For Quick Alerts
ALLOW NOTIFICATIONS  
For Daily Alerts

ಮೃದುವಾದ, ಪೂರಿಯಂತೆ ಉಬ್ಬಿರುವ ಚಪಾತಿ

By Super
|

ಚಪಾತಿ ಮತ್ತು ರೋಟಿಗಳು ಭಾರತದಾದ್ಯಂತ ಎಲ್ಲಾ ಮನೆಗಳ ನಿತ್ಯದ ಆಹಾರಗಳಾಗಿವೆ. ಅದರಲ್ಲೂ ಚಪಾತಿಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಿ ಬಿಸಿಬಿಸಿಯಾಗಿ ತಿನ್ನಲು ಸಾಧ್ಯ. ಆದರೆ ಎಲ್ಲರ ಮನೆಯ ಚಪಾತಿಗಳು ಮೃದುವಾಗಿರುವುದಿಲ್ಲ. ಕೆಲವರ ಮನೆಯ ಚಪಾತಿಗಳು ಮಾತ್ರ ಪೂರಿಯಂತೆ ಉಬ್ಬಿದ್ದು ಬಾಯಲ್ಲಿಟ್ಟಂತೆಯೇ ಕರಗುವಷ್ಟು ಮೃದು ಹಾಗೂ ರುಚಿಯಾಗಿರುತ್ತವೆ.

ಇಂತಹ ಚಪಾತಿಗಳನ್ನು ಮಾಡುವುದೇನೂ ಅಂತಹಾ ರಾಕೆಟ್ ವಿಜ್ಞಾನವೇನೂ ಅಲ್ಲ. ಬದಲಿಗೆ ಹಿಟ್ಟು ಕಲಸುವಾಗ ಕೆಲವು ಬದಲಾವಣೆಗಳನ್ನು ತಂದುಕೊಂಡರೆ ನಿಮ್ಮ ಮನೆಯ ಚಪಾತಿಗಳೂ ಹೀಗೇ ಆಗುತ್ತವೆ.

ಇದಕ್ಕೆ ಎರಡು ಪ್ರಮುಖ ಬದಲಾವಣೆಗಳು ಬೇಕು. ಮೊದಲನೆಯದು ಹಿಟ್ಟನ್ನು ಕಲಸಲು ಬಳಸುವ ನೀರಿನ ಬಿಸಿ, ಇದು ಅತಿ ಬಿಸಿಯೂ ಇರಬಾರದು, ಅತಿ ತಣ್ಣಗೂ ಇರಬಾರದು. ಎರಡನೆಯದಾಗಿ ಕನ್ನಡದಲ್ಲಿ ಮಾತ್ರ ಹೇಳಬಹುದಾದ ನಗೆಹನಿಯಂತೆ ಹಿಟ್ಟು ಕಲಿಸಿಟ್ಟ ಬಳಿಕ ಒಂದು ಗಂಟೆ ಇಡುವುದು (ಈ ನಗೆಹನಿಯಲ್ಲಿ ಕಲಸಿದ ಹಿಟ್ಟಿನ ಮೇಲೆ ಯಜಮಾನರು ಒಂದು ಪೂಜೆಗೆ ಬಳಸುವ ಗಂಟೆ ಇಟ್ಟಿರುತ್ತಾರೆ).

ವಾಸ್ತವವಾಗಿ ಒಂದು ಗಂಟೆ ಅಗತ್ಯವಿಲ್ಲ, ಅರ್ಧಗಂಟೆ ಇಟ್ಟರೂ ಸಾಕು. ಹಿಟ್ಟನ್ನು ನಾದುವಾಗ ನೀರಿನ ಪ್ರಮಾಣ ಹೆಚ್ಚಾದರೆ ಕೂಡಲೇ ಕೊಂಚ ಹಿಟ್ಟನ್ನು ಸೇರಿಸಿ ಹದವನ್ನು ಕಾಪಾಡುವುದೂ ಇನ್ನೊಂದು ಗುಟ್ಟು. ಬನ್ನಿ, ಇಂದು ಇಂತಹ ಗರಿಗರಿಯಾದ, ಪೂರಿಯಂತೆ ಉಬ್ಬಿರುವ ಚಪಾತಿಗಳನ್ನು ಮಾಡುವ ಬಗೆಯನ್ನು ಕಲಿಯೋಣ: ರೊಟ್ಟಿ ಮತ್ತು ಚಪಾತಿ ಹೀಗೆ ಮಾಡಿದರೆ ಬಲುರುಚಿ

ಅಗತ್ಯವಿರುವ ಸಮಾಗ್ರಿಗಳು:
*ಗೋಧಿ ಹಿಟ್ಟು : ಮೂರು ಕಪ್
*ಬಿಸಿ ನೀರು
*ಉಪ್ಪು ರುಚಿಗನುಸಾದ
*ಎಣ್ಣೆ: ಅಗತ್ಯಕ್ಕೆ ತಕ್ಕಂತೆ

ವಿಧಾನ:
ಕ್ರಮ 1: ಮೊದಲು ಒಂದು ಪಾತ್ರೆಯಲ್ಲಿ ಗೋಧಿಹಿಟ್ಟನ್ನು ಹಾಕಿ. ಇದಕ್ಕೆ ಕೊಂಚ ಉಪ್ಪು ಹಾಕಿ ಬಿಸಿನೀರು ಹಾಕಿ. ಇದನ್ನು ಅರ್ಧ ಗಂಟೆ ಹಾಗೇ ಬಿಡಿ.

 Simple tricks to make soft chapati

ಕ್ರಮ 2: ಅರ್ಧ ಗಂಟೆಯ ಬಳಿಕ ಈ ಹಿಟ್ಟನ್ನು ಮಿಶ್ರಣ ಮಾಡಲು ತೊಡಗಿ. ಸುಮಾರು ಹತ್ತು ನಿಮಿಷ ನಾದಿ, ಎಲ್ಲಾ ಹಿಟ್ಟು ಒಂದೇ ಸಮನಾಗಿರುವಂತೆ ನೋಡಿಕೊಳ್ಳಿ. ಬಳಿಕ ಉಂಡೆಗಳನ್ನಾಗಿಸಿ.

ಕ್ರಮ 3: ಹಿಟ್ಟು ನಾದುವಾಗ ನೀರು ಕಡಿಮೆ ಅನಿಸಿದರೆ ಮೊದಲೇ ಕೊಂಚ ನೀರು ಹಾಕಿ. ಈ ನೀರು ಕೊಂಚ ಬಿಸಿ ಇರಲಿ. ಪಾತ್ರೆಯಲ್ಲಿ ಎಲ್ಲಿಯೂ ಹಿಟ್ಟು ಉಳಿದಿರದಂತೆ ನೋಡಿಕೊಳ್ಳಿ. ಉಂಡೆಗಳನ್ನು ಸುಮಾರು ಹತ್ತು ನಿಮಿಷ ಹಾಗೇ ಬಿಡಿ.

ಕ್ರಮ 4: ಕೊಂಚ ಹಿಟ್ಟನ್ನು ಚಪಾತಿ ಮಣೆಯ ಮೇಲೆ ಹರಡಿ ಹಿಟ್ಟಿನ ಉಂಡೆಯನ್ನು ಲಟ್ಟಣಿಗೆ ಉಪಯೋಗಿಸಿ ವೃತ್ತಾಕಾರದಲ್ಲಿ ಲಟ್ಟಿಸಿ. ಸೂಚನೆ: ಮಣೆಯ ಮೇಲೆ ಹರಡಲು ಹೆಚ್ಚು ಹಿಟ್ಟು ಬಳಸಬಾರದು. ಇಲ್ಲಿ ಚಪಾತಿ ಮಣೆಗೆ ಅಂಟಿಕೊಳ್ಳದಿರುವಷ್ಟು ಮಾತ್ರ ಉಪಯೋಗಿಸಿದರೆ ಸಾಕು. ಹೆಚ್ಚಾದಷ್ಟೂ ಚಪಾತಿ ಗಟ್ಟಿಯಾಗುತ್ತಾ ಹೋಗುತ್ತದೆ.

ಕ್ರಮ 5: ದಪ್ಪತಳದ ಕಾವಲಿಯಲ್ಲಿ ಲಟ್ಟಿಸಿದ ಚಪಾತಿಯನ್ನು ಮಧ್ಯಮ ಉರಿಯಲ್ಲಿ ಬೇಯಿಸಿ. ಮೊದಲ ಭಾಗ ಕೊಂಚ ಬೇಯುತ್ತಿದ್ದಂತೆಯೇ ತಿರುವಿ ಇನ್ನೊಂದು ಬದಿಯನ್ನು ಬೇಯಲಿಡಿ. ಬಳಿಕ ಮೊದಲ ಭಾಗ ಮೇಲೆ ಬರುವಂತೆ ತಿರುವಿ ಕೊಂಚವೇ ಎಣ್ಣೆಯನ್ನು ಚಮಚದಿಂದ ಸವರಿ.


ಈಗ ಮತ್ತೊಮ್ಮೆ ತಿರುವಿ ಇನ್ನೊಂದು ಬದಿಗೂ ಎಣ್ಣೆ ಸವರಿ. ಪೂರಿಯಂತೆ ಉಬ್ಬಲು ಮರದ ಚಮಚ ಅಥವಾ ಸಟ್ಟುಗದಿಂದ ನಡುಭಾಗದಲ್ಲಿ ಕೊಂಚವೇ ಒತ್ತಡ ನೀಡಿ. ಈಗ ರುಚಿಕರವಾದ, ಗರಿಗರಿ ಚಪಾತಿಗಳು ಸಿದ್ಧ. ನಿಮ್ಮ ನೆಚ್ಚಿನ ಪಲ್ಯ, ಸಾಗು, ಜಾಂ, ಕ್ರೀಂ ಮೊದಲಾದವುಗಳೊಂದಿಗೆ ಸೇವಿಸಿ.

Read in English-Simple Tricks To Make Soft Chapati

English summary

Simple tricks to make soft chapati in kannada

Rotis and chapatis are a staple food across India. Chapatis is one of the dishes that can be prepared within minutes. However, some people complain that no matter what tricks they use, the chapatis are never soft.
Story first published: Friday, November 27, 2015, 13:18 [IST]
X
Desktop Bottom Promotion