For Quick Alerts
ALLOW NOTIFICATIONS  
For Daily Alerts

ಮನೆಮಂದಿಯೆಲ್ಲ ಇಷ್ಟಪಡುವ ಬಾಳೆಕಾಯಿ ಪಲ್ಯ

By * ಅಜಯ್ ಮೋಹನ್, ಮೈಸೂರು
|
Banana palya recipe
ಬಾಳೆಹಣ್ಣು ಎಂದರೆ ಮಕ್ಕಳು ಹಿರಿಯರಾದಿಯಾಗಿ ಎಲ್ಲರಿಗೂ ಇಷ್ಟ. ಆದರೆ, ಬಾಳೆಕಾಯಿ ಕಂಡರೆ ಯಾಕೋ ತಾತ್ಸಾರ. ಬಾಳೆಕಾಯಿ ಬಜ್ಜಿ, ಬಾಳೆಕಾಯಿ ಕಾಪು ಮತ್ತಿತರ ಖಾದ್ಯಗಳನ್ನು ಮಾಡಲಷ್ಟೇ ಇದು ಮೀಸಲು. ಮಲೆನಾಡಿನಲ್ಲಿ ಮಾಡುವಷ್ಟು ಖಾದ್ಯಗಳನ್ನು ಸಿಟಿಯವರು ಮಾಡುವುದಿಲ್ಲ ಯಾಕೋ?

ಬಾಳೆಕಾಯಿಯಿಂದ ಸೊಗಸಾದ ಪಲ್ಯವನ್ನು ತಯಾರಿಸಬಹುದು. ಆರೋಗ್ಯದ ದೃಷ್ಟಿಯಿಂದ ಕೂಡ, ವೈದ್ಯರು ಪ್ರಿಸ್ಕ್ರೈಬ್ ಮಾಡದೆ ತಿನ್ನಬಹುದಾದ ಖಾದ್ಯ. ಅತ್ಯಧಿಕ ಕ್ಯಾಲೋರಿ ಇರುವ ಬಾಳೆಯಲ್ಲಿ ವಿಟಮಿನ್, ಪ್ರೊಟೀನ್, ಮಿನರಲ್ ಗಳು ಕೂಡ ಅಧಿಕವಾಗಿರುತ್ತವೆ.

ಬಾಳೆಕಾಯಿ ಯೌವನ ಪುಟಿದೇಳುವಂತೆ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅತ್ಯಧಿಕ ಪ್ರಮಾಣದಲ್ಲಿರುವ ಪೋಷಕಾಂಶಗಳಿಂದ ಆರೋಗ್ಯ ದಿವಿನಾಗಿರುವಂತೆ ನೋಡಿಕೊಳ್ಳುತ್ತದೆ. ಇಷ್ಟೆಲ್ಲ ಇದ್ದಮೇಲೆ ತಿನ್ನದೆ ಇರಲು ಆಗುತ್ತದೆಯೆ? ಬಾಳೆಕಾಯಿ ಬಳಸಿ ರುಚಿಕಟ್ಟಾದ ಪಲ್ಯ ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು : ಬಾಳೆಕಾಯಿ 2-3 | ಈರುಳ್ಳಿ 2 | ಬೆಳ್ಳುಳ್ಳಿ 4 ಎಸಳು (ನಿಮ್ಮಿಷ್ಟ) | ಹಸಿ ಶುಂಠಿ ಸಣ್ಣ ಗಾತ್ರದ್ದು | ಹಸಿ ಮೆಣಸಿನಕಾಯಿ 6 | ಹಸಿ ಕೊಬ್ಬರಿ ಕಾಲು ಬಟ್ಟಲು | ಅಕ್ಕಿಹಿಟ್ಟು | ಕರಿಬೇವು | ಸಾಸಿವೆ | ಅರಿಷಿಣ | ಎಣ್ಣೆ

ತಯಾರಿಸುವ ವಿಧಾನ :

ಬಾಳೆಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಗಾಲಿಗಾಲಿಗಳಾದ ಕತ್ತರಿಸಿಕೊಳ್ಳಿ. ಜನ ಜಾಸ್ತಿಯಿದ್ದರೆ ಬಾಳೆಕಾಯಿ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು. ಹಾಗೆಯೆ, ಇತರ ವಸ್ತುಗಳ ಪ್ರಮಾಣವನ್ನು ಕೂಡ.

ಮಿಕ್ಸಿಯಲ್ಲಿ ಬೆಳ್ಳುಳ್ಳಿ ಎಸಳು ಮತ್ತು ಹಸಿ ಶುಂಠಿ ಪೇಸ್ಟ್ ತಯಾರಿಸಿಕೊಳ್ಳಿ. ಜೊತೆಗೆ ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ಅದರ ಪೇಸ್ಟ್ ಕೂಡ ತಯಾರಿಸಬಹುದು ಅಥವಾ ಹಾಗೆಯೇ ಬಳಸಬುಹುದು, ಅವರವರಿಷ್ಟ.

ಒಂದು ಬಾಣಲೆಯಲ್ಲಿ ತುಸು ಎಣ್ಣೆ ಹಾಕಿ, ಸಾಸಿವೆ, ಕರಿಬೇವು ಚಟಪಡಿಸಿ, ಅರಿಷಿಣ ಮತ್ತು ಮೆಣಸಿನಕಾಯಿ ಬೆರೆಸಿ ತಾಳಿಸಿಕೊಳ್ಳಿ. ಕತ್ತರಿಸಿಕೊಂಡ ಈರುಳ್ಳಿ, ತುರಿದ ಹಸಿಕೊಬ್ಬರಿಯನ್ನೂ ಹಾಕಿ ತಾಳಿಸಿ. ಈರುಳ್ಳಿ ತುಸು ಕೆಂಪಾಗಿ ಘಮ್ಮನೆ ವಾಸನೆ ಬರುವವರೆಗೆ ಕೈಯಾಡಿಸಿ. ಇಷ್ಟೆಲ್ಲ ಸಣ್ಣ ಉರಿಯಲ್ಲಿ ತಾಳಿಸಬೇಕು.

ಇದಕ್ಕೆ ಗಾಲಿಯಾಕಾರದಲ್ಲಿ ಕತ್ತರಿಸಿಟ್ಟುಕೊಂಡ ಬಾಳೆಕಾಯಿಗಳನ್ನು ಸುರಿದು, ಉರಿ ಸ್ವಲ್ಪ ಜೋರು ಮಾಡಿರಿ. ಇದಕ್ಕೆ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಮಿಶ್ರಣ ಮಾಡಿರಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಲು ಮರೆಯಬೇಡಿ. ಮತ್ತೆ ಎರಡು ನಿಮಿಷ ಕೈಯಾಡಿಸಿ.

ಇಷ್ಟಾಗುತ್ತಿದ್ದಂತೆ, ಒಂದು ಸಣ್ಣ ಬೋಗುಣಿಯಲ್ಲಿ ಸ್ವಲ್ಪವೇ ನೀರು ಹಾಕಿ ಅಕ್ಕಿ ಹಿಟ್ಟನ್ನು ಮಿಕ್ಸ್ ಮಾಡಿ ಕಲಿಸಿಕೊಳ್ಳಿ. ಇದನ್ನು ಬಾಳೆಕಾಯಿ ಹಾಕಿದ್ದ ಪಾತ್ರೆಗೆ ಸುರುವಿ ಐದರಿಂದ ಹತ್ತು ನಿಮಿಷ ಕುದಿಯಲು ಬಿಡಿ. ಬಾಳೆಕಾಯಿ ಪಲ್ಯ ತಯಾರ್.

ಇದನ್ನು ಚಪಾತಿ, ದೋಸೆ, ರೊಟ್ಟಿ ಮುಂತಾದುವುಗಳೊಂದಿಗೆ ಸೇರಿಸಿ ತಿನ್ನಬಹುದು.

English summary

Raw banana palya recipe | Raw banana sabzi recipe | Health benefits of banana | ಬಾಳೆಕಾಯಿ ಪಲ್ಯ | ಬಾಳೆಕಾಯಿ ಆರೋಗ್ಯ ಮಹತ್ವ

Raw banana palya recipe, a south indian cuisine, which everyone likes. Banana is rich in calory, protein, vitamins. Banana promotes digestion, gives youthfulness. This recipe is a fantastic combination for chapati or roti.
Story first published: Wednesday, July 13, 2011, 15:52 [IST]
X
Desktop Bottom Promotion