For Quick Alerts
ALLOW NOTIFICATIONS  
For Daily Alerts

ಹೊಸ ರುಚಿ: ದೇಹದ ತೂಕ ಇಳಿಸುವ 'ಸೂಪ್' ರೆಸಿಪಿ...

ತೂಕ ಇಳಿಸಿಕೊಳ್ಳುವವರಿಗೆ ಇಲ್ಲಿದೆ ನೋಡಿ ಸಿಹಿ ಸುದ್ದಿ....! ಹಸಿರು ಬಟಾಣಿ ಹಾಗೂ ಪುದೀನಾ ಹಾಕಿ ಮಾಡಿದ ಸೂಪ್ ದಿನಿತ್ಯ ಕುಡಿದರೆ, ಕೆಲವೇ ದಿನಗಳಲ್ಲಿ ನಿಮ್ಮ ದೇಹದ ತೂಕ ಕಡಿಮೆಯಾಗಲಿದೆ...

By Arshad
|

ಒಂದು ವೇಳೆ ನೀವು ತೂಕ ಇಳಿಸುವ ಹುನ್ನಾರದಲ್ಲಿದ್ದು ಹಲವಾರು ರುಚಿಕರ ಆಹಾರಗಳಿಗೆ ಗುಡ್ ಬೈ ಹೇಳಿದ್ದರೆ ಈ ಲೇಖನ ನಿಮಗಾಗಿದೆ. ಸಾಮಾನ್ಯವಾಗಿ ತೂಕ ಇಳಿಸುವವರಿಗೆ ಎದುರಾಗುವ ಪ್ರಬಲ ಸಮಸ್ಯೆ ಎಂದರೆ ಯಾವುದೇ ಆಹಾರ ಕಣ್ಣಿಗೆ ಕಂಡರೆ ತಿನ್ನುವ ಮನಸ್ಸಾಗುವುದು. ದುರ್ಬಲ ಕ್ಷಣವೊಂದರಲ್ಲಿ ಆಹಾರವನ್ನು ಸೇವಿಸುವ ಮೂಲಕ ನಿಮ್ಮ ಹಿಂದಿನ ದಿನಗಳ ಶ್ರಮವೆಲ್ಲಾ ವ್ಯರ್ಥವಾಗುತ್ತದೆ.

ಈ ತೊಂದರೆ ನೀವೂ ಎದುರಿಸಿದ್ದರೆ ನಿಮಗೆ ಅಗತ್ಯವಾಗಿ ಬೇಕಾಗಿರುವುದು ಹಸಿವಿನ ಭಾವನೆಯನ್ನು ಹೆಚ್ಚಿನ ಹೊತ್ತು ಮೂಡಿಸದೇ ಇರುವಂತಹ, ಹೆಚ್ಚಿನ ಕ್ಯಾಲೋರಿಗಳನ್ನು ದೇಹಕ್ಕೆ ಸೇರಿಸದ ಆಹಾರಗಳು. ಈ ಅಗತ್ಯತೆಯನ್ನು ಪೂರೈಸಲು ಹಸಿರು ಬಟಾಣಿ ಮತ್ತು ಪುದೀನಾ ಸೂಪ್ ಅತ್ಯಂತ ಪ್ರಶಸ್ತ ಆಯ್ಕೆಯಾಗಿದೆ. ಇವೆರಡೂ ಅತ್ಯಂತ ಆರೋಗ್ಯಕರ ಆಹಾರಗಳಾಗಿದ್ದು ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟದ ಮುನ್ನ ಸೇವಿಸಬಹುದು. ತೂಕ ಇಳಿಸಿಕೊಳ್ಳಬೇಕೇ? ಎಲೆಕೋಸು ಸೂಪ್ ಕುಡಿಯಿರಿ

ಬರೆಯ ತೂಕ ಇಳಿಸುವವರಿಗೆ ಮಾತ್ರವೇ ಈ ಸೂಪ್ ಎಂದರೆ ತಪ್ಪಾಗುತ್ತದೆ. ಇದು ಮನೆಯ ಚಿಕ್ಕ ಔತಣ, ಮನೆಗೆ ಬಂದಿರುವ ಅತಿಥಿಗಳ ಸತ್ಕಾರಕ್ಕೂ ಸೂಕ್ತವಾಗಿದೆ. ಇದರಲ್ಲಿ ಹೆಚ್ಚಿನ ನಾರು ಮತ್ತು ಕಡಿಮೆ ಕೊಲೆಸ್ಟ್ರಾಲ್ ಇರುವ ಕಾರಣ ಎಲ್ಲಾ ವಯಸ್ಸಿನವರೂ ಇಷ್ಟಪಡುವಂತಹದ್ದಾಗಿದ್ದು ನಿಮ್ಮ ಅಡುಗೆಯನ್ನು ಮೆಚ್ಚದೇ ಇರಲು ಕಾರಣವೇ ಉಳಿಯುವುದಿಲ್ಲ. ಬನ್ನಿ, ಸುಲಭವಾಗಿ ತಯಾರಿಸಲು ಸಾಧ್ಯವಾದ ಈ ಸೂಪ್ ಮಾಡುವುದು ಹೇಗೆ ಎಂಬುದನ್ನು ನೋಡೋಣ....

ಪ್ರಮಾಣ:

ನಾಲ್ವರಿಗೆ ಸಾಕಾಗುವಷ್ಟು*ಸಿದ್ದತಾ ಸಮಯ: ಹತ್ತುನಿಮಿಷಗಳು*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು..

ಅಗತ್ಯವಿರುವ ಸಾಮಾಗ್ರಿಗಳು

1. ಹಸಿರು ಬಟಾಣಿ - 2 ಕಪ್2. ಬೆಣ್ಣೆ - 1 ಚಿಕ್ಕ ಚಮಚ3. ಉಪ್ಪು ರುಚಿಗನುಸಾರ4. ನೀರು - 2 ಕಪ್5. ಈರುಳ್ಳಿ- ¼ ಕಪ್ (ಚಿಕ್ಕದಾಗಿ ಹೆಚ್ಚಿದ್ದು)6. ಹಾಲು - ½ ಕಪ್7. ತಾಜಾ ಪುದೀನಾ ಎಲೆಗಳು - 1 ದೊಡ್ಡ ಚಮಚ (ಚಿಕ್ಕದಾಗಿ ಹೆಚ್ಚಿದ್ದು)8. ಕಾಳು ಮೆಣಸಿನ ಪುಡಿ- ½ ಚಿಕ್ಕ ಚಮಚ (ಕಾಳುಗಳನ್ನು ಕುಟ್ಟಿ ಪುಡಿ ಮಾಡಿದ್ದು) ಎಲ್ಲಾ ಸಾಮಾಗ್ರಿಗಳು ಸಾಮಾನ್ಯವಾಗಿ ಮನೆಯಲ್ಲಿ ಸದಾ ಲಭ್ಯವಿರುವಂತಹದ್ದೇ ಆಗಿವೆ.

ತಯಾರಿಕಾ ವಿಧಾನ

1. ಒಂದು ಬಾಣಲೆಯನ್ನು ಮಧ್ಯಮ ಉರಿಯಲ್ಲಿ ಬಿಸಿಮಾಡಿ ಬೆಣ್ಣೆ ಸೇರಿಸಿ. ಬೆಣ್ಣೆ ಕರಗಿದ ತಕ್ಷಣ ಈರುಳ್ಳಿ ಹಾಕಿ ಕೊಂಚ ಕಂದು ಬಣ್ಣ ಬರುವವರೆಗೆ ಹುರಿಯಿರಿ

2. ಈಗ, ಬಟಾಣಿ ಮತ್ತು ನೀರು ಹಾಕಿ, ಉಪ್ಪು ಬೆರೆಸಿ ಕುದಿಯಲು ಬಿಡಿ

3. ಕೊಂಚ ಹೊತ್ತಿನ ಬಳಿಕ ಬಟಾಣಿಗಳು ಬೆಂದಿವೆಯೇ ಎಂದು ಗಮನಿಸಿ. ಬೆಂದ ಬಳಿಕ ಪಾತ್ರೆಯನ್ನು ಬದಿಗಿಟ್ಟು ತಣಿಯಲು ಬಿಡಿ. ತಣಿದ ಬಳಿಕ ಇದನ್ನು ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಹಾಕಿ ಕಡೆಯಿರಿ. ಈಗ ಬಟಾಣಿ ಪ್ಯೂರಿ ಸಿದ್ಧವಾಗಿದೆ.

4. ಈಗ ಇನ್ನೊಂದು ಪಾತ್ರೆಯಲ್ಲಿ ಕೊಂಚ ನೀರು, ಹಾಲು ಮತ್ತು ಬಟಾಣಿ ಪ್ಯೂರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕಾಳುಮೆಣಸಿನ ಪುಡಿ, ಪುದೀನಾ ಸೇರಿಸಿ ಮಿಶ್ರಣ ಮಾಡಿ. ಬಳಿಕ ಈ ಪಾತ್ರೆಯನ್ನು ಇನ್ನೂ ಕೆಲವು ನಿಮಿಷಗಳ ಕಾಲ ಕುದಿಸಿ. ನಿಮ್ಮ ಸೂಪ್ ಸವಿಯಲು ಸಿದ್ಧವಾಗಿದೆ.

5. ಬಿಸಿ ಇರುವಂತೆಯೇ ಸುಂದರ ಬೋಗುಣಿಗಳಲ್ಲಿ ಬಡಿಸಿ.ಈ ಸೂಪ್ ಅನ್ನು ಬಿಸಿ ಇರುವಂತೆಯೇ ರಸ್ಕ್ ಅಥವಾ ಬ್ರೆಡ್ ಕಡ್ಡಿಗಳನ್ನು ಮುಳುಗಿಸಿ ತಿನ್ನಲು ತುಂಬಾ ರುಚಿಕರವಾಗಿದ್ದು ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ.

ಈ ಸೂಪ್ ನಿಂದ ತೂಕ ಏರುವ ಯಾವುದೇ ಭಯವಿಲ್ಲವಾದುದರಿಂದ ಸ್ಥೂಲದೇಹಿಗಳೂ ಅನುಮಾನವಿಲ್ಲದೇ ಸೇವಿಸಬಹುದು.

English summary

Green Peas And Mint Soup Recipe

Green peas and mint soup which is very filling. Both the ingredients are very healthy. Read to know how to prepare this healthy soup recipe.
X
Desktop Bottom Promotion