For Quick Alerts
ALLOW NOTIFICATIONS  
For Daily Alerts

ಅಚ್ಚ ಕನ್ನಡಿಗರ ತಿಂಡಿ ರವೆ ಇಡ್ಲಿ ಮಾಡುವ ವಿಧಾನ

By * ಭಾರತಿ ಎಚ್ಎಸ್, ಬೆಂಗಳೂರು
|
ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಪುನೀತ್ ಕೇಳಿದ ಒಂದು ಸರಳ ಪ್ರಶ್ನೆಗೆ ಸರಿಯುತ್ತರ ಹೇಳದ ವಯ್ಯಾರಿ ರಮ್ಯಾ ಅಚ್ಚ ಕನ್ನಡತಿಯರ ಸಮೂಹಕ್ಕೆ ಬೆಜಾರು ಮಾಡಿದ್ದಾರೆ. ಒಕೆ, ಬೆಟರ್ ಲಕ್ ಟು ರಮ್ಯಾ ನೆಕ್ಸ್ಟ್ ಟೈಂ. ಅಷ್ಟು ಹೊತ್ತಿಗೆ ಅವರ ಸಾಮಾನ್ಯ ಜ್ಞಾನ ಹೆಚ್ಚಾಗಿರತ್ತೆ ಎಂದು ಆಶಿಸುತ್ತಾ ರವೆ ಇಡ್ಲಿಯ ವಿಚಾರಕ್ಕೆ ಧುಮುಕುತ್ತಿದ್ದೇವೆ.

ಇಡ್ಲಿ ಯಾವತ್ತಿದ್ದರೂ ತಿನ್ನಲು ಬೇಜಾರಾಗದ ತಿನಿಸು. ಆರೋಗ್ಯದಿಂದಿರಲಿ, ಅನಾರೋಗ್ಯವಿರಲಿ ಇಡ್ಲಿ ವರ್ಜ್ಯವಲ್ಲ. ಆದರೂ, ಅಕ್ಕಿಯಿಂದ ತಯಾರಿಸಿದ ಇಡ್ಲಿ ತಿಂದುತಿಂದು ಬೇಜಾರಾದಾಗ ಮೃದುಮನೋಹರ ರವೆ ಇಡ್ಲಿಯನ್ನು ಎಂಟಿ ಆರ್ , ಪಂಮ್ಟಿ ಆರ್ ಹೊಟೇಲುಗಳಿಂದ ರೆಡಿ ಮಿಕ್ಸ್ ತಂದು ತಿನ್ನಬೇಕಾಗಿಲ್ಲ. ಅದನ್ನು ಮನೆಯಲ್ಲೇ ತಯಾರಿಸಬಹುದು. ಬೆಂಗಳೂರಿನ ಭಾರತಿ ಎಚ್ಎಸ್ ಅವರು ರವೆ ಇಡ್ಲಿ ತಯಾರಿಸುವ ಸುಲಭ ಮಾರ್ಗವನ್ನು ಇಲ್ಲಿ ತಿಳಿಸಿಕೊಟ್ಟಿದ್ದಾರೆ. ತಿಂಡಿ ಪ್ರಿಯರೇ ನಿಮ್ಮ ಕೈಚಳಕ ತೋರಿಸಿ.

ಬೇಕಾಗುವ ಸಾಮಗ್ರಿಗಳು

ಒಂದು ಕಪ್ ರವೆ (ಲೋಕಲ್ ರವೆ)
ಎರಡು ಕಪ್ ಮೊಸರು
ಎಣ್ಣೆ ಅರ್ಧ ಕಪ್
ಹಸಿಮೆಣಸಿನಕಾಯಿ ನಾಕಾರು
ಉದ್ದಿನ ಬೇಳೆ ಅರ್ಧ ಟೇಬಲ್ ಸ್ಪೂನ್
ಸಾಸಿವೆ ಅರ್ಧ ಟೀ ಸ್ಪೂನ್
ಕಾಯಿತುರಿ ಅರ್ಧ ಬಟ್ಟಲು
ಇಂಗು ಚಿಟಿಕೆ, ಕೊತ್ತಂಬರಿ, ಕರಿಬೇವು ಸಣ್ಣಗೆ ಹೆಚ್ಚಿದ್ದು
ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ

ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಉದ್ದಿನ ಬೇಳೆ, ಸಣ್ಣಗೆ ಹೆಚ್ಚಿಕೊಂಡ ಹಸಿಮೆಣಸಿನಕಾಯಿ, ಕರಿಬೇವು, ಇಂಗು ಹಾಕಿ ಚೆನ್ನಾಗಿ ತಾಳಿಸಿ ನಂತರ ರವೆಯನ್ನು ಹಾಕಬೇಕು. ರವೆ ಘಂ ಅಂತ ವಾಸನೆ ಬರುವವರೆಗೆ ಹುರಿಯಬೇಕು. ಹುರಿದು ತಣ್ಣಗಾದ ಬಳಿಕ ಉಪ್ಪು, ಕೊತ್ತಂಬರಿ ಸೊಪ್ಪು, ಕಾಯಿತುರಿ ಹಾಕಿ ಮೊಸರನ್ನು ಹಾಕುತ್ತ ಇಡ್ಲಿ ಹಿಟ್ಟಿನ ಹದಕ್ಕೆ ಬರುವವರೆಗೆ ಕಲಿಸಬೇಕು.

ಸ್ವಲ್ಪ ಕಾಯಿತುರಿ, ಕ್ಯಾರೆಟ್ ತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಮಿಕ್ಸ್ ಮಾಡಿಟ್ಟುಕೊಳ್ಳಬೇಕು. ಆ ಕಡೆ ಗೋಡಂಬಿಯನ್ನು ತುಪ್ಪದಲ್ಲಿ ಹುರಿದಿಟ್ಟು ಕೊಂಡಿರಬೇಕು. ನಂತರ ಎಣ್ಣೆ ಸವೆರಿದ ಇಡ್ಲಿ ತಟ್ಟೆಗೆ ಒಂದೊಂದು ಗೋಡಂಬಿ ಇಟ್ಟಮೇಲೆ ಕ್ಯಾರೆಟ್ ತುರಿ ಮಿಕ್ಸ್ ಮಾಡಿದ್ದನ್ನು ಹದವಾಗಿ ಹರಡಿ ಮೊಸರು ಸೇರಿಸಿ ಕಲೆಸಿದ ಹಿಟ್ಟನ್ನು ಹಾಕಿ ಕುಕ್ಕರನ್ನು ಸ್ಟೌವ್ ಮೇಲೆ ಪ್ರತಿಷ್ಠಾಪಿಸಬೇಕು. 10 ನಿಮಿಷಕ್ಕೆ ಕುಕ್ಕರ್ ಆಫ್ ಮಾಡಿದರೆ ಸಾಕು ಬಿಸಿಬಿಸಿ ರವೆ ಇಡ್ಲಿ ತಯಾರು.

ರವೆ ಇಡ್ಲಿಯನ್ನು ಸಾಗು, ಕಾಯಿ ಚಟ್ನಿ ಮತ್ತು ಸಾಂಬಾರ್ ಜೊತೆ ಮೆಲ್ಲಬಹುದು. ಆದರೆ, ಇದನ್ನು ತಯಾರಿಸಲು ಸಾಕಷ್ಟು ಸಮಯ ಹಿಡಿಯುವುದರಿಂದ ಶನಿವಾರವೇ, ಭಾನುವಾರದಂದೋ, ರಜಾ ದಿನದಂದೋ ತಯಾರಿಸಿದರೆ ಒಳ್ಳೆಯದು. ಇವತ್ತು ಶನಿವಾರ ಮೇಡಂ!

English summary

The authentic South Indian breakfast Rava Idli recipe | ಅಚ್ಚ ಕನ್ನಡಿಗರ ತಿಂಡಿ ರವೆ ಇಡ್ಲಿ ಮಾಡುವ ವಿಧಾನ

The authentic South Indian breakfast Rava Idli recipe by Bharathi H S, Jayanagara, Bangalore. Rava idly is one of the healthiest recipe for a breakfast.
Story first published: Friday, March 30, 2012, 12:48 [IST]
X
Desktop Bottom Promotion