For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ಹಬ್ಬದ ವಿಶೇಷ: ರುಚಿಕರವಾದ ಪುಳಿಯೋಗರೆ

|

ವರಮಹಾಲಕ್ಷ್ಮಿ ಹಬ್ಬ ಹೆಸರೇ ಹೇಳುವಂತೆ ವರದಾತೆಯಾದ ಲಕ್ಷ್ಮಿ ದೇವರನ್ನು ಪೂಜಿಸುವ ಹಬ್ಬವಾಗಿದೆ. ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ದೇವರಿಗೆ ಪ್ರಸಾದ ರೂಪದಲ್ಲಿ ಖಾದ್ಯಗಳನ್ನು ಅರ್ಪಿಸುವುದು ಸಾಮಾನ್ಯವಾಗಿದೆ.

ದೇವರನ್ನು ಸಂಪ್ರೀತಗೊಳಿಸಲು ಮಾಡುವ ಖಾದ್ಯ ಶುದ್ಧವಾಗಿರಬೇಕು. ಈ ದಿನದಂದು ಸುಮಂಗಲಿಯರು ಪ್ರಾತಃ ಕಾಲದಲ್ಲೇ ಎದ್ದು ಸ್ನಾನ ಮಾಡಿ ರಂಗವಲ್ಲಿ ಹಾಕಿ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ದೇವರನ್ನು ಅಲಂಕರಿಸಿ ವರಮಹಾಲಕ್ಷ್ಮಿ ಪೂಜೆಯನ್ನು ನೇರವೇರಿಸುತ್ತಾರೆ.

ವರಮಹಾಲಕ್ಷ್ಮಿ ಪೂಜೆಯನ್ನು ಮಾಡಿದರೆ ಅಷ್ಟಲಕ್ಷ್ಮಿಯರನ್ನು ಒಲಿಸಿಕೊಂಡ ಪುಣ್ಯ ನಮ್ಮದಾಗುತ್ತದೆ ಎಂಬ ನಂಬಿಕೆ ಕೂಡ ಇದೆ. ತಾಯಿಗೆ ಮಾಡುವ ಅಲಂಕಾರ ಕೂಡ ನಮ್ಮ ಕಣ್ಣಿಗೆ ಭಕ್ತಿಯ ಪುಳಕವನ್ನು ಸವಿಯುವಂತೆ ಮಾಡುತ್ತದೆ.

 Puliyogare recipe for Varamahalakshmi Festival

ಈ ಪೂಜೆಯಲ್ಲಿ ಇತರ ಸುಮಂಗಲಿಯರಿಗೆ ಅರಶಿನ ಕುಂಕುಮ ಕೊಡುವ ಸಂಪ್ರದಾಯವಿದೆ. ಇವರುಗಳು ಇದನ್ನು ಸ್ವೀಕರಿಸಿ ಪೂಜೆಯನ್ನು ಮಾಡಿದಂತಹ ಮುತ್ತೈದೆಯನ್ನು ಹರಸಿದರೆ ಅವರಿಗೆ ಪೂಜೆಯ ಸಂಪೂರ್ಣತೆ ದೊರಕುತ್ತದೆ ಎಂಬುದು ನಂಬಿಕೆ. ಹೀಗೆ ಅನಾದಿಕಾಲದಿಂದಲೂ ವರಮಹಾಲಕ್ಷ್ಮಿ ಹಬ್ಬ ಭಕ್ತ ಬಾಂಧವರ ಭಕ್ತಿಯ ಸೆಲೆಯಾಗಿ ಹೊರಹೊಮ್ಮಿದೆ.

ಹಬ್ಬದಲ್ಲಿ ಮಾಡಲಾಗುವ ಖಾದ್ಯಗಳಲ್ಲಿ ಒಂದಾದ ಪುಳಿಯೋಗರೆ ಇನ್ನೊಂದು ಹೆಸರು ಹುಳಿಯನ್ನ ಎಂದಾಗಿದೆ. ಹುಳಿಯನ್ನೇ ಪ್ರಧಾನವಾಗಿರಿಸಿಕೊಂಡು ತಯಾರಿಸುವ ಈ ಅನ್ನ ಖಾದ್ಯದಲ್ಲಿ ಹುಳಿ ಮಾತ್ರವಲ್ಲದೆ ಇತರ ಎಲ್ಲಾ ಸಾಮಾಗ್ರಿಗಳನ್ನು ಸಮಾನವಾಗಿ ಬೆರೆಸಿ ಈ ಖಾದ್ಯವನ್ನು ತಯಾರಿಸಲಾಗುತ್ತದೆ.

ಹಾಗಿದ್ದರೆ ವರಮಹಾಲಕ್ಷ್ಮಿ ಪೂಜೆಯ ಸಂಭ್ರಮಕ್ಕಾಗಿ ತಯಾರಿಸುವ ಈ ಪುಳಿಯೋಗರೆ ಅತ್ಯಂತ ಸರಳ ತಯಾರಿ ವಿಧಾನವನ್ನು ನಾವಿಲ್ಲಿ ನೀಡುತ್ತಿದ್ದು ನಿಮ್ಮ ಹಬ್ಬದ ತಯಾರಿಯ ಸ್ವಲ್ಪ ಶ್ರಮವನ್ನಾದರೂ ನಮ್ಮ ಸರಳ ವಿಧಾನ ಹಗುರಗೊಳಿಸುತ್ತದೆ.

ಬೇಕಾಗುವ ಸಾಮಾಗ್ರಿಗಳು
1.ಅಕ್ಕಿ - 2 ಕಪ್‌ಗಳು
2.ನೆನೆಸಿದ ಹುಳಿ - 1 ಕಪ್
3.ಉದ್ದಿನ ಬೇಳೆ - 1 ಚಮಚ
4.ಬೆಲ್ಲ - 1 ಚಮಚ
5.ಕಡಲೆ - ಮುಷ್ಟಿಯಷ್ಟು
6.ಅರಶಿನ ಪುಡಿ - 1 ಚಮಚ
7.ಸಾಸಿವೆ - 1 ಚಮಚ
8.ಇಂಗು - ಸಣ್ಣ ತುಂಡು
9..ಜೀರಿಗೆ - 1 ಚಮಚ
10.ಎಳ್ಳಿನ ಪುಡಿ- 1 ಚಮಚ
11.ಕರಿಬೇವಿನೆಲೆ - 6-7
12.ಒಣ ಕೆಂಪು ಮೆಣಸು - 3-4
13.ಹಸಿಮೆಣಸು - 3-4 ಉದ್ದಕ್ಕೆ ಸೀಳಿದ್ದು
14.ಉಪ್ಪು - ರುಚಿಗೆ ತಕ್ಕಷ್ಟು
15.ತುಪ್ಪ ಅಥವಾ ಬೆಣ್ಣೆ - 1 ಚಮಚ

ಮಾಡುವ ವಿಧಾನ
*ಅನ್ನವನ್ನು ಎಂದಿನಂತೆ ಉದುರುದುರಾಗಿ ಬೇಯಿಸಿಕೊಳ್ಳಿ. ಬೇಕಾದಷ್ಟು ಮಾತ್ರ ನೀರು ಹಾಕಿ. ಅನ್ನ ಅಂಟದಂತೆ ಜಾಗರೂಕತೆ ವಹಿಸಿ.
*ಬೇಯಿಸಿದ ಅನ್ನವನ್ನು ಸ್ವಲ್ಪ ಹೊತ್ತು ತಣಿಯಲು ಬಿಡಿ. ಇದಕ್ಕೆ ಅರಶಿನ ಪುಡಿ ಮತ್ತು ಕರಿಬೇವಿನೆಲೆಯನ್ನು ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ.
*ಇನ್ನು ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿಕೊಳ್ಳಿ ಮತ್ತು ಎಲ್ಲಾ ಸಾಂಬಾರು ಪದಾರ್ಥಗಳನ್ನು ಹಾಕಿ ಒಗ್ಗರಣೆ ನೀಡಿ. ಇದನ್ನು ಸ್ವಲ್ಪ ಹೊತ್ತು ತುಪ್ಪದಲ್ಲಿ ಹುರಿಯಿರಿ. ಕೊನೆಗೆ ಹಸಿಮೆಣಸನ್ನು ಹಾಕಿ.
*ನಂತರ ಬೆಲ್ಲ ಮತ್ತು ಹುಳಿಯನ್ನು ಪಾತ್ರೆಗೆ ಹಾಕಿ. ಹುಳಿಯು ಚೆನ್ನಾಗಿ ಬೇಯುವವರೆಗೆ ಮಂದ ಉರಿಯಲ್ಲಿ 5-6 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
*ತದನಂತರ ಈ ಮಸಾಲೆ ಮಿಶ್ರಣಕ್ಕೆ ಅನ್ನವನ್ನು ಬೆರೆಸಿ ಹಾಗೂ ಹುರಿದ ಕಡಲೆಕಾಳಿನೊಂದಿಗೆ ಇದನ್ನು ಅಲಂಕರಿಸಿ.
ನಿಮ್ಮ ವರಮಹಾಲಕ್ಷ್ಮೀ ಪೂಜೆಯ ವಿಶೇಷ ಪ್ರಸಾದ ತಿನಿಸು ಸಿದ್ಧವಾಗಿದೆ. ನಿಮ್ಮ ಮನೆಗೆ ಬರುವ ಅತಿಥಿಗಳಿಗೆ ಈ ಉಪಹಾರ ನಿಜಕ್ಕೂ ಒಂದು ಅತ್ಯುತ್ತಮ ತಿನಿಸಾಗುವುದರಲ್ಲಿ ಎರಡು ಮಾತಿಲ್ಲ.

English summary

Puliyogare recipe for Varamahalakshmi Festival

The Varamahalakshmi puja for the year 2014 will be celebrated on August 8. It is said that the Goddess Lakshmi who is the God of wealth and prosperity, is worshiped on this auspicious day. Here are the traditional recipes which are definitely prepared for the Varalakshmi puja.
X
Desktop Bottom Promotion