For Quick Alerts
ALLOW NOTIFICATIONS  
For Daily Alerts

ಬಿರಿಯಾನಿ ಪ್ರಿಯರಿಗಾಗಿ ಬೊಂಬಾಟ್ ಪನ್ನೀರ್ ಬಿರಿಯಾನಿ ರೆಸಿಪಿ

By Super
|

ಹಿಂದಿನ ಕಾಲದಲ್ಲಿ ಪಂಚಭಕ್ಷ ಪರಮಾನ್ನವೆಂದರೆ ಊಟಗಳಲ್ಲೇ ಅತ್ಯಂತ ಭರ್ಜರಿ ಎಂದು ಭಾವಿಸಲಾಗುತ್ತಿತ್ತು. ಇಂದು ಅತ್ಯಂತ ಭರ್ಜರಿ ಊಟವೆಂದರೆ ವಿವಿಧ ಉತ್ತರಗಳು ದೊರಕಬಹುದು. ಕೇರಳದವರಿಗೆ ಓಣಂ ಸ್ಪೆಷಲ್ ಊಟ ಭರ್ಜರಿಯಾದರೆ ದೆಹಲಿಯವರಿಗೆ ತುಪ್ಪದಲ್ಲಿ ಮಾಡಿದ ಸಿಹಿತಿನಿಸುಗಳು ಭರ್ಜರಿ ಎನಿಸಬಹುದು.

ಆದರೆ ಭಾರತ ಸೇರಿ ಇತರ ಏಷಿಯಾ ದೇಶಗಳ ಮಾಂಸಾಹಾರಿಗಳಲ್ಲಿ ಈ ಪ್ರಶ್ನೆ ಕೇಳಿದರೆ ಅವರಿಂದ ಬರುವ ಉತ್ತರ - ಬಿರಿಯಾನಿ. ವಿವಿಧ ಮಸಾಲೆಗಳ ಜೊತೆ ಮಾಂಸ ಮತ್ತು ಅಕ್ಕಿಯನ್ನು ಹಬೆಯಲ್ಲಿ ಬೇಯಿಸಿ ಬಡಿಸಿದ ಬಿರಿಯಾನಿಯನ್ನು ಮೆಚ್ಚದ ಮಾಂಸಾಹಾರಿಗಳಿಲ್ಲ. ಅದರಲ್ಲೂ ಹೈದರಾಬಾದಿ ದಮ್ ಬಿರಿಯಾನಿ ದೇಶ ವಿದೇಶಗಳಲ್ಲಿ ಪ್ರಸಿದ್ಧವಾಗಿದೆ.

ಹಾಗಾದರೆ ಈ ಬಿರಿಯಾನಿಯ ರುಚಿಯಿಂದ ಶಾಕಾಹಾರಿಗಳು ವಂಚಿತರೇ? ಇದುವರೆಗೂ ಪರಿಸ್ಥಿತಿ ಹಾಗಿತ್ತು. ಆದರೆ ಇಂದು ಬೋಲ್ಡ್ ಸ್ಕೈ ತಂಡದಿಂದ ಇದೇ ರುಚಿಯನ್ನು ನೀಡುವ ಆದರೆ ಅಪ್ಪಟ ಸಸ್ಯಾಹಾರಿಯಾದ ಪನ್ನೀರ್ ನಿಂದ ತಯಾರಿಸಿದ ಬಿರಿಯಾನಿಯನ್ನು ಹೇಗೆ ತಯಾರಿಸಬಹುದೆಂದು ವಿವರಿಸಲಾಗಿದೆ. ಈ ಬಿರಿಯಾನಿಗೆ ಪನ್ನೀರ್ ಜೊತೆ ಕಾಟೇಜ್ ಚೀಸ್ ಅಗತ್ಯವಾದುದರಿಂದ ಈ ಸಾಮಾಗ್ರಿಗಳನ್ನು ಒದಗಿಸಿಕೊಂಡೇ ಬಿರಿಯಾನಿಯ ತಯಾರಿ ಮಾಡುವುದು ಒಳಿತು. ಹೆಚ್ಚು ಮಸಾಲೆ ಮತ್ತು ಕ್ಯಾಲೋರಿಗಳಿರುವುದರಿಂದ ರಜಾದಿನ ಅಥವಾ ಅತಿಥಿ ಸತ್ಕಾರದ ವೇಳೆ ಅಪರೂಪಕ್ಕೊಮ್ಮೆ ಮಾಡುವುದು ಸೂಕ್ತ. ಈ ಬಿರಿಯಾನಿಯ ತಯಾರಿಗೂ ಮುನ್ನ ಕೆಲವು ತಯಾರಿಗಳನ್ನು ಮಾಡುವುದು ಅಗತ್ಯ. ಮಾರುಕಟ್ಟೆಯಲ್ಲಿ ಸಿಗುವ ಪನ್ನೀರ್‌ಗಿಂತಲೂ ಮನೆಯಲ್ಲಿಯೇ ಹಾಲು ಹೆಪ್ಪು ಹಾಕಿ ತಯಾರಿಸಿದ ಪನ್ನೀರ್ ಉತ್ತಮ.

Spicy Paneer Biryani Recipe

ಪನ್ನೀರ್ ಅನ್ನು ಸಾಮಾನ್ಯವಾದ ಮತ್ತು ಏಕಪ್ರಮಾಣದ ಘನ ಆಕೃತಿಯಲ್ಲಿ ಕತ್ತರಿಸಿಟ್ಟುಕೊಳ್ಳುವುದು ಒಳಿತು. ಏಕೆಂದರೆ ಅಡುಗೆ ಪ್ರಾರಂಭವಾದ ಬಳಿಕ ಕತ್ತರಿಸಲು ತೊಡಗಿದರೆ ಇತ್ತ ಮಸಾಲೆ ಸುಟ್ಟು ಹೋಗುವ, ಅತ್ತ ಕತ್ತರಿಸಿದ ಗಾತ್ರ ಹೆಚ್ಚುಕಡಿಮೆಯಾಗುವ ಸಂಭವವಿರುತ್ತದೆ. ಸರಿ, ಇನ್ನೇಕೆ ತಡ? ಪನ್ನೀರ್ ಬಿರಿಯಾನಿ ತಯಾರಿಸಲು ಹೊರಡೋಣವೇ? ಫಟಾಫಟ್ ತಯಾರಿಸಿ ಘಮಘಮಿಸುವ ಘೀ ರೈಸ್ ರೆಸಿಪಿ!

ಪ್ರಮಾಣ: ಸುಮಾರು ಮೂವರು ವಯಸ್ಕರಿಗಾಗಿ
ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು
ತಯಾರಿಕೆಗೆ ಅಗತ್ಯವಿರುವ ಸಮಯ: ಹದಿನೆಂಟು ನಿಮಿಷಗಳು.

ಅಗತ್ಯವಿರುವ ಸಾಮಾಗ್ರಿಗಳು
*ಏಕಪ್ರಕಾರವಾಗಿ ಘನ ಆಕೃತಿಯಲ್ಲಿ ತುಂಡು ಮಾಡಿದ ಪನ್ನೀರ್ - 300ಗ್ರಾಂ.
*ಅಕ್ಕಿ - 500 ಗ್ರಾಂ. (ಬಾಸ್ಮತಿ ಅಕ್ಕಿಯಾದರೆ ಉತ್ತಮ. ಬದಲಿಗೆ ಜೀರಿಗೆ ಸಣ್ಣ ಅಕ್ಕಿಯನ್ನೂ ಉಪಯೋಗಿಸಬಹುದು)
*ಬೇಯಿಸಿದ ಬಟಾಣಿ ಕಾಳು - 1 ಕಪ್
*ಶುಂಠಿ ಮತ್ತು ಬೆಳ್ಳುಳ್ಳಿ ಮಿಶ್ರಣ - 1 ದೊಡ್ಡಚಮಚ
*ಮೊಸರು - 2 ಕಪ್
*ಉದ್ದಕ್ಕೆ ಕತ್ತರಿಸಿದ ಹಸಿಮೆಣಸು- 4 (ಚಿಕ್ಕ ಗಾತ್ರದ್ದಾದರೆ 6)
*ಅರಿಶಿನ ಪುಡಿ - ¼ ಚಿಕ್ಕ ಚಮಚ
*ಒಣಮೆಣಸಿನ ಪುಡಿ - ½ ಚಿಕ್ಕ ಚಮಚ (ಉತ್ತಮ ರುಚಿಗೆ ಕಾಶ್ಮೀರಿ ಚಿಲ್ಲಿ ಪುಡಿ ಆಯ್ದುಕೊಳ್ಳಿ)
*ಗರಂ ಮಸಾಲಾ ಪುಡಿ- 1 ಚಿಕ್ಕ ಚಮಚ
*ಏಲಕ್ಕಿ ಪುಡಿ - 2 ಚಿಕ್ಕ ಚಮಚ
*ದಾಲ್ಚಿನ್ನಿ ಎಲೆ - 1 (ಒಣ ಎಲೆ)
*ಕಪ್ಪು ಏಲಕ್ಕಿ - 1
ಲವಂಗ - 2
*ಕಾಳುಮೆಣಸು-3ರಿಂದ 4
*ಲಿಂಬೆಹಣ್ಣಿನ ರಸ - 1 (ಚಿಕ್ಕ ಗಾತ್ರದ ಲಿಂಬೆಯಾದರೆ 2)
*ಕೇಸರಿ - ½ ಚಿಕ್ಕ ಚಮಚ
*ಹಾಲು - 2 ದೊಡ್ಡ ಚಮಚ
*ಕೊತ್ತಂಬರಿ ಸೊಪ್ಪು - 1 ಚಿಕ್ಕ ಕಟ್ಟು (ನಯವಾಗಿ ಹೆಚ್ಚಿದ್ದು)
*ಪುದಿನಾ ಸೊಪ್ಪಿನ ಎಲೆಗಳು-1 ಚಿಕ್ಕ ಕಟ್ಟು (ನಯವಾಗಿ ಹೆಚ್ಚಿದ್ದು)
*ಅಪ್ಪಟ ತುಪ್ಪ - 2 ದೊಡ್ಡ ಚಮಚ
*ಉಪ್ಪು - ರುಚಿಗನುಸಾರ

ವಿಧಾನ:
ಈ ಕೆಳಗಿನ ಸಾಮಾಗ್ರಿಗಳನ್ನು ಬೇರೆಬೇರೆಯಾಗಿ ತಯಾರಿಸಿಟ್ಟುಕೊಳ್ಳಿ.
1) ಅಕ್ಕಿಯನ್ನು ಚೆನ್ನಾಗಿ ತೊಳೆದು ಬೇಯಲು ಇಡಿ. (ಒಂದು ಪ್ರಮಾಣದ ಅಕ್ಕಿಗೆ ಎರಡು ಪ್ರಮಾಣದಷ್ಟು ನೀರು ಹಾಕಿ) ಇದಕ್ಕೆ ಉಪ್ಪು, ದಾಲ್ಚಿನ್ನಿ ಎಲೆ, ಕಪ್ಪು ಏಲಕ್ಕಿ, ಲವಂಗ ಮತ್ತು ಕಾಳುಮೆಣಸು ಹಾಕಿ ಪೂರ್ಣವಾಗಿ ಬೇಯಲು ಕೊಂಚ ಇರುವಂತೆ (ಸುಮಾರು ತೊಂಭತ್ತು ಭಾಗ ಬೆಂದಿರುವಂತೆ) ಇದ್ದಾಗ ಇಳಿಸಿ ನೀರು ಬಸಿಯಿರಿ. ನೀರು ಪೂರ್ಣ ಬಸಿದ ಬಳಿಕ ಒಂದು ಪಕ್ಕದಲ್ಲಿಡಿ.
2) ಒಂದು ಪಾತ್ರೆಯಲ್ಲಿ ಮೊಸರು, ಉಪ್ಪು, ಮೆಣಸಿನ ಪುಡಿ, ಅರಿಸಿನ ಪುಡಿ ಮತ್ತು ಲಿಂಬೆರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಪನ್ನೀರ್ ನ ತುಂಡುಗಳನ್ನು ಸೇರಿಸಿ ಎಲ್ಲಾ ಪನ್ನೀರ್ ತುಂಡುಗಳೂ ದ್ರವದಲ್ಲಿ ಅವೃತ್ತವಾಗುವಂತೆ ಮಿಶ್ರಣ ಮಾಡಿ ಪಕ್ಕದಲ್ಲಿಡಿ. ಪನ್ನೀರ್ ತುಂಡಾಗದಂತೆ ಅಥವಾ ಪುಡಿಯಾಗದಂತೆ ಎಚ್ಚರ ವಹಿಸಿ.
3) ಒಂದು ಲೋಟದಲ್ಲಿ ಹಾಲು ಮತ್ತು ಕೇಸರಿ ಪುಡಿಯನ್ನು ಮಿಶ್ರಣ ಮಾಡಿ ಪಕ್ಕದಲ್ಲಿಡಿ. ದೇಹಕ್ಕೆ ತಂಪುಣಿಸುವ ತ೦ಪು ತ೦ಪು ಹಣ್ಣುಗಳ ಮೊಸರನ್ನದ ರೆಸಿಪಿ

ಮಸಾಲೆಯ ವಿಧಾನ:
*ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಚಿಕ್ಕ ಉರಿಯಲ್ಲಿ ಬಿಸಿಮಾಡಿ. ತುಪ್ಪ ಕರಗಿದ ಬಳಿಕ ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಮಿಶ್ರಣ ಸೇರಿಸಿ ಹುರಿಯಿರಿ. ಕೆಲವು ಕ್ಷಣಗಳ ಬಳಿಕ ಪನ್ನೀರ್ ತುಂಡುಗಳನ್ನು (ಮೇಲಿನ ಸಂಖ್ಯೆ 2 ರಲ್ಲಿ ಸಿದ್ದ ಮಾಡಿಟ್ಟಿದ್ದಂತೆ) ಸೇರಿಸಿ ಹುರಿಯಿರಿ. ಪನ್ನೀರ್ ನ ಎಲ್ಲಾ ಬದಿಗಳು ಕೊಂಚ ನಸುಗಂದು ಬರುವವರೆಗೆ ಹುರಿಯಿರಿ.
*ಈಗ ದಪ್ಪತಳದ ಮತ್ತು ಅಗಲವಾದ ಪಾತ್ರೆಯೊಂದನ್ನು ಚಿಕ್ಕ ಉರಿಯ ಮೇಲಿರಿಸಿ. ಈಗ ಒಂದು ಪದರ ಅಕ್ಕಿಯನ್ನು(ಮೇಲಿನ ಸಂಖ್ಯೆ 1 ರಲ್ಲಿ ಸಿದ್ದ ಮಾಡಿಟ್ಟಿದ್ದಂತೆ) ಹರಡಿ ಅದರ ಮೇಲೆ ಹುರಿದ ಪನ್ನೀರ್ ಹರಡಿ.
ಇದರ ಮೇಲೆ ಅಕ್ಕಿಯ ಇನ್ನೊಂದು ಪದರ ಹರಡಿ ಅದರ ಮೇಲೆ ಬೇಯಿಸಿದ ಬಣಾಟಿ, ಗರಂ ಮಸಾಲೆ ಪುಡಿ, ಏಲಕ್ಕಿ ಪುಡಿ, ಹಾಲು ಮತ್ತು ಕೇಸರಿ (ಮೇಲಿನ ಸಂಖ್ಯೆ 3 ರಲ್ಲಿ ಸಿದ್ದ ಮಾಡಿಟ್ಟಿದ್ದಂತೆ), ಕೊತ್ತಂಬರಿ ಮತ್ತು ಪುದಿನಾ ಸೊಪ್ಪು, ಹರಡಿ. ಕೊಂಚ ಕರಗಿದ ತುಪ್ಪವನ್ನು ಕೊಂಚ ಕೊಂಚವಾಗಿ ಹರಡುವಂತೆ ಚಿಮುಕಿಸಿ.
*ಈಗ ಉಳಿದ ಎಲ್ಲಾ ಅಕ್ಕಿಯನ್ನು ಇದರ ಮೇಲೆ ಹರಡಿ ಏಕಪ್ರಕಾರವಾಗಿರುವಂತೆ ಚಪ್ಪಟೆ ಚಮಚದಲ್ಲಿ ಸವರಿ. ಈ ಪಾತ್ರೆಯ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ. (ಅಗತ್ಯವಿದ್ದರೆ ಪಾತ್ರೆಯ ಮುಚ್ಚಳ ತಗಲುವ ಅಂಚಿನುದ್ದಕ್ಕೂ ಟಿಶ್ಯೂ ಕಾಗದಗಳನ್ನು ಇರಿಸಬಹುದು). ಈಗ ಮಧ್ಯಮಕ್ಕಿಂತ ಕೊಂಚ ಕೆಳಗಿನ ಉರಿಯಲ್ಲಿ ಸುಮಾರು ಹತ್ತು ನಿಮಿಷ ಹಬೆಯಲ್ಲಿ ಬೇಯಲು ಬಿಡಿ. ಹತ್ತು ನಿಮಿಷದ ಬಳಿಕ ಉರಿಯಿಂದಿಳಿಸಿ, ಆ ಕೂಡಲೇ ಮುಚ್ಚಳ ತೆರೆಯಬೇಡಿ, ಇನ್ನೂ ಸುಮಾರು ಹತ್ತು ನಿಮಿಷ ಅಥವಾ ಹದಿನೈದು ನಿಮಿಷ ಹಾಗೇ ತಣಿಯಲು ಬಿಡಿ. ಬಿಸಿಬಿಸಿಯಿರುವಂತೆಯೇ ಬಡಿಸಿ.

ಬಡಿಸುವ ವಿಧಾನ:
ಉದ್ದವಾದ ಅನ್ನ ಬಡಿಸುವ ಚಮಚವನ್ನು ಒಂದು ಬದಿಯಲ್ಲಿ ಮೇಲಿನಿಂದ ತಳದವರೆಗೂ ಎಲ್ಲಾ ಪದರಗಳ ಮೂಲಕ ಹಾಯುವಂತೆ ಇಳಿಸಿ ಎಲ್ಲಾ ಪದರಗಳಿಂದ ಸಮಾನ ಪ್ರಮಾಣ ಹೊರ ಬರುವಂತೆ ಮೇಲೆತ್ತಿರಿ. ಅಂತೆಯೇ ಒಂದು ಬದಿಯಿಂದ ಪ್ರಾರಂಭಿಸಿ ಇನ್ನೊಂದು ಅಂಚಿನತ್ತ ಮುಂದುವರೆಯಲಿ.

ಪೋಷಕಾಂಶಗಳು:
ಈ ಬಿರಿಯಾನಿಯಲ್ಲಿ ವಿವಿಧ ತರಕಾರಿ, ಕಾಳು ಮತ್ತು ಸೊಪ್ಪುಗಳಿರುವುದರಿಂದ ಶಾಖಾಹಾರಿಯಾದರೂ ಮಾಂಸಾಹಾರದ ಆಹಾರದಷ್ಟೇ ಪೋಷಕಾಂಶಗಳು ಲಭ್ಯವಾಗುತ್ತವೆ. ಇದರಿಂದ ದೇಹದ ರೋಗ ನಿರೋಧಕ ವ್ಯವಸ್ಥೆ ಉತ್ತಮಗೊಳ್ಳುತ್ತದೆ.

ಕಿವಿಮಾತು:
* ಪಾತ್ರೆಯೊಳಕ್ಕೆ ಹಾಕುವ ಮೊದಲು ಅಕ್ಕಿ ಸುಮಾರು ಗರಿಷ್ಟ ತೊಂಭತ್ತು ಭಾಗದಷ್ಟು ಮಾತ್ರ ಬೆಂದಿರಬೇಕು. ಪೂರ್ಣವಾಗಿ ಬೆಂದಿದ್ದರೆ ಅನ್ನ ಮುದ್ದೆಯಾಗುತ್ತದೆ. ಜೀರಿಗೆ ಸಾಲೆ ಅಕ್ಕಿಯಾದರೆ ಎಪ್ಪತ್ತೈದು ಭಾಗ ಬೆಂದಿದ್ದರೆ ಸಾಕು.
* ಮಸಾಲೆ ಮತ್ತು ಅಕ್ಕಿಯನ್ನು ಜೊತೆಯಾಗಿ ಬೇಯಿಸಬೇಡಿ, ಬೇರೆ ಬೇರೆಯಾಗಿಯೇ ತಯಾರಿಸಿ.
* ದೊಡ್ಡಪಾತ್ರೆಯ ಮುಚ್ಚಳ ಮುಚ್ಚುವ ಮುನ್ನ ಒಂದು ಚಮಚ ಅಥವಾ ದಪ್ಪನೆಯ ಕಡ್ಡಿಯನ್ನು ಅಕ್ಕಿಯ ಮೇಲ್ಭಾಗದಿಂದ ತಳದವರೆಗೆ ತೂರಿಸಿ ಕೆಲವು ಬಾವಿಗಳಂತೆ ಮಾಡಿ. ಈ ಬಾವಿಗಳಲ್ಲಿ ತುಪ್ಪ ಸುರಿದರೆ ತಳದವರೆಗೂ ಸಾಗಿ ಅಕ್ಕಿ ಹೆಚ್ಚು ಪರಿಮಳ ಹೊಂದುತ್ತದೆ. ಕೊಂಚ ಅಲಂಕಾರಕ್ಕಾಗಿ ಅಕ್ಕಿಗೆ ಬಣ್ಣನೀಡುವ ನೀರನ್ನೂ ಈ ಬಾವಿಗಳಲ್ಲಿ ಸ್ವಲ್ಪವಾಗಿ ಸುರಿಯಬಹುದು.
* ಟೊಮೇಟೊ ಹಣ್ಣು ಅಡ್ಡಲಾಗಿ ಬಿಲ್ಲೆಗಳಂತೆ ಕತ್ತರಿಸಿ ಅಕ್ಕಿಯ ಮೇಲ್ಭಾಗದಲ್ಲಿ ಹರಡಿ ಬೇಯಿಸುವ ಮೂಲಕ ರುಚಿ ಹೆಚ್ಚುತ್ತದೆ.

English summary

Spicy Paneer Biryani Recipe

This afternoon Boldsky introduces you to a dish so yummy which will make you drool by just the sound of it - paneer biryani. If you are a vegetarian and in the mood to make a spicy dish today then this is surely a treat for your tummy. Take a look at how you can prepare this delectable paneer biryani.
X
Desktop Bottom Promotion