For Quick Alerts
ALLOW NOTIFICATIONS  
For Daily Alerts

ಸೊಪ್ಪಿನ ಪಲ್ಯ-ಬ್ಯಾಚುಲರ್ ರೆಸಿಪಿ

|

ಹಾಯ್ ಸ್ನೇಹಿತರೆ, ಎರಡು- ಮೂರು ದಿನಗಳಿಂದ ಬ್ಯಾಚುಲರ್ ಅಡುಗೆ ಟಿಪ್ಸ್ ನೀಡಿಯೇ ಇಲ್ಲ. ಬೇಕಂತಲೇ ನೀಡಿಲ್ಲ, ವೀಕೆಂಡ್ ನಲ್ಲಿ ಫ್ರೆಂಡ್ಸ್ ಜೊತೆ ಹೊರಗಡೆ ಸಮಯ ಕಳೆಯಬೇಕೆಂದು ಇರುವಾಗ ಅಡುಗೆ ಮಾಡಲು ಮನಸ್ಸು ಬರುವುದಾದರೂ ಹೇಗೆ ಅಲ್ವಾ? ವೀಕೆಂಡ್ ನಲ್ಲಿ ಜಾಲಿಯಾಗಿ ಬೈಕ್ ರೈಡ್ ಹೋಗುವುದು, ಯಾವುದಾದರೂ ಸ್ಥಳ ನೋಡಲಿಕ್ಕೆ ಹೋಗುವುದು, ಮೂವಿಗೆ ಹೋಗುವುದು, ಅಥವಾ ಪಾರ್ಟಿ ಹೀಗೆ ಟೈಮ್ ಅನ್ನು ಬಿಂದಾಸ್ ಆಗಿ ಕಳೆಯಲು ಬ್ಯಾಚುಲರ್ ಲೈಫ್ ನಲ್ಲಿ ಮಾತ್ರ ಸಾಧ್ಯ ಅಲ್ವೆ? ಅದಲ್ಲ ಇರಲಿ, ಇವತ್ತಿನ ಸ್ಪೆಷಲ್ ಅಡುಗೆಯೇನು ಎಂದು ನೋಡೋಣವೇ?

ಇವತ್ತು ನಾನು ಸೊಪ್ಪಿನ ಪಲ್ಯ ಮಾಡುವ ವಿಧಾನ ಹೇಳಿದ್ದಾನೆ. ದಂಟಿನ ಸೊಪ್ಪು ಆಗಿರಬಹುದು, ಅರಿವೆ ಅಥವಾ ಕೀರೆ ಸೊಪ್ಪು ಆಗಿರಬಹುದು, ಪಾಲಾಕ್ ಸೊಪ್ಪು ಆಗಿರಬಹುದು, ನುಗ್ಗೆ ಸೊಪ್ಪು ಆಗಿರಬಹುದು, ಇವುಗಳಿಂದ ಪಲ್ಯ ಮಾಡಬೇಕೆಂದು ಬಯಸುವುದಾದರೆ ಈ ವಿಧಾನ ಬಳಸಿ ಮಾಡಬಹುದು.

ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:


ಸಲಹೆ:
ಇದರ ರೆಸಿಪಿ ಸರಳವಾಗಿದೆ. ಆದರೆ ಸೊಪ್ಪನ್ನು ಮಾತ್ರ ಕತ್ತರಿಸುವ ಮುನ್ನ ಚೆನ್ನಾಗಿ ತೊಳೆಯಿರಿ, ಅದರಲ್ಲೂ ಟ್ಯಾಪ್ ನಲ್ಲಿ ನೀರನ್ನು ಹರಿಯಬಿಟ್ಟು ಅದರಲ್ಲಿ ತೊಳೆದರೆ ಸೊಪ್ಪಿನಲ್ಲಿದ್ದ ಮಣ್ಣನ್ನು ಸುಲಭವಾಗಿ ಹೋಗಲಾಡಿಸಬಹುದು. ನಂತರ ಸೊಪ್ಪನ್ನು ಸೋಸಿದ ಬಳಿಕ ಮತ್ತೊಮ್ಮೆ ತೊಳೆಯಿರಿ. (ಸೊಪ್ಪನ್ನು ಸೋಸುವುದು ಮಾತ್ರ ನಿಮಗೆ ಸ್ವಲ್ಪ ಶ್ರಮ ಅನಿಸಬಹುದು, ಆದರೆ ಸೊಪ್ಪು ಸೋಸಿದ ಬಳಿಕ ಮಾಡುವ ವೀಧಾನ ಸರಳವಾಗಿದೆ).

ಸೊಪ್ಪಿನ ಪಲ್ಯಕ್ಕೆ ಬೇಕಾಗುವ ಪದಾರ್ಥಗಳು
ಸೊಪ್ಪು3-4 ಕಟ್ಟು ( ಸೊಪ್ಪಿನ ಕಟ್ಟು ದಪ್ಪವಿದ್ದರೆ 2-3 ಸಾಕು)
ಈರುಳ್ಳಿ 1
ಹಸಿ ಮೆಣಸು 2-3( ಹಸಿ ಮೆಣಸನ್ನು ಮಧ್ಯಭಾಗವಾಗಿ ಸೀಳಿ)
ಎಣ್ಣೆ 1 ಚಮಚ
ಸಾಸಿವೆ 1/4 ಚಮಚ
ಅರಿಶಿಣ ಪುಡಿ ಅರ್ಧ ಚಮಚ(ಚಿಕ್ಕ ಚಮಚದಲ್ಲಿ)
ಸ್ವಲ್ಪ ತೆಂಗಿನ ತುರಿ

ತಯಾರಿಸುವ ವಿಧಾನ
* ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಸಾಸಿವೆ ಹಾಕಿ, ಸಾಸಿವೆ ಚಟಾಪಟಾ ಶಬ್ದ ಬರುವಾಗ ಕತ್ತರಿಸಿದ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಹಾಕಿ, ಈರುಳ್ಳಿ ಸ್ವಲ್ಪ ಬಣ್ಣ ಬದಲಾಗುವವರೆಗೆ ಫ್ರೈ ಮಾಡಿ.

* ನಂತರ ಶುದ್ಧ ಮಾಡಿ, ತೊಳೆದಿಟ್ಟ ಸೊಪ್ಪನ್ನು ನೀರು ಹಿಂಡಿ ಹಾಕಿ, ನಂತರ ಅರಿಶಿಣ ಪುಡಿ ಹಾಕಿ ಅರ್ಧ ಚಮಚ ಉಪ್ಪು ಹಾಕಿ ಮಿಕ್ಸ್ ಮಾಡಿ ಪಾತ್ರೆಯ ಬಾಯಿ ಮುಚ್ಚಿ 5 ನಿಮಿಷ ಬೇಯಿಸಿ. ಇಲ್ಲಿ ಗಮನಿಸಬೇಕಾದ ಅಂಶ: ಪಲ್ಯಕ್ಕೆ ನೀರು ಹಾಕಬೇಡಿ, ಸೊಪ್ಪು ನೀರು ಬಿಟ್ಟುಕೊಳ್ಳುತ್ತದೆ, ಬೇಯಲು ಅದೇ ನೀರೆ ಸಾಕಾಗುತ್ತದೆ.

* ನಂತರ ಪಾತ್ರೆಯ ಮುಚ್ಚಳ ತೆಗೆದು ಸೌಟ್ ನಿಂದ ಆಡಿಸುತ್ತಾ ಬೇಯಿಸಿ, ಸೊಪ್ಪಿನಿಂದ ಬಿಟ್ಟ ನೀರು ಆವಿಯಾಗುವುದು, ಪಲ್ಯದಲ್ಲಿ ನೀರಿನಂಶ ಕಡಿಮೆಯಾಗುವಾಗ ತುರಿದ ತೆಂಗಿನಕಾಯಿ ಹಾಕಿ ಮಿಕ್ಸ್ ಮಾಡಿ, ಉಪ್ಪು ಸಾಕಾಗದಿದ್ದರೆ ಮತ್ತೆ ಕಾಲು ಚಮಚ ಪುಡಿ ಉಪ್ಪು ಹಾಕಿ ಮಿಕ್ಸ್ 3-4 ನಿಮಿಷ ಸೌಟ್ ನಿಂದ ಆಡಿಸುತ್ತಾ ಫ್ರೈ ಮಾಡಿ ಉರಿಯಿಂದ ಇಳಿಸಿದರೆ ರುಚಿಯಾದ ಸೊಪ್ಪಿನ ಪಲ್ಯ ರೆಡಿ. ಇದನ್ನು ಟ್ರೈ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ.

English summary

Green Leaves Palya

You might think preparing green leaves palya (soppina palya) is a very difficult task. But i tell you this is also one of the easy recipe, you can try. If you want to prepare check out the recipe.
X
Desktop Bottom Promotion