For Quick Alerts
ALLOW NOTIFICATIONS  
For Daily Alerts

ಯುಗಾದಿ ಸ್ಪೆಷಲ್: ನಾಲಿಗೆಯ ರುಚಿತಣಿಸುವ ಸಿಹಿಯಾದ ಒಬ್ಬಟ್ಟು

By Super
|

ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಹೊಸ ವರುಷಕೆ ಹೊಸ ಒಬ್ಬಟ್ಟಿನ ಸಿಹಿಯನ್ನು ತರುತ್ತಿದೆ. ಹೌದು, ಒಬ್ಬಟ್ಟು ಎಂದರೆ ಯುಗಾದಿಗಾಗಿ ದಕ್ಷಿಣ ಭಾರತದ ಪ್ರತಿ ಮನೆಯಲ್ಲಿಯೂ ತಯಾರಿಸುವ ಸಿಹಿಪದಾರ್ಥ. ಬೇರೆ ಎಷ್ಟೇ ಸಿಹಿ ತಿಂಡಿಗಳನ್ನು ತಯಾರಿಸಿದರೂ ಅತಿಥಿಗಳು ಕೇಳುವುದು ಒಬ್ಬಟ್ಟು ಇಲ್ಲವೇ? ಹಾಗಾಗಿ ನಿಮಗೆ ರುಚಿಯಾಗಿ ಒಬ್ಬಟ್ಟು ಮಾಡಲು ಗೊತ್ತಿಲ್ಲದಿದ್ದಲ್ಲಿ, ಅಥವಾ ಸುಲಭ ವಿಧಾನ ತಿಳಿದಿರದಿದ್ದಲ್ಲಿ ಈ ವರ್ಷ ಒಬ್ಬಟ್ಟು ಮಾಡಲು ಸುವರ್ಣಾವಕಾಶ ದೊರಕಿದೆ.

ಇದರಲ್ಲಿ ಬೆಲ್ಲವನ್ನು ಉಪಯೋಗಿಸಲಾಗಿರುವುದರಿಂದ ಕಡಿಮೆ ಕ್ಯಾಲೋರಿಗಳಿದ್ದು ತೂಕ ಏರುವ ಭಯವನ್ನು ಬಹುಮಟ್ಟಿಗೆ ಕಡಿಮೆಮಾಡುತ್ತದೆ. ಮಧುಮೇಹಿಗಳೂ ಕೊಂಚ ಪ್ರಮಾಣದಲ್ಲಿ (ವೈದ್ಯರ ಅನುಮತಿಯ ಮೇರೆಗೆ) ಸೇವಿಸಬಹುದು. ಬೋಲ್ಡ್ ಸ್ಕೈ ಅಡುಗೆ ಮನೆಯಲ್ಲಿ 8 ಯುಗಾದಿ ಖಾದ್ಯಗಳು

 Obbattu: Famous Ugadi Dessert recipes

ಅಗತ್ಯವಿರುವ ಸಾಮಾಗ್ರಿಗಳು
*1-1/2 ಕಪ್ ಮೈದಾಹಿಟ್ಟು
*1 ಕಪ್ ಕಡಲೆ ಬೇಳೆ
*1 ಕಪ್ ಬೆಲ್ಲ (ಕಪ್ಪು ಬೆಲ್ಲ ಅಥವಾ ಕಂದು ಬೆಲ್ಲ, ಬಿಳಿಬೆಲ್ಲ ಬೇಡ)
*ರವೆ ಒಂದು ಚಿಕ್ಕ ಚಮಚ
*ಏಲಕ್ಕಿ ಒಂದು ಚಿಕ್ಕ ಚಮಚ
*ಹುರಿಯಲು ಕೊಂಚ ಎಣ್ಣೆ ಅಥವಾ ತುಪ್ಪ
*ಕಾಲು ಚಮಚ ಅರಿಶಿನ ಪುಡಿ
*ಉಪ್ಪು ರುಚಿಗನುಸಾರ

ತಯಾರಿಸುವ ವಿಧಾನ
*ಕಡಲೆಬೇಳೆಯನ್ನು ಮುಳುಗುವಷ್ಟು ನೀರಿಗಲ್ಲಿ ಕುಕ್ಕರಿನಲ್ಲಿಟ್ಟು ನಾಲ್ಕೈದು ಸೀಟಿ ಬರುವವರೆಗೆ ಬೇಯಿಸಿ. (ಬೇಳೆ ಪೂರ್ಣವಾಗಿ ಬೇಯಬೇಕು, ಆದರೆ ಪುಡಿಪುಡಿಯಾಗಬಾರದು). ಈ ನೀರನ್ನು ಬಸಿದು ಇದಕ್ಕೆ ಬೆಲ್ಲವನ್ನು ಚೆನ್ನಾಗಿ ಜಜ್ಜಿ ಪುಡಿ ಮಾಡಿ ಸೇರಿಸಿ.
*ಚಿಕ್ಕ ಉರಿಯಲ್ಲಿ ಬೆಲ್ಲ ಬೇಳೆಯೊಡನೆ ಚೆನ್ನಾಗಿ ಮಿಶ್ರಣವಾಗುವಂತೆ ಕಲಸುತ್ತಿರಿ (ಸುಮಾರು ಹತ್ತು ನಿಮಿಷ) ಬಳಿಕ ಒಲೆಯಿಂದ ಕೆಳಗಿಳಿಸಿ ಕೊಂಚ ತಣಿದ ಬಳಿಕ ಮಿಕ್ಸಿಯಲ್ಲಿ ರುಬ್ಬಿ. (ನೀರು ಸೇರಿಸಬೇಡಿ, ಒಣದಾಗಿಯೇ ಇರಲಿ)
*ಈಗ ಏಲಕ್ಕಿ, ಮೈದಾಹಿಟ್ಟು, ರವೆ, ಅರಿಶಿನಪುಡಿ ಮತ್ತು ಉಪ್ಪು ಹಾಕಿ ಚಪಾತಿ ಹಿಟ್ಟು ಕಲಸಿದಂತೆ ಕಲಸಿ. ಈಗ ಸ್ವಲ್ಪವೇ ಸ್ವಲ್ಪ ಉಗುರುಬೆಚ್ಚನೆಯ ಬಿಸಿನೀರನ್ನು ಸೇರಿಸಿ ಚಪಾತಿ ಹಿಟ್ಟು ನುಣುಪಾಗಿರುವಂತೆ ನಾದಿಕೊಳ್ಳಿ. ಈ ಉಂಡೆಯನ್ನು ಸುಮಾರು ಹತ್ತು ನಿಮಿಷ ಹಾಗೇ ತಣಿಯಲು ಬಿಡಿ.
*ಇನ್ನು ತಣಿದ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಂಡು ಚಿಕ್ಕ (ಅಂಗೈಯಗಲದಷ್ಟು) ಚಪಾತಿಗಳನ್ನು ಲಟ್ಟಿಸಿ. ಇದರ ಮಧ್ಯೆ ಒಂದು ಚಿಕ್ಕ ಉಂಡೆಯಷ್ಟು ರುಬ್ಬಿದ್ದ ಕಡಲೆಬೇಳೆ ಮತ್ತು ಬೆಲ್ಲವನ್ನು ಇಟ್ಟು ಚಪಾತಿ ಈ ಉಂಡೆಯನ್ನು ಆವರಿಸಿ ಮೇಲೆ ಬಂದ ಭಾಗವನ್ನು ಸ್ವಲ್ಪ ಒತ್ತಡದಿಂದ ಒತ್ತಿ ಮುಚ್ಚಿಬಿಡಿ.
*ಈಗ ಸ್ವಲ್ಪ ಎಣ್ಣೆ (ಅಥವಾ ತುಪ್ಪ) ಸವರಿ ಕಡಿಮೆ ಒತ್ತಡದಲ್ಲಿ ಚಪಾತಿಯಂತೆ ಲಟ್ಟಿಸಿ. ಒತ್ತಡ ಹೆಚ್ಚಾದರೆ ಒಳಗಿನ ಹಿಟ್ಟು ಹೊರಬರುತ್ತದೆ, ಹೀಗಾಗದಂತೆ ಎಚ್ಚರವಹಿಸಿ.

*ಹೀಗೇ ಉಳಿದ ಒಬ್ಬಟ್ಟುಗಳನ್ನು ತಯಾರಿಸಿ. ಲಟ್ಟಿಸಿದ ಒಬ್ಬಟ್ಟುಗಳನ್ನು ಮಧ್ಯಮ ಉರಿಯಲ್ಲಿ ಕಾವಲಿಯ ಮೇಲೆ ಎರಡೂ ಬದಿಗಳು ಚಿನ್ನದ ಬಣ್ಣ ಬರುವಷ್ಟು ಮಾತ್ರ ಹುರಿಯಿರಿ. ಇಲ್ಲಿಯೂ ಕೊಂಚ ತುಪ್ಪವನ್ನು ಸವರಬಹುದು. ಬಿಸಿಬಿಸಿಯಾಗಿದ್ದಂತೆಯೇ ಅತಿಥಿಗಳಿಗೆ ಬಡಿಸಿ ಪ್ರಶಂಸೆ ಪಡೆಯಿರಿ.

ಸೂಚನೆ:
ಬೆಲ್ಲ ಪುಡಿಮಾಡುವಾಗ ಅದರಲ್ಲಿ ಚಿಕ್ಕ ಕಲ್ಲು ಅಥವಾ ನಾರು ಇದೆಯೇ ಎಂದು ಪರೀಕ್ಷಿಸಿಕೊಂಡು ಇದ್ದರೆ ಅಲ್ಲಿಯೇ ನಿವಾರಿಸಿ. ಇಲ್ಲದಿದ್ದರೆ ಒಬ್ಬಟ್ಟು ತಿನ್ನುವವರಿಗೆ ನಿರಾಸೆಯಾಗಬಹುದು.

English summary

Obbattu: Famous Ugadi Dessert recipes

Obbattu is a famous Ugadi dessert. Indian dessert recipes are very simple and easy to prepare. Obbattu is an essential festival recipe and it's known as a popular south Indian dish. Indian dessert recipes are known to be fattening, but this dish is roasted, so you will not put on excess weight.
X
Desktop Bottom Promotion