For Quick Alerts
ALLOW NOTIFICATIONS  
For Daily Alerts

ಮಸಾಲ ಓಟ್ಸ್ ರೆಸಿಪಿ-ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

By Arshad
|

ಉಪ್ಪಿಟ್ಟು ತಿಂದೂ ತಿಂದೂ ಬೇಸರವಾಗಿದೆಯೇ? ಆದರೆ ಬೇರೆ ತಿಂಡಿಗಳನ್ನು ಉಪ್ಪಿಟ್ಟಿನಷ್ಟು ಬೇಗ ತಯಾರಿಸಲು ಸಾಧ್ಯವಿಲ್ಲವೆಂದು ಅನಿವಾರ್ಯವಾಗಿ ಇಷ್ಟವಿಲ್ಲದ ತಿಂಡಿಯನ್ನೇ ತಿನ್ನುತ್ತಿದ್ದೀರಾ? ಇಲ್ಲಿದೆ ಉಪ್ಪಿಟ್ಟಿನಷ್ಟೇ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಹೊಸರುಚಿ-ಮಸಾಲಾ ಓಟ್ಸ್. ಮಾರುಕಟ್ಟೆಯಲ್ಲಿ ಸಿದ್ಧರೂಪದಲ್ಲಿಯೂ ಈಗ ಮಸಾಲ ಓಟ್ಸ್ ಲಭ್ಯವಿದೆ. ಆದರೆ ಯಾವುದೇ ಸಿದ್ಧರೂಪದ ತಿಂಡಿಯಲ್ಲಿರುವ ಸಂರಕ್ಷಕಗಳು ಆರೋಗ್ಯಕ್ಕೆ ಉತ್ತಮವಲ್ಲದಿರುವುದರಿಂದ ಇದಕ್ಕಿಂತಲೂ ರುಚಿಯಾದ ಮಸಾಲಾ ಓಟ್ಸ್ ಅನ್ನು ಮನೆಯಲ್ಲಿಯೇ ತಯಾರಿಸಬಹುದು.

ಓಟ್ಸ್ ನಲ್ಲಿರುವ ಪೋಷಕಾಂಶಗಳು ಇದನ್ನು ಉಪ್ಪಿಟ್ಟಿಗಿಂತಲೂ ಹೆಚ್ಚು ಸ್ವಾದಿಷ್ಟ ಮತ್ತು ಹೆಚ್ಚು ಆರೋಗ್ಯಕರ ಉಪಾಹಾರವನ್ನಾಗಿಸಿವೆ. ಅಲ್ಲದೇ ಇದಕ್ಕೆ ಬಳಸಲಾಗುವ ಮಸಾಲೆಗಳೂ ಮನೆಯಲ್ಲಿಯೇ ಕುಟ್ಟಿ ತಯಾರಿಸಿದರೆ ಇದಕ್ಕಿಂತ ಆರೋಗ್ಯಕರ ಆಹಾರ ಇನ್ನೊಂದಿರಲಾರದು. ಬನ್ನಿ, ರುಚಿಕರ ಮಸಾಲ ಓಟ್ಸ್ ಮಾಡುವ ಬಗೆಯನ್ನು ನೋಡೋಣ: ಅಡುಗೆ ಮನೆಯಲ್ಲಿ ಅರಳಿದ ಘಮ್ಮೆನ್ನುವ ಓಟ್ಸ್ ಇಡ್ಲಿ

ಪ್ರಮಾಣ: ಇಬ್ಬರಿಗೆ, ಒಂದು ಹೊತ್ತಿಗಾಗಿ
*ಸಿದ್ಧತಾ ಸಮಯ: ಹತ್ತು ನಿಮಿಷಗಳು
*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು

Homemade Masala Oats For Breakfast

ಅಗತ್ಯವಿರುವ ಸಾಮಾಗ್ರಿಗಳು:
*ಓಟ್ಸ್ - ಎರಡು ಕಪ್
*ಈರುಳ್ಳಿ: ಅರ್ಧ (ಮಧ್ಯಮಗಾತ್ರ, ಚಿಕ್ಕದಾಗಿ ಹೆಚ್ಚಿದ್ದು)
*ಶುಂಠಿ ಬೆಳ್ಳುಳ್ಳಿ ಪೇಸ್ಟ್ -ಒಂದು ಚಿಕ್ಕ ಚಮಚ
*ಸಾಸಿವೆ- ½ ಚಿಕ್ಕ ಚಮಚ
*ಕರಿಬೇವಿನ ಎಲೆಗಳು - 4
*ಹಸಿಮೆಣಸು 2 (ಚಿಕ್ಕದಾಗಿ ಹೆಚ್ಚಿದ್ದು)
*ಟೊಮೇಟೊ - 1 (ಮಧ್ಯಮಗಾತ್ರ, ಚಿಕ್ಕದಾಗಿ ಕತ್ತರಿಸಿದ್ದು)
*ಅರಿಶಿನ- 1 ಚಿಟಿಕೆ
*ಗರಂ ಮಸಾಲಾ ಪುಡಿ- 1 ಚಿಕ್ಕ ಚಮಚ (ಚೆಕ್ಕೆ, ಲವಂಗ, ಕಾಳುಮೆಣಸು, ದೊಡ್ಡ ಏಲಕ್ಕಿ, ದಾಲ್ಚಿನ್ನಿ ಎಲೆ ಮೊದಲಾದವುಗಳನ್ನು ಕುಟ್ಟಿ ಪುಡಿಮಾಡಿಕೊಳ್ಳಿ)
*ಕ್ಯಾರೆಟ್ - 100 ಗ್ರಾಂ (ಚಿಕ್ಕದಾಗಿ ತುರಿದದ್ದು)
*ಬೀನ್ಸ್ - 100 ಗ್ರಾಂ (ಚಿಕ್ಕದಾಗಿ ತುರಿದದ್ದು)
*ದೊಡ್ಡಮೆಣಸು - ½ (ಚಿಕ್ಕದಾಗಿ ತುರಿದದ್ದು)
*ಎಣ್ಣೆ - ಒಂದು ದೊಡ್ಡಚಮಚ
*ಉಪ್ಪು - ರುಚಿಗನುಸಾರ
*ಕೊತ್ತಂಬರಿ ಸೊಪ್ಪು - ಅರ್ಧ ಕಟ್ಟು, ಚಿಕ್ಕದಾಗಿ ಹೆಚ್ಚಿದ್ದು.

ವಿಧಾನ:
1) ಪ್ರೆಶರ್ ಕುಕ್ಕರ್ ನಲ್ಲಿ ಕೊಂಚ ಉಪ್ಪು ಮತ್ತು ನೀರಿನೊಂದಿಗೆ ತುರಿದ ತರಕಾರಿಗಳನ್ನು ಹಾಕಿ ಒಂದು ಸೀಟಿ ಬಂದಾಕ್ಷಣ ಇಳಿಸಿ ಮುಚ್ಚಳ ತೆರೆದಿಡಿ. ತರಕಾರಿಗಳನ್ನು ಬಸಿದು ಉಳಿದ ನೀರಿನಲ್ಲಿ ಓಟ್ಸ್ ಹಾಕಿ ನೆನೆಸಿಡಿ. ಬೆಂದ ತರಕಾರಿಗಳನ್ನು ಇನ್ನೊಂದು ಪಾತ್ರೆಯಲ್ಲಿಡಿ.
2) ಒಂದು ಪಾತ್ರೆ ಅಥವಾ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಬಳಿಕ ಸಾಸಿವೆ, ಬೇವಿನ ಎಲೆ ಮತ್ತು ಹಸಿಮೆಣಸು ಹಾಕಿ ಬಿಸಿಮಾಡಿ.
3) ಬಳಿಕ ಈರುಳ್ಳಿ ಹಾಕಿ ಚಿಕ್ಕ ಉರಿಯಲ್ಲಿ ಸುಮಾರು ಮೂರು ನಿಮಿಷಗಳವರೆಗೆ ಬಾಡಿಸಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಇನ್ನೂ ಸುಮಾರು ಎರಡರಿಂದ ಮೂರು ನಿಮಿಷಗಳ ಕಾಲ ತಿರುವಿ.
4) ಇದಕ್ಕೆ ಟೊಮೇಟೊ, ಉಪ್ಪು, ಅರಿಶಿನ ಮತ್ತು ಗರಂ ಮಸಾಲೆ ಪುಡಿಗಳನ್ನು ಹಾಕಿ. ಬಳಿಕ ಪ್ರೆಶರ್ ಕುಕ್ಕರಿನಲ್ಲಿ ಬೇಯಿಸಿದ್ದ ತರಕಾರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
5) ಚಿಕ್ಕ ಉರಿಯಲ್ಲಿಯೇ ತರಕಾರಿಗಳು ಚೆನ್ನಾಗಿ ಮಿಶ್ರಣವಾಗುವಂತೆ ತಿರುವಿ. ಬಳಿಕ ನೆನೆಸಿಟ್ಟ ಓಟ್ಸ್ ಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
6) ಒಂದು ಅಥವಾ ಎರಡು ನಿಮಿಷಗಳವರೆಗೆ ಮುಚ್ಚಳ ಮುಚ್ಚಿ ಬೇಯಿಸಿ.
7) ಬಳಿಕ ಉರಿ ನಂದಿಸಿ ಕೆಳಗಿಳಿಸಿದ ಬಳಿಕ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿ. ಬಿಸಿಬಿಸಿಯಿರುವಂತೆಯೇ ಬಡಿಸಿ.

ಸಲಹೆ:
*ಕುದಿಸುವ ಮೊದಲು ಕೊಂಚ ಕಾಯಿತುರಿಯನ್ನು ಹಾಕಿದರೆ ಇನ್ನೂ ರುಚಿಯಾಗುತ್ತದೆ.
*ಮೊದಲೇ ಹುರಿದಿಟ್ಟ ಶೇಂಗಾಬೀಜಗಳನ್ನು ಈರುಳ್ಳಿ ಬೆಂದ ಬಳಿಕ ಸೇರಿಸಿದರೂ ತಿನ್ನಲು ರುಚಿಕರವಾಗಿರುತ್ತದೆ.
*ತೂಕ ಇಳಿಸುವವರಿಗೂ ಈ ಉಪಾಹಾರ ಸೂಕ್ತವಾಗಿದೆ.
*ಸಕ್ಕರೆ ಇಲ್ಲದೇ ಇರುವುದರಿಂದ ಮಧುಮೇಹಿಗಳೂ ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು. (ಆದರೆ ಕಾಯಿತುರಿ ಇಲ್ಲದ್ದು)

English summary

Homemade Masala Oats For Breakfast

The concept of masala oats is not new. You can see many companies advertising ready-to-eat masala oats these days. However, it does not seem healthy to eat something that obviously contains preservatives.Masala oats for breakfast is a very healthy option. The Indian masala oats is more like a tasty upma than average oats porridge.
Story first published: Saturday, October 3, 2015, 11:50 [IST]
X
Desktop Bottom Promotion