For Quick Alerts
ALLOW NOTIFICATIONS  
For Daily Alerts

ಸುರ್ರ್ರ್ ಸವಿಯಲು ಬೇಕಾ ಮೈಸೂರು ಪಾಕ

By Super
|
South Indian Sweet Dish Mysore Pak
ಬಾಯಲ್ಲಿಟ್ಟರೆ ಕರಗುವ ಮೈಸೂರು ಪಾಕಿಗೂ ಅರಮನೆಯ ನಗರಿ ಮೈಸೂರಿಗೂ ಸಂಬಂಧವೇ ಇಲ್ಲ ಎನ್ನುವವರಿದ್ದಾರೆ. ತುಪ್ಪದಲ್ಲಿ ತೊಯ್ದ ಈ ಸಿಹಿತಿನಿಸು ಮೈಸೂರಲ್ಲಿ ಹುಟ್ಟಿರದಿದ್ದರೆ ಮೈಸೂರು ಹೆಸರು ಇದಕ್ಕೆ ಅಂಟಿಕೊಂಡಿದ್ದಾದರೂ ಹೇಗೆ ಅಂತ ವಾದ ಮಂಡಿಸುತ್ತಾರೆ ಸಿಂಗಪುರದ ವಾಣಿ ರಾಮದಾಸ್ ಅವರು. ಏನೇ ಆಗಲಿ, ವಾದವಿವಾದಗಳಲ್ಲಿ ಕಾಲಹರಣ ಮಾಡಿ ಮೈಸೂರು ಪಾಕಿನ ಸವಿಯನ್ನು ಸವಿಯಲು ಮರೆಯಬೇಡಿ. ಜೊತೆಗೆ ಮೈಸೂರು ಪಾಕಿನ ಇತಿಹಾಸವನ್ನೂ ಮೆಲುಕುಹಾಕಿಕೊಳ್ಳಿ.

ಅದುವೆ ಕನ್ನಡದಲ್ಲಿ ಮೈಸೂರು ದಸರಾ ಸಂಭ್ರಮದ ವರದಿಯೊಂದಿಗೆ ಮೈಸೂರು ಸಾರು , ಹುಳಿ , ಬೋಂಡ ಎಲ್ಲಾ ಉಣಿಸಿದ್ದು ಆಯಿತು. ಸರ್ವಂ ಮೈಸೂರು ಮಯಂ. ದಸರಾ ಪ್ರಯುಕ್ತ ಮೈಸೂರ್‌ಪಾಕ್ ಬರುತ್ತೆ ಅಂತ ಕಾಯ್ತಾ ಇದ್ದೆ. ಮೈಸೂರಿನ ಹೆಸರೇ ಸೂಚಿಸುವ ಸಿಹಿ ತಿನಿಸು ಇದು, ಅದೇ ಮಿಸ್. ದಸರಾ ಸಮಾಪ್ತಿಗೆ ಮೊದಲು ಈ ಸಿಹಿ ಪಾಕದ ಸವಿ ಸವಿಯದಿದ್ದರೆ ಹೇಗೇ? ಧಿಡೀರ್ ತಯಾರಿಸಬಹುದಾದ ಈ ಸಿಹಿಯ ಬಗ್ಗೆ ನಾನೂ ಧಿಡೀರ್ ಎಂದು ಅಂತರ್ಜಾಲದಲ್ಲಿ ಮಾಹಿತಿ ಸಂಗ್ರಹಿಸಿ ಇಳಿಸಿದೆ ಈ ಮೈಸೂರು ಪಾಕದ ಇತಿಹಾಸವನ್ನು.

ಆಹಾ ಮೈಸೂರು ಮಲ್ಲಿಗೆ, ದುಂಡು ಮಲ್ಲಿಗೆ, ನೀನೇ ತುಂಬಿರುವೆ ಎಂಬುದು ಮಲ್ಲಿಗೆಯೊಂದಕ್ಕೇ ಅನ್ವಯಿಸುವುದಿಲ್ಲ.. ಮೈಸೂರ್ ಸಿಲ್ಕ್ ಸೀರೆ, ಮಾರುದ್ದ ಮಲ್ಲಿಗೆ, ಶ್ರೀಗಂಧ, ಚಿಗುರೆಲೆ, ಬದನೆಕಾಯಿ, ಬಾಳೆ ಹಣ್ಣು, ಸೆಟ್‌ದೋಸೆ, ಗರಿಮುರಿ ಮೈಲಾರಿ ಮಸಾಲೆ ದೋಸೆ, ಫಲಾಮೃತ... ಇಷ್ಟೇ ಅಲ್ಲ ಬಾಯಲ್ಲಿಟ್ಟರೆ ಕರಗುವ "ಗುರು ಸ್ವೀಟ್ಸ್ ನ ಮೈಸೂರ್ ಪಾಕ್‌ಗೂ ಅನ್ವಯ. ಕಡಲೆಹಿಟ್ಟು-ಸಕ್ಕರೆಯ ಪಾಕ ಎಲ್ಲೆಡೆಯಲ್ಲಿ ದೊರೆತರೂ ಹೆಸರು ಮಾತ್ರ "ಮೈಸೂರು ಪಾಕ".

ಮೈಸೂರ್ ಪಾಕಿಗೆ 90 ವರ್ಷಗಳ ಒಂದು ಇತಿಹಾಸವೇ ಇದೆ. ರೇಷ್ಮೆ, ಮಲ್ಲಿಗೆ, ಬಾಳೆ, ಚಿಗುರೆಲೆ, ಬದನೆಯ ಹಾಗೆ ಇದು ಕೂಡ ಜನಜನಿತ. ಮೈಸೂರ್ ಪಾಕ್ ಮೂಲ ಮೈಸೂರಿನ ಮಹಾರಾಜರ ಅರಮನೆಯ ರೆಸಿಪಿ. ಈ ಸಿಹಿಯ ಕರ್ತೃ ಅರಮನೆಯ ಮುಖ್ಯ ಬಾಣಸಿಗ ಮಾದಪ್ಪ. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮಾದಪ್ಪನ ಕೈ ಅಡುಗೆ, ತರ ತರಾವರಿ ತಿಂಡಿ, ಹೊಸ ರುಚಿ ಮಹಾರಾಜರಿಗೆ ಬಲು ಪ್ರಿಯ. ಹೊಸರುಚಿಯ ಪ್ರಯತ್ನದಲ್ಲಿ ಒಮ್ಮೆ ಸಕ್ಕರೆ, ತುಪ್ಪದೊಂದಿಗೆ ಕಡಲೆ ಹಿಟ್ಟು ಬೆರೆಸಿ, ಮಂದ ಉರಿಯಲ್ಲಿ ಕದಡುತ್ತಿದ್ದಂತೆ ಏನು ಪ್ರಯತ್ನಿಸುತ್ತಿದ್ದೀರೊ ಅದನ್ನು ಬಡಿಸಿ ಎಂದು ರಾಜರ ಅಪ್ಪಣೆಯಾಯಿತಂತೆ. ಬಾಯಲಿಟ್ಟ ಕೂಡಲೇ ಕರಗಿದ ಈ ಸಿಹಿಯನ್ನು ಸವಿದ ರಾಜರು, ಏನಿದರ ಹೆಸರು ಎಂದಾಗ ತಬ್ಬಿಬ್ಬಾದ ಮಾದಪ್ಪ ಮಹಾಸ್ವಾಮಿ ಇದು "ಮೈಸೂರು ಪಾಕ" ಎಂದು ತೊದಲಿದರಂತೆ.

ಬಹಳ ರುಚಿಯಾಗಿದೆ ಎಂದು ಸವಿದ ಮಹಾರಾಜರು ಈ ಸಿಹಿಯನ್ನು ಸಾಮಾನ್ಯರೂ ಸವಿಯುವಂತೆ, ದೊರೆಯುವಂತೆ ಮಾಡಲು ಅಪ್ಪಣೆ ಇತ್ತರಂತೆ. ರಾಜಾಜ್ಞೆ ಮನ್ನಿಸಿದ ಮಾದಪ್ಪ ಅಶೋಕ ರಸ್ತೆಯಲ್ಲಿ ದೇಶೀಕೇಂದ್ರ ಎಂದು ಎಂದು ಮೈಸೂರ್‌ ಪಾಕ್ ಅಂಗಡಿ ತೆರೆದನಂತೆ. ಅಂದು ರೂಪುಗೊಂಡ ಮೈಸೂರು ಪಾಕ ಇಂದು ಹಬ್ಬ, ಹರಿದಿನಗಳಲ್ಲಿ, ಎಲ್ಲೆಡೆಯಲ್ಲಿ ದೊರಕುವ ಸಿಹಿ ತಿನಿಸು. ನಂತರ ಮಾದಪ್ಪನವರ ಮಗ ಬಸವಣ್ಣ (1957ರಲ್ಲಿ) ಸಯ್ಯಾಜಿರಾವ್ ರಸ್ತೆಯ, ದೇವರಾಜ ಮಾರುಕಟ್ಟೆಯ ಗುರು ಸ್ವೀಟ್ ಮಾರ್ಟ್ ಅಂಗಡಿ ತೆರೆದರು. ಇದು ಮೈಸೂರು ಪಾಕ ನಡೆದು ಬಂದ ದಾರಿ.

ಗುರುರಾಜ ಸ್ವೀಟ್ ಸ್ಟಾಲ್ ಇರುವುದು ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ. ಮೈಸೂರಿನ ಸಯ್ಯಾಜಿ ರಾವ್ ರಸ್ತೆಯ ಉದ್ದಗಲಕ್ಕೂ ಚಾಚಿಕೊಂಡಿರುವ ದೇವರಾಜ ಮಾರ್ಕೆಟ್ ಮೈಸೂರಿನ ಮಹಾರಾಜರಾಗಿದ್ದ ಚಿಕ್ಕದೇವರಾಜ ಒಡೆಯರ್ ಅವರ ಕಾಲದಲ್ಲಿ ಕಟ್ಟಿದ್ದು. ಸುಮಾರು ನೂರ ಹತ್ತು ವರುಷ ಇತಿಹಾಸ ಹೊಂದಿರುವ ಮಾದರಿ ಮಾರುಕಟ್ಟೆ. ಹಣ್ಣುಗಳ ಮಳಿಗೆ, ಬಾಳೆಹಣ್ಣು ಮಂಡಿ, ಹೂವಿನ ಅಂಗಡಿಗಳು, ಬೆಲ್ಲದುಂಡೆಗಳ ಸಾಲು, ವೀಳೆಯದೆಲೆ ಮಳಿಗೆ ಎಂದು ಎಲ್ಲೆಂದರಲ್ಲಿ ಕಸ ಪಸರಿಸದೆ ಎಲ್ಲಕ್ಕೂ ವಿವಿಧ ಮಳಿಗೆಗಳನ್ನು ಒಳಗೊಂಡ ಸುವ್ಯವಸ್ಥಿತವಾದ ಮಾದರಿ ಮಾರುಕಟ್ಟೆ.

ಆ ಮಾರುಕಟ್ಟೆಗೂ ಪ್ರತಿಯೋರ್ವ ಮೈಸೂರಿಗರಿಗೂ ಇದೆ ಭಾವನಾತ್ಮಕ ನಂಟು, ಬಾಲ್ಯ ಸಂಬಂಧದ ಒಂದು ಕೊಂಡಿ. ನನ್ನ ಅಣ್ಣ (ತಂದೆಯವರು) ಕೈಯಲ್ಲಿ ಬ್ಯಾಗ್ ಹಿಡಿದು ಚಪ್ಪಲಿ ಮೆಟ್ಟುತ್ತಿದ್ದಂತೆಯೇ ಅವರು ಮಾರ್ಕೆಟ್ ಹೊರಟರು ಎಂಬುದನ್ನು ಅರಿತು ಬಸವನ ಹಿಂದೆ ಬಾಲ ಎಂಬಂತೆ ಕೈ ಹಿಡಿದು ಓಡುತ್ತಿದ್ದೆವು. ಮುಖ್ಯ ಆಕರ್ಷಣೆ ಗುರು ಸ್ವೀಟ್ಸ್‌ನಲ್ಲಿ ಕೊಡಿಸುತ್ತಿದ್ದ ಮೈಸೂರು ಪಾಕ್, ಅಲ್ಲೇ ಸ್ಟ್ರಾ ಹಾಕಿ ಸುರ್ ಎಂದು ಕುಡಿಯುತ್ತಿದ್ದ ಎಳನೀರು - ಮತ್ತೆ ಕೊಡಿಸುತ್ತಿದ್ದ ನಾಲ್ಕಾರು ಪ್ಯಾಕೆಟ್‌ಗಳ ಬ್ರಹ್ಮಾಚಾರಿ (ಖರ್ಜೂರ, ಗೋಡಂಬಿ, ದ್ರಾಕ್ಷಿ, ಕಲ್ಲುಸಕ್ಕರೆಗಳ ಮಿಶ್ರಣ, ಬ್ರಹ್ಮಚಾರಿ ಹೆಸರೇಕೆ ಎನ್ನುತ್ತಿದ್ದೆವೋ ತಿಳಿಯದು). ಕವಳಿಗೆ ಲೆಕ್ಕದಲ್ಲಿ ತರುತ್ತಿದ್ದ ಚಿಗುರೆಲೆ, ಮಾರು ಲೆಕ್ಕದಲ್ಲಿ ತರುತ್ತಿದ್ದ ಮೈಸೂರು ಮಲ್ಲಿಗೆ, ಇವೆಲ್ಲಕ್ಕಿಂತ ಹೆಚ್ಚಾಗಿ "ನಾನೂ ಅಣ್ಣನ ಜೊತೆ ಮಾರ್ಕೆಟ್ಟಿಗೆ ಹೋಗಿದ್ದೆ" ಎಂದು ಎಲ್ಲರೆದುರಿಗೆ ಕೊಚ್ಚಿಕೊಳ್ಳುತ್ತಿದ್ದ ಆತ್ಮತೃಪ್ತಿ.

ಗುರು ಸ್ವೀಟ್ಸ್ ನ ಮೈಸೂರ್‌ಪಾಕ್ ಹೇಗೆ ಫೇಮಸ್ಸೋ ಹಾಗೆಯೇ ಬೆಂಗಳೂರಿನ ಬಳೇಪೇಟೆಯ ಶ್ರೀ ವೆಂಕಟೇಶ್ವರ ಸ್ವೀಟ್ ಮೀಟ್ ಸ್ಟಾಲ್ ಮೈಸೂರ್‌ಪಾಕ್ ಸವಿಯೂ ಬಲು ಫೇಮಸ್. ಚಿಕ್ಕಬಳ್ಳಾಪುರದ ವಿ.ಎ. ಶೆಟ್ಟಿ ತಮ್ಮ 16ನೇ ವಯಸ್ಸಿನಲ್ಲಿ ಮೈಸೂರ್‌ಪಾಕ್ ರೆಸಿಪಿ ಕಲಿತು ಹಳ್ಳಿಯ ಹಬ್ಬ, ಜಾತ್ರೆಗಳಲಿ ಇದನ್ನು ಮಾರುತ್ತಿದ್ದರಂತೆ. ಅದರಲ್ಲಿ ಬಂದ ಹಣದಿಂದ ಬೆಂಗಳೂರಿನತ್ತ ಪಯಣ. 1954ರಲ್ಲಿ ರಂಗಸ್ವಾಮಿ ಟೆಂಪಲ್ ಸ್ಟ್ರೀಟಿನಲ್ಲಿ ಶ್ರೀವೆಂಕಟೇಶ್ವರ ಸ್ವೀಟ್ ಮೀಟ್ ಸ್ಟಾಲ್ ಇಟ್ಟರು. ನಂತರ 1972ರಲ್ಲಿ ಈಗಿರುವ ಬಳೆಪೇಟೆಗೆ ಸ್ಥಳಾಂತರಿಸಲಾಯಿತಂತೆ.

ಕಡಲೆ ಹಿಟ್ಟು, ಸಕ್ಕರೆ-ತುಪ್ಪಗಳ ಮಿಶ್ರಣ ಮೈಸೂರ್‌ಪಾಕ್ ಇದೆಯಲ್ಲ ಮಾಡಿದಾಕ್ಷಣ ಅದು ಎಲ್ಲರಿಗೂ ಬಲು ಸುಲಭವಾಗಿ ಒಲಿಯತಕ್ಕದ್ದಲ್ಲ. ನಾನು ಎರಡು ಬಾರಿ ಮಾತ್ರ ಟ್ರೈ ಮಾಡಿದ್ದು ಒಮ್ಮೆ ಗಟ್ಟಿ, ಮತ್ತೊಮ್ಮೆ ಅದಕ್ಕೆ ಸುರಿದ ತುಪ್ಪ ಬುಳ-ಬುಳನೆ ತುಪ್ಪ ಪಾಕ್ ಎನಿಸಿತು. ದ್ವಿ ಪ್ರಯತ್ನಕ್ಕೇ ಶರಣು ಹೊಡೆದು ಮೊರೆಹೊಕ್ಕೆ ಗುರು-ಶ್ರೀವೆಂಕಟೇಶ್ವರರರಿಗೆ. ನನ್ನಂತೆ ನಿಮಗೂ ಮೈಸೂರುಪಾಕು ತಿನ್ನಬೇಕು ಎನಿಸಿದಲ್ಲಿ ಇತಿಹಾಸ ನೆನೆಯಿರಿ ಗುರು ವೆಂಕಟೇಶ್ವರರ ಮೊರೆಹೊಕ್ಕಿರಿ, ಮೈಸೂರು ಪಾಕು ಸವಿಯಿರಿ.

English summary

Evolution of South Indian Dish Mysore Pak - ಸುರ್ರ್ರ್ ಸವಿಯಲು ಬೇಕಾ ಮೈಸೂರು ಪಾಕ

History of south indian sweet dish Mysore Pak. History of mysore pak by Vani Ramdas of Singapore. ಬಾಯಲ್ಲಿಟ್ಟರೆ ಕರಗುವ ಮೈಸೂರರಸರ ಕಾಲದಲ್ಲಿ ಮೈದಳೆದ ಮೈಸೂರು ಪಾಕ ಇತಿಹಾಸ.
X
Desktop Bottom Promotion