For Quick Alerts
ALLOW NOTIFICATIONS  
For Daily Alerts

ಆಹಾ, ಬಿಸಿ ಬಿಸಿಯಾದ ಸೆಟ್ ದೋಸೆ ರೆಸಿಪಿ

By Arshad
|

ದಕ್ಷಿಣ ಭಾರತೀಯ ತಿಂಡಿಗಳಲ್ಲಿ ಹೆಸರುವಾಸಿಯಾದುದೆಂದರೆ ಮಸಾಲೆ ದೋಸೆ. ಇದಕ್ಕೆ ಪ್ರತಿಸ್ಪರ್ಧೆ ನೀಡುವ ಇತರ ತಿಂಡಿಗಳೆಂದರೆ ಇಡ್ಲಿ ಮತ್ತು ಸೆಟ್ ದೋಸೆ. ಸಾಮಾನ್ಯವಾಗಿ ಸೆಟ್ ದೋಸೆಯಲ್ಲಿ ಮಸಾಲೆ ಇಲ್ಲದಿರುವುದರಿಂದ ಕೊಂಚ ಅಗ್ಗವಾಗಿದ್ದು ಬಡವರ ಆದ್ಯತೆಯ ತಿಂಡಿಯೂ ಆಗಿದೆ. ಅಲ್ಲದೇ ಇದರಲ್ಲಿ ಮೂರು ದೋಸೆಗಳನ್ನು ನೀಡಲಾಗುವುದರಿಂದ ಒಂದು ಹೊತ್ತಿನ ಊಟಕ್ಕೆ ಸಮನಾದ ಆಹಾರ ಲಭ್ಯವಾಗುತ್ತದೆ.

ಮಸಾಲೆ ದೋಸೆಗಿಂತಲೂ ಸೆಟ್ ದೋಸೆ ಚಿಕ್ಕದಾಗಿದ್ದರೂ ಈ ದೋಸೆ ದಪ್ಪನೆಯ ಸ್ಪಂಜಿನಂತಿರುವುದು ವಿಶಿಷ್ಟ ಸ್ವಾದ ಮತ್ತು ಅನುಭವ ನೀಡುತ್ತದೆ. ಇದಕ್ಕೆ ಇದರಲ್ಲಿರುವ ಅವಲಕ್ಕಿಯೇ ಕಾರಣ. ಮಸಾಲೆ ದೋಸೆಯಂತೆ ಈ ದೋಸೆಗೆ ಹೆಚ್ಚಿನ ಎಣ್ಣೆ ಬಳಸುವ ಅಗತ್ಯವೇ ಇಲ್ಲ. ಕೇವಲ ಕಾವಲಿಗೆ ಅಂಟಿಕೊಳ್ಳದಂತೆ ತೆಳುವಾಗಿ ಸವರಿದರೆ ಸಾಕು. ಹಾಗಾಗಿ ಇದು ಇಡ್ಲಿಯಂತೆ ಮೆದುವಾಗಿಯೂ ಎಣ್ಣೆಯಿಲ್ಲದ ಕಾರಣ ಎಲ್ಲಾ ವಯಸ್ಸಿನವರಿಗೂ ಯೋಗ್ಯವಾದ ಉಪಾಹಾರವಾಗಿದೆ.

ಇದನ್ನು ತರಕಾರಿಯ ಸಾಗು, ಕಡ್ಲೆಕಾಳಿನ ಗಸಿ, ವಿವಿಧ ಚಟ್ನಿ ಮೊದಲಾದವುಗಳ ಜೊತೆಗೆ ಉತ್ತಮ ರುಚಿ ನೀಡುತ್ತದೆ. ಇನ್ನೂ ಹೇಳಬೇಕೆಂದರೆ ಕಾಯಿಹಾಲು, ತುಪ್ಪ ಮತ್ತು ಸಕ್ಕರೆ, ತುಪ್ಪ ಮತ್ತು ಬೆಲ್ಲ, ಜೇನುತುಪ್ಪ ಮತ್ತು ಬೆಣ್ಣೆ ಮೊದಲಾದವುಗಳ ಜೊತೆಗೂ ಸೇವಿಸಬಹುದು. ಈಗ ಈ ದೋಸೆಯನ್ನು ತಯಾರಿಸುವ ವಿಧಾನವನ್ನು ಕಲಿಯೋಣ: ಸೆಟ್ ದೋಸೆ ಹಿಟ್ಟಿನಿಂದ ರುಚಿಕರವಾದ ಪಡ್ಡು

Easy Recipe To Make Sponge Set Dosa

*ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು
*ತಯಾರಿಕಾ ಸಮಯ: ಹದಿನೈದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಇಡ್ಲಿ ಅಕ್ಕಿ: ಒಂದು ಕಪ್
*ಬೆಳ್ತಿಗೆ ಅಕ್ಕಿ: ಒಂದು ಕಪ್
*ಉದ್ದಿನ ಬೇಳೆ : ಅರ್ಧ ಕಪ್
*ಅವಲಕ್ಕಿ: ಅರ್ಧ ಕಪ್ (ಬಿಳಿ ಮತ್ತು ದಪ್ಪ ಅವಲಕ್ಕಿ ಉತ್ತಮ, ತೆಳು ಅವಲಕ್ಕಿ ಉಬ್ಬುವುದಿಲ್ಲ)
*ಮೆಂತೆ: ಒಂದು ಚಿಕ್ಕ ಚಮಚ
*ಎಣ್ಣೆ : ಎರಡು ದೊಡ್ಡ ಚಮಚ
*ಉಪ್ಪು: ರುಚಿಗನುಸಾರ ಆರೋಗ್ಯಕರ ಉಪಹಾರಕ್ಕಾಗಿ ಕುಚ್ಚಲಕ್ಕಿ ದೋಸೆ

ವಿಧಾನ:
1) ಒಂದು ಪಾತ್ರೆಯಲ್ಲಿ ಎರಡೂ ವಿಧದ ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತೆಯನ್ನು ತೊಳೆದು ತಣ್ಣೀರಿನಲ್ಲಿ ಸುಮಾರು ಐದರಿಂದ ಆರು ಗಂಟೆ ನೆನೆಸಿಡಿ.
2) ನೆನೆಸಿಟ್ಟ ಅಕ್ಕಿಯನ್ನು ಕಡೆಯುವ ಕಲ್ಲು ಅಥವಾ ಗ್ರೈಂಡರಿನಲ್ಲಿ ನಯವಾಗುವಂತೆ ಕಡೆಯಿರಿ. ಈ ಹೊತ್ತಿನಲ್ಲಿ ಅವಲಕ್ಕಿಯನ್ನು ಕೊಂಚ ನೀರಿನಲ್ಲಿ ಇನ್ನೊಂದು ಪಾತ್ರೆಯಲ್ಲಿ ನೆನೆಸಿಡಿ.
3) ಅಕ್ಕಿ ಸರಿಸುಮಾರು ನಯವಾಗುತ್ತಾ ಬಂದ ಬಳಿಕ ಅವಲಕ್ಕಿಯನ್ನು ಸೇರಿಸಿ ಕಡೆಯುವುದನ್ನು ಮುಂದುವರೆಸಿ.
4) ದೋಸೆಹಿಟ್ಟಿನ ಹದಕ್ಕೆ ಬರುವಷ್ಟು ಮಾತ್ರ ನೀರನ್ನು ಸೇರಿಸಿ. ನೀರು ಹೆಚ್ಚಾದರೆ ದೋಸೆ ಉಬ್ಬುವುದಿಲ್ಲ ಮತ್ತು ತೆಳುವಾಗುತ್ತದೆ. ಇದಕ್ಕೆ ಕೊಂಚ ಉಪ್ಪು ಸೇರಿಸಿ ಕಲಸಿ ಎಂಟು ಗಂಟೆಗಳ ಕಾಲ ಮುಚ್ಚಿಡಿ. ರಾತ್ರಿ ನೆನೆಸಿಟ್ಟು ಬೆಳಿಗ್ಗೆ ತಯಾರಿಸಿದರೆ ಇನ್ನೂ ಉತ್ತಮ.
5) ಈ ಅವಧಿಯಲ್ಲಿ ಹಿಟ್ಟು ಚೆನ್ನಾಗಿ ಹುದುಗುತ್ತದೆ. ಸೌಟಿನಿಂದ ದೋಸೆ ಸುರಿಯುವ ಮುನ್ನ ಇನ್ನೊಮ್ಮೆ ಕಲಕಿ.
6) ದೋಸೆ ಕಾವಲಿಯನ್ನು ಮಧ್ಯಮ ಉರಿಯಲ್ಲಿ ಬಿಸಿಮಾಡಿ. ಬಿಸಿಯಾದ ಬಳಿಕ ತೆಳುವಾಗಿ ಎಣ್ಣೆಯನ್ನು ಸವರಿ. ನಾನ್ ಸ್ಟಿಕ್ ಆದರೆ ಅಗತ್ಯವಿಲ್ಲ
7) ದೋಸೆ ಹುಯ್ಯಲು ಚಪ್ಪಟೆ ತಳವಿರುವ ಲೋಟ ಅಥವಾ ಕಪ್ ಉಪಯೋಗಿಸಿ. ಸೌಟಿನ ತಳಭಾಗ ಚಪ್ಪಟೆಯಾಗಿದ್ದರೂ ಸರಿ. ಆದರೆ ಉರುಟಾಗಿದ್ದರೆ ದೋಸೆ ಹುಯ್ಯಲು ಕೊಂಚ ಅನುಭವ ಬೇಕು. ಕಾವಲಿಯ ಮಧ್ಯಭಾಗದಲ್ಲಿ ಒಂದು ಕಪ್ ಸುರಿದು ನಯವಾಗಿ ಕಾವಲಿಯ ಅಂಚುಗಳಿಗೆ ಸರಿಸಿ.
8) ದೋಸೆ ಕಾವಲಿಯನ್ನು ಮುಚ್ಚಿ ಮಧ್ಯಮ ಉರಿಯಲ್ಲಿಯೇ ಬೇಯಲು ಬಿಡಿ.
9) ತಳಭಾಗ ಬೆಂದಿದೆ ಅನ್ನಿಸಿದ ಬಳಿಕ ಮಗುಚಿ ಇನ್ನೊಂದು ಬದಿಯನ್ನು ಬೇಯಿಸಿ.
10) ರುಚಿಗಾಗಿ ಕೊಂಚ ಎಣ್ಣೆಯನ್ನು ಬೇಕಾದರೆ ಸವರಬಹುದು, ಆದರೆ ಅಗತ್ಯವಿಲ್ಲ. ತೂಕ ಹೆಚ್ಚುವ ಆತಂಕವಿಲ್ಲದಿದ್ದರೆ ಕೊಂಚ ಬೆಣ್ಣೆಯನ್ನೂ ಸವರಬಹುದು.
11) ಇದೇ ರೀತಿ ಉಳಿದ ದೋಸೆಗಳನ್ನು ತಯಾರಿಸಿ ಬಿಸಿಬಿಸಿಯಿರುವಂತೆಯೇ ಮನೆಯವರಿಗೆ ಬಡಿಸಿ ಎಲ್ಲರ ಮನ ಗೆಲ್ಲಿರಿ.

ಕಿವಿಮಾತು:
ಸಮಯವಿದ್ದರೆ ದೋಸೆ ಹಿಟ್ಟನ್ನು ಕಾವಲಿಗೆ ಹೊಯ್ದ ಬಳಿಕ ಕೊಂಚ ಕಾಯಿತುರಿಯನ್ನು ನವಿರಾಗಿ ಎಲ್ಲೆಡೆ ಹರಡುವಂತೆ ಸಿಂಪಡಿಸಬಹುದು. ಎರಡನೇ ಬದಿ ಬೇಯಿಸುವಾಗ ಮಾತ್ರ್ತಕೊಂಚ ಹೆಚ್ಚು ಹೊತ್ತು ಬೇಯಿಸಬೇಕು. ಇದು ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.

English summary

Easy Recipe To Make Sponge Set Dosa

Set Dosa is made with rice, urad dal and Poha. It is the atukulu or poha which makes this yummy dosa soft, spongy and smooth. When it comes to set dosa the texture of the dosa is very important. It is not like any other dosa you enjoy at the hotel. Here is how you prepare set dosa, take a look:
Story first published: Thursday, October 8, 2015, 10:20 [IST]
X
Desktop Bottom Promotion