For Quick Alerts
ALLOW NOTIFICATIONS  
For Daily Alerts

ಆಹಾ ಪನ್ನೀರ್ ಬಿರಿಯಾನಿ, ಬಾಯಲ್ಲಿ ನೀರೂರಿಸುತ್ತಿದೆ!

By Manu
|

ಬೆಳಗಿನ ಉಪಾಹಾರಕ್ಕೇನು ಮಾಡಿದ್ದೀರಿ ಎಂಬ ಪ್ರಶ್ನೆಯನ್ನು ಕಚೇರಿಗೆ ಬಂದವರ ಹತ್ತಿರ ಕೇಳಿದರೆ ಅರ್ಧದಷ್ಟು ಜನರು ನೀಡುವ ಉತ್ತರ-ಉಪ್ಪಿಟ್ಟು. ಏಕೆಂದರೆ ಇದನ್ನು ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ತಯಾರಿಸಬಹುದು. ಇನ್ನುಳಿದವರಲ್ಲಿ ಅರ್ಧದಷ್ಟು ಜನ ಸಿದ್ಧರೂಪದ ಬ್ರೆಡ್ ಜಾಮ್ ಅಥವಾ ಹೋಟೆಲಿನ ಯಾವುದಾದರೂ ತಿಂಡಿಯನ್ನು ತಿಂದು ಬಂದಿದ್ದರೆ ಕೆಲವರು ಮಾತ್ರ ಮನೆಯಲ್ಲಿ ತಯಾರಿಸಿದ ಇಡ್ಲಿ ಅಥವಾ ದೋಸೆಯನ್ನು ತಿಂದು ಬಂದಿರುತ್ತಾರೆ.

ವಾಸ್ತವವಾಗಿ ನಮ್ಮ ಮೂರೂ ಹೊತ್ತಿನ ಆಹಾರಗಳಲ್ಲಿ ಬೆಳಗಿನ ಉಪಾಹಾರದ ಪ್ರಮಾಣ ಮಾತ್ರ ಸರ್ವಥಾ ಕಡಿಮೆಯಾಗಕೂಡದು. ಏಕೆಂದರೆ ರಾತ್ರಿಯ ಉಪವಾಸದ ಬಳಿಕ ಬೆಳಗೆ ಹೆಚ್ಚಿನ ಪೌಷ್ಠಿಕಾಂಶವಿರುವ ಅಹಾರ ಬೇಕಾಗಿದ್ದು ಮಧ್ಯಾಹ್ನದವರೆಗೂ ದೇಹಕ್ಕೆ ನಿರಂತರವಾಗಿ ಶಕ್ತಿಯನ್ನು ನೀಡುವಂತಿರಬೇಕು. ಅವಸರದಲ್ಲಿ ತಿಂದ ಒಂದು ಚಿಕ್ಕ ತಟ್ಟೆ ಉಪ್ಪಿಟ್ಟು, ಎರಡು ಇಡ್ಲಿ ಮೊದಲಾದವು ಏನೇನೂ ಸಾಲದು.

Paneer biryani recipe in kannada

ಅಲ್ಲದೆ, ಬೆಳಗ್ಗಿನ ಉಪಾಹಾರ ಕೊಂಚ ಸಮಯ ಕಬಳಿಸುವುದರಿಂದ ಮಧ್ಯಾಹ್ನದವರೆಗೂ ಹಸಿವಾಗದಂತೆ ಇರಿಸುವ ಮತ್ತು ಶಕ್ತಿಯನ್ನು ನೀಡುವ ಉಪಾಹಾರದ ಆಯ್ಕೆ ಮಾಡುವುದು ಕೊಂಚ ಕಷ್ಟವೇ ಸರಿ, ಅಲ್ಲವೇ? ಈ ನಿಟ್ಟಿನಲ್ಲಿ ಬೋಲ್ಡ್ ಸ್ಲೈ ತಂಡ ಇಂದು ಪನ್ನೀರ್ ಬಿರಿಯಾನಿ ರೆಸಿಪಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದೆ. ಬೆಳಗಿನ ಉಪಹಾರಕ್ಕೆ ಸರಳವಾಗಿ ಮಾಡಬಹುದಾದ ಈ ರೆಸಿಪಿ, ನಿಮ್ಮ ಸಮಯವನ್ನು ಉಳಿಸುವುದರ ಜೊತೆಗೆ ಆರೋಗ್ಯ ವೃದ್ಧಿಸುವಲ್ಲಿಯೂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದರೆ ತಡ ಏಕೆ? ಮುಂದೆ ಓದಿ..

ಪ್ರಮಾಣ: ಸುಮಾರು ಮೂವರಿಗೆ ಸಾಕಾಗುವಷ್ಟು
*ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು
*ತಯಾರಿಕೆಗೆ ಅಗತ್ಯವಿರುವ ಸಮಯ: ಇಪ್ಪತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು
*ಏಕಪ್ರಕಾರವಾಗಿ ತುಂಡು ಮಾಡಿದ ಪನ್ನೀರ್ - 300ಗ್ರಾಂ
*ಅಕ್ಕಿ - 1.ಕೆಜಿ (ಬಾಸ್ಮತಿ ಅಕ್ಕಿಯಾದರೆ ಉತ್ತಮ)
*ಬೇಯಿಸಿದ ಬಟಾಣಿ ಕಾಳು - 1 ಕಪ್
*ಶುಂಠಿ ಮತ್ತು ಬೆಳ್ಳುಳ್ಳಿ ಮಿಶ್ರಣ - 1 ದೊಡ್ಡಚಮಚ
*ಮೊಸರು - 2 ಕಪ್
*ಉದ್ದಕ್ಕೆ ಕತ್ತರಿಸಿದ ಹಸಿಮೆಣಸು- 4 (ಚಿಕ್ಕ ಗಾತ್ರದ್ದಾದರೆ 6)
*ಅರಿಶಿನ ಪುಡಿ - ¼ ಚಿಕ್ಕ ಚಮಚ
*ಒಣಮೆಣಸಿನ ಪುಡಿ - ½ ಚಿಕ್ಕ ಚಮಚ
*ಗರಂ ಮಸಾಲಾ ಪುಡಿ- 1 ಚಿಕ್ಕ ಚಮಚ
*ಏಲಕ್ಕಿ ಪುಡಿ - 2 ಚಿಕ್ಕ ಚಮಚ
*ದಾಲ್ಚಿನ್ನಿ ಎಲೆ - 1 (ಒಣ ಎಲೆ)
*ಕಪ್ಪು ಏಲಕ್ಕಿ - 1
*ಲವಂಗ - 2
*ಕಾಳುಮೆಣಸು-3ರಿಂದ 4
*ಲಿಂಬೆಹಣ್ಣಿನ ರಸ - 1 (ಚಿಕ್ಕ ಗಾತ್ರದ ಲಿಂಬೆಯಾದರೆ 2)
*ಕೇಸರಿ - ½ ಚಿಕ್ಕ ಚಮಚ
*ಹಾಲು - 2 ದೊಡ್ಡ ಚಮಚ
*ಕೊತ್ತಂಬರಿ ಸೊಪ್ಪು - 1 ಚಿಕ್ಕ ಕಟ್ಟು (ನಯವಾಗಿ ಹೆಚ್ಚಿದ್ದು)
*ಪುದಿನಾ ಸೊಪ್ಪಿನ ಎಲೆಗಳು-1 ಚಿಕ್ಕ ಕಟ್ಟು (ನಯವಾಗಿ ಹೆಚ್ಚಿದ್ದು)
*ಅಪ್ಪಟ ತುಪ್ಪ - 2 ದೊಡ್ಡ ಚಮಚ
*ಉಪ್ಪು - ರುಚಿಗೆ ತಕ್ಕಷ್ಟು

ಈ ಕೆಳಗಿನ ಸಾಮಾಗ್ರಿಗಳನ್ನು ಬೇರೆಬೇರೆಯಾಗಿ ತಯಾರಿಸಿಟ್ಟುಕೊಳ್ಳಿ
1) ಅಕ್ಕಿಯನ್ನು ಚೆನ್ನಾಗಿ ತೊಳೆದು ಬೇಯಲು ಇಡಿ. (ಒಂದು ಪ್ರಮಾಣದ ಅಕ್ಕಿಗೆ ಎರಡು ಪ್ರಮಾಣದಷ್ಟು ನೀರು ಹಾಕಿ) ಇದಕ್ಕೆ ಉಪ್ಪು, ದಾಲ್ಚಿನ್ನಿ ಎಲೆ, ಕಪ್ಪು ಏಲಕ್ಕಿ, ಲವಂಗ ಮತ್ತು ಕಾಳುಮೆಣಸು ಹಾಕಿ ಪೂರ್ಣವಾಗಿ ಬೇಯಲು ಕೊಂಚ ಇರುವಂತೆ (ಸುಮಾರು ತೊಂಭತ್ತು ಭಾಗ ಬೆಂದಿರುವಂತೆ) ಇದ್ದಾಗ ಇಳಿಸಿ ನೀರು ಬಸಿಯಿರಿ. ನೀರು ಪೂರ್ಣ ಬಸಿದ ಬಳಿಕ ಒಂದು ಪಕ್ಕದಲ್ಲಿಡಿ.
2) ಒಂದು ಪಾತ್ರೆಯಲ್ಲಿ ಮೊಸರು, ಉಪ್ಪು, ಮೆಣಸಿನ ಪುಡಿ, ಅರಿಸಿನ ಪುಡಿ ಮತ್ತು ಲಿಂಬೆರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಪನ್ನೀರ್‌ನ ತುಂಡುಗಳನ್ನು ಸೇರಿಸಿ ಎಲ್ಲಾ ಪನ್ನೀರ್ ತುಂಡುಗಳೂ ದ್ರವದಲ್ಲಿ ಅವೃತ್ತವಾಗುವಂತೆ ಮಿಶ್ರಣ ಮಾಡಿ ಪಕ್ಕದಲ್ಲಿಡಿ. ಪನ್ನೀರ್ ತುಂಡಾಗದಂತೆ ಅಥವಾ ಪುಡಿಯಾಗದಂತೆ ಎಚ್ಚರ ವಹಿಸಿ.
3) ಒಂದು ಲೋಟದಲ್ಲಿ ಹಾಲು ಮತ್ತು ಕೇಸರಿ ಪುಡಿಯನ್ನು ಮಿಶ್ರಣ ಮಾಡಿ ಪಕ್ಕದಲ್ಲಿಡಿ.

ಮಾಡುವ ವಿಧಾನ:
*ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಚಿಕ್ಕ ಉರಿಯಲ್ಲಿ ಬಿಸಿಮಾಡಿ. ತುಪ್ಪ ಕರಗಿದ ಬಳಿಕ ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಮಿಶ್ರಣ ಸೇರಿಸಿ ಹುರಿಯಿರಿ. ಕೆಲವು ಕ್ಷಣಗಳ ಬಳಿಕ ಪನ್ನೀರ್ ತುಂಡುಗಳನ್ನು (ಮೇಲಿನ ಸಂಖ್ಯೆ 2 ರಲ್ಲಿ ಸಿದ್ದ ಮಾಡಿಟ್ಟಿದ್ದಂತೆ) ಸೇರಿಸಿ ಹುರಿಯಿರಿ.
*ಪನ್ನೀರ್‌ನ ಎಲ್ಲಾ ಬದಿಗಳು ಕೊಂಚ ನಸುಗಂದು ಬರುವವರೆಗೆ ಹುರಿಯಿರಿ. ಈಗ ದಪ್ಪತಳದ ಮತ್ತು ಅಗಲವಾದ ಪಾತ್ರೆಯೊಂದನ್ನು ಚಿಕ್ಕ ಉರಿಯ ಮೇಲಿರಿಸಿ.
*ಇನ್ನು ಒಂದು ಪದರ ಅಕ್ಕಿಯನ್ನು(ಮೇಲಿನ ಸಂಖ್ಯೆ 1 ರಲ್ಲಿ ಸಿದ್ಧ ಮಾಡಿಟ್ಟಿದ್ದಂತೆ) ಹರಡಿ ಅದರ ಮೇಲೆ ಹುರಿದ ಪನ್ನೀರ್ ಹರಡಿ. ಇದರ ಮೇಲೆ ಅಕ್ಕಿಯ ಇನ್ನೊಂದು ಪದರ ಹರಡಿ ಅದರ ಮೇಲೆ ಬೇಯಿಸಿದ ಬಣಾಟಿ, ಗರಂ ಮಸಾಲೆ ಪುಡಿ, ಏಲಕ್ಕಿ ಪುಡಿ, ಹಾಲು ಮತ್ತು ಕೇಸರಿ (ಮೇಲಿನ ಸಂಖ್ಯೆ 3 ರಲ್ಲಿ ಸಿದ್ಧ ಮಾಡಿಟ್ಟಿದ್ದಂತೆ), ಕೊತ್ತಂಬರಿ ಮತ್ತು ಪುದಿನಾ ಸೊಪ್ಪು, ಹರಡಿ. ಕೊಂಚ ಕರಗಿದ ತುಪ್ಪವನ್ನು ಕೊಂಚ ಕೊಂಚವಾಗಿ ಹರಡುವಂತೆ ಚಿಮುಕಿಸಿ.
*ತದನಂತರ ಉಳಿದ ಎಲ್ಲಾ ಅಕ್ಕಿಯನ್ನು ಇದರ ಮೇಲೆ ಹರಡಿ ಏಕಪ್ರಕಾರವಾಗಿರುವಂತೆ ಚಪ್ಪಟೆ ಚಮಚದಲ್ಲಿ ಸವರಿ. ಈ ಪಾತ್ರೆಯ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ.
*ಇಷ್ಟೆಲ್ಲಾ ಆದ ನಂತರ ಮಧ್ಯಮಕ್ಕಿಂತ ಕೊಂಚ ಕೆಳಗಿನ ಉರಿಯಲ್ಲಿ ಸುಮಾರು ಹತ್ತು ನಿಮಿಷ ಹಬೆಯಲ್ಲಿ ಬೇಯಲು ಬಿಡಿ. ಹತ್ತು ನಿಮಿಷದ ಬಳಿಕ ಉರಿಯಿಂದಿಳಿಸಿ, ಆ ಕೂಡಲೇ ಮುಚ್ಚಳ ತೆರೆಯಬೇಡಿ, ಇನ್ನೂ ಸುಮಾರು ಹತ್ತು ನಿಮಿಷ ಅಥವಾ ಹದಿನೈದು ನಿಮಿಷ ಹಾಗೆಯೇ ತಣಿಯಲು ಬಿಡಿ. ಬಿಸಿಬಿಸಿಯಿರುವಂತೆಯೇ ಬಡಿಸಿ.

English summary

Paneer biryani recipe in kannada

This Indian rice recipe is special because it is prepared by layering. The paneer biryani recipe that we are sharing right now can even be prepared at home.
Story first published: Saturday, November 14, 2015, 10:09 [IST]
X
Desktop Bottom Promotion