For Quick Alerts
ALLOW NOTIFICATIONS  
For Daily Alerts

ಕೆಮ್ಮು ನೆಗಡಿಗೆ ರಾಮಬಾಣ ಒಣ ಶುಂಠಿ ಕಷಾಯ

By * ನಿವೇದಿತಾ
|
Dry ginger is good for caugh and cold
ಮಳೆಗಾಲವೇ ಆಗಲಿ, ಚಳಿಗಾಲವೇ ಆಗಲಿ ಕೆಮ್ಮು ಮತ್ತು ನೆಗಡಿಗಳು ಪ್ರತಿಮನೆಯಲ್ಲೂ ಬಯಸದೆ ಬರುವ ಅತಿಥಿಗಳು. ಈ ಅತಿಥಿಗಳ ತಿಥಿ ಮಾಡುವ ಉಪಾಯ ಒಂದೇ ಅದು, ಒಣ ಶುಂಠಿ ಕಷಾಯ. ಬಿಸಿಯಿರುವಾಗಲೇ ದಿನಕ್ಕೆರಡು ಬಾರಿ ಹೀರಿದರೆ ಮೂರು ದಿನಗಳಲ್ಲಿ ಕೆಮ್ಮು ಕಮ್ಮಿಯಾಗಿರುತ್ತದೆ, ನೆಗಡಿ ಗಡಿಬಿಡಿಯಿಂದ ಮಾಯವಾಗಿರುತ್ತದೆ.

ಬೇಕಾದ ಪದಾರ್ಥಗಳು : ಒಣ ಶುಂಠಿ - ಕಿರುಬೆರಳಿನಷ್ಟು | ಕರಿ ಮೆಣಸು, ಜೀರಿಗೆ, ಕೊತ್ತಂಬರಿ ಬೀಜ (ಹವೀಜ) ಒಂದೊಂದು ಚಮಚ | ಒಂದು ನಿಂಬೆ ಹಣ್ಣು | ಉಪ್ಪು ಮತ್ತು ತುಣುಕು ಬೆಲ್ಲ | ಕೆಂಪು ಕಲ್ಲುಸಕ್ಕರೆ (ಬೇಕಿದ್ದರೆ).

ತಯಾರಿಸುವ ವಿಧಾನ :

ಒಣ ಶುಂಠಿಯನ್ನು ತುಂಡು ಮಾಡಿ ಅಥವಾ ಜಜ್ಜಿಕೊಳ್ಳಿ. ಕರಿಮೆಣಸು, ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ಪತ್ಯೇಕವಾಗಿ ಹುರಿದಿಟ್ಟುಕೊಂಡು ಅದಕ್ಕೆ ಒಣ ಶುಂಠಿ ಹಾಕಿ ಒರಳು ಕಲ್ಲಿನಲ್ಲಿ ನುಣ್ಣಗೆ ಪುಡಿಮಾಡಿಟ್ಟುಕೊಳ್ಳಿ. ನಗರಗಳಲ್ಲಿ ಜನರು ಅಪಾರ್ಟ್ ಮೆಂಟ್ ಸೇರಿಕೊಂಡಿರುವುದರಿಂದ ಒರಳು ಕಲ್ಲಿರುವುದು ಅನುಮಾನವೇ. ಆದ್ದರಿಂದ ಮಿಕ್ಸಿ ಉಪಯೋಗಿಸಿ ಪರವಾಗಿಲ್ಲ. ಈ ಪುಡಿ ಮಾಡಿಟ್ಟುಕೊಂಡ ಮಿಶ್ರಣವನ್ನು ಬಾಟಲಲ್ಲಿ ತೆಗೆದಿಟ್ಟುಕೊಂಡು ಯಾವಾಗ ಬೇಕೆಂದಾಗ ಕಷಾಯ ತಯಾರಿಸಲು ಉಪಯೋಗಿಸಬಹುದು.

ಸ್ಟೌ ಮೇಲೆ ನಾಲ್ಕು ಕಪ್ಪಿನಷ್ಟು ನೀರಿಟ್ಟು ಕುದಿಸಿ. ನೀರು ಕುದಿಯುತ್ತಿರುವಾಗಲೇ ನಿಂಬೆ ಹಣ್ಣಿನ ರಸ, ಉಪ್ಪು, ಪುಡಿ ಮಾಡಿದ ಬೆಲ್ಲ ಮತ್ತು ಮೇಲೆ ತಯಾರಿಸಿಕೊಂಡ ಪುಡಿಯನ್ನು ಹಾಕಿ ಮತ್ತು ಹತ್ತು ನಿಮಿಷ ಕುದಿಸಿ. ಶುಂಠಿ ಕಷಾಯ ಸಿಹಿಯಾಗಿರಬೇಕಿದ್ದರೆ ಕುದಿಸುವಾಗ ಕೆಂಪು ಕಲ್ಲುಸಕ್ಕರೆ ಸೇರಿಸಬಹುದು. ಕುದಿಸಿ ಇಳಿಸಿದ ನಂತರ ಸೋಸಿಕೊಂಡು ಬಿಸಿಯಿರುವಾಗಲೇ ಹಾಲು ಸೇರಿಸಿ ಅಥವಾ ಹಾಲು ಸೇರಿಸದೆಯೇ ಕುಡಿಯಿರಿ.

ಈ ಒಣ ಶುಂಠಿ ಕಷಾಯ ನೆಗಡಿಗೆ ರಾಮಬಾಣ. ಇದಕ್ಕೆ ಉತ್ತರ ಕರ್ನಾಟಕದಲ್ಲಿ ಅಲ್ಲಾ ಕಾಡೆ ಅಂತಲೂ ಕರೆಯುತ್ತಾರೆ. ಬಿಸಿಯಿರುವಾಗಲೇ ದಿನಕ್ಕೆರಡು ಬಾರಿ ಹೀರಿದರೆ ನೆಗಡಿ ಗಡಿಬಿಡಿಯಿಂದ ಮಾಯವಾಗಿರುತ್ತದೆ. ಇದಕ್ಕೆ ಒಂದು ಕಡ್ಡಿಯಷ್ಟು ಜೇಷ್ಠಮಧುವನ್ನು ಸೇರಿಸಿ ಕುದಿಸಿದರೆ ಕೆಮ್ಮು ಕೂಡ ಕಡಿಮೆಯಾಗುತ್ತದೆ. ಕೆಮ್ಮು ಮತ್ತು ನೆಗಡಿಗಾಗಿ ಔಷಧಿಗಳನ್ನು ತೆಗೆದುಕೊಳ್ಳುವ ಬದಲು ಈ ಕಷಾಯವನ್ನು ಅವಲಂಬಿಸುವುದು ಉತ್ತಮ, ಏನಂತೀರಿ?

Story first published: Thursday, September 16, 2010, 15:03 [IST]
X
Desktop Bottom Promotion