For Quick Alerts
ALLOW NOTIFICATIONS  
For Daily Alerts

ಗುಳ್ಳ-ಬದನೆಕಾಯಿ ಸಾಂಬಾರ್‌

By Super
|

ಗಮ್ಮತ್ತಾದ ಹುಳಿ ಇದ್ದುಬಿಟ್ಟರೆ ಊಟಕ್ಕೆ ಇನ್ನೇನು ಬೇಡ. ಅಚ್ಚುಕಟ್ಟಾಗಿ ತಯಾರಿಸಿದ ಬಡಿಸಿದರಂತೂ...

ಬದನೆಕಾಯಿ ಹುಳಿ ಸಾಂಪ್ರದಾಯಿಕ ಸೈಡ್‌ ಡಿಶ್‌. ಸ್ವಭಾವತಃ ನಸು ನಂಜಿನ ಅಂಶ ಇಂಗಿಸಿಕೊಂಡ ತರಕಾರಿಯಾದರೂ ಸಣ್ಣ ಪುಟ್ಟ ಸಮಾರಂಭಗಳ ಊಟಕ್ಕೆ ಹಾಜರಾಗುವ ತರಕಾರಿ. ಎಲ್ಲ ತರಕಾರಿಗಳಿಗೂ ಹೀಗೇ ಒಂದೊಂದು ನೇಚರ್‌ ಇರುತ್ತದಲ್ಲಾ. ಬಟಾಟೆ ಅಥವಾ ಆಲೂಗಡ್ಡೆ ಎಂದ ತಕ್ಷಣ ವಾಯೂ.... ಅಂತ ದೂರ ಸರಿಯುವುದಿಲ್ಲವೇ. ಆದರೆ ಬದನೆಕಾಯಿಗೆ ಅಡುಗೆ ಮನೆಯಲ್ಲಿ ದುಷ್ಟರ ಪಟ್ಟವೇನೂ ಇಲ್ಲ. ಬದನೆ ಕಾಯಿ ಹುಳಿ ರೆಡಿಯಾಗಿದ್ದರೆ ಇನ್ನೆರಡು ತುತ್ತು ಅನ್ನ ಹೆಚ್ಚಿಗೆ ಊಟ ಮಾಡಬಹುದು. ಟ್ರೆೃ ಮಾಡೋಣ್ವಾ...?

ಬೇಕಾಗುವ ಸಾಮಾನುಗಳು :

ಆ್ಟಜ್ಞ್ಜಿಚ್ಝಚಿಕ್ಕ ತೆಂಗಿನ ಕಾಯಿ ಗಾತ್ರದ ಎರಡು ಅಥವಾ ಮೂರು ಬದನೆಗಳು,
ಒಂದು ಪಾವು, ತೊಗರಿ ಬೇಳೆ,
ಸುಲಿದ ಅಡಿಕೆ ಗಾತ್ರದ ಹುಣಸೇ ಹಣ್ಣು,
25 ಗ್ರಾಮ್‌ ಬೆಲ್ಲ, ಅರ್ಧ ಹಿಡಿ ಉಪ್ಪು,
ಒಂದು ಚಮಚ ಮೆಣಸಿನ ಪುಡಿ, ಅರಶಿಣ ಪುಡಿ - ಕಾಲು ಚಮಚ,
ಕೊತ್ತಂಬರಿ - ಎರಡು ಚಮಚ, ಉದ್ದಿನ ಬೇಳೆ ಒಂದು ಚಮಚ,
ಮೆಂತೆ- ಅರ್ಧ ಚಮಚ, ಜೀರಿಗೆ ಕಾಲು ಚಮಚ,
ಆರು ಒಣ ಮೆಣಸು , ಅರ್ಧ ಕಡಿ ತೆಂಗಿನ ಕಾಯಿ ತುರಿ,
ಕಡಲೆಕಾಯಿಗಾತ್ರ ಇಂಗು, ತೆಂಗಿನೆಣ್ಣೆ - 3 ಚಮಚ
ಒಗ್ಗರಣೆಗೆ : ಅರ್ಧ ಚಮಚ ಸಾಸಿವೆ, ಕರಿಬೇವು, 3 ಹಸಿ ಮೆಣಸು

ಮಾಡುವ ವಿಧಾನ : ಬದನೆಕಾಯಿಗಳನ್ನು ಹೆಚ್ಚಿ. ಬದನೆ ಬೆಂದ ನಂತರ ತುಂಬಾ ಮೆತ್ತಗಾಗುವುದರಿಂದ ದೊಡ್ಡ ದೊಡ್ಡ ಹೋಳುಗಳನ್ನಾಗಿ ಹೆಚ್ಚಬೇಕು. ಹೆಚ್ಚಿದ ಹೋಳುಗಳನ್ನು ನೀರಿನಲ್ಲಿ ಹಾಕಿಡಿ. ಇತ್ತ, ತೊಗರಿಬೇಳೆಯನ್ನು ಬೇಯಿಸಿ. ತೊಗರಿ ಬೇಳೆ ಚೆನ್ನಾಗಿ ಬೆಂದ ನಂತರವೇ ಬದನೆಕಾಯಿ ಹೋಳುಗಳನ್ನು ಹಾಕಿ. ಐದಾರು ನಿಮಿಷಗಳ ನಂತರ ಉಪ್ಪು ಮತ್ತು ಮೆಣಸಿನ ಪುಡಿ, ಹುಣಸೇ ಹಣ್ಣು, ಬೆಲ್ಲ ಹಾಕಿ. ಇನ್ನಷ್ಟು ಹೊತ್ತು ಬೇಯಿಸಿ. ಸ್ಟೌವ್‌ ಆರಿಸಿ.

ಸ್ವಲ್ಪ ಇಂಗು ಮತ್ತು ಜೀರಿಗೆ, ಕೊತ್ತಂಬರಿ ಮುಂತಾದ ಮೇಲೆ ಹೇಳಿದ ಸಾಮಾನುಗಳನ್ನೆಲ್ಲ ಒಟ್ಟಿಗೇ ಹಾಕಿ ಸ್ವಲ್ಪ ತರಿತರಿಯಾಗಿ ರುಬ್ಬಿ. ರುಬ್ಬುವಾಗ ನೀರು ಹಾಕಿ ಕೊಳ್ಳಬೇಡಿ. ರುಬ್ಬಿರುವ ಮಿಶ್ರಣವನ್ನು ಬೇಯಿಸಿಟ್ಟ ಹುಳಿಗೆ ಹಾಕಿ ಬೆರಸಿ. ನಂತರ ಸ್ವಲ್ಪ ಅರಿಶಿಣ ಪುಡಿ, ಹಸಿ ಮೆಣಸಿನ ಕಾಯಿ ಹಾಕಿ ಕುದಿಸಿ ಕರಿಬೇವು ಹಾಕಿದ ಒಗ್ಗರಣೆ ಕೊಡಬೇಕು.

ಬದನೆಯ ಬಗ್ಗೆ ಇನ್ನೆರಡು ಮಾತು : ಕರಾವಳಿ ಕಡೆ ಹಾಗೂ ಕೇರಳದ ಕಡೆಗೆ ಎಲ್ಲ ತಿನಿಸು, ಪದಾರ್ಥಗಳಿಗೆ ತೆಂಗಿನೆಣ್ಣೆ ಬಳಸುವುದು ರೂಢಿ. ಬದಲಿಗೆ ಬೇರೆ ಅಡುಗೆ ಎಣ್ಣೆ ಬಳಸಬಹುದು. ಮೆಣಸು ಹಾಕುವಾಗಲೂ ಜಾಗರೂಕರಾಗಿರಬೇಕು. ಉದ್ದನೆ ಕೆಂಪು ಮೆಣಸಾದರೆ ಪದಾರ್ಥ ಹೆಚ್ಚು ಖಾರವೆನಿಸುವುದಿಲ್ಲ. ಗಿಡ್ಡ ಕೆಂಪು ಮೆಣಸು ಬಳಸುವವರು ಕಡಿಮೆ ಮೆಣಸು ಹಾಕುವುದು ಒಳ್ಳೆಯದು.

ಬದನೆಗೆ ಜೊತೆಯಾಗಿ ಬಟಾಣಿ ಇನ್ನಷ್ಟು ರುಚಿಯಾಗಿರುತ್ತದೆ. ತೊಗರಿಬೇಳೆಯ ಬದಲಿಗೆ ನೆನೆಸಿಟ್ಟ ಬಟಾಣಿಯನ್ನು ಹಾಕಿ ಹುಳಿ ತಯಾರಿಸಬಹುದು. ಬದನೆ ಬೋಳು ಹುಳಿ ಅಂತ ಕೇಳಿದ್ದೀರಾ...? ತೆಂಗಿನಕಾಯಿ ರುಬ್ಬಿ ಹಾಕದೆಯೇ ಮಾಡುವ ಹುಳಿಗೆ ಬೋಳು ಮೇಲೋಗರ ಅನ್ನುವುದುಂಟು. ಬಿಸಿ ಬಿಸಿ ಅನ್ನ, ಬದನೆ ಬೋಳು ಹುಳಿ ಮೇಲೆರಡು ಚಮಚ ತುಪ್ಪವೋ, ತೆಂಗಿನೆಣ್ಣೆಯೋ ಇದ್ದರೆ.. ಊಟದ ಮಜಾಕ್ಕೆ ಸಾಟಿಯಾವುದು!!

X
Desktop Bottom Promotion