For Quick Alerts
ALLOW NOTIFICATIONS  
For Daily Alerts

ಮದುವೆಯ ಬಳಿಕ ಏಕೆ ಇಷ್ಟೊಂದು ನೀರಸ ಮೌನ?

|

ದಂಪತಿಗಳ ನಡುವಣ ಪ್ರೇಮ ದಿನಗಳೆದಂತೆ ಗಟ್ಟಿಯಾಗುತ್ತಾ ಹೋಗುವುದು ನಿಸರ್ಗ ನಿಯಮ. ಕೆಲವೊಮ್ಮೆ ಇದಕ್ಕೆ ವಿರುದ್ಧವಾಗಿ ದಿನಗಳೆದಂತೆ ದಾಂಪತ್ಯ ನೀರಸವೆನ್ನಿಸುತ್ತಾ ಒಬ್ಬರಿಂದೊಬ್ಬರು ದೂರಾಗುತ್ತಾ ಹೋಗುವುದನ್ನೂ ಕಾಣಬಹುದು. ದಾಂಪತ್ಯವೇಕೆ ನೀರಸವಾಗುತ್ತಿದೆ ಎಂಬ ಪ್ರಶ್ನೆ ಉತ್ತರ ನಮ್ಮ ದಿನಚರಿತ್ರೆಯಲ್ಲಿ ಅಡಗಿದೆ. ಯಾವುದೇ ಆಹಾರವನ್ನೂ ನಾಲ್ಕು ದಿನ ಸತತವಾಗಿ ತಿಂದರೆ ಐದನೆಯ ದಿನ ಆ ಆಹಾರದ ಮೇಲೆ ಅಸಾಧ್ಯವಾದ ವೈರತ್ವವನ್ನು ಬೆಳೆಸಿಕೊಂಡುಬಿಟ್ಟಿರುತ್ತೇವೆ.

ಅಂತಿರುವಾಗ ಏಕರೀತಿಯ ದಿನಚರಿ ಅಥವಾ ವೈವಿಧ್ಯತೆ ಇಲ್ಲದ ಜೀವನ, ಪ್ರೇಮವಿಲ್ಲದ ಸಲ್ಲಾಪ ಮೊದಲಾದ ಹಲವು ಕಾರಣಗಳನ್ನು ನೀಡಬಹುದು. ನಿಜವಾದ ತೊಂದರೆ ಏನೆಂದರೆ ದಂಪತಿಗಳ ನಡುವಿನ ಸಂಬಂಧ ನೀರಸವಾಗಿರುವುದು ಅರಿವಿಗೇ ಬಾರದಿರುವುದು. ದಿನಗಳೆದಂತೆ ಇಬ್ಬರೂ ತಮ್ಮಷ್ಟಕ್ಕೇ ಇರುವುದು, ಒಬ್ಬರು ಇನ್ನೊಬ್ಬರನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದು ಮೊದಲಾದವು ನೀರಸ ದಾಂಪತ್ಯದ ಲಕ್ಷಣಗಳಾಗಿವೆ.

5 Reasons Why Relationships Get Boring

ನಿಮ್ಮ ದಾಂಪತ್ಯವನ್ನು ಕೊಂಚ ಅವಲೋಕಿಸಿ ನೋಡಿ, ನೀರಸತೆ ಕಂಡುಬರುತ್ತಿದೆಯೇ? ಒಂದು ವೇಳೆ ಹೌದು ಎಂದಾದಲ್ಲಿ ಇದಕ್ಕೆ ಕಾರಣಗಳು ನೀವು ಊಹಿಸಿದ್ದಕ್ಕಿಂತ ಭಿನ್ನವೂ ಆಘಾತಕಾರಿಯೂ ಆಗಿರಬಹುದು. ಅಥವಾ ಈ ನಿಟ್ಟಿನಲ್ಲಿ ಕೊಂಚ ದಾರಿ ಕ್ರಮಿಸಿರಬಹುದು. ಇದನ್ನು ಅರಿತುಕೊಂಡು ಎಚ್ಚೆತ್ತುಕೊಂಡು ಸರಿಪಡಿಸಿಕೊಳ್ಳುವ ಮೂಲಕ ನಿಮ್ಮ ದಾಂಪತ್ಯವನ್ನು ಮತ್ತೆ ನವದಾಂಪತ್ಯಕ್ಕೆ ಮರಳಿಸಿಕೊಳ್ಳಬಹುದು. ಈ ಪರಿಸ್ಥಿತಿಗೆ ತಳ್ಳುವ ಪ್ರಮುಖ ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ. ಇವನು ತನ್ನ ಜೀವನ ಸಂಗಾತಿಯಾಗಲು ಅರ್ಹನೇ?

ಮದುವೆಯಾಗಿರುವುದು ತಪ್ಪು ಅನ್ನಿಸುವುದು
ಸಾಧಾರಣವಾಗಿ ಪ್ರೇಮವಿವಾಹಗಳೇ ಹೆಚ್ಚಾಗಿ ವಿಚ್ಛೇದನದತ್ತ ವಾಲುತ್ತವೆ. ಇದಕ್ಕೆ ತಜ್ಞರು ನೀಡುವ ಉತ್ತರವೆಂದರೆ ಮದುವೆಯಾಗುವವರೆಗೆ ಪ್ರೇಮಿಗಳು ಕಳೆಯುವ ಪ್ರತಿ ಕ್ಷಣವೂ ಸಂತೋಷಕರವಾಗಿದ್ದು ಒಬ್ಬರನ್ನು ಬಿಟ್ಟು ಇನ್ನೊಬ್ಬರಿಲ್ಲದಂತಿದ್ದು ಮದುವೆಯಾದ ಬಳಿಕ ಕ್ರಮೇಣ ನೀರವತೆ ಆವರಿಸುತ್ತದೆ. ಮದುವೆಗೂ ಮುನ್ನ ತಮ್ಮ ಸಂಗಾತಿ ಹೀಗಿರಬಹುದು ಎಂದುಕೊಂಡಿದ್ದ ಕಲ್ಪನೆ ಬಳಿಕ ಇಷ್ಟೇನಾ! ಎಂಬ ಭ್ರಮನಿರಸನ ಹೊಂದುತ್ತದೆ.
ದೈನಂದಿನ ಸಾಂಸಾರಿಕ ಜವಾಬ್ದಾರಿಗಳು ಎದುರಾಗುತ್ತಿದ್ದಂತೆಯೇ ಮದುವೆಗೆ ಮುಂದಿನ ಸಲ್ಲಾಪಗಳನ್ನೆಲ್ಲಾ ಈ ಜವಾಬ್ದಾರಿಗಳು ಕೊಚ್ಚಿಕೊಂಡು ತಮ್ಮ ಸಮಯವನ್ನೆಲ್ಲಾ ಕಬಳಿಸಿಬಿಡುತ್ತಿದೆ ಎಂದನ್ನಿಸುತ್ತದೆ. ಮನೆಯವರ ಮಾತಿನ ಪ್ರಭಾವದಿಂದಲೂ ಸಂಗಾತಿಯ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ದಿನದ ಸಮಯವನ್ನು ಹೊರಗೇ ಕಳೆಯುವಂತೆ ಮಾಡುತ್ತಾ ದಾಂಪತ್ಯ ನೀರಸವಾಗಲು ಕಾರಣವಾಗುತ್ತದೆ.

ಬೇಡದ ಬಸಿರು
ವಿಶೇಷವಾಗಿ ಯುವ ಪ್ರೇಮಿಗಳು ತಮ್ಮ ನಡುವಣ ಸಂಬಂಧವನ್ನು ಮಕ್ಕಳ ಹೊರತಾಗಿ ಬಹುಕಾಲ ಅನುಭವಿಸಲು ಇಚ್ಛಿಸುತ್ತಾರೆ. ಆದರೆ ನಿಸರ್ಗ ನಿಯಮ ಮೀರಲಾಗದೇ ಬಸಿರಾಗಿಬಿಟ್ಟರೆ ಬರಲಿರುವ ಮಗು ತಮ್ಮ ಸಮಯವನ್ನೆಲ್ಲಾ ಕಬಳಿಸಿಬಿಡುತ್ತದೆ ಎಂಬ ಭಾವನೆ ನೀರಸತೆಯನ್ನು ಹುಟ್ಟುಹಾಕುತ್ತದೆ. ಇನ್ನೂ ಕೊಂಚ ಕಾಲ ಸುಖವಾಗಿರೋಣ, ಈಗಲೇ ಮಗು ಬೇಡ, ಇದನ್ನು ನಿವಾರಿಸಿಕೊಳ್ಳೋಣ ಎಂಬ ನಿರ್ಧಾರಕ್ಕೆ ಬರುತ್ತಾರೆ. ಒಂದು ವೇಳೆ ಈ ಪರಿಸ್ಥಿತಿ ಬಂದರೆ ಇದಕ್ಕಿಂತ ದೊಡ್ಡ ದೌರ್ಭಾಗ್ಯ ಇನ್ನೊಂದಿಲ್ಲ.


ಏಕೆಂದರೆ ಮಕ್ಕಳಿಗಾಗಿ ಹಪಹಪಿಸುವ ಲಕ್ಷಾಂತರ ಜನರು ಈ ಲೋಕದಲ್ಲಿದ್ದಾರೆ. ಸಂತಾನ ಭಾಗ್ಯವೇ ಸಾಧ್ಯವಿಲ್ಲದ ಲಕ್ಷಾಂತರ ಜನರಿದ್ದಾರೆ. ಸೂಕ್ತಕಾಲದಲ್ಲಿ ಆದ ಬಸಿರನ್ನೂ ಬಲವಂತವಾಗಿ ಬೇಡವಾಗಿಸಿದರೆ ಬಳಿಕ ಜೀವಮಾನವಿಡೀ ಬೇಕೆಂದರೂ ಸಾಧ್ಯವಾಗದ ವಿಧಿಯಾಟ ಕೊರಗನ್ನು ಉಂಟುಮಾಡಬಹುದು. ಆದ್ದರಿಂದ ಈ ಬಗ್ಗೆ ಆಪ್ತ ಸಮಲೋಚನೆ, ಹಿರಿಯರ ಮಾರ್ಗದರ್ಶನ, ತಜ್ಞರ ಸಲಹೆ ಪಡೆಯುವುದು ಅಗತ್ಯವಾಗಿದೆ.

ವಯಸ್ಸಾಗಿರುವುದು
ಸಮಯ ಕಳೆದಂತೆ ಪ್ರತಿಯೊಬ್ಬರಿಗೂ ವಯಸ್ಸಾಗುತ್ತಲೇ ಹೋಗುತ್ತದೆ. ಆಯಾ ವಯಸ್ಸಿಗೆ ತಕ್ಕ ಗಾಂಭೀರ್ಯವನ್ನು ಅಳವಡಿಸಿಕೊಳ್ಳುವ ಮೂಲಕ ಜೀವನವನ್ನು ಸಮರ್ಥವಾಗಿ ಎದುರಿಸಬಹುದು. ಜೀವನ ಪಕ್ವಗೊಂಡಂತೆ ಸುಖ ಮತ್ತು ದುಃಖಗಳನ್ನು ಸಮನಾಗಿ ಹಂಚಿಕೊಳ್ಳುತ್ತಾ ಹೋಗುವುದು ಸುಖದಾಂಪತ್ಯದ ಮೂಲ.


ಒಂದು ವೇಳೆ ಹಿಂದಿನ ದಿನಗಳ ಕಹಿ ಅನುಭವಗಳನ್ನೇ, ಚಿಕ್ಕಪುಟ್ಟ ತಪ್ಪುಗಳನ್ನೇ ತಲೆಯಲ್ಲಿ ಕೊರೆದುಕೊಳ್ಳುತ್ತಾ ಇದಕ್ಕೆಲ್ಲಾ ನೀನೇ ಕಾರಣ ಎಂದು ಸಂಗಾತಿಯನ್ನು ಹಳಿಯುತ್ತಾ, ಹೀಗಾಗಬಾರದಿತ್ತು, ಹಾಗಾಗಬೇಕಿತ್ತು ಎಂದೆಲ್ಲಾ ಅಸಾಧ್ಯವಾದುದನ್ನೆಲ್ಲಾ ಕಲ್ಪಿಸಿಕೊಳ್ಳುತ್ತಾ, ಜೀವನದಲ್ಲಿ ಅಂದುಕೊಂಡಿದ್ದ ಏಳ್ಗೆಯನ್ನು ಪಡೆಯಲಾಗದುದಕ್ಕೆ ಸಂಗಾತಿಯನ್ನೇ ಕಾರಣವಾಗಿಸುವುದು ನೀರಸ ದಾಂಪತ್ಯಕ್ಕೆ ಕಾರಣಗಳಾಗಿವೆ. ಅದಕ್ಕೂ ಮಿಗಿಲಾಗಿ ವಯಸ್ಸಿನ ಕಾರಣದಿಂದ ದುರ್ಬಲವಾಗುವ ದೇಹವೇ ನೀರಸತೆಗೆ ಕಾರಣವಾಗಿದೆ. ಪತ್ನಿ ಐಷಾರಾಮಿ ಜೀವನ ಬಯಸಿದರೆ ಗಂಡನ ಪಾಡೇನು?

ಅನೈತಿಕ ಸಂಬಂಧಗಳು
ಸ್ಫುರದ್ರೂಪಿ ಮಜನೂ ಮತ್ತು ಕೃಷ್ಣವರ್ಣದ ಲೈಲಾರ ನಡುವೆ ಪ್ರೇಮ ಹೇಗೆ ಉಂಟಾಯಿತು ಎಂಬ ಪ್ರಶ್ನೆಗೆ ಕವಿಗಳು ಲೈಲಾಳನ್ನು ನಿಮ್ಮ ದೃಷ್ಟಿಯಿಂದಲ್ಲ, ಮಜನೂ ದೃಷ್ಟಿಯಿಂದ ನೋಡಿ, ಪ್ರೇಮವೆಂದರೇನೆಂದು ಅರ್ಥವಾಗುತ್ತದೆ ಎಂದಿದ್ದಾರೆ. ಪ್ರತಿ ವ್ಯಕ್ತಿಗೂ ಇನ್ನೊಬ್ಬರ ಯಾವುದೋ ಗುಣ ಅಥವಾ ಸೌಂದರ್ಯ ಸೆಳೆಯಬಹುದು. ಮದುವೆಯಾದ ಬಳಿಕ ನಿಧಾನವಾಗಿ ಅತ್ತಿತ್ತ ಹೊರಳುವ ಕಣ್ಣು ತಮ್ಮ ಸಂಗಾತಿಯಲ್ಲಿಲ್ಲದ ಗುಣಗಳನ್ನು ಇನ್ನೊಬ್ಬರಲ್ಲಿ ಕಂಡು ಅತ್ತ ಕಡೆ ಆಕರ್ಷಣೆ ಉಂಟಾಗಬಹುದು.


ಈ ಆಕರ್ಷಣೆ ಕೇವಲ ಕಣ್ಣುಗಳ ಮಟ್ಟಿಗೆ ಸೀಮಿತವಾಗಿದ್ದರೆ ಏನೂ ತೊಂದರೆ ಇಲ್ಲ.ಆದರೆ ಈ ಕಣ್ಣುಗಳ ಸೆಳೆತ ಮುಂದುವರೆದು ಜೀವನದಲ್ಲಿ ಮೂರನೆಯ ವ್ಯಕ್ತಿಯ ಪ್ರವೇಶವಾದರೆ ಮಾತ್ರ ಇದು ಅನೈತಿಕ ಸಂಬಂಧಕ್ಕೆ ದಾರಿಮಾಡಿಕೊಡುತ್ತದೆ. ಈ ಸಂಬಂಧ ಸಂಗಾತಿಗಳ ನಡುವೆ ನೀರಸತೆಯನ್ನು ಹೆಚ್ಚಿಸುತ್ತಾ ವಿಚ್ಛೇದನದತ್ತ ತೆರಳುವ ಸಂಭವವಿದೆ. ಇದನ್ನು ತಡೆಯಲು ಈ ಸಂಗಾತಿಯನ್ನು ದೇವರೇ ನಮಗೆ ಕೊಟ್ಟಿದ್ದು ಯಾವುದನ್ನು ಪಡೆಯಬೇಕಿದ್ದರೂ ಇವರಿಂದಲೇ ಪಡೆದುಕೊಳ್ಳಬೇಕು, ಸಿಕ್ಕಷ್ಟರಿಂದ ತೃಪ್ತರಾಗಬೇಕು ಎಂಬ ತತ್ವಕ್ಕೆ ಬದ್ದರಾದರೆ ದಾಂಪತ್ಯ ಜೀವನಪರ್ಯಂತ ಸುಖಮಯವಾಗಿ ಕಳೆಯುತ್ತದೆ.

ಸಂಗಾತಿ ಉದ್ಯೋಗಸ್ಥೆಯಾಗಿಲ್ಲದಿರುವುದು
ಇಂದು ಹೆಚ್ಚಿನವರು ತಮ್ಮ ಸಂಗಾತಿಯೂ ಉದ್ಯೋಗದಲ್ಲಿರಬೇಕೆಂದು ಬಯಸುತ್ತಾರೆ. ಇದರಿಂದ ಉತ್ತಮ ವರಮಾನ ಪಡೆದು ಸುಖಮಯವಾದ ಜೀವನವನ್ನು ನಡೆಸಬಹುದು ಎಂಬುದೇ ಎಲ್ಲರ ಲೆಕ್ಕಾಚಾರ. ಯಾವಾಗ ಸುಖವನ್ನು ಹಣದ ಅಳತೆಯಿಂದ ಅಳೆಯುತ್ತೀರೋ ಅಲ್ಲಿಗೆ ಸುಖವೆನ್ನುವುದು ಮರೀಚಿಕೆಯಾಗಿಬಿಡುತ್ತದೆ. ಏಕೆಂದರೆ ಹಣದ ಅಗತ್ಯತೆ ಹಣ ಹೆಚ್ಚಾದಷ್ಟೂ ಹೆಚ್ಚುತ್ತಾ ಹೋಗುತ್ತದೆ. ಉದಾಹರಣೆಗೆ ಕಾರೇ ಇಲ್ಲದವರು ಹಳೆಯ ಕಾರಾದರೂ ಸರಿ, ಕಾರು ಬೇಕೇ ಬೇಕು ಎನ್ನುವ ಪರಿಸ್ಥಿತಿ ಇದ್ದಾಗ ಹಳೆಯ ಕಾರು ಬಂದ ಬಳಿಕ ಹೊಸ ಕಾರು, ನಂತರ ಇನ್ನೂ ದುಬಾರಿ ಬೆಲೆಯಕಾರು, ಬಳಿಕ ಇನ್ನೂ ದುಬಾರಿ ಬೆಲೆಯ ಕಾರು

ಕೊಂಡುಕೊಳ್ಳುತ್ತಾ ಹೋಗುತ್ತಾರೆ
ಇದಕ್ಕೆ ಕೊನೆಯೇ ಬಾರದು. ಒಂದು ವೇಳೆ ಸಂಗಾತಿ ಉದ್ಯೋಗದಲ್ಲಿಲ್ಲದಿದ್ದರೆ ಉದ್ಯೋಗದಲ್ಲಿರುವವರು ಇದನ್ನೇ ದೊಡ್ಡ ಕೊರತೆಯಂತೆ ಬಿಂಬಿಸುತ್ತಾ ಇಷ್ಟು ಹಣ ಬಂದಿದ್ದರೆ ಹೀಗೆ ಮಾಡಬಹುದಿತ್ತು ಎಂಬ ಲೆಕ್ಕಾಚಾರದಲ್ಲಿಯೇ ದಿನ ಕಳೆದು ದಾಂಪತ್ಯವನ್ನು ನೀರಸವಾಗಿಸಿಬಿಡುತ್ತಾರೆ. ವಾಸ್ತವವೆಂದರೆ ಯಾವುದೇ ವರಮಾನಕ್ಕೂ ಸುಖಜೀವನಕ್ಕೂ ನೇರಸಂಬಂಧವಿಲ್ಲ. ಹಣ ಹೆಚ್ಚಾದಷ್ಟೂ ಸೌಲಭ್ಯಗಳು ಹೆಚ್ಚುತ್ತವೆಯೇ ಹೊರತು ಸುಖವಲ್ಲ. ಸುಖವೇನಿದ್ದರೂ ನಿಮ್ಮ ಗಳಿಕೆಗೆ ತಕ್ಕಂತೆ ದಂಪತಿಗಳು ಹೊಂದಿಕೊಂಡು ಬಾಳುವುದರಲ್ಲಿಯೇ ಇದೆ.

English summary

5 Reasons Why Relationships Get Boring

Any relationship would be beautiful in the starting stages but what happens after some time? Well, some bonds turn out to be boring relationships. Have you ever wondered about the reasons relationships get boring? Well, there are many factors which affect and shape the dynamics of every relationship.
X
Desktop Bottom Promotion