ಕ್ಯಾರೆಟ್ ಹಲ್ವಾ ಸಿಹಿ ತಿನಿಸು ಮಾಡಿ ಮೆಲ್ಲುವಾ

By: * ಶ್ರೀರಕ್ಷಾ, ಬೆಂಗಳೂರು
Subscribe to Boldsky

Carrot Halwa
ಬೆಂಗಳೂರಿನ ಡಿಕನ್ಸನ್ ರಸ್ತೆಯ ಅಡಿಗಾಸ್ ಹೊಟೇಲ್ ನಲ್ಲಿ ಗೆಳೆಯರೊಂದಿಗೆ ಒಮ್ಮೆ ಬಿಸಿಬಿಸಿಯಾದ ಹಲ್ವಾ ಸವಿದಿದ್ದುಂಟು. ನಂತರ ಹಲವಾರು ಪಾಕ ಪುಸ್ತಕಗಳನ್ನು ಓದಿ ನಾನೇ ಹಲ್ವಾ ಮಾಡುವುದನ್ನು ಕಲಿತೆ. ಕ್ಯಾರೆಟ್ ಹಲ್ವಾ ಮಾಡಲು ಹಲವಾರು ವಿಧಗಳಿವೆ. ಆದರೆ ನಾನು ಮಾಡಲು ಹೊರಟಿರುವ ಕ್ಯಾರೆಟ್ ಹಲ್ವಾ ತುಂಬಾ ಸರಳವಾಗಿದೆ ಎಂದು ಭಾವಿಸಿದ್ದೇನೆ.

ಬಹಳಷ್ಟು ಮಂದಿ ಕ್ಯಾರೆಟ್ ಹಲ್ವಾವನ್ನು ಈ ವಿಧಾನದಲ್ಲೇ ಪ್ರಾರಂಭಿಸುತ್ತಾರೆ, ಆದರೆ ಕೊನೆಯಲ್ಲಿ ಹಲ್ವಾದ ರುಚಿ ಹದಗೆಟ್ಟಿರುತ್ತದೆ. ನಾನು ಮಾಡಲು ಹೊರಟಿರುವ ಹಲ್ವಾ ಆರಂಭದಿಂದ ಕೊನೆಯ ತನಕ ರುಚಿಯಾಗಿರುತ್ತದೆ ಎಂಬ ಭರವಸೆಯನ್ನಂತೂ ಕೊಡಬಲ್ಲೆ. ಕ್ಯಾರೆಟ್ ಹಲ್ವಾಗೆ ಇಷ್ಟೆಲ್ಲಾ ಪೀಠಿಕೆ ಬೇಕಾಗಿರಲಿಲ್ಲ! ಆದರೂ ಇರಲಿ ಎಂದು ಊಟದಲ್ಲಿನ ಉಪ್ಪಿನಕಾಯಿ ತರಹ ಒಂಚೂರು ಹಲ್ವಾ ಕುರಿತು ಹೇಳಲೇ ಬೇಕಾದ್ದನ್ನು ಹೇಳಿದ್ದೇನೆ. ದಯವಿಟ್ಟು ಸ್ವೀಕರಿಸುವಂತಾಗಿ! 

ಬೇಕಾದ ಪದಾರ್ಥಗಳು

ಕ್ಯಾರೆಟ್ : 5ರಿಂದ 6
ತುಪ್ಪ: 2ರಿಂದ 3 ಟೇಬಲ್ ಚಮಚ
ಹಾಲು: 1'ರಿಂದ 2 ಕಪ್ಪು
ಸಕ್ಕರೆ: 1' ರಿಂದ 2 ಕಪ್ಪು
ಏಲಕ್ಕಿ ಪುಡಿ: 1 ಟೀ ಚಮಚ
ಗೋಡಂಬಿ: 1 ಟೇಬಲ್ ಚಮಚ
ಒಣದ್ರಾಕ್ಷಿ: 1 ಟೇಬಲ್ ಚಮಚ

ತಯಾರಿಸುವ ವಿಧಾನ
1. ದಪ್ಪ ತಳದ ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ; ನಂತರ ತುರಿದ ಕ್ಯಾರೆಟ್ಟನ್ನು ಹಾಕಿ ಒಂದು ನಿಮಿಷ ಕಾಲ ತುಪ್ಪದಲ್ಲಿ ಹುರಿಯಿರಿ.
2. ತುಪ್ಪದಲ್ಲಿ ಹುರಿದ ಕ್ಯಾರೆಟ್ ಗೆ ಹಾಲನ್ನು ಬೆರೆಸಿ ಪ್ರೆಷರ್ ಕುಕ್ಕರ್ ಗೆ ಹಾಕಿ 2 ಕೂಗು ಹಾಕಿಸಿ.
3. ಕ್ಯಾರೆಟ್ ಹಾಗೂ ಹಾಲಿನ ಮಿಶ್ರಣವನ್ನು ಪುನಃ  ಬಾಣಲೆಗೆ ಹಾಕಿ ಕಡಿಮೆ ಉರಿಯಿಂದ ಮಧ್ಯಮ ಉರಿಗೆ ಹೆಚ್ಚಿಸಿ ಮಗಚುವ ಕೈಯಿಂದ ತಿರುವುತ್ತಾ ಹುರಿಯಿರಿ.
4. ಮಿಶ್ರಣ ಅರ್ಧದಷ್ಟು ಪ್ರಮಾಣಕ್ಕೆ ಇಂಗಿಸಿಕೊಂಡ ನಂತರ, ಸಕ್ಕರೆಯನ್ನು ಹಾಕಿ ಚೆನ್ನಾಗಿ ಕಲಸಿ ಹುರಿಯುವುದನ್ನು ಮುಂದುವರಿಸಿ. ಹಾಲಿನ ಅಂಶ ಸಂಪೂರ್ಣವಾಗಿ ಆವಿಯಾಗುವ ತನಕ ಹುರಿಯುತ್ತಲೇ ಇರಿ. ಒಂದು ಹಂತದಲ್ಲಿ ಹಾಲಿನ ಅಂಶ ಸಂಪೂರ್ಣ ಆವಿಯಾಗಿ ಕ್ಯಾರೆಟ್ ನಿಂದ ತುಪ್ಪಬೇರ್ಪಡುತ್ತದೆ. ಈ ಹಂತ ತಲುಪಬೇಕಾದರೆ 50ರಿಂದ 55 ನಿಮಿಷಗಳಷ್ಟು ಸಮಯ ಬೇಕಾಗುತ್ತದೆ. ಆಗಾಗ ಕ್ಯಾರೆಟ್ ಮಿಶ್ರಣವನ್ನು ತಿರುವುತ್ತಲೇ ಇರಿ. ಇಲ್ಲದಿದ್ದರೆ ಕ್ಯಾರೆಟ್ ಬಾಣಲೆಯ ತಳಕ್ಕೆ ಅಂಟಿಕೊಂಡು ಸೀಯುತ್ತದೆ.
5. ಒಂದು ಟೀ ಚಮಚ ತುಪ್ಪದೊಂದಿಗೆ ಒಣದ್ರಾಕ್ಷಿ ಹಾಗೂ ಗೋಡಂಬಿ ಬೀಜಗಳನ್ನು ಒಂದು ನಿಮಿಷ ಕಾಲ ಹುರಿದುಕೊಳ್ಳಿ; ಏಲಕ್ಕಿ ಪುಡಿ ಸೇರಿಸಿ, ಹುರಿದುಕೊಂಡ ಗೋಡಂಬಿ ಹಾಗೂ ಒಣದ್ರಾಕ್ಷಿಯನ್ನು ಹಲ್ವಾಗೆ ಬೆರೆಸಿ ಚೆನ್ನಾಗಿ ಕಲಸಿ.
6. ಒಲೆಯ ಮೇಲಿಂದ ಬಾಣಲೆಯನ್ನು ಕೆಳಗಿಳಿಸಿ ಹಲ್ವಾವನ್ನು ಮತ್ತೊಂದು ಪಾತ್ರೆಗೆ ಹಾಕಿಕೊಳ್ಳಿ. ಬೇಕಿದ್ದರೆ ಡ್ರೈ ಫ್ರೂಟ್ಸ್ ನಿಂದ ಅಲಂಕರಿಸಿ ಸವಿಯಬಹುದು.

Please Wait while comments are loading...
Subscribe Newsletter