For Quick Alerts
ALLOW NOTIFICATIONS  
For Daily Alerts

ರಂಜಾನ್ ಹಬ್ಬದ ಸ್ಪೆಷಲ್: ಗ್ರೀನ್ ಚಿಲ್ಲಿ ಚಿಕನ್ ರೆಸಿಪಿ

By Manu
|

ಚಂದ್ರನ ಚಲನೆಯನ್ನಾಧರಿಸಿದ ಮುಸ್ಲಿಂ ಕ್ಯಾಲೆಂಡರ್‌ನಲ್ಲಿ ಒಂಬತ್ತನೆಯ ತಿಂಗಳಾಗಿ ಬರುವ ರಂಜಾನ್ ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರವಾದ ಮಾಸವಾಗಿದೆ. ವಿಶ್ವದಾದ್ಯಂತ ಮುಸ್ಲಿಮರು ಈ ತಿಂಗಳಿಡೀ ಸೂರ್ಯೋದಯಕ್ಕಿಂತ ಒಂದೂವರೆ ಗಂಟೆ ಮೊದಲಿನಿಂದ ಹಿಡಿದು ಸೂರ್ಯಾಸ್ತಮಾನದ ಕ್ಷಣದ ವರೆಗೆ ಏನನ್ನೂ ತಿನ್ನದೇ ಅಥವಾ ಕುಡಿಯದೇ ಮತ್ತು ಮಾನಸಿಕವಾಗಿ ಯಾವ ಬಯಕೆಯನ್ನೂ ಬಯಸದೇ ದೇವರ ಧ್ಯಾನ, ಕುರಾನ್ ಪಠಣ, ಪ್ರಾರ್ಥನೆ ಮತ್ತು ಇತರ ವಿಧಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಉಪವಾಸ ಅಥವಾ ರೋಜಾವನ್ನು ಅನುಸರಿಸುತ್ತಾರೆ.
ಅಷ್ಟೇ ಏಕೆ..? ಎಲ್ಲಾ ಮನೆಗಳಲ್ಲಿ ಈ ತಿಂಗಳಿಡೀ ವಿಶೇಷ ಖಾದ್ಯಗಳು ತಯಾರಾಗುತ್ತವೆ. ಅತಿಥಿಗಳನ್ನು ಮನೆಗೆ ಆಹ್ವಾನಿಸುವ, ಎಲ್ಲರೂ ಒಟ್ಟಿಗೆ ಕುಳಿತು ಉಪವಾಸವನ್ನು ಸಂಪನ್ನಗೊಳಿಸುವ ಕ್ರಿಯೆ ಪ್ರತಿದಿನವನ್ನೂ ಹಬ್ಬದ ದಿನವನ್ನಾಗಿಸುತ್ತದೆ. ಸಂತೋಷ ಇಮ್ಮಡಿಸುತ್ತದೆ. ಅದರಲ್ಲೂ ಬಡಿಸಿದ ಖಾದ್ಯ ಅತಿಥಿಗಳು ತುಂಬಾ ಸ್ವಾದಿಷ್ಟವಾಗಿದೆ ಎಂದು ಹೊಗಳಿದರೆ ಅಡುಗೆ ಮಾಡಿದವರ ಮನ ಸಂತಸಗೊಳ್ಳುತ್ತದೆ. ರಂಜಾನಿನಲ್ಲಿ ಸಾಂಪ್ರಾದಾಯಿಕ ಅಡುಗೆಗಳಿಗೇ ಹೆಚ್ಚಿನ ಪ್ರಾಮುಖ್ಯತೆ ಇರುವುದಾದರೂ ಹೊಸರುಚಿಗೇನೂ ಕೊರತೆಯಿಲ್ಲ. ಆದರೆ ಹೊಸರುಚಿ ಹೇಗಿರುತ್ತದೆಯೋ ಎಂಬ ಆತಂಕವಂತೂ ಇದ್ದೇ ಇರುತ್ತದೆ.

Ramazan Special: Green Chilli Chicken Recipe

ಏಕೆಂದರೆ ಉಪವಾಸದ ಅವಧಿಯಲ್ಲಿ ರುಚಿ ಸಹಾ ನೋಡುವಂತಿಲ್ಲವಲ್ಲ! ಹೀಗಿರುವಾಗ ಸ್ವಾದಿಷ್ಟವಾಗಲೇಬೇಕು ಎಂಬ ನಂಬಿಕೆಯಿಂದ ಸುಲಭವಾಗಿ ತಯಾರಿಸಬಲ್ಲ ಕೆಲವು ಹೊಸರುಚಿಗಳಿಗೆ ಆದ್ಯತೆ ಬರುತ್ತದೆ. ಗ್ರೀನ್ ಚಿಲ್ಲಿ ಚಿಕನ್ ರೆಸಿಪಿಯು ಕೂಡ ಇಂತಹದ್ದೇ ಒಂದು ಸ್ವಾದಿಷ್ಟ ಅಡುಗೆಯಾಗಿದ್ದು ಅತಿಥಿಗಳ ಮೆಚ್ಚುಗೆಯನ್ನು ಪಡೆಯುವುದು ಖಚಿತವಾಗಿದೆ. ಆದರೆ, ಇದೇ ವೇಳೆಯಲ್ಲಿ ನೀವು ಒಂದು ವಿಷಯವನ್ನು ಗಮನಿಸಬೇಕು, ಈ ಖಾದ್ಯವನ್ನು ತಯಾರಿಸಲು ತುಂಬಾ ಹಸಿ ಮೆಣಸಿನಕಾಯಿಗಳನ್ನು ಬಳಸಲಾಗುತ್ತದೆ. ಅಪ್ಯಾಯಮಾನವಾದ ಹಸಿ ಮೆಣಸಿನಕಾಯಿಗಳ ಸುವಾಸನೆಯು ಈ ಗ್ರೀನ್ ಚಿಲ್ಲಿ ಚಿಕನ್ ಖಾದ್ಯವನ್ನು ಮೋಡಿ ಮಾಡುವ ಸ್ವಾದಕ್ಕೆ ತೆಗೆದುಕೊಂಡು ಹೋಗುತ್ತದೆ. ಹಾಗಾದರೆ ಬನ್ನಿ ಖಾರ ಮತ್ತು ಮಸಾಲೆಗಳಿಂದ ಕೂಡಿದ ಗ್ರೀನ್ ಚಿಲ್ಲಿ ಚಿಕನ್ ಖಾದ್ಯವನ್ನು ಮಾಡುವುದನ್ನು ತಿಳಿದುಕೊಳ್ಳೋಣ. ರಂಜಾನ್ ಸ್ಪೆಷೆಲ್-ಚಿಕನ್ ಹುಸೈನಿ

ಪ್ರಮಾಣ : ನಾಲ್ವರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ : 30 ನಿಮಿಷಗಳು
*ಅಡುಗೆಗೆ ತಗುಲುವ ಸಮಯ : 30 ನಿಮಿಷಗಳು

ಅಗತ್ಯವಾದ ಪದಾರ್ಥಗಳು
*ಕೋಳಿ ಮಾಂಸ - 1 ಕೆ.ಜಿ
*ಹಸಿ ಮೆಣಸಿನಕಾಯಿಗಳು- 1 ಕಪ್ (ಸಣ್ಣದು)
*ಈರುಳ್ಳಿ - 2 (ಸೀಳಾಗಿ ಕತ್ತರಿಸಿದಂತಹುದು)
*ಬೆಳ್ಳುಳ್ಳಿ - 10 ತುಂಡು
*ಶುಂಠಿ - 1 ಮಧ್ಯಮ ಗಾತ್ರದ್ದು
*ತಾಜಾ ಕೊತ್ತಂಬರಿ ಸೊಪ್ಪು - 1/2 ಕಪ್ (ಕತ್ತರಿಸಿದಂತಹುದು)
*ರುಚಿಗೆ ತಕ್ಕಷ್ಟು ಉಪ್ಪು
*ಅರಿಶಿನಪುಡಿ - 1 ಟೀ. ಚಮಚ
*ಕೊತ್ತೊಂಬರಿ ಪುಡಿ- 2 ಟೀ. ಚಮಚ
*ಜೀರಿಗೆ ಪುಡಿ- 1 ಟೀ. ಚಮಚ
*ಗರಂ ಮಸಾಲ ಪುಡಿ- 1ಟೀ. ಚಮಚ
*ಜೀರಿಗೆ - 1 ಟೀ. ಚಮಚ
*ಎಣ್ಣೆ- 3 ಟೀ. ಚಮಚ

ತಯಾರಿಸುವ ವಿಧಾನ
ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನಕಾಯಿಗಳನ್ನು ಸ್ವಲ್ಪ ನೀರು ಮತ್ತು ಉಪ್ಪಿನ ಜೊತೆಗೆ ಪೇಸ್ಟ್ ರೀತಿ ರುಬ್ಬಿಕೊಳ್ಳಿ.
*ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದುಕೊಳ್ಳಿ ಮತ್ತು ಅವುಗಳನ್ನು ಅರ್ಧ ಗಂಟೆಗಳ ಕಾಲ ಈ ಮಿಶ್ರಣದಲ್ಲಿ ನೆನೆಸಿ ಅಂದರೆ ಮೆರಿನೇಟ್ ಮಾಡಿ.
*ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ ಮತ್ತು ಅದರಲ್ಲಿ ಜೀರಿಗೆಯನ್ನು ಹಾಕಿ ಕೆಲ ನಿಮಿಷಗಳ ಕಾಲ ಉರಿಯಿರಿ.
*ಇದಕ್ಕೆ ಎಲ್ಲಾ ಹಸಿ ಮೆಣಸಿನ ಕಾಯಿಗಳನ್ನು ಹಾಕಿ, ಮೇಲೆ ಸ್ವಲ್ಪ ಉಪ್ಪು ಹಾಕಿ ಮತ್ತು ಮೆಣಸಿನಕಾಯಿಯ ಬಣ್ಣವು ಬದಲಾಗುವವರೆಗೆ ಉರಿಯಿರಿ.
*ಈಗ ಕೋಳಿ ಮಾಂಸವನ್ನು ಮಧ್ಯಮ ಗಾತ್ರದ ಉರಿಯಲ್ಲಿ 6-7 ನಿಮಿಷಗಳ ಕಾಲ ಉರಿಯಿರಿ.
*ನಂತರ ಇದಕ್ಕೆ ಕೊತ್ತೊಂಬರಿ ಪುಡಿ, ಉರಿದ ಜೀರಿಗೆ ಪುಡಿ, ಅರಿಶಿನ ಪುಡಿ ಮತ್ತು ಗರಂ ಮಸಾಲ ಪುಡಿಯನ್ನು ಹಾಕಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ, 3-4 ನಿಮಿಷಗಳ ಕಾಲ ಬೇಯಿಸಿ.
*ಈಗ ಕೋಳಿ ಮಾಂಸವಿರುವ ಪಾತ್ರೆಯನ್ನು ಒಂದು ಮುಚ್ಚಳದ ನೆರವಿನಿಂದ ಮುಚ್ಚಿ, ಕಡಿಮೆ ಉರಿಯಲ್ಲಿ 10-15 ನಿಮಿಷಗಳ ಕಾಲ ಬೇಯಿಸಿ. ಆಗಾಗ ಇದನ್ನು ತಿರುವಿ ಕೊಡಿ.
*ಇದೆಲ್ಲ ಮುಗಿದ ಮೇಲೆ, ಮುಚ್ಚಳವನ್ನು ತೆಗೆಯಿರಿ, ಉರಿಯನ್ನು ಆರಿಸಿ ಮತ್ತು ನಿಮ್ಮ ಮನೆ ಮಂದಿಗೆ ಬಡಿಸಿ. ಇದೀಗ ನಿಮ್ಮ ಮುಂದೆ ಖಾರವಾದ ಮತ್ತು ಮಸಾಲೆಯುತವಾದ ಗ್ರೀನ್ ಚಿಲ್ಲಿ ಚಿಕನ್ ರೆಸಿಪಿಯು ಸಿದ್ಧವಾಗಿದೆ. ಇದನ್ನು ಅನ್ನ ಮತ್ತು ರೋಟಿಗಳ ಜೊತೆಗೆ ಸವಿದು ಆನಂದಿಸಿ.

English summary

Ramazan Special: Green Chilli Chicken Recipe

The green chilli chicken recipe is one of a kind. It is a special treat for people who love to pair up chicken with chillies. And you just note that this recipe uses a lot of chillies in the preparation. The delectable aroma of the green chillies lend this chicken recipe its mindblowing flavour.
X
Desktop Bottom Promotion