For Quick Alerts
ALLOW NOTIFICATIONS  
For Daily Alerts

ಪನ್ನೀರ್ ಗುಲಾಬ್ ಜಾಮೂನ್, ಸ್ವರ್ಗಕ್ಕೆ ಮೂರೇ ಗೇಣು!

By Manohar Shetty
|

ರಂಜಾನ್ ಮಾಸದಾದ್ಯಂತ ತಯಾರಾಗುವ ವಿಶೇಷ ಖಾದ್ಯಗಳ ಮತ್ತು ಸಿಹಿತಿಂಡಿಗಳ ಪಟ್ಟಿ ದೊಡ್ಡದು. ಅದರಲ್ಲೂ ಕಡೆಯದಾಗಿ ಸೇವಿಸಲಾಗುವ ಸಿಹಿತಿಂಡಿಗಳ ಸ್ವಾದ ಬಹಳ ಹೊತ್ತಿನವರೆಗೆ ನಾಲಿಗೆಯಲ್ಲಿ ನಿಲ್ಲುತ್ತದೆ. ಹೋಟೆಲಿನಲ್ಲಿ ಸಿಗುವ ಜಾಮೂನು ಅತಿಯಾಗಿ ಸಿಹಿಯಾಗಿದ್ದು ಇಫ್ತಾರ್‌ನ ಸೊಗಸನ್ನೇ ಕೆಡಿಸಿಬಿಡುತ್ತದೆ. ಅಲ್ಲದೇ ಪ್ರೊ. ಅ.ರಾ.ಮಿತ್ರ ರವರು ತಮ್ಮ ಪ್ರಬಂಧದಲ್ಲಿ ಬರೆದಿರುವಂತೆ ಹೋಟೆಲಿನ ಜಾಮೂನು ಸಣ್ಣದಾದ ಗೋಲಿಯ ಗಾತ್ರಕ್ಕಿಳಿದು ಜಾಮೂನನ್ನು ಜಗಿಯುವ ಬದಲು ಮಾತ್ರೆಯಂತೆ ನುಂಗುವ ಹಾಗಿರುತ್ತದೆ.

ಇದಕ್ಕಾಗಿ ಮನೆಯಲ್ಲಿಯೇ ಸಾಕಷ್ಟು ದೊಡ್ಡಗಾತ್ರದ ಜಾಮೂನುಗಳನ್ನು ಸುಲಭವಾಗಿ ನೀವೇ ತಯಾರಿಸಿಕೊಳ್ಳಬಹುದು.ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಇಷ್ಟಪಡುವ ಸಿಹಿತಿಂಡಿಯಾದ ಗುಲಾಬ್ ಜಾಮೂನನ್ನು ಪನ್ನೀರ್ ಬಳಸಿ ಇನ್ನಷ್ಟು ರುಚಿಯಾಗಿ ಸುಲಭವಾಗಿ ಮಾಡಬಹುದು.

ಪನ್ನೀರ್ ಬಳಸಿರುವ ಕಾರಣ ಹೆಚ್ಚಿನ ಕೊಬ್ಬು, ಪೌಷ್ಟಿಕಾಂಶಗಳನ್ನು ಹೊಂದಿರುವ ಈ ಜಾಮೂನು ಇಫ್ತಾರ್ ಸಮಯಕ್ಕೆ ಹೇಳಿ ಮಾಡಿಸಿದ ಸಿಹಿಯಾಗಿದೆ. ಇದರಿಂದ ಇಡಿಯ ದಿನದ ಉಪವಾಸದಿಂದ ಬಳಲಿದ್ದ ದೇಹಕ್ಕೆ ಕ್ಷಿಪ್ರವಾಗಿ ಚೈತನ್ಯ ದೊರಕುತ್ತದೆ ಹಾಗೂ ರಾತ್ರಿಯ ಊಟದವರೆಗೂ ನಿಮ್ಮ ಹಸಿವನ್ನು ಇಂಗಿಸುತ್ತದೆ. ತೂಕ ಇಳಿಸುವವ ವ್ಯಾಯಾಮದಲ್ಲಿರುವವರು ಮಾತ್ರ ಅಲ್ಪ ಪ್ರಮಾಣಕ್ಕೆ ತಮ್ಮ ಚಾಪಲ್ಯವನ್ನು ನಿಗದಿಗೊಳಿಸುವುದು ಉತ್ತಮ. ಇದನ್ನು ತಯಾರಿಸುವ ಬಗೆಯನ್ನು ಇಲ್ಲಿ ವಿವರಿಸಲಾಗಿದೆ: ಹೆಣ್ಣಿನಂಥ ಗುಲಾಬ್‌ ಜಾಮೂನ್‌

ಸಿದ್ಧತಾ ಸಮಯ: ಹದಿನೈದು ನಿಮಿಷಗಳು
ತಯಾರಿಕಾ ಸಮಯ: ಮೂವತ್ತು ನಿಮಿಷಗಳು
ಪ್ರಮಾಣ: ಐವರಿಗೆ, ಒಂದು ಹೊತ್ತಿಗಾಗುವಷ್ಟು

ಅಗತ್ಯವಿರುವ ಸಾಮಾಗ್ರಿಗಳು:
*ಹಾಲಿನ ಪುಡಿ: ಎರಡು ಕಪ್
*ಗೋಧಿ ರವೆ: 2 ಚಿಕ್ಕ ಚಮಚ (ಚಿರೋಟಿ ರವೆ ಇದ್ದರೆ ಉತ್ತಮ)
*ಮೊಟ್ಟೆ :1 (ದೊಡ್ಡದು)
*ಪನ್ನೀರ್ : 1 ಕಪ್ (ಚಿಕ್ಕದಾಗಿ ತುರಿದದ್ದು) - ಇದರ ಬದಲಿಗೆ ಚೀಸ್ ಅನ್ನೂ ಉಪಯೋಗಿಸಬಹುದು.
*ಸಕ್ಕರೆ : 1 ಕಪ್
*ನೀರು: 2 ಕಪ್
*ಅಡುಗೆ ಸೋಡಾ: 1/4ಚಿಕ್ಕಚಮಚ
*ಎಣ್ಣೆ : ಜಾಮೂನು ಕರಿಯಲು, ಬಾಣಲೆಯ ಗಾತ್ರಕ್ಕೆ ತಕ್ಕಂತೆ (ಈ ಜಾಮೂನು ಎಣ್ಣೆಯನ್ನು ಅತಿ ಕಡಿಮೆ ಹೀರುವುದರಿಂದ ಈ ಎಣ್ಣೆಯನ್ನು ಬೇರೆ ಕೆಲಸಗಳಿಗೆ ಉಪಯೋಗಿಸಬಹುದು)

ವಿಧಾನ:
1) ನೀರಿನಲ್ಲಿ ಸಕ್ಕರೆಯನ್ನು ಹಾಕಿ ಕುದಿ ಬಂದ ಮೇಲೆ ಕಲಕುತ್ತಾ ಪಾಕದಷ್ಟು ಗಟ್ಟಿಯಾಗಿಸಿ
2) ರವೆ, ಪನೀರ್, ಹಾಲುಪುಡಿ, ಅಡುಗೆಸೋಡಾ ಮತ್ತು ಮೊಟ್ಟೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಬಳಿಕ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ.
3) ಬಾಣಲೆಯಲ್ಲಿನ ಎಣ್ಣೆ ಬಿಸಿಯಾದ ಬಳಿಕ ಮಧ್ಯಮ ಉರಿಯಲ್ಲಿ ಹುರಿಯಿರಿ. ಇವು ಬೇಗನೇ ದೊಡ್ಡದಾಗಿಬಿಡುವುದರಿಂದ ಹೆಚ್ಚು ಉಂಡೆಗಳನ್ನು ಒಟ್ಟಿಗೇ ಹಾಕಬೇಡಿ.
4) ಸುಮಾರು ಕಂದು ಬಣ್ಣ ಬರುವವರೆಗೂ ಹುರಿದು ತಕ್ಷಣ ಸಕ್ಕರೆ ಪಾಕದೊಳಕ್ಕೆ ಹಾಕಿ ಮುಚ್ಚಳ ಮುಚ್ಚಿ.
5) ಎಲ್ಲಾ ಜಾಮೂನುಗಳನ್ನು ಹುರಿದಾದ ಬಳಿಕ ಸುಮಾರು ಇಪ್ಪತ್ತು ನಿಮಿಷಗಳವರೆಗೆ ಹಾಗೇ ಬಿಡಿ.
6) ಬಿಸಿಬಿಸಿಯಿದ್ದಂತೆಯೇ ಅತಿಥಿಗಳಿಗೆ ಇಫ್ತಾರ್ ಸಮಯದಲ್ಲಿ ಬಡಿಸಿ.

ಸಲಹೆ
*ಮಧುಮೇಹಿಗಳಿಗೆ ಜಾಮೂನು ತಯಾರಿಸುವುದಾದರೆ ಸಕ್ಕರೆಯ ಬದಲು ಮಧುಮೇಹಿಗಳಿಗಾಗಿಯೇ ಇರುವ ಕ್ಯಾಲೋರಿರಹಿತ ಸಕ್ಕರೆಯನ್ನು ಬಳಸಿ.
*ಒಂದು ವೇಳೆ ಸಕ್ಕರೆಯ ಮಾತ್ರೆಗಳನ್ನು ಉಪಯೋಗಿಸುವುದಾದರೆ ನೀರು ಕುದಿಸಿದ ಬಳಿಕ ಕೊಂಚ ತಣಿಸಿ ಅಗತ್ಯವಿದ್ದಷ್ಟು ನೀರಿಗೆ ಮಾತ್ರ ಮಾತ್ರೆ ಸೇರಿಸಿ ಬಳಿಕ ಜಾಮೂನುಗಳನ್ನು ಮುಳುಗಿಸಿ. (ಕುದಿನೀರಿಗೆ ಮಾತ್ರೆಯನ್ನು ನೇರವಾಗಿ ಹಾಕಿದರೆ ಕೊಂಚ ಕಹಿಯಾಗುತ್ತದೆ)

English summary

Ramazan Sweet: Easy Paneer Gulab Jamun

Gulab jamun is a sweet dish that is loved by both kids and elders. That brown coloured yummy balls are always a mouth watering dish especially in the month of ramazan. They are easy to make and it can be your first starting dish at your in-laws place (if you are not an expert in making sweet dishes).
X
Desktop Bottom Promotion