For Quick Alerts
ALLOW NOTIFICATIONS  
For Daily Alerts

ಘಮಘಮಿಸುವ ಚಿಕನ್ ಕರಿ: ಬರೀ 20 ನಿಮಿಷ ಸಾಕು!

By Arshad
|

ಅನಿರೀಕ್ಷಿತವಾಗಿ ಮನೆಗೆ ಸ್ನೇಹಿತರು ಆಗಮಿಸಿದ್ದಾರೆ, ಅವರಿಗೆ ಹೆಚ್ಚಿನ ಸಮಯವಿಲ್ಲ, ಬೇಗನೇ ಹೊರಡಬೇಕು. ಒಳ್ಳೆಯ ಊಟ ಹಾಕಿಸದೇ ಕಳುಹಿಸುವುದು ನಮ್ಮ ಭಾರತೀಯ ಸಂಪ್ರದಾಯಕ್ಕೆ ಸಲ್ಲದು. ಬೇಗನೇ ಮಾಡಲು ಸಾಧ್ಯವಿರುವುದು ಚಿತ್ರಾನ್ನ, ಆದರೆ ಅಪರೂಪದ ಅತಿಥಿಗಳಿಗೆ ಚಿಕನ್ ಬಿಟ್ಟು ಚಿತ್ರಾನ್ನ ತಿನ್ನಿಸಲು ಮನಸ್ಸು ಬಾರದು. ಈ ಪರಿಸ್ಥಿತಿಯಲ್ಲಿಯೂ ಥಟ್ಟನೇ ಕೋಳಿ ಸಾರು ಮಾಡಿ ಬಡಿಸಬಹುದು!

ಹೌದು, ಕೇವಲ ಇಪ್ಪತ್ತು ನಿಮಿಷಗಳಲ್ಲಿಯೇ ಸಿದ್ಧಪಡಿಸಬಹುದಾದ ಈ ಸುಲಭ ಕೋಳಿ ಸಾರು ಅತ್ಯಂತ ರುಚಿಕರ ಮಾತ್ರವಲ್ಲ, ಕಡಿಮೆ ಕೊಬ್ಬು ಇರುವುದರಿಂದ ತೂಕ ಹೆಚ್ಚಿಸಿಕೊಳ್ಳಲಿಚ್ಛಿಸದವರಿಗೂ ಅಪ್ಯಾಯಮಾನವಾಗಿದೆ. ದಕ್ಷಿಣ ಭಾರತೀಯರಿಗೆ ಅನ್ನ ಚಪಾತಿ ಬಿಟ್ಟು ಬೇರೆಲ್ಲಾ ವ್ಯಂಜನಗಳಲ್ಲಿ ಕೊಂಚ ಖಾರ ಮತ್ತು ಮಸಾಲೆ ಬೇಕೇ ಬೇಕು.

ಅದರಲ್ಲೂ ಭಾನುವಾರ ಮತ್ತು ರಜಾದಿನಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಖಾರಖಾರವಾಗಿರುವ ವಿವಿಧ ಭಕ್ಷಗಳನ್ನು ಹೆಚ್ಚಾಗಿ ಅಪೇಕ್ಷಿಸುತ್ತಾರೆ. ಈ ಅಗತ್ಯವನ್ನು ಮನಗಂಡು ಈ ವಿಧಾನದಲ್ಲಿ ಹಸಿಮೆಣಸು ಮತ್ತು ಒಣಮೆಣಸಿನ ಪುಡಿಯನ್ನು ಬಳಸಲಾಗಿದ್ದರೂ ಅತಿ ಖಾರವೂ ಅಲ್ಲದ, ನಾಲಿಗೆಯ ಮೇಲೇ ಕರಗುವ ಮಸಾಲೆ ಎಲ್ಲರ ಮನಗೆಲ್ಲುವುದು ಖಚಿತ. ಒಂದು ವೇಳೆ ಖಾರ ಹೆಚ್ಚಾಯಿತು ಅನ್ನಿಸಿದರೆ ಸ್ವಲ್ಪ ಜೇನು ಸೇರಿಸಿದರೆ ಖಾರ ಕಡಿಮೆಯಾಗಿ ರುಚಿ ಇನ್ನಷ್ಟು ಹೆಚ್ಚುವುದರಿಂದ ಮಕ್ಕಳಿಂದ ಹಿರಿಯರವರೆಗೆ ಎಲ್ಲರ ಮನಗೆಲ್ಲುವ ಈ ವಿಧಾನವನ್ನು ಅಲ್ಪ ಸಮಯದಲ್ಲಿಯೇ ಸಿದ್ಧಪಡಿಸಬಹುದು. ಚಪಾತಿ, ಅನ್ನ, ಟೊಮೇಟೊ ಅನ್ನ, ಘೀ ರೈಸ್ ಮೊದಲಾದ ಇತರ ಅಡುಗೆಗಳ ಜೊತೆಗೇ ಈ ಸಾರನ್ನು ಬಡಿಸಬಹುದು. ಕುಕ್ಕರ್ ಬಳಸಿರುವ ಕಾರಣ ಪೋಷಕಾಂಶಗಳು ನಷ್ಟವಾಗುವ ಸಂಭವವೂ ಕಡಿಮೆ. ಅಸದಳ ರುಚಿ ನೀಡುವ ದೊಣ್ಣೆ ಮೆಣಸಿನ ಚಿಕನ್ ಕರಿ ರೆಸಿಪಿ

20 Minute Chicken Curry Recipe

ಪ್ರಮಾಣ: ಮೂವರಿಗೆ ಸಾಕಾಗುವಷ್ಟು
ಸಿದ್ಧತಾ ಅವಧಿ: ಹತ್ತು ನಿಮಿಷಗಳು
ತಯಾರಿಕಾ ಅವಧಿ: ಇಪ್ಪತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಚರ್ಮ ತೆಗೆದ ಕೋಳಿ ಮಾಂಸ: 500ಗ್ರಾಂ (ಮಧ್ಯಮ ಗಾತ್ರದ ತುಂಡುಗಳು)
*ಈರುಳ್ಳಿ (ಸಣ್ಣದಾಗಿ ಹೆಚ್ಚಿದ್ದು)- 5 (ಮಧ್ಯಮ ಗಾತ್ರದ್ದು)
*ಟೊಮೇಟೊ (ಸಣ್ಣದಾಗಿ ತುಂಡು ಮಾಡಿದ್ದು)- 3 (ಮಧ್ಯಮ ಗಾತ್ರದ್ದು)
*ಹಸಿಮೆಣಸು - 1 (ಅಡ್ಡಲಾಗಿ ಚಿಕ್ಕ ಚಿಕ್ಕದಾಗಿ ತುಂಡು ಮಾಡಿದ್ದು)
*ಆಲುಗಡ್ಡೆ -2 (ಸಿಪ್ಪೆ ಸುಲಿದು ಚಿಕ್ಕ ಘನಾಕೃತಿಯಲ್ಲಿ ಕತ್ತರಿಸಿದ್ದು)
*ದಾಲ್ಚಿನ್ನಿ - 2 ಚೆಕ್ಕೆ
*ಲವಂಗ - 2
*ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ -1 ½ ದೊಡ್ಡಚಮಚ
*ಒಣಮೆಣಸಿನ ಪುಡಿ- 1 ದೊಡ್ಡಚಮಚ (ಕಾಶ್ಮೀರಿ ಚಿಲ್ಲಿ ಪೌಡರ್ ಇದ್ದರೆ ಉತ್ತಮ, ಇದ್ದರೆ 2 ದೊಡ್ಡಚಮಚ)
*ಅರಿಶಿನ ಪುಡಿ - 1 ಚಿಕ್ಕಚಮಚ
*ಉಪ್ಪು - ರುಚಿಗನುಸಾರ
*ನೀರು - ಒಂದು ಕಪ್
*ಅಡುಗೆ ಎಣ್ಣೆ - 3 ದೊಡ್ಡಚಮಚ (ಮೆಕ್ಕೆ ಜೋಳ, ಸೂರ್ಯಕಾಂತಿ, ನೆಲಗಡಲೆ ಅಥವಾ ಕ್ಯಾನೋಲಾ ಎಣ್ಣೆ ಉತ್ತಮ. ಪಾಮ್ ಆಯಿಲ್, ವನಸ್ಪತಿ ಬೇಡ)

ವಿಧಾನ:
*ಕುಕ್ಕರ್ ಅನ್ನು ಮಂದ ಉರಿಯ ಒಲೆಯ ಮೇಲಿಟ್ಟು ನೀರು ಆವಿಯಾದ ಬಳಿಕ ಮೂರು ದೊಡ್ಡಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆಯೇ ದಾಲ್ಚಿನ್ನಿ ಮತ್ತು ಲವಂಗ ಹಾಕಿ ಕೊಂಚ ಹುರಿಯಿರಿ.
*ಈಗ ಹೆಚ್ಚಿದ ನೀರುಳ್ಳಿ ಹಾಕಿ ಕೊಂಚ ಹುರಿಯಿರಿ. ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುತ್ತಿದ್ದಂತೆಯೇ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ತಿರುವುತ್ತಾ ಇರಿ. ಈರುಳ್ಳಿ ಕಂದು ಬಣ್ಣ ಬರುವವರೆಗೂ ತಿರುವುತ್ತಾ ಇರಿ.
*ಇನ್ನು ಹೆಚ್ಚಿದ ಟೊಮೇಟೊ ಮತ್ತು ಹಸಿಮೆಣಸನ್ನು ಸೇರಿಸಿ, ಅಲ್ಲದೆ ಟೊಮೇಟೊ ನೀರು ಬಿಡುವವರೆಗೂ ತಿರುವುತ್ತಾ ಇರಿ.
*ಬಳಿಕ ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ತಿರುವುದನ್ನು ಮುಂದುವರೆಸಿ. ಸುಮಾರು ಆರು ನಿಮಿಷಗಳವರೆಗೆ ತಿರುವುದನ್ನು ಮುಂದುವರೆಸಿ. ಮಸಾಲೆಯಿಂದ ಎಣ್ಣೆ ಹೊರಬಂದ ಕೂಡಲೇ ಕೋಳಿಮಾಂಸ ಮತ್ತು ಒಂದು ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
*ಕೂಡಲೇ ಕುಕ್ಕರಿನ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ. ಉರಿಯನ್ನು ಕೊಂಚ ಹೆಚ್ಚಿಸಿ. ಈಗಲೇ ಸೀಟಿ ಹಾಕಬೇಡಿ. ನಿಧಾನವಾಗಿ ಹಬೆ ಹೊರಬರುವುದು ಕಂಡ ಕೂಡಲೇ ಸೀಟಿಯನ್ನು ಹಾಕಿ ಸುಮಾರು ಐದರಿಂದ ಆರು ಸೀಟಿ ಬರುವವರೆಗೆ ಬೇಯಿಸಿ.
*ಬಳಿಕ ಕುಕ್ಕರಿನ ಸೀಟಿಯ ಮೇಲೆ ತಣ್ಣೀರು ಸುರಿಯುವಂತೆ ನಲ್ಲಿಯ ಕೆಳಗಿಟ್ಟು ಒತ್ತಡ ಕಡಿಮೆಯಾದ ಬಳಿಕ ಸೀಟಿ ತೆಗೆದು ಕುಕ್ಕರನ್ನು ಪುನಃ ಒಲೆಯ ಮೇಲಿಡಿ.
*ತದನಂತರ ಆಲುಗಡ್ಡೆಯ ತುಂಡುಗಳನ್ನು ಹಾಕಿ ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಗಾಢವಾಗುವಷ್ಟು ನೀರು ಸೇರಿಸಿ ಮುಚ್ಚಳ ಮುಚ್ಚಿ ಪುನಃ ಬೇಯಿಸಿ. (ಉರಿ ಮಧ್ಯಮ ಇರಲಿ) ಆಲುಗಡ್ಡೆ ಚಿಕ್ಕ ತುಂಡುಗಳಾಗಿದ್ದರೆ ಬೇಗನೇ ಬೇಯುತ್ತದೆ. ದೊಡ್ಡ ತುಂಡುಗಳಾದರೆ ಕೊಂಚ ಹೆಚ್ಚಿನ ಸಮಯ ಹಿಡಿಯುತ್ತದೆ. ಆಲುಗಡ್ಡೆ ಬೆಂದ ಬಳಿಕ ರುಚಿಕರ ಚಿಕನ್ ಕರಿ ಸಿದ್ಧ.

ಆರೋಗ್ಯಕರ ಅಂಶಗಳು:
ಕೋಳಿ ಮಾಂಸದಲ್ಲಿ ಪ್ರೋಟೀನ್ ಹೇರಳವಾಗಿರುವುದರಿಂದ ಆರೋಗ್ಯಕ್ಕೆ ಉತ್ತಮವಾಗಿದೆ. ತೂಕ ಕಳೆದುಕೊಳ್ಳಲಿಚ್ಛಿಸುವವರಿಗೂ ಇದು ಉತ್ತಮ ಆಹಾರವಾಗಿದೆ.

ವಿಶೇಷ ಟಿಪ್ಪಣಿ:
ಕುಕ್ಕರ್‌ನಲ್ಲಿ ಕೋಳಿ ಮಾಂಸ ಸೇರಿಸಿದ ಬಳಿಕ ಅತಿ ಹೆಚ್ಚು ನೀರನ್ನು ಹಾಕಬೇಡಿ. ಕೋಳಿಮಾಂಸ ಕುಕ್ಕರಿನೊಳಗೆ ಕಡಿಮೆ ನೀರಿನಲ್ಲಿಯೂ ಸುಲಭವಾಗಿ ಬೇಯುತ್ತದೆ.

English summary

20 Minute Chicken Curry Recipe

In South India chicken curries have always been a treat on Sundays in every home. Chicken is a lean meat loved by dieters as well as the elderly. The soft tender meat is juicy in nature which is why when the spices are added the taste is enhanced to something that is truly out of the world.
X
Desktop Bottom Promotion