For Quick Alerts
ALLOW NOTIFICATIONS  
For Daily Alerts

ದೀಪಾವಳಿ ಹಬ್ಬಕ್ಕೆ ಕೊಬ್ಬಿಲ್ಲದ ಸಿಹಿ ತಿಂಡಿ!

By Super
|

ಆರೋಗ್ಯಕರ ಹಬ್ಬದಾಚರಣೆಗೆ ಒಂದೆರಡು ಟಿಪ್ಸ್‌ಗಳು..

  • ಸುಗತ ಮೆನನ್‌

ಸಿಹಿಪ್ರಿಯರಿಗೆ ಹಬ್ಬವೆಂದರೆ ಸುಗ್ಗಿಯಲ್ಲವಾ ... ಒಂದಲ್ಲ ಒಂದು ಸಿಹಿತಿಂಡಿಗಳೊಂದಿಗೇ ಹಬ್ಬಗಳು ಬಾಗಿಲು ತಟ್ಟುವುದು. ಆದರೆ, ಇಷ್ಟವೆಂದು ಸಿಹಿ ತಿಂಡಿಗಳಲ್ಲಿ ಮುಳುಗಿಬಿಟ್ಟರೆ ನಾಲ್ಕೇ ದಿನದಲ್ಲಿ ದಪ್ಪ ಆಗಿಬಿಡುತ್ತೇವಲ್ಲ... ಹೃದಯವೂ ಮಾತು ಕೇಳದು. ಆದ್ದರಿಂದರಲೇ ಕೊಬ್ಬಿನಂಶ ಕಡಿಮೆಯಿರುವ ಸಿಹಿ ತಿಂಡಿಗಳಿಗೇ ಈಗ ಆದ್ಯತೆ. ಅಂಥ ತಿಂಡಿಗಳನ್ನು ಮಾಡುವ ಬಗೆ ನಿಮಗೆ ಗೊತ್ತಾ?

ಒಂದು ಉದಾಹರಣೆ ಇಲ್ಲಿದೆ ನೋಡಿ. ಹಾಲಿನಿಂದ ತುಂಬ ರುಚಿಕಟ್ಟಾದ ಸಿಹಿತಿಂಡಿ ತಯಾರಿಸಬಹುದು ಎಂದು ಯಾರಿಗೆ ತಾನೇ ಗೊತ್ತಿಲ್ಲ . ಆದರೆ ಅದರಿಂದ ಕೊಬ್ಬು ಹೆಚ್ಚಾಗುತ್ತದೆ. ಆಸೆಯಿದ್ದರೂ, ಹೊಟ್ಟೆಯಲ್ಲಿ ಇನ್ನೊಂದು ಸುತ್ತು ಮಡಿಕೆ ಬರುತ್ತದೆಂದು ತಿನ್ನಲಿಕ್ಕೆ ಹಿಂಜರಿಕೆ. ನೀವು ತಯಾರಿಸಿದ ಸಿಹಿ ಎಲ್ಲರಿಗೂ ಪಥ್ಯವಾಗಬೇಕಾದರೆ ಹೊಸ ವಿಧಾನಗಳ ಸಂಶೋಧನೆ ಮಾಡಬೇಕು. ಇಲ್ಲಿ ಕೇಳಿ. ನೀವು ಸ್ವೀಟ್‌ಗೆ ಬಳಸುವ ಹಾಲನ್ನು ಕಾಯಿಸಿದ ನಂತರ ನೀಟಾಗಿ ಕೆನೆಯಷ್ಟನ್ನೂ ತೆಗೆದುಬಿಡಿ. ಕೊಬ್ಬಿನ ಸುದ್ದಿಯಿಲ್ಲ.

ಒಂದು ಕಲ್ಲಿಗೆ ಎರಡು ಹಕ್ಕಿ...

ಹಬ್ಬದಂದು ಕರಿದ ತಿಂಡಿ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ. ಬೇಯಿಸಿದ ತಿಂಡಿಗಳೇ ನಿಮ್ಮ ಫಿಗರ್‌ನ್ನು ಚೆಂದಾಗಿ ಇರಿಸುವುದು. ಅದಕ್ಕಾಗಿ ಎಣ್ಣೆಯಲ್ಲಿ ಕರಿದ ಪದಾರ್ಥಕ್ಕಿಂತ ಎಣ್ಣೆ ಹಾಕದೇ ಸುಟ್ಟು ತಿನ್ನುವ ಪದಾರ್ಥಗಳೇ ಚೆನ್ನ. ಕುರುಂ ಕುರುಂ ರುಚಿ ಕೂಡ. ಹಳ್ಳಿಯಲ್ಲಿ ನಿಗಿನಿಗಿ ಕೆಂಡದಲ್ಲಿ, ಹಪ್ಪಳ ಸುಟ್ಟು ತಿನ್ನುವುದು, ಬದನೆ ಸುಟ್ಟು ಬಜ್ಜಿ ಮಾಡುವುದು ಎಲ್ಲ ಗೊತ್ತಿದೆಯಾ... ಅದೂ ಕೊಬ್ಬು ತಡೆಯುವುದಕ್ಕೆ ಸ್ವಾಮಿ. ಇದರಿಂದ ರುಚಿಯನ್ನು ಅನುಭವಿಸಿದ ಹಾಗೆಯೂ ಆಯಿತು. ಕ್ಯಾಲೋರಿಗಳನ್ನು ಕಡಿಮೆ ಸೇವಿಸಿದಂತೆಯೂ ಆಯಿತು. ಒಂದು ಕಲ್ಲಿಗೆ ಎರಡು ಹಕ್ಕಿ.

ಸಕ್ಕರೆ ಬೇಡ..

ಇದೆಲ್ಲಾ ಸರಿಯಪ್ಪಾ. ಸಿಹಿ ತಿಂಡಿ ತಯಾರಿಸುವಾಗ ಸಕ್ಕರೆ ಅಥವಾ ಬೆಲ್ಲ ಬಳಸದಿರಲು ಆಗುತ್ತಾ ? ಆಗುತ್ತೆ. ಅದಕ್ಕೊಂದು ಐಡಿಯಾ ಉಂಟು. ಸಕ್ಕರೆಯ ಬದಲಿಗೆ ಫುಡ್‌ ವರ್ಲ್ಡ್‌ನಲ್ಲಿ ಸಿಗುವ ಕೃತಕ ಸಿಹಿಯನ್ನು ಬಳಸಿದರೆ ಕ್ಯಾಲೋರಿಗಳು ಕಡಿಮೆಯಾಗುತ್ತವೆ.
ಪ್ರಕೃತಿ ಕೊಟ್ಟ ಆಹಾರವೇ ಶ್ರೇಷ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ ಬಿಡಿ, ಹಬ್ಬದಂದು ಸಿಹಿ ಮಾಡುವಾಗಲೂ ನೀವು ಆದಷ್ಟು ತಾಜಾ ತರಕಾರಿಗಳನ್ನೇ ನೆಚ್ಚಿಕೊಂಡರೆ ಒಳ್ಳೆಯದು. ಸಕ್ಕರೆ ಹಾಕದ ಅಥವಾ ತುಂಬಾ ಕಡಿಮೆ ಸಕ್ಕರೆ ಬಳಸಿದ ಬೀಟ್‌ರೂಟ್‌ ಹಲ್ವಾ, ಫ್ರುಟ್‌ ಸಲಾಡ್‌.. ಹೀಗೆ. ದೇಹಕ್ಕೆ ತಂಪು ಕೂಡ. ಇವಕ್ಕೆಲ್ಲಾ ಬಣ್ಣವನ್ನೂ ಉಪಯೋಗಿಸಬೇಕಾಗಿಲ್ಲ.

ಆಮೇಲೆ ಸಿಹಿ ಇರುವುದು ಪ್ಲೇಟಿನಲ್ಲಿ ಪೇರಿಸಿಟ್ಟ ಲಡ್ಡಿನಲ್ಲಿಯಾ.... ಸ್ವಾಮಿ. ಖಂಡಿತಾ ಅಲ್ಲ. ನೀವು ನಿಮ್ಮ ಮನೆಯವರು ಎಷ್ಟು ನಗುತ್ತೀರಿ.... ನಿರಾಳವಾಗಿ ಇರುತ್ತೀರಿ ಅನ್ನುವುದರಲ್ಲಿ ಅಲ್ಲವಾ . ಉದಾಹರಣೆಗೆ ನೀವು ಗಂಡ ಹೆಂಡತಿ ಪಕ್ಕದಲ್ಲಿರುವ ವೃದ್ಧಾಶ್ರಮಕ್ಕೋ, ಮಕ್ಕಳ ಅನಾಥಾಶ್ರಮಕ್ಕೋ ಹೋಗಿ ನಗುನಗುತ್ತಾ ಎರಡು ಹಣ್ಣು ಹಂಚಿ ಬಂದರೆ ಎಷ್ಟು ಸಂತೋಷ ಆಗುತ್ತದೆ ಗೊತ್ತಾ.... ಹಬ್ಬವೆಂದರೆ ಬರೇ ಪಟಾಕಿ ಸದ್ದು, ಜರಿ ಸೀರೆಗಳಲ್ಲ ಅಂತ ನೀವೇ ಪ್ರೂವ್‌ ಮಾಡಬಹುದಲ್ವಾ ...?

X
Desktop Bottom Promotion