ಮಲ್ಲಿಗೆ ಹೂ ಅಲ್ಲವಿದು ಅಕ್ಕಿ ಇಡ್ಲಿ


ಇಡ್ಲಿ ತಯಾರಿಸುವುದರಲ್ಲಿಯೂ ಅನೇಕ ವಿಧಾನಗಳಿವೆ. ಅಕ್ಕಿ ಇಡ್ಲಿ, ರವೆ ಇಡ್ಲಿ, ದಹಿ ಇಡ್ಲಿ, ಸೌತೆ ಇಡ್ಲಿ, ಮಸಾಲಾ ಬಾದಾಮಿ ಇಡ್ಲಿ... ಲಾಸ್ಟ್ ಬಟ್ ನಾಟ್ ದಿ ಲೀಸ್ಟ್ ತಟ್ಟೆ ಇಡ್ಲಿ. ಇಡ್ಲಿ ತಯಾರಿಸುವುದೂ ಒಂದು ಕಲೆ. ಎಲ್ಲ ಪದಾರ್ಥಗಳು ಸರಿಯಾಗಿ ಇದ್ದರೇನೇ ಮಲ್ಲಿಗೆ ಹೂವಿನಂಥ ಇಡ್ಲಿ ಅರಳಿ ಬರುತ್ತವೆ. ಅದರಲ್ಲೂ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಶಂಕರಪುರದ ಬ್ರಾಹ್ಮಣರ ಹೊಟೇಲಿನಲ್ಲಿ ಇಡ್ಲಿ ಮೆಂದಿರುವುದು ಭಾರೀ ಸುದ್ದಿಗೆ ಗ್ರಾಸವಾಗಿದೆ. ಬನ್ನಿ, ಅಕ್ಕಿ ಇಡ್ಲಿ ಮಾಡುವುದು ಹೇಗೆಂದು ತಿಳಿಯೋಣ, ಜೊತೆಗೆ ಎರಡು ಬಗೆಯ ಚಟ್ನಿ ಮಾಡುವುದನ್ನೂ ಕಲಿಯೋಣ.

ಕುಕ್ಕರಿನಲ್ಲಿ ಮಲ್ಲಿಗೆ ಹೂ ನಾಜೂಕು ಹಾಗೂ ಬಿಳುಪಿನ ಇಡ್ಲಿ ಅರಳಿಸಲು, ಹೊಂಚಿಕೊಳ್ಳಬೇಕಾದ ಸಾಮಗ್ರಿಗಳು :
ಅಕ್ಕಿ - 2 ಕಪ್ಪು
ಉದ್ದಿನಬೇಳೆ - 1 ಕಪ್ಪು
ಉಪ್ಪು ನಾಲಗೆ ಬಯಸುವಷ್ಟು
ಹಾಗೂ ಚಿಟಿಕೆಯಷ್ಟು ಅಡುಗೆ ಸೋಡಾ ಅಗತ್ಯ

Advertisement

ವಿಧಾನ : ಚೆನ್ನಾಗಿ ತೊಳೆದ ಉದ್ದಿನಬೇಳೆ ಹಾಗೂ ಅಕ್ಕಿಯನ್ನು ಸರಿ ಸುಮಾರು ಎಂಟು ಗಂಟೆಗಳ ಕಾಲ ನೆನೆಸಿಡಿ. ಪ್ರತ್ಯೇಕವಾಗಿರಲಿ. ತೊಳೆಯುವ ಕಲೆ ಎಷ್ಟು ಚೆನ್ನಾಗಿ ನಿಮಗೆ ಸಿದ್ಧಿಸಿದೆ ಅನ್ನುವುದರ ಮೇಲೆ ಇಡ್ಲಿಯ ಬಣ್ಣ ನಿರ್ಧಾರವಾಗುತ್ತದೆ. ಆನಂತರ, ಮಿಕ್ಸಿಯಲ್ಲಿ ಹದಕ್ಕೆ ರುಬ್ಬಿ , ಅಕ್ಕಿ- ಉದ್ದಿನ ಮಿಶ್ರಣ ಬೆರೆಸಿಡಿ. ಉಪ್ಪನ್ನು ಆಗಲೇ ಸೇರಿಸಬಹುದು. ಮಿಶ್ರಣದ ಪಾತ್ರೆ ಮುಚ್ಚಿಟ್ಟು ನೀವು ಮಲಗಬಹುದು. ನೆನಪಿಡಬೇಕಾದ ಸಂಗತಿಯೆಂದರೆ, ಇದಿಷ್ಟು ಬೆಳಿಗ್ಗೆ ಅರಳಿಸುವ ಇಡ್ಲಿಗೆ ರಾತ್ರಿಯೇ ಮಾಡಬೇಕಾದ ಸಂಸ್ಕಾರ ಕಾರ್ಯ.

Advertisement

ಬೆಳಿಗ್ಗೆ - ಇಡ್ಲಿ ಮಾಡುವುದರಲ್ಲಿ ತೊಡಗಬಹುದು. ಇಡ್ಲಿ ತಟ್ಟೆಗಳಿಗೆ ಬಟ್ಟೆ ಹಾಕುವುದೀಗ ಹಳೆಯ ಕ್ರಮ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಇಡ್ಲಿ ತಟ್ಟೆಗೆ ತುಪ್ಪ ಅಥವಾ ಅಡುಗೆ ಎಣ್ಣೆ ಹಚ್ಚಿ, ಹಿಟ್ಟಿಡಿ. ಇನ್ನು ಕುಕ್ಕರಿನಲ್ಲಿಟ್ಟು ಬೇಯಲಿಕ್ಕೆ ಬಿಟ್ಟರಾಯಿತು. ಹತ್ತು ನಿಮಿಷದ ನಂತರ ಹಬೆಯಾಡುವ ಇಡ್ಲಿ ರೆಡಿ. ಜೊತೆಗೆ ಚಟ್ನಿಯೋ, ಸಾಂಬಾರೋ ನಿಮ್ಮಿಷ್ಟ . ಅದೃಷ್ಟಕ್ಕೆ ತಾಜಾ ಬೆಣ್ಣೆ ಸಿಕ್ಕಿತೆಂದರೆ, ಇಡ್ಲಿಯನ್ನು ಮೆಲ್ಲುವುದೇ ಬೇಕಿಲ್ಲ . ನೇರ ಹೊಟ್ಟೆಗೇ ಜಾರುತ್ತೆ.

ಇಡ್ಲಿ ಮಾಡುವುದನ್ನು ಕಲಿತಿರಿ. ಇನ್ನು ಚಟ್ನಿ ಮಾಡುವುದನ್ನು ಕಲಿಯಿರಿ.

ಕೆಂಪು ಮೆಣಸಿನಕಾಯಿ ಚಟ್ನಿ

ಮೊದಲು ಇವನ್ನು ಹೊಂಚಿಕೊಳ್ಳಿ :

Advertisement

ಚೆನ್ನಾಗಿ ಬಲಿತ ತೆಂಗಿನಕಾಯಿ ತುರಿ
ಒಣ ಮೆಣಸಿನಕಾಯಿ 6
ನಾಲಗೆಗೆ ಘಾಟೆನಿಸದಷ್ಟು ಕೊತ್ತಂಬರಿ ಸೊಪ್ಪು
ಹಾಗೂ ರುಚಿಗೆ ತಕ್ಕಷ್ಟು ಉಪ್ಪು

ವಿಧಾನ : ಅಷ್ಟನ್ನು ಹೊಂಚಿಕೊಂಡರೆ ಹೆಚ್ಚು ಕಡಿಮೆ ಚಟ್ನಿ ಮಾಡುವುದು ಮುಗಿದೇ ಹೋಯಿತು. ತೆಂಗಿನ ತುರಿ, ಮೆಣಸಿನ ಕಾಯಿ, ಉಪ್ಪಿನ ಜೊತೆಗೆ ನೀರನ್ನು ಬೆರೆಸಿ ಮಿಕ್ಸಿಯಲ್ಲಿ ರುಬ್ಬಿ. ಚಟ್ನಿ ತರಿ ತರಿಯಾಗಿದ್ದರೇ ಚೆನ್ನ. ಇನ್ನೇನು ನಾಲ್ಕೈದು ಹೊರಳಿದೆ ಎನ್ನುವಾಗ ಮಿಕ್ಸಿ ನಿಲ್ಲಿಸಿ ಕೊತ್ತಂಬರಿ ಎಸಳು ಸೇರಿಸಿ, ಪುನಃ ಮಿಕ್ಸಿ ಚಲಾಯಿಸಿ. ಮಸಾಲೆ ಪ್ರಿಯರಾಗಿದ್ದಲ್ಲಿ ಬೆಳ್ಳುಳ್ಳಿ ಹಾಗೂ ಪುದೀನಾ ಸೊಪ್ಪನ್ನ ಕೊತ್ತಂಬರಿ ಎಸಳಿನೊಂದಿಗೆ ಸೇರಿಸಬಹುದು. ಈ ಚಟ್ನಿ ಇಡ್ಲಿಯಾಂದಿಗೆ ಬ್ರಹ್ಮಾಂಡ. ಅನ್ನಕ್ಕೂ ಚೆಂದನೆ ಜೊತೆ.

Advertisement

ಇದು ನಿಮಗೆ ಗೊತ್ತಿರಲಿ : ಮಿಕ್ಸಿಯಲ್ಲಿ ರುಬ್ಬಿದ ಚಟ್ನಿ (ಫ್ರಿಜ್‌ನಲ್ಲಿ ಇಡದಿದ್ದಲ್ಲಿ) ಮಧ್ಯಾಹ್ನ ಇಳಿಯುತ್ತಿದ್ದಂತೆ ರುಚಿಗೆಡುತ್ತಾ ಹೋಗುತ್ತದೆ. ಮನೆಯಲ್ಲಿನ್ನೂ ರುಬ್ಬು ಕಲ್ಲು ಇರಿಸಿಕೊಂಡಿರುವಿರಾದರೆ, ಸಮಯವೂ ಇದ್ದಲ್ಲಿ ಚಟ್ನಿಯನ್ನು ರುಬ್ಬಿ. ಆ ರುಚಿ ಗಮಲೇ ಬೇರೆ. ಜೊತೆಗೆ ಬೆಳಿಗ್ಗೆ ರುಬ್ಬಿದ್ದು ರಾತ್ರಿ ಊಟಕ್ಕೂ ತಾಜಾ ಅನ್ನುವಂತಿರುತ್ತೆ .

ಕಡಲೆಬೀಜದ ಚಟ್ನಿ :

ಹದನಾಗಿ ಹುರಿದು ಸಿಪ್ಪೆ ತೆಗೆದ ಶೇಂಗಾಬೀಜ - ಅರ್ಧ ಕಪ್ಪು
ಬೆಲ್ಲ - ಒಂದು ಚೂರು
ಹುಣಸೆ - ಗೋಲಿಯಷ್ಟು
ಐದಾರು ಕಾಳು ಮೆಣಸು ಅಥವಾ ನಾಲ್ಕೈದು ಒಣ ಮೆಣಸಿನ ಕಾಯಿ
ಒಂದು ಸಣ್ಣ ಚೂರು ತೆಂಗಿನಕಾಯಿ
ಒಂದು ಟೀಸ್ಪೂನ್‌ ಬಿಳಿ ಎಳ್ಳು
ಒಂದು ಟೀಸ್ಪೂನ್‌ ಅಡುಗೆ ಎಣ್ಣೆ ಹಾಗೂ
ನಿಮ್ಮ ನಾಲಗೆ ಬಯಸುವಷ್ಟು ಶುಂಠಿ, ಸಾಸಿವೆ, ಇಂಗು, ಉಪ್ಪು

Advertisement

ವಿಧಾನ : ಎಳ್ಳು, ಮೆಣಸು (ಮೆಣಸಿನಕಾಯಿ) ಗಮಲು ಬರುವಂತೆ ಹುರಿಯಿರಿ, ಎಣ್ಣೆ ಬೇಡ. ಈಗ- ಇವೆರಡರೊಂದಿಗೆ ಕಡಲೆಬೀಜ, ಶುಂಠಿ, ತೆಂಗು, ಉಪ್ಪು, ಹುಣಸೆ ಬೆರೆಸಿ ಮಿಕ್ಸಿಯಲ್ಲಿ ಲಟಾಯಿಸಿ. ಚಟ್ನಿ ರೆಡಿ. ಈ ಮಿಶ್ರಣಕ್ಕೆ ಎಣ್ಣೆಯಲ್ಲಿ ಕರಿದ ಇಂಗು ಹಾಗೂ ಎಳ್ಳನ್ನು ಬೆರೆಸಿ.

ಚಪಾತಿ, ದೋಸೆ, ಇಡ್ಲಿ ಎಲ್ಲಕ್ಕೂ ಈ ಚಟ್ನಿ ಒಗ್ಗುತ್ತದೆ. ಇವತ್ತೂ ಇದೇ ಸಾಂಬಾರಾ ಎಂದು ಮನೆಯವರು ರಾಗ ಹಾಡುತ್ತಾರೆ ಅಂತಾ ನಿಮ್ಮ ಮೂಗಿಗೆ ಯಾವತ್ತಾದರೂ ವಾಸನೆ ಬಡಿದಲ್ಲಿ , ಆ ಹೊತ್ತಿನ ಅನ್ನದ ಜೊತೆಗೆ ಚಟ್ನಿಯೇ ಆದೀತು.

Read more...

English Summary

Everbodys favourite breakfast Rice Idly or akki idly. Recipe by Niveditha Prabhakar, bengaluru.