಬಿಡುವ ಅಪಾಯವಿದೆ. ಹಾಗಾಗಿ ಚಳಿಗಾಲಕ್ಕೆ ಅತಿ ಸೌಮ್ಯ ಮತ್ತು ಆರ್ದ್ರತೆಯನ್ನು ಸೆಳೆಯದ ಉತ್ಪನ್ನದ ಅಗತ್ಯವಿದೆ. ಸೌಮ್ಯ ಫೇಸ್ ವಾಶ್ಗಳು ಯಾವುದೇ ಆರ್ದ್ರತೆಯ ನಷ್ಟವಿಲ್ಲದೇ ತ್ವಚೆಯನ್ನು ಸ್ವಚ್ಛಗೊಳಿಸಿ ಕೊಳೆ ಮತ್ತು ಕ್ರಿಮಿಗಳನ್ನು ನಿವಾರಿಸುತ್ತದೆ.

2: ಸತ್ತಜೀವಕೋಶಗಳನ್ನು ನಿಯಮಿತವಾಗಿ ನಿವಾರಿಸಿ

2: ಸತ್ತಜೀವಕೋಶಗಳನ್ನು ನಿಯಮಿತವಾಗಿ ನಿವಾರಿಸಿ

ತ್ವಚೆಯ ಆರೋಗ್ಯವನ್ನು ಉತ್ತಮವಾಗಿರಿಸಲು ವರ್ಷವಿಡೀ ಸತ್ತ ಜೀವಕೋಶಗಳ ಪದರವನ್ನು ಆಗಾಗ ಕೆರೆದು ತೆಗೆದು ಸ್ವಚ್ಚಗೊಳಿಸುತ್ತಿರಬೇಕು. ಆದರೆ ಇದನ್ನು ನಿವಾರಿಸುವ ಭರದಲ್ಲಿ ಆರೋಗ್ಯಕರ ಚರ್ಮಕ್ಕೆ ಧಕ್ಕೆಯುಂಟುಮಾಡಬಾರದು. ಹೀಗೆ ಮಾಡಿದರೆ ಚರ್ಮದ ಹೊರಪದರದಿಂದ ಆರೋಗ್ಯಕರ ಜೀವಕೋಶಗಳು ನಷ್ಟವಾಗಿ ಹೊರಪದರ ಅತೀವ ತೆಳುವಾಗುತ್ತದೆ ಹಾಗೂ ಇದರಿಂದ ಚರ್ಮಗೊಳಗಣ ಆರ್ದ್ರತೆ ಸುಲಭವಾಗಿ ಗಾಳಿಗೆ ಹೋಗಿಬಿಡುತ್ತದೆ. ಪರಿಣಾಮವಾಗಿ ಚಳಿಗಾಲವಲ್ಲದಿದ್ದರೂ ಚರ್ಮ ಒಣಗುತ್ತದೆ. ಆದ್ದರಿಂದ ಈ ವಿಧಾನವನ್ನು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾಡಿದರೆ ಸಾಕು. ನಿಮ್ಮ ತ್ವಚೆಯನ್ನು ಅನುಸರಿಸಿ ಸೂಕ್ತ ಪ್ರಸಾದನವನ್ನು ಆರಿಸಿಕೊಳ್ಳಿ. ಚಳಿಗಾಲದಲ್ಲಿ, ಈಗಾಗಲೇ ಹೊರಪದರ ಅತಿ ತೆಳುವಾಗಿರುವ ಕಾರಣ ಈ ಉತ್ಪನ್ನವೂ ಅತಿ ಸೌಮ್ಯವಾಗಿರಬೇಕು. ಹಾಗೂ ಉಳಿದ ಸಮಯಕ್ಕಿಂತಲೂ ಚಳಿಗಾಲದಲ್ಲಿ ಅತಿ ನಾಜೂಕಿನಿಂದ, ಹೆಚ್ಚಿನ ಒತ್ತಡವಿಲ್ಲದೇ ಈ ಸತ್ತ ಜೀವಕೋಶಗಳನ್ನು ನಿವಾರಿಸಬೇಕು. ಈ ಮೂಲಕ ತ್ವಚೆ ಸ್ವಚ್ಛಗೊಂಡು ಹೊಸ ಜೀವಕೋಶಗಳ ಬೆಳವಣಿಗೆಗೆ ನೆರವಾಗುತ್ತದೆ ಹಾಗೂ ಒಳಮುಖವಾಗಿ ಬೆಳಯಬಹುದಾದ ರೋಮಗಳ ಸಾಧ್ಯತೆಯನ್ನು ಕಡಿಮೆ ಮಾಡಿ ಸೌಮ್ಯ ಮತ್ತು ಕಾಂತಿಯುಕ್ತ ತ್ವಚೆ ಪಡೆಯಲು ಸಾಧ್ಯವಾಗುತ್ತದೆ.

3: ಫೇಸ್ ಸೀರಂ ಬಳಸಿ

3: ಫೇಸ್ ಸೀರಂ ಬಳಸಿ

ತ್ವಚೆಗೆ ದೊರಕದ ಆರ್ದ್ರತೆಯನ್ನು ಸೂಕ್ತ ತೇವಕಾರಕ (ಮಾಯಿಶ್ಚರೈಸರ್) ಮೂಲಕ ಪಡೆಯಬಹುದು. ಆದರೆ ಈ ಪ್ರಸಾದನವನ್ನು ನೇರವಾಗಿ ತ್ವಚೆಗೆ ಹಚ್ಚಿಕೊಳ್ಳುವ ಮುನ್ನ ಕೊಂಚ ಸೀರಂ ಅನ್ನು ಹಚ್ಚಿಕೊಂಡರೆ ತ್ವಚೆ ಪಡೆಯುವ ಆರ್ದ್ರತೆಯ ಪ್ರಮಾಣ ದುಪ್ಪಟ್ಟಾಗುತ್ತದೆ. ಇದರಿಂದ ತ್ವಚೆಗೆ ಉತ್ತಮ ಪ್ರಮಾಣದ ಆರ್ದ್ರತೆ ದೊರಕುತ್ತದೆ ಹಾಗೂ ತ್ವಚೆ ಅತಿ ಸೌಮ್ಯ, ನುಣುಪು ಮತ್ತು ಕಾಂತಿಯುಕ್ತವಾಗುತ್ತದೆ. ಈ ಉತ್ಪನ್ನಗಳು ಕೊಂಚ ದುಬಾರಿಯಾಗಿದ್ದರೂ, ಇದರ ಗುಣದಿಂದ ಪಡೆಯುವ ಆರೋಗ್ಯಕರ ತ್ವಚೆ ಈ ಹೂಡಿಕೆಯನ್ನು ಸಾರ್ಥಕವಾಗಿಸುತ್ತದೆ.

4: ಆಗಾಗ ತೇವಕಾರಕ ಬಳಸುತ್ತಿರಿ

4: ಆಗಾಗ ತೇವಕಾರಕ ಬಳಸುತ್ತಿರಿ

ಚಳಿಗಾಲದಲ್ಲಿ ಹೇಗೂ ಗಾಳಿಯಿಂದ ಆರ್ದ್ರತೆ ಅಥವಾ ತೇವಾಂಶವನ್ನು ಪಡೆಯಲು ಸಾಧ್ಯವಾಗದ ಕಾರಣ ಇದನ್ನು ನಾವೇ ತ್ವಚೆಗೆ ಒದಗಿಸಬೆಕಾಗುತ್ತದೆ. ಒಮ್ಮೆ ಹಚ್ಚಿದ ತೇವಕಾರಕ ಇಡಿಯ ದಿನ ತ್ವಚೆಗೆ ತೇವಾಂಶ ಒದಗಿಸಲು ಸಾಧ್ಯವಿಲ್ಲ. ಹಾಗಾಗಿ, ಆಗಾಗ ಈ ಪ್ರಸಾದನವನ್ನು ಹಚ್ಚುತ್ತಿರಬೇಕು. ಇವು ಕೇವಲ ತ್ವಚೆಗೆ ಆರ್ದ್ರತೆಯನ್ನು ಒದಗಿಸುವುದು ಮಾತ್ರವಲ್ಲ, ಸೂರ್ಯನ ಹಾನಿಕಾರಕ ಅತಿನೇರಳೆ ಕಿರಣಗಳಿಂದಲೂ ರಕ್ಷಣೆ ನೀಡುತ್ತದೆ.

5: ಕಣ್ಣುಗಳ ಆರೈಕೆಯನ್ನು ಕಡೆಗಣಿಸದಿರಿ

5: ಕಣ್ಣುಗಳ ಆರೈಕೆಯನ್ನು ಕಡೆಗಣಿಸದಿರಿ

ನಮ್ಮ ಕಣ್ಣುಗಳ ಕೆಳಭಾಗದಲ್ಲಿರುವ ಚರ್ಮ ಅದರ ಕೆಳಗಿರುವ ಮೂಳೆಯ ಭಾಗಕ್ಕೆ ಹೆಚ್ಚೂ ಕಡಿಮೆ ತಾಕಿದಂತಿರುತ್ತದೆ. ಹಾಗಾಗಿ, ಈ ಭಾಗವೇ ಚಳಿಯ ಪ್ರಭಾವಕ್ಕೆ ಅತಿ ಬೇಗನೇ ಒಳಗಾಗುತ್ತದೆ. ಈ ಭಾಗ ಇತರ ಭಾಗಕ್ಕಿಂತಲೂ ಅತಿ ಬೇಗನೇ ಕಪ್ಪಗಾಗಲೂ ಇದೇ ಕಾರಣ. ಹಾಗಾಗಿ ಈ ಭಾಗಕ್ಕೆ ವಿಶೇಷವಾದ ಕಾಳಜಿ ನೀಡಬೇಕಾಗುತ್ತದೆ.

6: ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ

6: ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ

ಚಳಿಗಾಲದಲ್ಲಿ ಅತಿ ಬಿಸಿಯಾದ ನೀರಿನಲ್ಲಿ ಸ್ನಾನ ಮಾಡುವುದೆಂದರೆ ಹೆಚ್ಚಿನವರಿಗೆ ತುಂಬಾ ಇಷ್ಟವಾಗುತ್ತದೆ. ಆದರೆ ವಾಸ್ತವದಲ್ಲಿ ಚಳಿಗಾದಲಲ್ಲಿ ನಮ್ಮ ತ್ವಚೆಯನ್ನು ಎಷ್ಟು ಬಿಸಿಗೆ ಒಡ್ಡಿಕೊಳ್ಳುತ್ತೇವೆಯೋ ಅಷ್ಟೂ ಕೆಟ್ಟದು. ಏಕೆಂದರೆ ಈಗಾಗಲೇ ಆರ್ದ್ರತೆಯ ಕೊರತೆಯಿಂದ ಬಳಲುತ್ತಿರುವ ತ್ವಚೆಯ ಸೂಕ್ಷ್ಮರಂಧ್ರಗಳು ಅಗಲವಾಗಿ ತೆರೆದಿರುತ್ತವೆ. ಈ ರಂಧ್ರಗಳ ಮೂಲಕ ಒಳಗೋಗುವ ಬಿಸಿನೀರು ಚರ್ಮದ ಒಳಪದರದಲ್ಲಿರುವ ಅವಶ್ಯಕ ತೈಲಗಳನ್ನೂ ಉಳಿದಿರುವ ಆರ್ದ್ರತೆಯನ್ನೂ ಆವಿಯಾಗಿಸಿಬಿಡುತ್ತವೆ. ಇದೇ ಕಾರಣಕ್ಕೆ ಬಿಸಿನೀರಿನ ಸ್ನಾನದ ಬಳಿಕ ಚರ್ಮ ಕೆಂಪು ಕಂಪಗಾಗಿರುತ್ತದೆ. ಹೆಚ್ಚಿನವರು ಹೀಗೆ ಕೆಂಪುಕೆಂಪಗಾಗಿರುವುದು ಆರೋಗ್ಯಕರ ಲಕ್ಷಣ ಎಂದು ತಿಳಿದುಕೊಂಡಿದ್ದಾರೆ. ವಾಸ್ತವದಲ್ಲಿ ಇದು ಚರ್ಮದಿಂದ ಅವಶ್ಯಕ ದ್ರವ ನಷ್ಟವಾಗಿ ಉರಿಯೂತ ಉಂಟಾಗಿರುವುದನ್ನು ತೋರಿಸುತ್ತದೆ. ಹಾಗಾಗಿ, ಚಳಿಗಾದಲ್ಲಿಯೂ ಕೇವಲ ಉಗುರುಬೆಚ್ಚನೆಯ ನೀರಿನಿಂದ ಮಾತ್ರ ಸ್ನಾನ ಮಾಡಬೇಕು. ಈ ಮೂಲಕ ತ್ವಚೆ ಆರ್ದ್ರತೆಯನ್ನು ಉಳಿಸಿಕೊಂಡು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ.

7 ತುಟಿಗಳಿಗೆ ಕಂಡೀಶನರ್ ಒದಗಿಸಿ

7 ತುಟಿಗಳಿಗೆ ಕಂಡೀಶನರ್ ಒದಗಿಸಿ

ನಮ್ಮ ದೇಹದಲ್ಲಿ ಅತಿ ವಿಸ್ತಾರವಾಗಿರುವ ಚರ್ಮ ಎಂದರೆ ತುಟಿಗಳ ಚರ್ಮ. ಬಾಯನ್ನು ಅಗಲಿಸಿದಾಗ ತುಟಿ ವಿಸ್ತಾರವಾಗಬೇಕಾದುದರಿಂದ ಇದು ಅತಿ ತೆಳು ಮತ್ತು ಅತೀವ ಮಡಿಕೆಗಳಿಂದ ಕೂಡಿರುತ್ತದೆ. ಅಲ್ಲದೇ ಈ ಚರ್ಮದಲ್ಲಿ ಬೆವರುಗ್ರಂಥಿಗಳಾಗಲೀ, ಕೂದಲಾಗಲೀ ಇರದ ಕಾರಣ ಇತರ ಚರ್ಮಕ್ಕಿಂತಲೂ ಹೆಚ್ಚು ನಾಜೂಕಾಗಿರುತ್ತದೆ. ಹಾಗಾಗಿ ತುಟಿಗಳಿಗೆ ಮೀಸಲಾದ ಉತ್ತಮ ಗುಣಮಟ್ಟದ ಪ್ರಸಾದನವನ್ನು ರಾತ್ರಿ ಮಲಗುವ ಮುನ್ನ ಮತ್ತು ದಿನದಲ್ಲಿ ಆಗಾಗ ಹಚ್ಚಿಕೊಳ್ಳುತ್ತಿರಬೇಕು.

8: ಸುಗಂಧವನ್ನು ಹಚ್ಚಿಕೊಳ್ಳಲು ಮರೆಯದಿರಿ

8: ಸುಗಂಧವನ್ನು ಹಚ್ಚಿಕೊಳ್ಳಲು ಮರೆಯದಿರಿ

ಬೇಸಿಗೆಯಲ್ಲಿ ಮಾತ್ರವೇ ಬೆವರು ಬರುತ್ತದೆ ಚಳಿಗಾಲದಲ್ಲಿ ಬರುವುದಿಲ್ಲ ಎಂದು ನೀವು ಅಂದುಕೊಂಡಿದ್ದರೆ ಇದು ತಪ್ಪು. ಏಕೆಂದರೆ ನಮ್ಮ ಚರ್ಮ ಸದಾ ಬೆವರುತ್ತಿರುತ್ತದೆ, ಬೆವರಲೂಬೇಕು. ಆದರೆ ಚಳಿಗಾಲದಲ್ಲಿ ಬೆವರುವಿಕೆ ಗಮನಕ್ಕೆ ಬರದಷ್ಟು ಅಲ್ಪವಾಗಿರುತ್ತದೆ. ಇಲ್ಲದಿದ್ದರೆ ಚರ್ಮದ ಒಳಗಿನ ಕಲ್ಮಶಗಳು ಹೊರಹೋಗುವುದಾದರೂ ಹೇಗೆ? ಹಾಗಾಗಿ ಬೇಸಿಗೆಯಲ್ಲಿ ಧಾರಾಕಾರವಾಗಿ ಬೆವರು ಸುರಿದರೆ ಚಳಿಗಾಲದಲ್ಲಿ ಇಲ್ಲವೇ ಇಲ್ಲವೆನ್ನುವಷ್ಟಿರುತ್ತದೆ. ಹಾಗಾಗಿ ಅಲ್ಪವೇ ಸರಿ, ಬೆವರು ದುರ್ವಾಸನೆಯನ್ನು ಮೂಡಿಸಬಹುದು. ಆದ್ದರಿಂದ ಬೇಸಿಗೆಯಂತೆಯೇ ಚಳಿಗಾಲದಲ್ಲಿಯೂ ನಿಮ್ಮ ನೆಚ್ಚಿನ ಸುಗಂಧವನ್ನು ಹಚ್ಚಿಕೊಂಡೇ ಹೊರಡಲು ಮರೆಯದಿರಿ. ಇಂದು ಅಲ್ಯೂಮಿನಿಯಂ ರಹಿತ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿದ್ದು ಇವನ್ನು ಕೊಳ್ಳುವುದು ಜಾಣತನವಾಗಿದೆ.

9: ಬಾಡಿ ಬಟರ್ ಬಳಸಿ

9: ಬಾಡಿ ಬಟರ್ ಬಳಸಿ

ಚಳಿಗಾಲದಲ್ಲಿ ಕೇವಲ ಮುಖದ ತ್ವಚೆಗೆ ಮಾತ್ರವಲ್ಲ, ದೇಹದ ಎಲ್ಲಾ ಭಾಗದ ತ್ವಚೆ ಆರ್ದ್ರತೆಯ ಕೊರತೆಯನ್ನು ಅನುಭವಿಸುತ್ತದೆ. ಹಾಗಾಗಿ ಇಡಿಯ ದೇಹಕ್ಕೆ ಆರ್ದ್ರತೆ ಒದಗಿಸುವುದು ಅಗತ್ಯ. ಮುಖಕ್ಕೆ ಹಚ್ಚಿಕೊಳ್ಳುವ ತೇವಕಾರಕ ಪ್ರಸಾದನ ದುಬಾರಿಯಾಗಿದ್ದು ಇದನ್ನು ಇಡಿಯ ದೇಹಕ್ಕೆ ಹಚ್ಚಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ನಿಮ್ಮ ನಿತ್ಯದ ಲೋಶನ್ ಬದಲು ಇದಕ್ಕೂ ಹೆಚ್ಚು ಸ್ನಿಗ್ಧವಾಗಿರುವ ಬಾಡಿ ಬಟರ್ (body butter) ಪ್ರಸಾದನವನ್ನು ಬಳಸಿ. ಇದು ಇಡಿಯ ದಿನ ದೇಹದ ಎಲ್ಲಾ ಭಾಗಗಳ ಚರ್ಮಕ್ಕೆ ಸೂಕ್ತ ಆರ್ದತೆ ಒದಗಿಸಿ ಆರೋಗ್ಯಕರವಾಗಿರಿಸುತ್ತದೆ.

10: ಗಡ್ಡಕ್ಕೂ ಎಣ್ಣೆ ಬಿಡಿ

10: ಗಡ್ಡಕ್ಕೂ ಎಣ್ಣೆ ಬಿಡಿ

ಒಂದು ವೇಳೆ ನೀವು ಗಡ್ಡಧಾರಿಯಾಗಿದ್ದರೆ, ನಿಮ್ಮ ಗಡ್ಡವೂ ಚಳಿಯಿಂದ ಒಣಗಬಹುದು. ಹಾಗಾಗಿ, ಗಡ್ಡದ ಮತ್ತು ಮೀಸೆಯ ಕೂದಲುಗಳಿಗೆ ಹಚ್ಚಿಕೊಳ್ಳಲು ಸೂಕ್ತ ತೇವಕಾರಕ ತೈಲವನ್ನು ಬಳಸಿ. ಇದರ ಬಳಕೆಯಿಂದ ಚಳಿಗಾಲದಲ್ಲಿ ಹೊರಗಿನ ತಾಪಮಾನವೇನೇ ಇರಲಿ, ನಿಮ್ಮ ಗಡ್ಡ ಮಾತ್ರ ಆರೋಗ್ಯಕರ ಮತ್ತು ಸೊಂಪಾಗಿರುತ್ತದೆ.

English summary

Men Winter Skin-Care Tip

Brutally cold temperatures, harsh winds and dry air can have negative effects on everyone’s skin — men included. While we know most of you love to keep it simple, winter requires a little more effort if you want to kick any dryness or flakiness to the curb. We’ve got you covered, though. Ahead, we gathered a list of winter skin-care tips (and product recommendations) that can easily be incorporated into your current regimen.
X
Desktop Bottom Promotion