For Quick Alerts
ALLOW NOTIFICATIONS  
For Daily Alerts

ರುಚಿಯಲ್ಲಿ ಅದ್ವಿತೀಯ ಅಫ್ಘಾನಿ ಚಿಕನ್ ಪಲಾವ್

By Arshad
|

ಅಫ್ಘಾನ್ ಎಂಬ ಹೆಸರು ಕೇಳಿದಾಕ್ಷಣ ನೆನಪಿಗೆ ಬರುವುದು ಅಫ್ಘಾನಿ ರೊಟ್ಟಿ ಮತ್ತು ಅಫ್ಘಾನಿ ಚಿಕನ್. ಎಣ್ಣೆಯ ಪಸೆಯಿಲ್ಲದೇ ದೊಡ್ಡ ಭಟ್ಟಿಯೊಳಗೆ ಬೇಯಿಸುವ ಭಾರೀ ಗಾತ್ರದ ರೊಟ್ಟಿ ನೋಡಿದಾಕ್ಷಣ ಹಸಿವು ಭುಗಿಲೇಳುತ್ತದೆ.

ಅಂತೆಯೇ ಅಫ್ಘಾನಿ ಚಿಕನ್ ಮತ್ತು ಪಲಾವ್‌ನ ಚಿತ್ರ ನೋಡಿದೊಡನೆಯೇ ಬಾಯಲ್ಲಿ ನೀರೂರುತ್ತದೆ. ಇದರ ವಿಶೇಷವೇನೆಂದರೆ ಕೋಳಿಮಾಂಸವನ್ನು ಪ್ರಧಾನ ಅಡುಗೆಯಲ್ಲಿ ಬಳಸುವ ಮುನ್ನವೇ ಕೆಲವು ಮಸಾಲೆಗಳೊಂದಿಗೆ ಬೇಯಿಸುವುದರಿಂದ ಕೋಳಿಮಾಂಸದಲ್ಲಿರುವ ಪೋಷಕಾಂಶಗಳನ್ನು ಗರಿಷ್ಟ ಮಟ್ಟದಲ್ಲಿ ಹಿಡಿದಿಡಬಹುದು.

ಈ ಪವಿತ್ರ ರಂಜಾನ್ ತಿಂಗಳ ಇಫ್ತಾರ್ ಅಥವಾ ಈದ್ ಆಚರಣೆಯ ಸಂದರ್ಭದಲ್ಲಿ ಮಧ್ಯಾಹ್ನದ ಅಥವಾ ರಾತ್ರಿಯ ಊಟಕ್ಕೆ ಅತಿಥಿಗಳಿಗೆ ಬಡಿಸುವ ಮೂಲಕ ಹಬ್ಬದ ಸಂತಸವನ್ನು ನೂರ್ಮಡಿಗೊಳಿಸಬಹುದು. ಕೋಳಿ ಮಾಂಸದ ಬದಲು ಕುರಿಮಾಂಸವನ್ನೂ ಬಳಸಬಹುದಾದುದರಿಂದ ಮನೆಯ ಎಲ್ಲಾ ಸದಸ್ಯರಿಗೆ ಈ ಖಾದ್ಯ ಇಷ್ಟವಾಗುವುದು ಖಂಡಿತ. ರುಚಿಕರವಾದ ಈ ಖಾದ್ಯವನ್ನು ತಯಾರಿಸುವ ಬಗೆಯನ್ನು ಇಲ್ಲಿ ನೀಡಲಾಗಿದೆ. ರಂಜಾನ್ ಸ್ಪೆಷಲ್: ಕಾಶ್ಮೀರ ಶೈಲಿಯ ಮಿರ್ಚಿ ಕುರ್ಮಾ!

Afghani Chicken Pulao Recipe

*ಪ್ರಮಾಣ: ಸುಮಾರು ಆರು ಜನರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಸುಮಾರು ಇಪ್ಪತ್ತು ನಿಮಿಷಗಳು
*ತಯಾರಿಕಾ ಸಮಯ: ಸುಮಾರು ಮೂವತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಕೋಳಿ ಮಾಂಸ: 1 ಕೇಜಿ (ಚರ್ಮರಹಿತವಾಗಿಸಿ ಮಧ್ಯಮ ಗಾತ್ರದ ತುಂಡುಗಳನ್ನಾಗಿಸಿದ್ದು)-ಚರ್ಬಿ ಇಲ್ಲದಿರುವಂತೆ ನೋಡಿಕೊಳ್ಳಿ
*ಟೊಮೇಟೊ: 3 (ಚಿಕ್ಕದಾಗಿ ಹೆಚ್ಚಿದ್ದು) ಮಧ್ಯಮ ಗಾತ್ರ
*ಅಕ್ಕಿ : 3 ಕಪ್ (ಬಾಸ್ಮತಿ, ಜೀರಿಗೆ ಸಾಲೆ ಅಥವಾ ಗಂಧಸಾಲೆ ಅಕ್ಕಿ)-ಚೆನ್ನಾಗಿ ತೊಳೆದು ನೀರು ಬಸಿದದ್ದು
*ಬೆಳ್ಳುಳ್ಳಿ: 4 -5 ಎಸಳು (ಜಜ್ಜಿದ್ದು)
*ಈರುಳ್ಳಿ: 3 (ಚಿಕ್ಕದಾಗಿ ಹೆಚ್ಚಿದ್ದು)
*ಹಸಿಶುಂಠಿ: 1 ಚಿಕ್ಕಚಮಚ (ಅರೆದದ್ದು)
*ಹಸಿರು ಏಲಕ್ಕಿ: 8
*ಧನಿಯ (ಕೊತ್ತಂಬರಿ ಕಾಳು): 1 ಚಿಕ್ಕ ಚಮಚ
*ಜೀರಿಗೆ: 1 ಚಿಕ್ಕ ಚಮಚ
*ಲವಂಗ: 1 ಚಿಕ್ಕ ಚಮಚ
*ಕೆಂಪು ಮೆಣಸಿನ ಪುಡಿ:1 ಚಿಕ್ಕ ಚಮಚ (ಕಾಶ್ಮೀರಿ ಚಿಲ್ಲಿ ಪೌಡರ್ ಆದರೆ ಉತ್ತಮ, 2 ಚಿಕ್ಕ ಚಮಚ)
*ದಾಲ್ಚಿನ್ನಿಯ ಚೆಕ್ಕೆ: 3 ಚಿಕ್ಕ ತುಂಡುಗಳು
*ಹಸಿಮೆಣಸು: 2 -3 (ಚಿಕ್ಕದಾಗಿ ಹೆಚ್ಚಿದ್ದು)
*ಬಿಸಿನೀರು: 5 ಕಪ್
*ಅಡುಗೆ ಎಣ್ಣೆ: 2 ದೊಡ್ಡ ಚಮಚ (ಆಲಿವ್,ಶೇಂಗಾ, ಸೂರ್ಯಕಾಂತಿ ಬಳಸಿ. ಪಾಮ್ ಎಣ್ಣೆ ಅಥವಾ ವನಸ್ಪತಿ ಬೇಡವೇ ಬೇಡ)
*ಕ್ಯಾರೆಟ್:1 (ಮಧ್ಯಮ ಗಾತ್ರದ್ದು) - ಚಿಕ್ಕದಾಗಿ ತುರಿದದ್ದು.
*ಒಣದ್ರಾಕ್ಷಿ: ½ ಕಪ್ (ಚಿಕ್ಕದಾಗಿ ಕತ್ತರಿಸಿದ್ದು)
ಉಪ್ಪು: ರುಚಿಗನುಸಾರ

ಪೂರ್ವತಯಾರಿಕೆ:
*) ಒಂದು ಅಗಲವಾದ ಪಾತ್ರೆಯಲ್ಲಿ ಕೋಳಿಮಾಂಸದ ತುಂಡುಗಳು ಮುಳುಗುವಷ್ಟು ನೀರು ಹಾಕಿ ಶುಂಠಿ, ಬೆಳ್ಳುಳ್ಳಿ, ಚೆಕ್ಕೆ, ಧನಿಯ, ಏಲಕ್ಕಿ ಮತ್ತು ಉಪ್ಪು ಹಾಕಿ ಸುಮಾರು ಮೂವತ್ತು ನಿಮಿಷಗಳವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ. ನಡುವೆ ನೀರು ಕಡಿಮೆಯಾಗಿದೆ ಎನಿಸಿದರೆ ಕೊಂಚ ಸೇರಿಸಬಹುದು.
*) ಈಗ ಕೋಳಿಮಾಂಸದ ತುಂಡುಗಳನ್ನು ಈ ನೀರಿನಿಂದ ಬೇರ್ಪಡಿಸಿ.
*) ಉಳಿದ ನೀರು ಸುಮಾರು ಐದು ಕಪ್ ಆಗುವಷ್ಟಿರಬೇಕು. ಒಂದು ವೇಳೆ ಇದಕ್ಕೂ ಹೆಚ್ಚಿದ್ದರೆ ಮತ್ತೊಮ್ಮೆ ಕುದಿಸಿ ಐದು ಕಪ್ ಆಗುವಂತೆ ಮಾಡಿಕೊಳ್ಳಿ. ಪ್ರಮುಖ ಖಾದ್ಯ ತಯಾರಿಕೆ:
*) ದಪ್ಪ ತಳದ ಮತ್ತು ಅಗಲವಾದ ಪಾತ್ರೆಯೊಂದನ್ನು (ಚಿಕ್ಕ ತೂತಿರುವ ಗಾಜಿನ ಮುಚ್ಚಳವಿರುವ ಪಾತ್ರೆ ಈ ಅಡುಗೆಗೆ ಅತಿ ಸೂಕ್ತವಾಗಿದೆ) ಮಧ್ಯಮ ಉರಿಯ ಮೇಲಿಟ್ಟು ಎಣ್ಣೆ ಹಾಕಿ ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವವರೆಗೆ ತಿರುವಿರಿ.
*) ಇದಕ್ಕೆ ಬೇಯಿಸಿದ ಕೋಳಿಮಾಂಸದ ತುಂಡುಗಳು, ಟೊಮೇಟೊ, ಹಸಿಮೆಣಸು, ಮೆಣಸಿನ ಪುಡಿ, ಜೀರಿಗೆ ಹಾಕಿ ಕೋಳಿಮಾಂಸ ಎಲ್ಲಾ ಬದಿಗಳಲ್ಲಿ ಕೊಂಚಕೊಂಚವಾಗಿ ಕಂದು ಬಣ್ಣ ಬರುವಷ್ಟು ಹುರಿಯಿರಿ.
*) ಈಗ ಕೋಳಿಮಾಂಸ ಸೋಸಿದ ಐದು ಕಪ್ ನೀರು ಸೇರಿಸಿ ಕೂಡಲೇ ಅಕ್ಕಿ ಹಾಕಿ. ನಯವಾಗಿ ಇದನ್ನು ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ.
*) ಗಂಧಸಾಲೆ ಅಕ್ಕಿಯಾದರೆ ಒಂದೆರಡು ನಿಮಿಷದಲ್ಲಿಯೇ ಸುಮಾರು ಮುಕ್ಕಾಲು ಪಾಲು ಬೇಯುತ್ತದೆ. ಬಾಸ್ಮತಿ ಸುಮಾರು ಐದು ನಿಮಿಷ ತೆಗೆದುಕೊಳ್ಳುತ್ತದೆ. ಅಕ್ಕಿ ಸುಮಾರು ಮುಕ್ಕಾಲು ಪಾಲು ಬೆಂದಿರುವಂತೆ ಅನ್ನಿಸಿದಾಕ್ಷಣ ಉರಿಯನ್ನು ಚಿಕ್ಕದಾಗಿಸಿ ಒಂದು ಬಾರಿ ನಯವಾಗಿ ತಿರುವಿ ಮತ್ತೊಮ್ಮೆ ಮುಚ್ಚಳ ಮುಚ್ಚಿ.
*) ಅಕ್ಕಿಯ ಮೇಲಿನಿಂದ ಕೊಂಚ ಹಬೆ ಬಂದಂತೆ ಅನ್ನಿಸಿದ ಬಳಿಕ (ಅಂದರೆ ಅಕ್ಕಿ ಪೂರ್ಣವಾಗಿ ಬೆಂದಿದೆ ಎಂದು ಖಾತರಿಪಡಿಸಿಕೊಂಡು) ಉರಿಯನ್ನು ನಂದಿಸಿ
*) ಇದರ ಮೇಲೆ ತುರಿದ ಕ್ಯಾರೆಟ್ ಮತ್ತು ಒಣದ್ರಾಕ್ಷಿಯನ್ನು ಒಂದು ಸುಂದರವಾದ ವಿನ್ಯಾಸದಲ್ಲಿ ಹರಡಿ.
*) ಬಿಸಿಬಿಸಿಯಿರುವಂತೆಯೇ ಅತಿಥಿಗಳಿಗೆ ಬಡಿಸಿ, ಮೆಚ್ಚುಗೆ ಗಳಿಸಿ.

ಸಲಹೆ:
ಸೌತೆಕಾಯಿ ಹೆಚ್ಚಿ ಮೊಸರು ಹಾಕಿ ತಯಾರಿಸಿದ ಕೋಸಂಬರಿ ಇದರೊಂದಿಗೆ ಉತ್ತಮ ಹೊಂದಾಣಿಕೆಯಾಗುತ್ತದೆ.

English summary

Afghani Chicken Pulao Recipe

This is one of the most tasty pulao recipes and is easy to prepare. As the name indicates it is a dish from Afghanistan. The chicken in this recipe is boiled with spices first so that it retains all the flavours of the spices. You can relish this dish at iftar dinner time.Here is a simple method of preparation for the Afghani chicken pulao recipe.
X
Desktop Bottom Promotion