For Quick Alerts
ALLOW NOTIFICATIONS  
For Daily Alerts

ಆಹಾ, ದೊಣ್ಣೆಮೆಣಸು-ಪನ್ನೀರ್ ಬಟಾಣಿ ಕರಿ!

By manu
|

ಸಾಮಾನ್ಯವಾಗಿ ಕರಿ ಎಂದರೆ ಕೋಳಿಮಾಂಸದ ಪದಾರ್ಥ ಎಂದೇ ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಆದರೆ ಇದಕ್ಕೂ ರುಚಿಯಾದ ಗಾಢವಾದ ಕರಿಯನ್ನು ಪನ್ನೀರ್ ಉಪಯೋಗಿಸಿಯೂ ಮಾಡಬಹುದು. ಇದಕ್ಕೆ ಬಟಾಣಿ ಮತ್ತು ದೊಣ್ಣೆಮೆಣಸು ಜೊತೆನೀಡುವುದರಿಂದ ರುಚಿಯಲ್ಲಿಯೂ ಪೌಷ್ಟಿಕತೆಯಲ್ಲಿಯೂ ಎಲ್ಲರ ಮನಗೆಲ್ಲುವ ಈ ಅಡುಗೆ ದಿನದ ಯಾವುದೇ ಹೊತ್ತಿನ ಆಹಾರಕ್ಕೆ ಹೊಂದಿಕೊಳ್ಳುತ್ತದೆ.

ಬೆಳಗಿನ ಚಪಾತಿಯೊಂದಿಗೆ, ಮಧ್ಯಾಹ್ನದ ಊಟದೊಂದಿಗೆ, ರಾತ್ರಿಯ ರೊಟ್ಟಿ ನಾನ್ ಅಥವಾ ಕುಲ್ಛಾಗಳೊಂದಿಗೆ ಸೇವಿಸಲು ಅತ್ಯುತ್ತಮವಾಗಿದೆ. ಪನೀರ್, ಬಟಾಣಿಗಳು ಪ್ರೋಟೀನುಗಳ ಆಗರವಾಗಿರುವುದರಿಂದ ಬೆಳೆಯುತ್ತಿರುವ ಮಕ್ಕಳಿಗೆ ಇದು ಹೇಳಿ ಮಾಡಿಸಿದ ಆಹಾರವಾಗಿದೆ. ದಿನದ ಚಟುವಟಿಕೆಯಲ್ಲಿ ಹೆಚ್ಚಿನ ಶಕ್ತಿಯ ಅಗತ್ಯವಿದ್ದಾಗಲೂ ಈ ಕರಿ ಉತ್ತಮ ಆಯ್ಕೆಯಾಗಿದೆ.

ಸಸ್ಯಾಹಾರಿ ಕ್ರೀಡಾಪಟುಗಳಿಗಂತೂ ಇದಕ್ಕಿಂತ ಉತ್ತಮವಾದ ಆಹಾರ ಇನ್ನೊಂದಿರಲಾರದು. ಅಷ್ಟೇ ಏಕೆ, ಕೊಂಚ ಬಿಸಿಮಾಡಿ ಚಿಕ್ಕ ಚಪಾತಿ ಅಥವಾ ರೊಟ್ಟಿಗೆ ಸವರಿ ಉರುಳೆ ಮಾಡಿಕೊಂಡು ದಿನದ ಯಾವುದೇ ಹೊತ್ತಿನಲ್ಲಿ ತಿನ್ನಬಹುದಾದುದರಿಂದ ಅನಾರೋಗ್ಯಕರ ಸಿದ್ಧ ಆಹಾರಗಳನ್ನು ತಿನ್ನುವುದರಿಂದ ತಪ್ಪಿಸಿಕೊಂಡು ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

Capsicum Green Peas Paneer Gravy

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಹದಿನೈದು ನಿಮಿಷಗಳು
ತಯಾರಿಕಾ ಸಮಯ: ಹದಿನೈದು ನಿಮಿಷಗಳು ಚಪಾತಿ ಜೊತೆ ಮಾಡಿ ಬಿಸಿ ಬಿಸಿ ಆಲೂ ಬಟಾಣಿ ಕರಿ

ಅಗತ್ಯವಿರುವ ಸಾಮಾಗ್ರಿಗಳು:
*ಹಸಿರು ಬಟಾಣಿ: ಎರಡು ಕಪ್ (ತಾಜಾ ಆದರೆ ಉತ್ತಮ, ಒಣಗಿದ್ದರೆ ಹಿಂದಿನ ರಾತ್ರಿ ತಣ್ಣೀರಿನಲ್ಲಿ ನೆನೆಸಿಟ್ಟಿದ್ದು)
*ಪನ್ನೀರ್ : ಇನ್ನೂರು ಗ್ರಾಂ (ರೊಟ್ಟಿಯನ್ನು ಉರುಳೆ ಮಾಡುವುದಾದರೆ ಒಂದು ತುಂಡನ್ನು ಎಂಟಾಗಿ ಕತ್ತರಿಸಿಕೊಳ್ಳಿ)
*ಕಾಯಿ ತುರಿ: ಒಂದು ಕಪ್
*ದೊಣ್ಣೆ ಮೆಣಸು: ಒಂದು ಕಪ್ (ಬೀಜಗಳನ್ನು ನಿವಾರಿಸಿ, ಚಿಕ್ಕದಾಗಿ ತುಂಡು ಮಾಡಿದ್ದು)
*ಶುಂಠಿ ಬೆಳ್ಳುಳ್ಳಿ ಪೇಸ್ಟ್: ಒಂದು ದೊಡ್ಡ ಚಮಚ
*ಒಣಮೆಣಸು : ಸುಮಾರು ನಾಲ್ಕು (ಬ್ಯಾಡಗಿ ಮೆಣಸು ಅಥವಾ ಕಾಶ್ಮೀರಿ ಚಿಲ್ಲಿ. ಬೇರೆ ಮೆಣಸಾದರೆ ಮೂರು ಸಾಕು)
*ಹಸಿಮೆಣಸು : ಸುಮಾರು ನಾಲ್ಕು
*ಕೊತ್ತೊಂಬರಿ ಪುಡಿ : ಒಂದು ದೊಡ್ಡ ಚಮಚ
*ಬೆಣ್ಣೆ: ಎರಡು ದೊಡ್ಡ ಚಮಚ
*ಚೆಕ್ಕೆ: ಒಂದಿಂಚಿನ ಚೂರು
*ಗಸಗಸೆ: ಎರಡು ದೊಡ್ಡ ಚಮಚ
*ಗೋಡಂಬಿ: ಹತ್ತರಿಂದ ಹನ್ನೆರಡು (ಬಿಳಿಯದ್ದು)
*ರುಚಿಗನುಸಾರವಾದ ಉಪ್ಪು.
*ಕೊತ್ತಂಬರಿ ಸೊಪ್ಪು: ಒಂದು ಕಟ್ಟು (ಇಲ್ಲದಿದ್ದರೂ ನಡೆಯುತ್ತೆ)

ವಿಧಾನ:
1) ಮೊದಲು ಪ್ರೆಷರ್ ಕುಕ್ಕರ್ ನಲ್ಲಿ ಸ್ವಲ್ಪ ನೀರು ಹಾಕಿ ನೆನೆಸಿಟ್ಟ ಬಟಾಣಿ ಕಾಳುಗಳನ್ನು ಹಾಕಿ ಎರಡು ಸೀಟಿ ಬರುವವರೆಗೆ ಬೇಯಿಸಿ. ಒಂದು ವೇಳೆ ನೆನೆಸಿಡದೇ ಇದ್ದರೆ ಸುಮಾರು ಆರು ಸೀಟಿಗಳವರೆಗೆ ಬೇಯಿಸಬೇಕು. ಆದರೆ ಈ ಬಟಾಣಿ ಸಪ್ಪೆಯಾಗಿರುತ್ತದೆ. ನೆನೆಸಿಟ್ಟಿದ್ದ ಬಟಾಣಿ ಸಿಹಿಯಾಗಿರುತ್ತದೆ.
2) ಮಿಕ್ಸಿಯ ಜಾರ್ ನಲ್ಲಿ ಕಾಯಿತುರಿ, ಗೋಡಂಬಿ, ಚೆಕ್ಕೆ, ಗಸಗಸೆ, ಕೆಂಪುಮೆಣಸು, ಹಸಿಮೆಣಸು ಮತ್ತು ಕೊಂಚ ನೀರು ಹಾಕಿ ನಯವಾಗುವಷ್ಟು ಅರೆಯಿರಿ.
3) ದಪ್ಪತಳದ ಬಾಣಲೆ ಅಥವ ಪಾತ್ರೆಯನ್ನು ಮಧ್ಯಮ ಉರಿಯಲ್ಲಿಟ್ಟು ಬೆಣ್ಣೆ ಹಾಕಿ. ಬೆಣ್ಣೆ ಕರಗಿದ ಬಳಿಕ ಪನ್ನೀರ್ ಹಾಕಿ ಕೊಂಚ ಕಂದು ಬಣ್ಣ ಬರುವವರೆಗೆ ಹುರಿಯಿರಿ.
4) ಈಗ ಶುಂಠಿ ಬೆಳ್ಳುಳ್ಳಿ ಪೇಸ್ಟ್, ದೊಣ್ಣೆ ಮೆಣಸು, ಕೊತ್ತೊಂಬರಿ ಪುಡಿ ಹಾಕಿ ತಿರುವಿ.
5) ದೊಣ್ಣೆಮೆಣಸಿನ ಅಂಚುಗಳು ಕೊಂಚ ಕಂದು ಬಣ್ಣ ಬರಲು ತೊಡಗಿದ ಬಳಿಕ ಬೇಯಿಸಿಟ್ಟಿರುವ ಬಟಾಣಿ ಹಾಕಿ, ಕೂಡಲೇ ಮಸಾಲೆಯನ್ನೂ ಹಾಕಿ ತಿರುವಿ.
6) ನಿಮ್ಮ ಆಯ್ಕೆಗೆ ತಕ್ಕಂತೆ ಸ್ವಲ್ಪ ಸ್ವಲ್ಪವೇ ನೀರು ಹಾಕಿ ತಿರುಗಿಸುತ್ತಾ ಹೋಗಿ. ಕುದಿ ಬರುತ್ತಿದ್ದಂತೆ ಮತ್ತಷ್ಟು ನೀರು ಸೇರಿಸಿ. ಒಮ್ಮೆಲೇ ಎಲ್ಲಾ ನೀರು ಹಾಕಬೇಡಿ (ಇದರಿಂದ ರುಚಿ ಚಪ್ಪೆಯಾಗುತ್ತದೆ). ಗಸಿ ಕೊಂಚ ಗಾಢವಾಗಿಯೇ ಇರಲಿ, ಹೆಚ್ಚು ನೀರು ಸೇರಿಸಿ ತೆಳ್ಳಗಾಗಿಸಬೇಡಿ.
7) ನೀರು ಕುದಿ ಬರುತ್ತಿದ್ದಂತೆ ಉರಿಯನ್ನು ಅತಿ ಚಿಕ್ಕದಾಗಿಸಿ ಮುಚ್ಚಳ ಮುಚ್ಚಿ ಸುಮಾರು ಎರಡು ನಿಮಿಷ ಬೇಯಿಸಿ.
8) ಉರಿ ಆರಿಸಿ ಪಾತ್ರೆಯನ್ನು ಕೆಳಗಿಟ್ಟು ಕೊತ್ತಂಬರಿ ಸೊಪ್ಪಿನ ಎಲೆಗಳನ್ನು ಮೇಲೆ ಹಾಕಿ ಬಿಸಿಯಿರುವಂತೆಯೇ ಬಡಿಸಿ.

ಸಲಹೆ:
1) ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವುದರಿಂದ ತೂಕ ಇಳಿಸುವವರು ತಮ್ಮ ಜಿಹ್ವಾಚಾಪಲ್ಯವನ್ನು ನಿಗ್ರಹಿಸುವುದು ಅಗತ್ಯ.
2) ಅತಿಥಿಗಳಿಗೆ ಬಡಿಸುವುದಾದರೆ ಮೂರು ಬಣ್ಣದ ದೊಣ್ಣೆಮೆಣಸನ್ನು ಬಳಸುವುದರಿಂದ ಅಡುಗೆ ಹೆಚ್ಚು ವರ್ಣರಂಜಿತವಾಗುತ್ತದೆ.
3) ಸಮಯವಿದ್ದರೆ ಕೊಂಚ ಕ್ಯಾರೆಟ್ ಅನ್ನೂ ಬೇಯಿಸುವ ಮೊದಲು ಸೇರಿಸಬಹುದು.
4) ಮುಖ್ಯ ಖಾದ್ಯವಾಗಿ ಅತಿಥಿಗಳಿಗೆ ಬಡಿಸುವುದಿದ್ದರೆ ಬಡಿಸುವ ಮೊದಲು ಒಂದು ಚಮಚ ತುಪ್ಪವನ್ನು ಖಾದ್ಯದ ನಡುವೆ ಸುರುವಿ ಬದಿಗೆ ಹರಿಯುವಂತೆ ಮಾಡಿ. ಇದರಿಂದ ತುಪ್ಪದ ಪರಿಮಳ ಮತ್ತು ಅಡುಗೆಯ ರುಚಿ ಅತಿಥಿಗಳ ಮೆಚ್ಚುಗೆಯನ್ನು ಪಡೆಯಲು ನೆರವು ನೀಡುವುದು.

English summary

Capsicum Green Peas Paneer Gravy

Paneer is one of the rich sources of protein. There are variety of dishes that are cooked using paneer. One of the best dishes that can be made from paneer is, green peas-paneer gravy. It's the most mouth watering dish ever.While you prepare a gravy with paneer you should never miss to add green peas. By adding green peas to paneer, it gives a more delicious taste. Green peas paneer gravy tastes at its best with rotis or chapatis.
Story first published: Thursday, August 13, 2015, 10:20 [IST]
X
Desktop Bottom Promotion