ಇಡ್ಲಿ ಜೊತೆಗೆ ಘಮ್ಮೆನ್ನುವ ಉಡುಪಿ ಸಾಂಬಾರು

Udupi Sambar Recipe
ಕರ್ನಾಟಕ ಕರಾವಳಿಯ ಸಸ್ಯಾಹಾರಿ ಅಡುಗೆ ಅಂದ್ರೆ ಹೆಚ್ಚಿನವರಿಗಿಷ್ಟ. ಅದರಲ್ಲೂ ಉಡುಪಿ ಹೋಟೆಲಿನ ಘಮವೇ ಬೇರೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ನೀವು ಊಟ ಮಾಡಿದ್ದರೆ ಅದರ ಗಮ್ಮತ್ತು ವಿವರಿಸುವ ಅಗತ್ಯವಿಲ್ಲ. ಉಡುಪಿಯು ಗೀತಾಚಾರ್ಯನ ಕ್ಷೇತ್ರ ಮಾತ್ರವಲ್ಲ, ಬೊಂಬಾಟ್ ಕುಂಬಳಕಾಯಿ ತೊಗರಿಬೇಳೆ ಹುಳಿಯ ಕ್ಷೇತ್ರವೂ ಹೌದು.

ಶುಚಿರುಚಿಯಾದ ಅಡುಗೆಗೆ ಉಡುಪಿಯವರು ಫೇಮಸ್ಸು. ಆದ್ದರಿಂದಲೇ ಉಡುಪಿ ಭಟ್ಟರು ಭಾರತದ ಯಾವುದೇ ಮೂಲೆಯಲ್ಲಿ ಹೋಗಿ ಹೋಟೆಲ್ ಪ್ರಾರಂಭಿಸಿದರೂ ಬಿಸಿನೆಸ್ ಚೆನ್ನಾಗಿ ಆಗತ್ತೆ. ಅವರಿಗೆ ಶುಭಕೋರುತ್ತ, ಇವತ್ತು, ಗುರುವಾರ ನಾವುಗಳು ಉಡುಪಿ ಬ್ರಾಹ್ಮಣರ ಬ್ರಾಂಡೆಡ್ ಪದಾರ್ಥ ಸಾಂಬಾರು ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು:

* ಸಾಂಬಾರು ಮಾಡಲು ಬಳಸುವ ಬೇಳೆ 1/2 ಕಪ್
* ಎಣ್ಣೆ (ಸಾರಿಗೆ ಬೇಕಾದಷ್ಟು)
* ಮೆಂತೆ 1/2 ಚಮಚ
* ಉದ್ದಿನ ಬೇಳೆ 1 ಚಮಚ
* ಒಣ ಕೆಂಪು ಮೆಣಸಿನ ಕಾಯಿ
* ಕೊತ್ತಂಬರಿ ಬೀಜ 1 ಚಮಚ
* ಜೀರಿಗೆ 1/2 ಚಮಚ
* ಕರಿಬೇವಿನ ಎಲೆ ಸ್ವಲ್ಪ
* ತುರಿದ ತೆಂಗಿನಕಾಯಿ 1/2 ಕಪ್
* ಚಿಕ್ಕ ಈರುಳ್ಳಿ ಒಂದು ಹಿಡಿಯಷ್ಟು
* ಹಸಿ ಮೆಣಸು 2
* ಸಾಸಿವೆ 1/2 ಚಮಚ
* ಮೆಂತೆ 1/4 ಚಮಚ
* ಹುಳಿ (ರುಚಿಗೆ ತಕ್ಕಷ್ಟು)
* ಉಪ್ಪು ರುಚಿಗೆ ತಕ್ಕಷ್ಟು
* ಪುಡಿ ಮಾಡಿದ ಬೆಲ್ಲ 1 ಚಮಚ

ತಯಾರಿಸುವ ವಿಧಾನ:


1. ಬೇಳೆಯನ್ನು ಚೆನ್ನಾಗಿ ಬೇಯಿಸಿ ಸೌಟ್ ನಿಂದ ಅದನ್ನು ಚೆನ್ನಾಗಿ ಹಿಸುಕಬೇಕು.

2. ಒಂದು ಚಮಚ ಕಡಲೆಣ್ಣೆ ಅಥವಾ ಸನ್ ಫ್ಲವರ್ ಅನ್ನು ಬಾಣಲೆಗೆ ಹಾಕಿ ಮೆಂತೆ ಮತ್ತು ಉದ್ದಿನ ಬೇಳೆ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಅದನ್ನು ಒಂದು ಪಾತ್ರೆಯಲ್ಲಿ ಹಾಕಬೇಕು.

3. ಈಗ ಒಣಮೆಣಸಿನ ಕಾಯಿ ಮತ್ತು ಕೊತ್ತಂಬರಿ ಬೀಜನ್ನು ಬಾಣಲೆಯಲ್ಲಿ ಹಾಕಿ ಹುರಿಯಬೇಕು. ನಂತರ ಅದಕ್ಕೆ ಕರಿಬೇವಿನ ಎಲೆ ಮತ್ತು ತುರಿದ ತೆಂಗಿನಕಾಯಿ ಹಾಕಬೇಕು. ತೆಂಗಿನಕಾಯಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.

4. ನಂತರ ಹುರಿದ ಈ ಮೇಲಿನ ಮಿಶ್ರಣವನ್ನು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಅರಿದು ಪಕ್ಕದಲ್ಲಿಡಿ.

5. ಈರುಳ್ಳಿಯ ಸಿಪ್ಪೆ ಸುಲಿದು ಕತ್ತರಿಸಿಡಬೇಕು.

6. ದೊಡ್ಡ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಅದರಲ್ಲಿ ಸಾಸಿವೆಯನ್ನು ಹಾಕಬೇಕು.

7. ಸಾಸಿವೆ ಚಿಟಾಪಟಾ ಶಬ್ದ ಬರುವಾಗ 1/2 ಚಮಚ ಉದ್ದಿನ ಬೇಳೆ ಮತ್ತು ಇಂಗು ಸೇರಿಸಬೇಕು.

8. ಈಗ ಈರುಳ್ಳಿ, ಹಸಿಮೆಣಸು ಮತ್ತು ಕರಿಬೇವಿನ ಎಲೆಯನ್ನು ಸೇರಿಸಬೇಕು.

9. ಟೊಮೆಟೊ ಮತ್ತು ಇತರ ತರಕಾರಿಯನ್ನು ಬೇಕಾದರೆ ಬೇಕಾದರೆ ಸೇರಿಸಬಹುದು.

10. ನಂತರ ಇವುಗಳನ್ನು ಟೊಮೆಟೊ ಮೆತ್ತೆಗಾಗುವರೆಗೂ ಹುರಿಯಬೇಕು. ನಂತರ ಸ್ವಲ್ಪ ನೀರು ಸೇರಿಸಿ ತರಕಾರಿಯನ್ನು ಬೇಯಿಸಬೇಕು.

11. ಹುಣಸೆ ಹುಳಿಯನ್ನು ಚಿಕ್ಕ ಪಾತ್ರೆಯಲ್ಲಿ ನೀರು ತೆಗೆದು ಅದರಲ್ಲಿ ಕಲೆಸಿ ಅದನ್ನು ತರಕಾರಿ ಮಿಶ್ರಣಕ್ಕೆ ಸೇರಿಸಬೇಕು.

12. ನಂತರ ಆ ಮಿಶ್ರಣವನ್ನು ಕುದಿಸಬೇಕು.

13. ಈಗ ರುಚಿಗೆ ತಕ್ಕ ಉಪ್ಪು ಮತ್ತು ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು.

14.
ಈಗ ಬೇಯಿಸಿ ಸೌಟ್ ನಿಂದ ಚೆನ್ನಾಗಿ ಹಿಸುಕಿದ ಬೇಳೆ ಮತ್ತು ಮಸಾಲೆಯನ್ನು ತರಕಾರಿ ಮಿಶ್ರಣಕ್ಕೆ ಸೇರಿಸಿ ಉಪ್ಪು ಸಾಲದಿದ್ದರೆ ಸ್ವಲ್ಪ ಉಪ್ಪು ಹಾಕಿ. ಗಟ್ಟಿ ಸಾಂಬಾರು ಬೇಡ ಅಂದರೆ ಸ್ವಲ್ಪ ನೀರು ಸೇರಿಸಿ ಕುದಿಸಿದರೆ ಸಾಂಬಾರುರೆಡಿ.

ಈ ಸಾಂಬಾರನ್ನು ದೋಸೆ, ಇಡ್ಲಿ ಮತ್ತು ಅನ್ನದ ಜೊತೆ ತಿನ್ನಲು ತುಂಬಾ ರುಚಿರವಾಗಿರುತ್ತದೆ.

(ತರಕಾರಿಗಳಾಗಿ ಕುಂಬಳಕಾಯಿ, ಸೌತೆಕಾಯಿ, ಬೆಂಡೆಕಾಯಿ, ಬದನೆಕಾಯಿ, ನುಗ್ಗೆ ಕಾಯಿ, ಸೇರಿಸಬಹುದು)

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.