For Quick Alerts
ALLOW NOTIFICATIONS  
For Daily Alerts

ಅಂದಹಾಗೆ, ಬ್ರಾಹ್ಮಣ ಹುಡುಗರಿಗೆ ಹುಡ್ಗೀರು ಯಾಕೆ ಸಿಕ್ತಿಲ್ಲ?

By * ಯಶ್
|
Scarcity of brides for brahmin grooms
"ನನ್ ಮಗ್ಗ (ಮಗನಿಗೆ) ಮನ್ನೆ ಅಕ್ಟೋಬರ್ ಆರಕ್ಕ ಮೂವತ್ತೆರಡು ತುಂಬಿತು ನೋಡು. ಮದವಿ ಮಾಡಬೇಕಂದ್ರ ಅವನೌನ ಎಷ್ಟು ಹುಡುಕಿದ್ರೂ ಹುಡುಗಿ ಸಿಗವಲ್ತು. ಮಗನ್ ಬದ್ಲಾಗಿ ಮಗಳು ಹುಟ್ಟಿದ್ರ ಇಷ್ಟೋತ್ತಿಗೆ ಮದವಿ ಆಗಿ ಎರಡು ಮಕ್ಕಳಿರತಿದ್ವು ನೋಡು. ಸಾಕಾಗಿ ಹೋಗೇದ ನೋಡು ಮಾರಾಯ. ನಿಮ್ ಹುಬ್ಬಳ್ಳಿ ಕಡೆ ಮಾಧ್ವ ಇಲ್ಲದಿದ್ದರ ಹೋಗ್ಲಿ ಸ್ಮಾರ್ತರ ಹುಡುಗಿ ಇದ್ರೂ ಹೇಳು, ಲಿಂಗಾಯತರು ಇದ್ರೂ ನಡೀತದ!"

ನಮ್ಮ ಸಂಬಂಧಿಕರೊಬ್ಬರು ಹೀಗೆ ಹೇಳ್ತಾ ಇದ್ರೆ, ಥತ್ತೇರೇಕಿ ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿದೆಯಾ ಅಂತ ಆಶ್ಚರ್ಯವಾಯಿತು. ಮೊನ್ನೆ ದಟ್ಸ್ ಕನ್ನಡದಲ್ಲಿ, 'ಬ್ರಾಹ್ಮಣರ ಸಮುದಾಯ ವಧುಗಳ ಭಾರೀ ಕೊರತೆ ಎದುರಿಸುತ್ತಿದ್ದು, ಸಮಸ್ಯೆ ಪರಿಹಾರಕ್ಕೆಂದು ಡಿಸೆಂಬರ್ ತಿಂಗಳಲ್ಲಿ ಪಾದಯಾತ್ರೆ ಕೈಗೊಳ್ಳಲಿದ್ದಾರೆ' ಅಂತ ಓದಿದ್ದೆ. ಈಗ ನಮ್ಮ ಸಂಬಂಧಿಕರ ಮಾತುಗಳನ್ನು ಕೇಳಿ ನಿಜ ಇದ್ದರೂ ಇರಬಹುದು ಎಂಬ ತೀರ್ಮಾನಕ್ಕೆ ಬಂದೆ.

ಕೂಡಲೆ ನನ್ನ ಸೋದರತ್ತೆ ಮಗನಿಗೆ ಫೋನಾಯಿಸಿದೆ. ಯಾಕಂದ್ರೆ ಅವನೂ ಮದುವೆ ವಯಸ್ಸು ಮೀರುತ್ತಿರುವ ಹುಡುಗ. ವಯಸ್ಸು ಮೂವತ್ತರ ಆಸುಪಾಸು. ಸಾಕಷ್ಟು ಕನ್ಯಾಪರೀಕ್ಷೆ ಮಾಡಿ, ಉಪ್ಪಿಟ್ಟು ಚಹಾ ರುಚಿ ಕಂಡಿದ್ದಾನೆ. ಅವನೂ ತನಗೆ ಸೂಕ್ತ ವಧುವನ್ನು ಹುಡುಕಲು ಸಾಕಷ್ಟು ಕಷ್ಟಪಡುತ್ತಿದ್ದಾನೆ. ಅವನ ತಾಯಿತಂದೆಯರೂ ಸಾಕಷ್ಟು ಬಸವಳಿದಿದ್ದಾರೆ. "ಆದಾಗ ಆಗ್ತದ ಬಿಡು, ಇನ್ನೇನು ಮಾಡೋಣು" ಎಂಬ ತೀರ್ಮಾನಕ್ಕೂ ಬಂದಿದ್ದಾರೆ. ಏನ್ಮಾಡ್ತೀರಿ ಹೇಳಿ?

ಸಮಸ್ಯೆಯ ಮೂಲ : ಆತ ಹೇಳಿದ್ದು ಕೇಳಿದರೆ ಗಂಡನ್ನು ಹೆತ್ತವರು ದಂಗಾಗಬೇಕು. ಅವನ ಪ್ರಕಾರ, ಬೆಂಗಳೂರಿನಲ್ಲಿ ವಧುವರಾನ್ವೇಷಣೆ ಕೇಂದ್ರಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಬ್ರಾಹ್ಮಣರಿಗಾಗಿಯೇ ಬಸವನಗುಡಿಯಲ್ಲಿರುವ ಉತ್ತರಾಧಿಮಠ, ವಿದ್ಯಾಪೀಠ, ಇನ್ನು ಕೆಲ ಮಠಗಳಲ್ಲಿ ವಧುವರಾನ್ವೇಷಣೆ ಕೇಂದ್ರಗಳನ್ನು ತೆರೆಯಲಾಗಿದೆ. ಜೊತೆಗೆ ಖಾಸಗಿಯಾಗಿ ನೂರಾರು ಕೇಂದ್ರಗಳು ತೆರೆದುಕೊಂಡಿದ್ದು, ವಧುವರರನ್ನು ಹುಡುಕಲು ಸಹಾಯ ಮಾಡುತ್ತಿವೆ. ಆದರೂ...

ಸಮಸ್ಯೆ ಮೂಲವೆಲ್ಲಿದೆಯೆಂದರೆ, ಹುಡುಗರೇನೋ ಮದುವೆಗಾಗಿ ಕಾದು ಕುಳಿತಿದ್ದಾರೆ. ಆದರೆ, ಹುಡುಗಿಯರೆಲ್ಲಿದ್ದಾರೆ. ಹುಡುಗ ಮತ್ತು ಹುಡುಗಿಯ ಅನುಪಾತ 10:1 ರಷ್ಟಿದೆ. ಇನ್ನು ವಧುವೆಂಬ ಅನರ್ಘ್ಯ ರತ್ನವನ್ನು ಹೆತ್ತಿರುವವರ ಡಿಮ್ಯಾಂಡುಗಳನ್ನು ವಧುವರಾನ್ವೇಷಣಾ ಕೇಂದಕ್ಕೆ ಹೋಗಿ ನೋಡಿದರೆ, ವಂಶೋದ್ಧಾರಕನನ್ನು ಪಡೆದ ತಂದೆತಾಯಿಯರು ತಲೆತಿರುಗಿ ಬೀಳಬೇಕು. ಹಾಗಿರುತ್ತವೆ. ಹುಡುಗರ ಮದುವೆ ಯಾಕೆ ಲೇಟಾಗುತ್ತಿದೆ, ಯಾಕೆ ವಧುಗಳು ಸಿಗುತ್ತಿಲ್ಲ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.

ಡಿಮ್ಯಾಂಡಪ್ಪೋ ಡಿಮ್ಯಾಂಡು : ಮೀಸೆ ಇದ್ದೂ ಇಲ್ಲ, ಎಷ್ಟೇ ಸುರಸುಂದರಾಗನಾಗಿದ್ದರೂ ಇಲ್ಲ, ಬಿಎಬಿಎಸ್ಸಿಬಿಕಾಂ ಮಾಡಿದ್ದರಂತೂ ಇಲ್ಲವೇ ಇಲ್ಲ. ಡಿಮ್ಯಾಂಡ್ ಇರುವುದು ಇಂಜಿನಿಯರಿಂಗ್ ಮಾಡಿ ಎಂಥ ಕಂಪನಿಯಲ್ಲಿ ಕೆಲಸಕ್ಕಿದ್ದಾನೆ, ಎಷ್ಟು ಸಂಬಳ ಗಿಂಜುತ್ತಿದ್ದಾನೆ, ಯಾವ ದೇಶದಲ್ಲಿದ್ದಾನೆ, ಡೆಸಿಗ್ನೇಷನ್ ಎಂತಹುದು... ಇಂಥವಕ್ಕೆ ಮಾತ್ರ ಸಖತ್ ಡಿಮ್ಯಾಂಡು. ಗಂಡು ಹೆತ್ತ ಮಾವನಿಗೆ ರಿಮ್ಯಾಂಡಪ್ಪೋ ರಿಮ್ಯಾಂಡು. ಗಂಡು ಹೆತ್ತವರು ಹೋದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂದಿರುಗಿ ಬರುತ್ತಿದ್ದಾರೆ.

ಇನ್ನು ಕೆಲ ಹೈಟೆಕ್ ವಧುವರಾನ್ವೇಷಣಾ ಕೇಂದ್ರಗಳು ತಿಂಗಳಿಗೆ 60ರಿಂದ 70 ಸಾವಿರ ರು. ಸಂಬಳ ಪಡೆಯುವ ವರಗಳನ್ನು ಮಾತ್ರ ನೊಂದಾವಣಿ ಮಾಡಿಕೊಳ್ಳುತ್ತಿದ್ದಾರೆ. ಲಗ್ನ ಗಟ್ಟಿಯಾದ ವಧು ಮತ್ತು ವರನ ಕಡೆಯವರಿಂದ ಇಂತಿಷ್ಟು ಪರ್ಸೆಂಟ್ ಕಮಿಷನ್ ಕೂಡ ಕಬಳಿಸುತ್ತಿದ್ದಾರೆ. ಪರಿಸ್ಥಿತಿಯನ್ನು ಅರಿತ ಕೆಲ ಜಾಣರು, ತಮ್ಮ ಮಗನಿಗಾಗಿ ಇತರ ಜಾತಿಯ ಹುಡುಗಿಯನ್ನು ನೋಡಲು ಶುರು ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಮದುವೆಯಾದರೆ ಸಾಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

English summary

Brahmin marriages | No brides only grooms | Marriage counseling in Bangalore | ಹೆಣ್ಣು ಹೆತ್ತವರಿಗೆ ಡಿಮ್ಯಾಂಡು | ಗಂಡು ಹೆತ್ತವರಿಗೆ ರಿಮ್ಯಾಂಡು

There is huge scarcity of brides in Brahmin community in Karnataka. Parents are struggling to find suitable bride for their son. Many marriage counseling centers are opened but demands of parents of girls are no match for match making.
X
Desktop Bottom Promotion