For Quick Alerts
ALLOW NOTIFICATIONS  
For Daily Alerts

ಆಲೂ ಮಟರ್ ಸ್ಯಾಂಡ್ ವಿಚ್- ಬ್ಯಾಚುಲರ್ ರೆಸಿಪಿ

|

ಕೆಲವೊಮ್ಮೆ ಲೇಟಾಗಿ ಎದ್ದಾಗ ಬೆಳಗ್ಗೆ ಬ್ರೇಕ್ ಫಾಸ್ಟ್ ಗೆ ಏನು ಮಾಡುವುದು? ಎಂದು ಯೋಚಿಸಿ ಅಯ್ಯೋ ಹೊತ್ತಾಯಿತು, ಹೋಟೆಲ್ ನಿಂದ ತಿಂದರಾಯ್ತು ಎಂದುಕೊಳ್ಳಬೇಡಿ. ಒಂದು ದಿನವಾದರೆ ಹೋಟೆಲ್ ನಿಂದ ತಿನ್ನಬಹುದು, ಆದರೆ ದಿನಾ ಲೇಟಾಗಿ ಎದ್ದು ಹೋಟೆಲ್ ಅಡುಗೆಯ ರುಚಿ ನೋಡುವ ಅಭ್ಯಾಸ ಬೆಳೆಸಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಹೆಚ್ಚು ಸಮಯ ತೆಗೆದುಕೊಳ್ಳದೇ ಸುಲಭದಲ್ಲಿ ತಯಾರಿಸಬಹುದಾದ ಕೆಲ ಸ್ಯಾಂಡ್ ವಿಚ್ ರೆಸಿಪಿಯನ್ನೂ ನೀಡಲಿದ್ದೇನೆ.

ಇವತ್ತು ನಾನು ಆಲೂ ಮಟರ್ ಸ್ಯಾಂಡ್ ವಿಚ್ ರೆಸಿಪಿಯನ್ನು ನೀಡಿದ್ಧೇನೆ. ಇದನ್ನು ತಯಾರಿಸಲು 10 ನಿಮಿಷ ಸಾಕು, ಈ ಸ್ಯಾಂಡ್ ವಿಚ್ ಅನ್ನು ಲಂಚ್ ಬಾಕ್ಸ್ ಗೂ ತುಂಬಿ ಕೊಂಡು ಹೋಗಬಹುದು. ಇದನ್ನು ಮಾಡುವುದು ಹೇಗೆ ಎಂದು ನೋಡೋಣವೇ?

ಸಲಹೆ: ಇದನ್ನು ಗೋಧಿ(wheat) ಅಥವಾ ದವಸ ಧಾನ್ಯಗಳಿಂದ (whole grains) ತಯಾರಿಸಿದ ಬ್ರೆಡ್ ನಿಂದ ತಯಾರಿಸಿ. ಮೈದಾ ಬ್ರೆಡ್ ಮೈ ತೂಕ ಹೆಚ್ಚಿಸುತ್ತದೆ.

Aloo Mutter Sandwich- Bachelor Recipe

ಬೇಕಾಗುವ ಸಾಮಾಗ್ರಿಗಳು
ಸ್ಯಾಂಡ್ ವಿಚ್ ಬ್ರೆಡ್ 8-10
ಬಟಾಣಿ ಕಾಲು ಕಪ್
ಆಲೂಗಡ್ಡೆ 2
ಈರುಳ್ಳಿ
ಗರಂ ಮಸಾಲ 1/4 ಚಮಚ
ಚಾಟ್ ಮಸಾಲ 1/4 ಚಮಚ
ಖಾರದ ಪುಡಿ 1/4 ಚಮಚ
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಕೊತ್ತಂಬರಿ ಸೊಪ್ಪು
ಟೊಮೆಟೊ ಕೆಚಪ್
ತುಪ್ಪ ಅಥವಾ ಬೆಣ್ಣೆ 2 ಚಮಚ

ತಯಾರಿಸುವ ವಿಧಾನ

* ಆಲೂಗಡ್ಡೆ ಮತ್ತು ಬಟಾಣಿಯನ್ನು ಬೇಯಿಸಿ, ಈಗ ಬೇಯಿಸಿದ ಬಟಾಣಿಯನ್ನು ಒಂದು ಬಟ್ಟಲಿಗೆ ಹಾಕಿ, ಆಲೂಗಡ್ಡೆಯ ಸಿಪ್ಪೆ ಸುಲಿದು, ಆಲೂಗಡ್ಡೆಯನ್ನು ಬಟಾಣಿ ಹಾಕಿದ ಬಟ್ಟಲಿಗೆ ಹಾಕಿ ಸೌಟ್ ನಿಂದ ಚೆನ್ನಾಗಿ ಮ್ಯಾಶ್ ಮಾಡಿ. ನಂತರ ಖಾರದ ಪುಡಿ, ಚಾಟ್ ಮಸಾಲ, ಗರಂ ಮಸಾಲ, ಅರ್ಧ ಚಮಚ ಪುಡಿ ಉಪ್ಪು ಹಾಕಿ, ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

* ಮೊದಲು ತವಾವನ್ನು ಬಿಸಿ ಮಾಡಿ ಅದಕ್ಕೆ ತುಪ್ಪ ಅಥವಾ ಬೆಣ್ಣೆ ಸವರಿ ಸ್ಯಾಂಡ್ ವಿಚ್ ಬ್ರೆಡ್ ನ ಎರಡೂ ಬದಿಯನ್ನು ಟೋಸ್ಟ್ (ಸ್ವಲ್ಪ ಕಂದು ಬಣ್ಣ ಬರುವವರೆಗೆ ಬೇಯಿಸಿ) ಇಡಿ.

* ಈಗ ಉರಿಯನ್ನು ತುಂಬಾ ಕಮ್ಮಿ ಮಾಡಿ, ಸ್ಯಾಂಡ್ ವಿಚ್ ನ ಒಂದು ಬದಿಗೆ ಟೊಮೆಟೊ ಕೆಚಪ್ ಸವರಿ, ನಂತರ ಮ್ಯಾಶ್ ಮಾಡಿ ಮಸಾಲೆ ಹಾಕಿ ಮಿಕ್ಸ್ ಮಾಡಿದ ಬಟಾಣಿ, ಆಲೂ ಮಿಶ್ರಣವನ್ನು ಸ್ವಲ್ಪ ಹಾಕಿ, ಆ ಬ್ರೆಡ್ ಮೇಲೆ ಹರಡಿ, ಮತ್ತೊಂದು ಬ್ರೆಡ್ ನ ಒಂದು ಭಾಗಕ್ಕೆ ಟೊಮೆಟೊ ಕೆಚಪ್ ಸವರಿ, ಸ್ಯಾಂಡ್ ವಿಚ್ ಮೇಲೆ ಇಡಿ.

* ಈ ರೀತಿ ಉಳಿದ ಸ್ಯಾಂಡ್ ವಿಚ್ ತಯಾರಿಸಿ. 10 ಬ್ರೆಡ್ ಇದ್ದರೆ 5 ಸ್ಯಾಂಡ್ ವಿಚ್ ತಯಾರಿಸಬಹುದು.
ಈಗ ತಯಾರಾದ ಸ್ಯಾಂಡ್ ವಿಚ್ ಅನ್ನು ಟೊಮೆಟೊ ಕೆಚಪ್ ಜೊತೆ ಸವಿಯಲು ರುಚಿಯಾಗಿರುತ್ತದೆ.

X
Desktop Bottom Promotion