For Quick Alerts
ALLOW NOTIFICATIONS  
For Daily Alerts

ಮದುವೆಯ ಬಗ್ಗೆ ಸಾಮಾನ್ಯರಲ್ಲಿ ಮನೆಮಾಡಿರುವ ತಪ್ಪುಕಲ್ಪನೆಗಳು

By Super
|

ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎನ್ನುತ್ತದೆ ಒಂದು ಸುಭಾಷಿತ. ಮದುವೆಯ ಬಗ್ಗೆ ಎಲ್ಲರಲ್ಲಿಯೂ ಭಿನ್ನಾಭಿಪ್ರಾಯಗಳಿವೆ. ಕೆಲವರು ಇದನ್ನು ಒಂದು ಬಂಧನವೆಂದು ಪರಿಗಣಿಸಿದರೆ ಉಳಿದವರು ಇದು ನಿಸರ್ಗದ ನಿಯಮ ಹಾಗೂ ಜವಾಬ್ದಾರಿ ಹೊರಲು ದೇವರು ನೀಡಿರುವ ಕರ್ತವ್ಯವಾಗಿದೆ ಎಂದು ಭಾವಿಸಿ ಅಂತೆಯೇ ನಡೆದುಕೊಳ್ಳುತ್ತಾರೆ.

ಯೌವನದ ಹುರುಪಿನಲ್ಲಿ ಆಟೋಟ ಜಾಸ್ತಿಯಾದಾಗ ಹಿರಿಯರು ಇವನಿಗೊಂದು ಮದುವೆ ಮಾಡೋಣ, ಜವಾಬ್ದಾರಿ ಬರುತ್ತದೆ ಎಂಬ ಅಭಿಪ್ರಾಯವನ್ನು ಮಂಡಿಸುತ್ತಾರೆ. ಏಕೆಂದರೆ ಮದುವೆಯಾದ ಬಳಿಕ ಬರುವ ಜವಾಬ್ದಾರಿ ವ್ಯಕ್ತಿಯ ನಡವಳಿಕೆಯನ್ನೇ ಬದಲಿಸಿಬಿಡುತ್ತದೆ. ಸಮಾಜದಲ್ಲಿ ಗುರುತಿಸಿಕೊಳ್ಳಲು, ಸಮೃದ್ಧಿ ಮತ್ತು ಜೀವನದಲ್ಲಿ ಸುಖ ಹೆಚ್ಚಲು ನೆರವಾಗುತ್ತದೆ. ಬೇಡದ ಕೆಲಸಗಳಿಗೆ ಕೈ ಹಾಕುವುದು ನಿಲ್ಲುತ್ತದೆ. ವರ್ಷಗಳು ಕಳೆಯುತ್ತಿದ್ದಂತೆಯೇ ದಂಪತಿಗಳ ನಡುವಣ ಬಾಂಧವ್ಯ ಇನ್ನಷ್ಟು ಬೆಸೆಯುತ್ತಾ ಒಬ್ಬರನ್ನೊಬ್ಬರು ಬಿಟ್ಟಿರಲಾದ ಹಂತಕ್ಕೆ ಬಂದು ತಲುಪುತ್ತದೆ.

ವೃದ್ಧಾಪ್ಯದಲ್ಲಿ ವಯೋಸಹಜವಾಗಿ ಸಂಗಾತಿಯ ಆಯಸ್ಸು ಮುಗಿದ ಬಳಿಕ ಒಂಟಿಯಾಗುವ ಜೀವಕ್ಕೆ ಖಿನ್ನತೆಯನ್ನೂ ತರುತ್ತದೆ. ಆದರೆ ಕೆಲವು ದಂಪತಿಗಳು ಹಾವು ಮುಂಗುಸಿಯಂತೆ ಕಚ್ಚಾಡುತ್ತಾ ಒಬ್ಬರ ಮೇಲೊಬ್ಬರು ಚಾಡಿ ಹೇಳುತ್ತಾ ದಿನ ಕಳೆಯುವುದನ್ನು ಕಂಡರೆ ಅವಿವಾಹಿತರು ವಿವಾಹವಾಗುವ ಯೋಚನೆಯನ್ನೇ ಕೈಬಿಡುತ್ತಾರೆ.

ಆದರೆ ವಿವಾಹದ ಬಗ್ಗೆ ಎಲ್ಲರಲ್ಲೂ ಇರುವ ಅಭಿಪ್ರಾಯಗಳು ಬಹುತೇಕ ವಿಭಿನ್ನವಾದುದರಿಂದ ಒಂದು ಖಡಾಖಂಡಿತವಾಗಿ ಮದುವೆಯಾದ ಮೇಲೆ ಹೀಗೇ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಈ ಅಭಿಪ್ರಾಯಗಳು ಪ್ರತಿಯೊಬ್ಬರೂ ಮದುವೆಯ ಕುರಿತಾಗಿ ಕೇಳಿದ ಅಥವಾ ಕಲ್ಪಿಸಿಕೊಂಡ ವಿಷಯಗಳೇ ಆಗಿವೆ. ಇವೆಲ್ಲವೂ ನಿಜವಾಗಿರಬೇಕೆಂದೇನಿಲ್ಲ. ಇವುಗಳಲ್ಲಿ ಹೆಚ್ಚಿನವು ಮಿಥ್ಯವೂ ಆಗಿವೆ. ಬನ್ನಿ ಇಂತಹ ಕೆಲವು ಮಿಥ್ಯೆಗಳನ್ನು ಅವಲೋಕಿಸೋಣ. ವಿವಾಹದ ಬಳಿಕ ಅಂಕುರಿಸಿದ ಪ್ರೀತಿ ಶಾಶ್ವತವಂತೆ! ನಿಜವೇ?

ಮದುವೆ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ

Myths About Marriage

ಮೂಗುದಾರ ಹಾಕಿದ ಬಳಿಕ ಹೂಂಕರಿಸುತ್ತಿದ್ದ ಗೂಳಿ ಪಾಪದ ಕರುವಾಗುವಂತೆ ಮದುವೆಯಾದ ತಕ್ಷಣ ಪಡ್ಡೆಹುಡುಗರೆಲ್ಲಾ ತಹಬಂದಿಗೆ ಬಂದುಬಿಡುತ್ತಾರೆ ಎಂದು ಹೆಚ್ಚಿನವರು ಅಂದುಕೊಂಡಿದ್ದಾರೆ. ಆದರೆ ವಿವಾಹವಾದ ಬಳಿಕ ಕೆಲವು ಸಮಸ್ಯೆಗಳು ಪರಿಹಾರವಾದಂತೆ ಕಂಡರೂ ಇನ್ನೂ ಹೊಸ ಸಮಸ್ಯೆಗಳು ಎದುರಾಗುತ್ತವೆ. ಉದಾಹರಣೆಗೆ ಮಾದಕ ವ್ಯಸನಕ್ಕೆ ಬಲಿಯಾಗಿದ್ದ ಯುವಕನನ್ನು ಹಾದಿಗೆ ತರಲು ಆತನ ಪಾಲಕರು ಮದುವೆ ಮಾಡಿದರೆ ಸಮಸ್ಯೆ ನಿವಾರಣೆಯಾದಂತೆ ಎಂದು ತಿಳಿದಿದ್ದರು. ಆದರೆ ಮದುವೆಯ ಬಳಿಕ ಆತ ವ್ಯಸನವನ್ನು ಬಿಡಲಾಗದೇ ಮನೆಗೆ ಬಂದರೆ ಸಿಕ್ಕಿಬೀಳುವ ಭಯದಿಂದ ಮನೆಯಿಂದ ಹೊರಗೇ ಇರಲು ತೊಡಗಿದ. ಇದು ಹೊಸ ಸಮಸ್ಯೆಯಾಗಿ ಪರಿಣಮಿತವಾಗುತ್ತದೆ. ಅದರಲ್ಲೂ ಕೂಡುಕುಟುಂಬಗಳಿದ್ದರೆ ಮದುವೆಯಾದ ಬಳಿಕ ಆ ಜೋಡಿ ಪ್ರತ್ಯೇಕವಾಗಿ ಮನೆ ಮಾಡುವುದು ಇಂದಿನ ದಿನಗಳಲ್ಲಿ ಸರ್ವೇಸಾಮಾನ್ಯ.

ವಿವಾಹ ಒಂಟಿತನವನ್ನು ದೂರವಾಗಿಸುತ್ತದೆ


ಹೆಚ್ಚಿನವರು ವಿವಾಹಿತರು ಒಂಟಿತನಕ್ಕೆ ಒಳಗಾಗುವುದೇ ಇಲ್ಲ ಎಂದು ತಿಳಿದಿದ್ದಾರೆ. ಆದರೆ ದಂಪತಿಗಳು ಜಗಳವಾಡಿ ಬೇರೆ ಬೇರೆ ಕೋಣೆಗಳಲ್ಲಿ ಮಲಗಿದಾದ ಈ ಮಾತು ಸತ್ಯಕ್ಕೆ ದೂರವಾದುದು ಎಂದು ಗೊತ್ತಾಗುತ್ತದೆ. ವಾಸ್ತವವಾಗಿ ಒಂಟಿತನವೆಂಬುದು ಪ್ರತಿ ವ್ಯಕ್ತಿಯ ಸಹಜಗುಣವೇ ಹೊರತು ಇದನ್ನು ಬಲವಂತವಾಗಿ ಹೇರಲಾಗುವುದಿಲ್ಲ.

ಮದುವೆಯ ಬಳಿಕ ಸಂತೋಷವೋ ಸಂತೋಷ
ಮದುವೆಯ ಬಳಿಕ ಎಲ್ಲರೂ ಅಂದುಕೊಂಡಂತೆ ನಡೆದರೆ ಸ್ವರ್ಗಕ್ಕೆ ಕಿಚ್ಚು ಕಚ್ಚೆಂದ ಸರ್ವಜ್ಞನ ಸಾಲುಗಳು ಪ್ರಸ್ತುತವಾಗುತ್ತವೆ. ಅದೇ ಎಲ್ಲವೂ ಸರಿಯಿದ್ದೂ ಎಲ್ಲೋ ಒಂದು ಚಿಕ್ಕ ತಪ್ಪಾದರೆ ಮನೆಗೇ ಕಿಚ್ಚು ಬೀಳುವುದು ಖಂಡಿತ. ಆದ್ದರಿಂದ ಮದುವೆಯ ಬಳಿಕ ಕೇವಲ ಸಂತೋಷ ಮಾತ್ರವೇ ಎಂದು ಖಡಾಖಂಡಿತವಾಗಿ ಹೇಳಲಾಗುವುದಿಲ್ಲ. ಎಲ್ಲಾ ಧರ್ಮಗಳಲ್ಲೂ ವಿವಾಹದ ವಿಧಿಗಳನ್ನು ಬೋಧಿಸುವಾಗ ಜೀವನದ ಎಲ್ಲಾ ಸುಖ ದುಃಖಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತೇವೆ, ಎಂತಹ ಪರಿಸ್ಥಿತಿಯಲ್ಲಿಯೂ ಒಬ್ಬರನ್ನೊಬ್ಬರು ಬಿಟ್ಟಿರಲಾರೆವು ಎಂದೇ ಇಬ್ಬರಿಂದಲೂ ಪ್ರಮಾಣ ಮಾಡಿಸಲಾಗುತ್ತದೆ. ಹೀಗಿರುವಾಗ ಕೇವಲ ಸುಖ ಮಾತ್ರ ಮದುವೆಯಿಂದ ಲಭಿಸುತ್ತದೆ ಎನ್ನಲಾಗುವುದಿಲ್ಲ.

ಮದುವೆಯನ್ನು ನಿಭಾಯಿಸುವುದು ಬಹಳ ಕಷ್ಟ
ಮದುವೆಯೆಂಬುದು ತುಂಬಾ ಸುಲಭ ರಾಯ್ರೇ, ಅದನ್ನೆಲ್ಲಾ ಮದುವೆ ದಳ್ಳಾಳಿ, ಕಲ್ಯಾಣಮಂಟಪದ ಜನರು, ಪಂಡಿತರು ನೋಡಿಕೊಳ್ಳುತ್ತಾರೆ ಬಿಡಿ, ಆದರೆ ಮದುವೆಯ ಬಳಿಕ ಜೊತೆಗಿರುವುದಿದೆಯೆಲ್ಲಾ, ಅದೇ ಕಷ್ಟದ್ದು ಎಂದು ಕೆಲವರು ಜೋಕು ಹೊಡೆಯುತ್ತಾರೆ. ಮಾನವರಲ್ಲಿ ಒಂದು ಭವ್ಯವಾದ ಗುಣವಿದೆ, ಅದೇ ಹೊಂದಿಕೊಳ್ಳುವ ಗುಣ. ಮನಸ್ಸು ಮನಸ್ಸು ಕೂಡಿದರೆ ಸಾಕು, ಬಡತನವೋ, ಐಶ್ವರ್ಯವಂತಿಕೆಯೋ, ಊಟಕ್ಕೂ ಬರವೋ, ಸುಖದ ಸುಪ್ಪತ್ತಿಗೆಯೋ ಒಬ್ಬರಿಗೊಬ್ಬರು ಜೀವ ಬಿಡುವಷ್ಟು ಒಂದಾಗಿ ಬಾಳುತ್ತಾರೆ. ಇವರಿಗೆ ಮದುವೆಯೆಂದರೆ ಜೀವನದ ಪ್ರತಿ ಕ್ಷಣವನ್ನೂ ಹಂಚಿ ಕಳೆಯುವ ಅವಕಾಶ. ಅದೇ ಮನಸ್ಸು ಮನಸ್ಸು ಸೇರದಿದ್ದರೆ ಅರಮನೆಯಲ್ಲಿ ಸಿಂಹಾಸದಲ್ಲಿ ಕುಳಿತಿದ್ದರೂ, ಹಂಸತೂಲಿಕಾತಲ್ಪದಲ್ಲಿ ಮಲಗಿದ್ದರೂ ಸುಖವಿರದು.

ಮದುವೆಯಾಗಬೇಕಾದರೆ ಇಬ್ಬರ ಹವ್ಯಾಸಗಳು ಒಂದೇ ಆಗಿರಬೇಕು


ಮದುವೆಯಾಗಬೇಕಾದರೆ ಇಬ್ಬರೂ ಒಂದೇ ತರಹನವರಾಗಿರಬೇಕು ಎಂದು ಪಾಶ್ಚಾತ್ಯರು ಅಂದುಕೊಂಡಿದ್ದಾರೆ. ಅಂತೆಯೇ ಚಿಕ್ಕಂದಿನಿಂದಲೂ 'ನಿನ್ನ ಟೈಪ್ ಇರುವ ಸ್ನೇಹಿತರನ್ನೇ ಹುಡುಕು' ಎಂದು ಅವರಿಗೆ ಕಲಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಒಂದೇ ಹವ್ಯಾಸಗಳಿದ್ದ ದಂಪತಿಗಳ ನಡುವೆಯೂ ಬಿರುಕು ಮೂಡಿರುವುದು ಬಹಳಷ್ಟು ಕಂಡುಬಂದಿದೆ. ದಂಪತಿಗಳು ಅನ್ಯೋನ್ಯವಾಗಿರಲು ಇಬ್ಬರ ಹವ್ಯಾಸಗಳು, ಉದ್ಯೋಗ, ಅಭಿರುಚಿಗಳು ಒಂದೇ ಇರಬೇಕಾದ ಯಾವ ಅಗತ್ಯವೂ ಇಲ್ಲ. ಒಟ್ಟಾರೆ ತನ್ನ ಸಂಗಾತಿಯ ಹವ್ಯಾಸಗಳಿಗೆ ಬೆಂಬಲ ನೀಡಿದರೆ ಸಾಕು ಅಷ್ಟೇ.
English summary

Myths About Marriage

Each of us look at marriage in a different way; that is why some of us love it and some of us don't. But a majority of people in the world seem to love it and that is why they are into married relationships. Now, let us discuss about some common myths about marriage.
X
Desktop Bottom Promotion