For Quick Alerts
ALLOW NOTIFICATIONS  
For Daily Alerts

ಗಣೇಶ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ಕೇಸರಿ ಮೋದಕ

|

ಧಾರ್ಮಿಕ ನಂಬಿಕೆಗಳಿಂದ ಕೂಡಿರುವ ಹಬ್ಬಗಳ ಆಚರಣೆಗೆ ಅದರದ್ದೇ ಆದ ನಿಯಮಾವಳಿಗಳಿರುತ್ತವೆ. ಹಬ್ಬಗಳ ಆಚರಣೆಯಲ್ಲಿ ನಿಷ್ಟೆ, ನಿಯಮಗಳು ಪ್ರಧಾನ ಪಾತ್ರವನ್ನು ವಹಿಸುವುದರಿಂದ ಹಬ್ಬಗಳನ್ನು ಆಚರಿಸುವಾಗ ತಿನಿಸಿನಿಂದ ಹಿಡಿದು ಪೂಜೆಯನ್ನು ನೆರವೇರಿಸುವ ವಿಧಾನವನ್ನು ಕೂಡ ಶ್ರದ್ಧೆ ಭಕ್ತಿಯಿಂದ ಮಾಡುತ್ತೇವೆ. ದೇವರ ಕೃಪಾಕಟಾಕ್ಷಕ್ಕೆ ನಾವು ಪಾತ್ರರಾಗಬೇಕೆಂಬ ತುಡಿತದಿಂದಲೇ ಹಬ್ಬಗಳು ನಂಬಿಕೆಯ ಶ್ರದ್ಧಾ ಕೇಂದ್ರಗಳಾಗಿವೆ.

ಗಣೇಶನ ಹಬ್ಬಕ್ಕೆ ಭರದ ತಯಾರಿಯನ್ನು ಸಂಭ್ರಮದಿಂದ ಎಲ್ಲಾ ಹಿಂದು ಬಾಂಧವರು ಮಾಡುತ್ತಿದ್ದಾರೆ. ಗಣಪನನ್ನು ಪೂಜಿಸಲು ಇತರ ಖಾದ್ಯಗಳೊಂದಿಗೆ ಸಿಹಿ ಅತೀ ಮುಖ್ಯವಾದುದು. ಮೋದಕ ಪ್ರಿಯನಾದ ಗಣಪನನ್ನು ಮೆಚ್ಚಿಸಲು ಸಿಹಿಯನ್ನು ಆತನಿಗೆ ನೈವೇದ್ಯವಾಗಿ ಸಮರ್ಪಿಸಲೇಬೇಕು.

Kesari Modak

ಇಂದಿನ ಲೇಖನದಲ್ಲಿ ಕೂಡ ಗಣಪನನ್ನು ಪೂಜಿಸಲು ನಿಮಗೆ ನೆರವಾಗುವ ಒಂದು ಸಿಹಿಯಾದ ಭಕ್ಷ್ಯದೊಂದಿಗೆ ನಾವು ಬಂದಿರುವೆವು. ಕೇಸರಿಯಲ್ಲಿ ತಯಾರಿಸಿದ ಈ ರುಚಿಕರ ಮೋದಕ ಖಾದ್ಯ ನಿಜಕ್ಕೂ ಗಣಪತಿಯ ಪ್ರಸಾದಕ್ಕೆ ಹೇಳಿ ಮಾಡಿಸಿರುವಂಥದ್ದು. ಕೇಸರಿಯೊಂದಿಗೆ ಬೆರೆಸುವ ಇತರ ಸಾಮಾಗ್ರಿಗಳು ಮೋದಕಕ್ಕೆ ಅಸದಳ ರುಚಿಯನ್ನು ನೀಡುವುದರ ಜೊತೆಗೆ ಪ್ರಸಾದವನ್ನು ಪರಿಪೂರ್ಣಗೊಳಿಸುತ್ತದೆ.

ಹಾಗಿದ್ದರೆ ತಡ ಮಾಡದೇ ಕೆಳಗಿನ ಕೇಸರಿ ಮೋದಕದ ಸರಳ ತಯಾರಿ ವಿಧಾನವನ್ನು ಅರಿತುಕೊಳ್ಳಿ ಮತ್ತು ಗಣಪತಿ ಪೂಜೆಯ ಪ್ರಸಾದವನ್ನು ತಯಾರಿಸಿಕೊಳ್ಳಿ. ನಿಜಕ್ಕೂ ನಿಮ್ಮ ಮನೆಮಂದಿಯ ಮತ್ತು ಅತಿಥಿಗಳ ಮನತಣಿಸುವ ಈ ಕೇಸರಿ ಮೋದಕ ಅಸದಳವಾದುದು.

ಪ್ರಮಾಣ: 4 - 6
*ಸಿದ್ಧತಾ ಸಮಯ: 10 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 15 - 20 ನಿಮಿಷಗಳು

ಸಾಮಾಗ್ರಿಗಳು
*ಕೇಸರಿ - 2-3 ಚಿಟಿಕೆಯಷ್ಟು
*ಮೈದಾ - 3 ಕಪ್‌ಗಳು
*ರವೆ - (ಚಿರೋಟಿ ರವೆ) 3 ಚಮಚ
*ಸಕ್ಕರೆ ಸಿರಪ್ - 6-7 ಚಮಚ
*ತೆಂಗಿನ ಕಾಯಿ - 1 - 1/2 ಕಪ್ (ತುರಿದಿದ್ದು)
*ಏಲಕ್ಕಿ - 1-2 ಚಮಚ (ಹುಡಿ)
*ತುಪ್ಪ - 1 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - 2-3 ಕಪ್‌ಗಳು

ಚತುರ್ಥಿ ವಿಶೇಷ; ಗಣೇಶನಿಗೆ ಪ್ರಿಯವಾದ ಬೇಸನ್ ಲಾಡು

ಮಾಡುವ ವಿಧಾನ

1. ಮೊದಲಿಗೆ ಕೇಸರಿಯನ್ನು ಸಣ್ಣ ಪಾತ್ರೆಯಲ್ಲಿ ತೆಗೆದುಕೊಳ್ಳಿ ಮತ್ತು ಇದಕ್ಕೆ 3-4 ಚಮಚ ನೀರು ಸೇರಿಸಿ. ಇದಕ್ಕೆ ಸಣ್ಣ ಮುಚ್ಚಳ ಮುಚ್ಚಿ 10 - 15 ನಿಮಿಷಗಳ ಕಾಲ ಇರಿಸಿ.
2. ಇದೀಗ, ಮೈದಾವನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದಕ್ಕೆ ರವೆ ಸೇರಿಸಿ. ಇದಕ್ಕೆ ಕೇಸರಿ ನೀರನ್ನು ಸೇರಿಸಿ ಚೆನ್ನಾಗಿ ಕಲಸಿ ಹಿಟ್ಟನ್ನು ತಯಾರಿಸಿಕೊಳ್ಳಿ.
3. ಇನ್ನು ಇದಕ್ಕೆ ಸ್ವಲ್ಪ ನೀರು ಮತ್ತು ಉಪ್ಪು ಸೇರಿಸಿ. ಪುನಃ ಇದನ್ನು ಕಲಸಿಕೊಂಡು 8-10 ನಿಮಿಷಗಳ ಕಾಲ ಹಾಗೆಯೇ ಇರಿಸಿ. ಇದನ್ನು ಪಕ್ಕದಲ್ಲಿರಿಸಿ.
4. ತದನಂತರ ಗ್ಯಾಸ್‌ನಲ್ಲಿ ಪಾತ್ರೆಯನ್ನು ಮಂದ ಉರಿಯಲ್ಲಿರಿಸಿ ಇದಕ್ಕೆ ಸಕ್ಕರೆ ಸಿರಪ್ ಅನ್ನು ಹಾಕಿ.
5. ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳುತ್ತಾ ಇದಕ್ಕೆ ತೆಂಗಿನ ತುರಿ ಮತ್ತು ಏಲಕ್ಕಿ ಹುಡಿಯನ್ನು ಸೇರಿಸಿ. ಸಣ್ಣ ಉರಿಯಲ್ಲಿ ಇದನ್ನು ಮಿಶ್ರ ಮಾಡಿಕೊಳ್ಳಿ ಮತ್ತು ಇದಕ್ಕೆ ತುಪ್ಪ ಸೇರಿಸಿ. ಅಲ್ಲದೆ ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳುತ್ತಾ ಅದನ್ನು ಕೆಳಕ್ಕೆ ಇರಿಸಿಕೊಳ್ಳಿ. ಮತ್ತು ಇದನ್ನು ತಣ್ಣಗಾಗಲು ಬಿಡಿ.
6. ಈಗ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ತಯಾರಿಸಿಕೊಳ್ಳಿ ಮತ್ತು ಇದನ್ನು ಲಟ್ಟಿಸಿಕೊಳ್ಳಿ. ಇದನ್ನು ಚಪ್ಪಟೆ ಆಕಾರದಲ್ಲಿ ಲಟ್ಟಿಸಿಕೊಳ್ಳಿ.
7. ಇವೆಲ್ಲಾ ಮುಗಿದ ನಂತರ ತಣ್ಣಗಾಗಿರುವ ತೆಂಗಿನ ತುರಿ ಕಣಕವನ್ನು ತೆಗೆದುಕೊಂಡು ಚಪ್ಪಟೆ ಆಕಾರದ ಹಿಟ್ಟಿಗೆ ಇದನ್ನು ಸೇರಿಸಿಕೊಳ್ಳಿ ಮತ್ತು ಎಲ್ಲಾ ಅಂಚುಗಳನ್ನು ನಿಮ್ಮ ಕೈಗಳಿಂದ ಮಡಚಿ. ಈಗ ಬಾಣಲೆಯನ್ನು ಗ್ಯಾಸ್ ಮೇಲಿರಿಸಿ ಎಣ್ಣೆ ಹಾಕಿ ಅದನ್ನು ಬಿಸಿಯಾಗಲು ಬಿಡಿ. ಮತ್ತು ತಯಾರಾದ ಎಲ್ಲಾ ಮೋದಕಗಳನ್ನು ಚಿನ್ನದ ಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ.
ನಿಮ್ಮ ಮನೆಗೆ ಬಂದಿರುವ ಅತಿಥಿಗಳಿಗೆ ಮತ್ತು ಮನೆಯವರಿಗೆ ಈ ಕೇಸರಿ ಮೋದಕವನ್ನು ಸವಿಯಲು ನೀಡಿ ಮತ್ತು ಪ್ರಶಂಸೆಯನ್ನು ಗಿಟ್ಟಿಸಿಕೊಳ್ಳಿ.

English summary

Kesari Modak: A Mouthwatering Recipe

A modak is a sweet dumpling that is very popular all over India. A modak recipe is also one of the essentials in many Hindu religious ceremonies like Ganesh Chaturthi. A modak can be of various flavours. The most popular among them being the plain one, kesari (saffron flavoured), moong dal etc.
X
Desktop Bottom Promotion