For Quick Alerts
ALLOW NOTIFICATIONS  
For Daily Alerts

ಹೆಣ್ಣಿನಂಥ ಗುಲಾಬ್‌ ಜಾಮೂನ್‌

By Staff
|

ಜಾಮೂನ್‌ - ಐಸ್‌ ಕ್ರೀಂ ಕಾಂಬಿನೇಷನ್‌... ವಾರೆವಾ!! ನಾಲಿಗೆಯಲ್ಲಿ ನೀರೂರಿಸುವ ಜಾಮೂನಿನಲ್ಲಿ ಎಷ್ಟೊಂದು ಬಗೆ? ಗಂಡಸರೆಲ್ಲ ಬನ್ನಿ, ಗುಲಾಬ್‌ ಜಾಮೂನ್‌ ಕ್ರೀಂ ಜತೆ ಹನಿಮೂನ್‌ ಮಾಡುವಾ!

ಇತ್ತೀಚಿನ ದಿನಗಳಲ್ಲಿ ಯಾವುದೇ ಪಾರ್ಟಿಗೆ ಹೋದರೂ ಜಾಮೂನ್‌ ಜತೆ ಐಸ್‌ ಕ್ರೀಂ ಕೊಡೋದು ಲೇಟೆಸ್ಟ್‌ ಫ್ಯಾಷನ್‌ ಆಗಿದೆ. ಈ ಎರಡರ ಸಮ್ಮಿಲನದ ರುಚಿಯ ಮಜವೇ ಬೇರೆ. ಅದಕ್ಕೇ ಅಲ್ಲವೇ ಹಿರಿಯರು ಹೇಳೋದು. ಊಟ ತನ್ನಿಷ್ಟ, ನೋಟ ಪರರಿಷ್ಟ ಅಂತ.


ನಾವು ನಮಗೆ ಹಿತವೆನಿಸಿದ ರೀತಿ ತಿನ್ನಬೇಕು. ಇತರರು ಮೆಚ್ಚುವಂತೆ ಬಟ್ಟೆ ತೊಡಬೇಕು ಎಂಬುದೇ ಈ ನುಡಿಯ ಆಂತರ್ಯ. ಅಂದಹಾಗೆ ಗುಲಾಬ್‌ ಜಾಮೂನ್‌ಗೆ ಕ್ರೀಮ್‌ ಬೆರೆಸಿದರೆ ಇನ್ನೂ ಸ್ವಾದಿಷ್ಟ. ಬನ್ನಿ ಗುಲಾಬ್‌ ಜಾಮೂನ್‌ ಕ್ರೀಂ ಮಾಡೋಣ.

ಬೇಕಾಗುವ ಸಾಮಗ್ರಿ : 50 ಗ್ರಾಂ ಖೋವಾ, 75 ಗ್ರಾಂ ಮೈದಾ, 200 ಗ್ರಾಂ ಸಕ್ಕರೆ, 250 ಗ್ರಾಂ. ಒಳ್ಳೆ ಕ್ರೀಂ. 4-5 ಚಮಚ ಪುಡಿ ಸಕ್ಕರೆ, ಗುಲಾಬಿ ನೀರು, 1 ಹೋಳು ನಿಂಬೆ ಹಣ್ಣು, ಕರೆಯಲು ಬಾಣಲೆ ಹಾಗೂ ಎಣ್ಣೆ.

ಮಾಡುವ ವಿಧಾನ : ಮೊದಲು ಸಕ್ಕರೆ ನೀರು ಬೆರೆಸಿ ಚೆನ್ನಾಗಿ ಕುದಿಸಿ, ಪಾಕ ಸಿದ್ಧಮಾಡಿಕೊಳ್ಳಬೇಕು. ಖೋವಾ ಹಾಗೂ ಮೈದಾ ಸೇರಿಸಿ ಚೆನ್ನಾಗಿ ನಾದಬೇಕು. ಒಂದಿಷ್ಟು ತುಪ್ಪ ಬೆರೆಸಿ ಕಲೆಸಿದರೆ, ಗಂಟು ಇಲ್ಲದಂತೆ ಹಿಟ್ಟು ಅಚ್ಚುಕಟ್ಟಾಗಿರುತ್ತದೆ. ಆನಂತರ ದೊಡ್ಡ ಗೋಲಿ ಗಾತ್ರದ ಉಂಡೆಗಳನ್ನು ಮಾಡಿಟ್ಟುಕೊಳ್ಳಬೇಕು.

ಕಾದ ಎಣ್ಣೆಯಲ್ಲಿ ಗುಲಾಬಿ ಬಣ್ಣ ಬರುವಂತೆ ಜಾಮೂನನ್ನು ಕರೆಯಬೇಕು. ನಂತರ ಅದನ್ನು ಪಾಕಕ್ಕೆ ಹಾಕಿಡಬೇಕು. 5-6 ನಿಮಿಷದ ನಂತರ ಸ್ವಲ್ಪ ಹೊತ್ತು ಹದವಾದ ಉರಿಯ ಒಲೆಯ ಮೇಲಿಟ್ಟು ತುಸು ಬೆಚ್ಚಗೆ ಮಾಡಿ ಕೆಳಗಿಳಿಸಬೇಕು.

ಇಷ್ಟಾದ ಬಳಿಕ ಪುಡಿ ಸಕ್ಕರೆಗೆ ಕ್ರೀಂ ಮತ್ತು ಗುಲಾಬಿ ನೀರು, ನಿಂಬೆ ರಸ ಸೇರಿಸಿ ಮಿಶ್ರಣ ಮಾಡಬೇಕು. ಅಷ್ಟರಲ್ಲಿ ಪಾಕದೊಂದಿಗೆ ಚೆನ್ನಾಗಿ ಉಬ್ಬಿದ ಜಾಮೂನುಗಳನ್ನು ಕ್ರೀಮಿರುವ ಪಾತ್ರೆಗೆ ಸ್ಥಳಾಂತರಿಸಿ, ಗುಲಾಬಿ ದಳದಿಂದ ಅಲಂಕರಿಸಿದರೆ, ಗುಲಾಬ್‌ ಜಾಮೂನ್‌ ಕ್ರೀಂ ತಿನ್ನಲು ರೆಡಿ.

English summary

How to make Gulab jamoon cream

Karnataka kitchen : Recipe, Gulabi jamoon cream
X
Desktop Bottom Promotion