For Quick Alerts
ALLOW NOTIFICATIONS  
For Daily Alerts

ಆಹಾ ಅದೇನು ರುಚಿ, ಮಸಾಲೆಯುಕ್ತ ಸೀಗಡಿ ರೆಸಿಪಿ!

By manu
|

ಮಾಂಸಾಹಾರದಲ್ಲಿ ಅತ್ಯಂತ ಸುರಕ್ಷಿತವಾದುದೆಂದರೆ ಸಾಗರ ಉತ್ಪನ್ನಗಳು. ಅದರಲ್ಲೂ ಮೂಳೆ ಅಥವಾ ಮುಳ್ಳಿಲ್ಲದ ಉತ್ಪನ್ನಗಳ ರುಚಿಯೇ ಬೇರೆ. ಸೀಗಡಿಯ ರುಚಿಯನ್ನು ಬಲ್ಲವರು ಮಾರುಕಟ್ಟೆಯಲ್ಲಿ ಸೀಗಡಿ ಎಷ್ಟು ದುಬಾರಿಯಾದರೂ ಕೊಳ್ಳದೇ ಇರುವುದಿಲ್ಲ. ಸೀಗಡಿಯ ಬಿರಿಯಾನಿ, ಫ್ರೈ ಮೊದಲಾದವು ಊಟದ ಸ್ವಾದವನ್ನು ಹೆಚ್ಚಿಸುತ್ತವೆ. ಗಸಿಯ ರೂಪದಲ್ಲಿ ತಯಾರಿಸಿದ ಸೀಗಡಿ ರೊಟ್ಟಿಯೊಂದಿಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.

ಇದರಲ್ಲಿ ಅತಿ ಕಡಿಮೆ ಇರುವ ಕೊಲೆಸ್ಟ್ರಾಲ್ ಮತ್ತು ಅಧಿಕ ಪ್ರಮಾಣದಲ್ಲಿರುವ ಪ್ರೋಟೀನು, ವಿಟಮಿನ್‌ಗಳು ಮತ್ತು ಇತರ ಪೋಷಕಾಂಶಗಳು ಮತ್ತು ವಿವಿಧ ಮಸಾಲೆಗಳು ರುಚಿಯ ಜೊತೆಗೇ ಆರೋಗ್ಯವನ್ನೂ ವೃದ್ಧಿಸುತ್ತವೆ.

ಇಂದು ಮಸಾಲೆಯುಕ್ತ, ಕೊಂಚ ಖಾರವಾದ ಸೀಗಡಿ ಗಸಿಯನ್ನು ಹೇಗೆ ಮಾಡುವುದು ಎಂಬುದನ್ನು ನೋಡೋಣ. ನೀರು ಕಡಿಮೆ ಇದ್ದರೆ ರೊಟ್ಟಿ, ನಾನ್, ಚಪಾತಿಗಳೊಂದಿಗೂ ನೀರು ಹೆಚ್ಚಿದ್ದರೆ ಅನ್ನದೊಂದಿಗೆ ಕಲಸಿಕೊಂಡು ತಿನ್ನುವ ಮೂಲಕ ಈ ವಿಧಾನ ಎಲ್ಲರ ಮನಗೆಲ್ಲುವುದು ಖಚಿತ. ಸೀಗಡಿ ಮೀನಿನ ಫ್ರೈ ರೆಸಿಪಿ

Spicy And Quick Prawn Curry Recipe

ಪ್ರಮಾಣ: ಮೂವರಿಗೆ ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಹದಿನೈದು ನಿಮಿಷಗಳು
ತಯಾರಿಕಾ ಸಮಯ: ಹದಿನೈದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಬಿಡಿಸಿ ಸ್ವಚ್ಛಗೊಳಿಸಿದ ಸೀಗಡಿ: 200 ಗ್ರಾಂ
*ಒಣಮೆಣಸು: ಸುಮಾರು ಏಳು (ಬ್ಯಾಡಗಿ ಅತ್ಯುತ್ತಮ ಆಯ್ಕೆ. ಕಾಶ್ಮೀರಿ ಚಿಲ್ಲಿ ಆದರೆ ಎಂಟು, ಇತರ ಮೆಣಸಾದರೆ ಐದು ಅಥವಾ ಆರು ಸಾಕು)
*ಕೊತ್ತೊಂಬರಿ ಬೀಜ-ಎರಡು ದೊಡ್ಡಚಮಚ
*ಕಾಯಿತುರಿ: ಅರ್ಧ ಕಪ್
*ಕಾಳುಮೆಣಸಿನ ಪುಡಿ-ಕಾಲು ಚಿಕ್ಕ ಚಮಚ
*ಕೊತ್ತೊಂಬರಿ ಪುಡಿ: ಕಾಲು ಚಿಕ್ಕಚಮಚ
*ಟೊಮೇಟೊ-ಮಧ್ಯಮ ಗಾತ್ರದ್ದು -ಮೂರು (ಚೆನ್ನಾಗಿ ಹಣ್ಣಾಗಿರಬೇಕು. ಕೊಂಚ ಕಾಯಿ ಇದ್ದರೂ ಗಸಿ ಹುಳಿಯಾಗುತ್ತದೆ)
*ಈರುಳ್ಳಿ - ಒಂದು ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ಶುಂಠಿ ಬೆಳ್ಳುಳ್ಳಿ ಪೇಸ್ಟ್- ಒಂದು ದೊಡ್ಡಚಮಚ
*ಉಪ್ಪು-ರುಚಿಗನುಸಾರ
*ಎಣ್ಣೆ- ಎರಡು ದೊಡ್ಡ ಚಮಚ (ಮೆಕ್ಕೆ ಜೋಳ, ಸೂರ್ಯಕಾಂತಿ ಅಥವಾ ನೆಲಗಡಲೆ ಸೂಕ್ತ, ಪಾಮ್, ವನಸ್ಪತಿ ಬೇಡವೇ ಬೇಡ)
*ಕೊತ್ತಂಬರಿ ಸೊಪ್ಪು: ಅರ್ಧ ಕಟ್ಟು

ವಿಧಾನ:
*ಒಂದು ದಪ್ಪತಳದ ಅಗಲವಾದ ಪಾತ್ರೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಬಿಸಿಮಾಡಿ. ಬಳಿಕ ಸೀಗಡಿಯನ್ನು ಹಾಕಿ ಸುಮಾರು ಐದು ನಿಮಿಷ ಹುರಿಯಿರಿ. ಕೊಂಚ ಕಂದು ಬಣ್ಣ ಬರುತ್ತಿದ್ದಂತೆ ಇಳಿಸಿ ಒಂದು ಪಾತ್ರೆಯಲ್ಲಿ ಮುಚ್ಚಿಡಿ
*ಮಿಕ್ಸಿಯ ಜಾರ್‌ನಲ್ಲಿ ಕೊತ್ತೊಂಬರಿ, ಒಣಮೆಣಸು, ಕಾಯಿತುರಿ ಮತ್ತು ಕೊಂಚ ನೀರು ಹಾಕಿ ಚೆನ್ನಾಗಿ ಅರೆಯಿರಿ. ಇದನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಸಂಗ್ರಹಿಸಿ
*ಮಿಕ್ಸಿಯ ಜಾರ್‌ನ ನೀರು ತೆಗೆದು ಮೂರು ಟೊಮಾಟೋಗಳನ್ನು ನೀರು ಹಾಕದೇ ಅರೆಯಿರಿ. ನುಣ್ಣನೆಯ ದ್ರವವಾದ ಬಳಿಕ ಪಕ್ಕಕ್ಕಿಡಿ (ಮಾರುಕಟ್ಟೆಯಲ್ಲಿ ಸಿಗುವ ಟೊಮೇಟೊ ಪ್ಯೂರಿಯನ್ನು ಸಹಾ ಬಳಸಬಹುದು)
*ಈಗ ಸೀಗಡಿ ಹುರಿದ ಪಾತ್ರೆಯಲ್ಲಿ ಉಳಿದ ಎಣ್ಣೆಯನ್ನು ಹಾಕಿ ನೀರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಧನಿಯ ಪುಡಿ, ಕಾಳುಮೆಣಸಿನ ಪುಡಿ ಹಾಕಿ ಚಿಕ್ಕ ಉರಿಯಲ್ಲಿ ನೀರುಳ್ಳಿ ಕೆಂಪಗಾಗುವವರೆಗೆ ಹುರಿಯಿರಿ. ಸತತವಾಗಿ ತಿರುವುತ್ತಲೇ ಇರಬೇಕು, ಇಲ್ಲದಿದ್ದರೆ ತಳದಲ್ಲಿರುವ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸುಟ್ಟು ರುಚಿ ಕಹಿಯಾಗುತ್ತದೆ.
*ಇನ್ನು ಅರೆದ ಟೊಮಾಟೋ ಹಾಕಿ ತಿರುವುದನ್ನು ಮುಂದುವರೆಸಿ. ಬಳಿಕ ಉಪ್ಪು ಹಾಕಿ
*ಟೊಮೇಟೊ ಬೆಂದಿದೆ ಎನ್ನಿಸಿದಾಗ (ಗುಳ್ಳೆಗಳು ಏಳುವುದು ಹೆಚ್ಚಾಗುತ್ತದೆ) ಹುರಿದ ಸೀಗಡಿಗಳನ್ನು ಹಾಕಿ ಮಸಾಲೆಯನ್ನು ಸೇರಿಸಿ
*ನಡುನಡುವೆ ಕೊಂಚ ತಿರುವುತ್ತಾ ಸುಮಾರು ಹತ್ತರಿಂದ ಹದಿನೈದು ನಿಮಿಷ ಬೇಯಿಸಿ. ಅನ್ನದೊಂದಿಗೆ ಸೇವಿಸುವುದಾದರೆ ನಿಮಗೆ ಬೇಕಾದ ಹದಕ್ಕೆ ನೀರು ಸೇರಿಸಿ.
*ಬಳಿಕ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಿಸಿಬಿಸಿಯಿದ್ದಂತೆಯೇ ಬಡಿಸಿ, ಮೆಚ್ಚುಗೆ ಗಳಿಸಿ. ಸ್ವಾದಿಷ್ಟಕರ ಸೀಗಡಿ ಮೀನಿನ ಕರಿ

ಸಲಹೆ:
*ಸೀಗಡಿಯನ್ನು ಸ್ವಚ್ಛಗೊಳಿಸುವಾಗ ಬೆನ್ನುಹುರಿಯನ್ನು ಪೂರ್ಣವಾಗಿ ತೆಗೆಯುವುದೇ ಕಷ್ಟಕರವಾದ ಕೆಲಸ. ಇದಕ್ಕಾಗಿ ಮರದ ಚೂಪಾದ ಟೂಥ್ ಪಿಕ್ ಬಳಸಿದರೆ ಈ ಕೆಲಸ ಸುಲಭವಾಗಿ ಆಗುತ್ತದೆ.
*ಒಂದು ವೇಳೆ ಈ ಹುರಿ ಮಧ್ಯೆ ತುಂಡಾದರೆ ಟೂಥ್ ಪಿಕ್‌ನಿಂದ ತುಂಡಾದ ಭಾಗದ ಮೇಲಿನ ಪೊರೆಯನ್ನು ಸೀಳಿ ತುಂಡಾದ ಹುರಿಯೊಳಗೆ ನುಗ್ಗಿಸಿ ಮೇಲಕ್ಕೆತ್ತಿ, ಉಳಿದ ಭಾಗ ಸುಲಭವಾಗಿ ಬರುತ್ತದೆ.
*ಈ ವಿಧಾನದಲ್ಲಿ ಒಣಮೆಣಸನ್ನು ಬಳಸಿರುವುದರಿಂದ ರಾತ್ರಿ ಊಟದಲ್ಲಿ ಸೇವಿಸಿದರೆ ಊಟದ ಬಳಿಕ ಮೊಸರನ್ನು ಅಥವಾ ಮಜ್ಜಿಗೆಯನ್ನು ಕಡ್ಡಾಯವಾಗಿ ಸೇವಿಸಿ, ಇಲ್ಲದಿದ್ದರೆ ಹೊಟ್ಟೆಯಲ್ಲಿ ಉರಿಯುಂಟಾಗಬಹುದು.

English summary

Spicy And Quick Prawn Curry Recipe

Today we shall teach you the best and easy recipe with sea food. Spicy prawn curry recipe can be prepared in no time. Prawn is a very good food to be included in the daily diet. Prawns are rich in protiens, vitamins and are also good for those who are aiming for weight loss as prawns are low in calories.Consuming prawns regularly is considered good for health..
Story first published: Wednesday, September 9, 2015, 11:34 [IST]
X
Desktop Bottom Promotion