ಗರ್ಭಿಣಿಯರ ಸ್ನಾಯು ಸೆಳೆತ ಸಮಸ್ಯೆಗೆ ಪರಿಹಾರ

Subscribe to Boldsky

ಮಹಿಳೆಗೆ ಅತ್ಯಂತ ಸಂತೋಷವನ್ನು ನೀಡುವ ವಿಷಯವೆಂದರೆ ಆಕೆಯ ತಾಯ್ತನ. ಒಂಬತ್ತು ತಿಂಗಳ ನಂತರ ಒಂದು ಮುದ್ದಾದ ಮಗುವಿಗೆ ಜನ್ಮ ನೀಡುವ ಮಹಿಳೆ ಮಗುವಿನ ಹುಟ್ಟಿನಲ್ಲಿಯೇ ತನ್ನ ಹುಟ್ಟಿನ ಸಾರ್ಥಕ್ಯವನ್ನು ಕಂಡುಕೊಳ್ಳುತ್ತಾಳೆ.

ಆದರೆ ಗರ್ಭ ಧರಿಸಿದ ಮೇಲೆ ಮಗುವಿಗೆ ಜನ್ಮವನ್ನು ನೀಡುವುದು ಅಷ್ಟು ಸುಲಭವಲ್ಲ. ಈ ಸಮಯದಲ್ಲಿ ಸಾಕಷ್ಟು ನೋವು ಸಂಕಟಗಳನ್ನು ಅನುಭವಿಸಬೇಕಾಗುತ್ತದೆ. ಅದರಲ್ಲೂ ಚೊಚ್ಚಲ ಹೆರಿಗೆಯ ಸಂದರ್ಭದಲ್ಲಿ ಗಮನಿಸಬೇಕಾದ ಅಂಶಗಳು ಹಲವಾರಿರುತ್ತವೆ. ದೇಹದ ಸ್ಥಿತಿ ಸಾಮಾನ್ಯ ದಿನಗಳಿಗಿಂತ ಈ ದಿನಗಳಲ್ಲಿ ಸಾಕಷ್ಟು ಬದಲಾಗುತ್ತದೆ. ಇಂತಹ ಬದಲಾವಣೆಯ ಲಕ್ಷಣಗಳನ್ನು ನೀವೆ ಗುರುತಿಸಬಹುದು.

ಇಂತಹ ಬದಲಾವಣೆಗಳು ಅಥವಾ ದೇಹದ ಕೆಲವು ಭಾಗಗಳಲ್ಲಿ ಸೆಳೆತ, ನೋವುಗಳು ಒಂಬತ್ತೂ ತಿಂಗಳಿನಲ್ಲಿಯೂ ಆಗಾಗ ಕಾಣಿಸಿಕೊಳ್ಳುತ್ತವೆ. ಆದರೆ ಕೆಲವರಿಗೆ ಈ ನೋವು ಒಂದು ವಾರ, ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಹಾಗೆಯೇ ಉಳಿಯಬಹುದು. ಹಾಗೆಂದ ಮಾತ್ರಕ್ಕೆ ಇಂತಹ ನೋವು, ಸೆಳೆತಗಳಿಗೆ ಹೆಚ್ಚಿನ ಔಷಧಿ ಚಿಕಿತ್ಸೆಗಳನ್ನು ಮಾಡುವಂತಿಲ್ಲ. ಇದು ಗರ್ಭಿಣಿ ಸ್ತ್ರೀಯರ ಮೇಲೆ ಅಡ್ಡ ಪರಿಣಾಮ ಬೀರಬಹುದು.

ಇಲ್ಲಿ, ಗರ್ಭಿಣಿ ಸ್ತ್ರೀಯರು ತಮ್ಮ ನೋವುಗಳಿಗೆ ತಕ್ಕ ಮಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಲು ಕೆಲವು ಮಾರ್ಗಗಳನ್ನು ಸೂಚಿಸಲಾಗಿದೆ.

ಬಿಸಿ ನೀರಿನಲ್ಲಿ ಸ್ನಾನ ಮಾಡಿ

ಗರ್ಭಿಣಿಯಾದ ಸ್ತ್ರೀಗೆ ಸಾಮಾನ್ಯವಾಗಿ ದೇಹದಲ್ಲಿನ ನೋವು ಅಥವಾ ಕೈ ಕಾಲುಗಳ ಸೆಳೆತವನ್ನು ತಕ್ಕ ಮಟ್ಟಿಗೆ ಕಡಿಮೆಗೊಳಿಸುವಲ್ಲಿ ಬಿಸಿನೀರಿನ ಸ್ನಾನ ಅತ್ಯಂತ ಉಪಯುಕ್ತವಾಗಿದೆ. ಹೀಗೆ ಮಾಡುವುದರಿಂದ ನೀವು ತತ್ ಕ್ಷಣದಲ್ಲಿ ಪರಿಹಾರವನ್ನು ಕಂಡುಕೊಳ್ಳುವಿರಿ. ಮತ್ತು ನಿಮ್ಮ ಸೆಳೆತಗಳೂ ನಿವಾರಣೆಯಾಗುತ್ತವೆ. ಸ್ನಾನ ಮಾಡುವ ನೀರು ಮಿತವಾಗಿ ಬಿಸಿಯಾಗಿರಬೇಕು. ನೀರು ಅತಿ ಬಿಸಿಯಾಗಬಾರದು. ಆದರೆ ಹೆಚ್ಚು ಹೊತ್ತು ಸ್ನಾನವನ್ನು ಮಾಡುವುದು ಒಳ್ಳೆಯದಲ್ಲ. ನಿಮ್ಮ ಸ್ನಾನದ ಮಿತಿ ಕೇವಲ 10 -15 ನಿಮಿಷದೊಳಗಿರಲಿ.

ಬಿಸಿ ನೀರಿನ ಶಾಖ

ದೇಹಕ್ಕೆ ಶಾಖ ಕೊಡುವುದಕ್ಕಾಗಿ ಬಿಸಿ ನೀರನ್ನು ತುಂಬುವಂತಹ ಪ್ಯಾಡ್ ಅಥವಾ ಬ್ಯಾಗ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇದನ್ನು ತಂದು ಬಿಸಿ ನೀರನ್ನು ಅದರಲ್ಲಿ ತುಂಬಿ ದೇಹಕ್ಕೆ ಮೆತ್ತಗೆ ಶಾಖವನ್ನು ನೀಡಬಹುದು. ಅಥವಾ ನಿಮಗೆ ಇಂತಹ ಬ್ಯಾಗ್ ಗಳನ್ನು ಕೊಂಡುಕೊಳ್ಳುವ ವ್ಯವಸ್ಥೆ ಇಲ್ಲದಿದ್ದರೆ ಟವೆಲ್ ನ್ನು ಬಿಸಿ ನೀರಿನಲ್ಲಿ ಅದ್ದಿ ಅದರಿಂದ ನೀರನ್ನು ಹಿಂಡಿ ಮೈಗೊತ್ತಿಕೊಳ್ಳಬಹುದು.


ಹೀಗೆ ಮಾಡುವುದರಿಂದ ಸೆಳೆತಗಳಿಂದ ತಾತ್ಕಾಲಿಕ ಉಪಶಮನವನ್ನು ಕಾಣಬಹುದು. ಆದರೆ ನೀವು ಶಾಖ ಕೊಡುವುದಕ್ಕಾಗಿ ಇಟ್ಟ ನೀರು ಅತಿಯಾಗಿ ಬಿಸಿಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ! ಈ ಚಿಕಿತ್ಸೆಯನ್ನು ನಿಮಗೆ ಯಾವಾಗ ಸೆಳೆತವನ್ನು ಸಹಿಸುವುದಕ್ಕೆ ಸಾಧ್ಯವಾಗುವುದಿಲ್ಲವೋ ಅಂತಹ ಸಂದರ್ಭದಲ್ಲಿ ಪಡೆದುಕೊಳ್ಳಿ.

 

ವಿಶ್ರಾಂತಿ

ಒತ್ತಡದಿಂದ ದೂರವುಳಿಯಲು ಇರುವ ಏಕೈಕ ವಿಧಾನವೆಂದರೆ ವಿಶ್ರಾಂತಿಯಿಂದಿರುವುದು. ಇದು ಮನಸ್ಸಿನ ಒತ್ತಡವನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಇಂತಹ ಆರಾಮದಾಯಕ ಮನಸ್ಸಿಗೆ ಹಿತಕರವೆನಿಸುವ ಸಂಗೀತವನ್ನು ಕೇಳಿ. ಅಗತ್ಯವಿದ್ದರೆ ನಿಮ್ಮ ಒತ್ತಡದ ಕೆಲಸದಿಂದ ಸ್ಚಲ್ಪ ಸಮಯದವರೆಗೆ ದೂರವುಳಿಯುವುದು ಉತ್ತಮ.

ಗರ್ಭಿಣಿ ಸ್ತ್ರೀಯರು ವಿಶ್ರಾಂತಿ ತೆಗೆದುಕೊಳ್ಳುವುದು ಮತ್ತು ಚೆನ್ನಾಗಿ ನಿದ್ರಿಸುವುದು ಅತ್ಯಂತ ಮುಖ್ಯ. ನಿದ್ರಾಹೀನತೆ ಕೂಡ ದೇಹದಲ್ಲಿ ಸಾಕಷ್ಟು ತೊಂದರೆಗಳನ್ನು ಉಂಟುಮಾಡಬಹುದು. ಆದ್ದರಿಂದ ದಿನದಲ್ಲಿ ಕನಿಷ್ಟ 8-10 ಗಂಟೆಗಳ ಕಾಲ ನಿದ್ರೆ ಮಾಡುವುದು ತುಂಬಾ ಒಳ್ಳೆಯದು.

 

ಆಹಾರ ಪದ್ಧತಿಯಲ್ಲಿ ಬದಲಾವಣೆ

ಪೊಟ್ಯಾಷಿಯಂ ಮತ್ತು ಕ್ಯಾಲ್ಸಿಯಂ ಇರುವ ಆಹಾರ ಪದಾರ್ಥಗಳು ಸೆಳೆತವನ್ನು ನಿವಾರಿಸುವಲ್ಲಿ ಸಹಾಯಕವಾಗುತ್ತವೆ. ದೇಹದಲ್ಲಿ ಯಾವುದೇ ಹೆಚ್ಚಿನ ತೊಂದರೆಗಳಾಗದಂತೆ ನೋಡಿಕೊಳ್ಳಲು ಈ ಮೇಲಿನ ಖನಿಜಾಂಶಗಳುಳ್ಳ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಅಂಶ ಅಧಿಕವಾಗಿರುತ್ತದೆ. ಮೀನು, ಹಸಿರು ತರಕಾರಿಗಳು, ಬಾದಾಮಿ, ಹಾಲಿನ ಉತ್ಪನ್ನಗಳನ್ನು ದಿನವೂ ಸೇವಿಸಿ.

ವಿಟಮಿನ್ ಸಿ ಇರುವ  ಸಿಟ್ರಸ್ ಹಣ್ಣುಗಳು, ಹಸಿರು ತರಕಾರಿಗಳು, ಸೊಪ್ಪು, ಟೊಮೆಟೊ, ಆಲೂಗಡ್ಡೆ ಮೊದಲಾದ ಪದಾರ್ಥಗಳಗಳನ್ನು ದೈನಂದಿನ ಆಹಾರವಾಗಿ ಸೇವಿಸಿ. ಜಂಕ್ ಫುಡ್ಸ್ ತಿನ್ನುವುದನ್ನು ಕಡಿಮೆ ಮಾಡಿದರೆ ಒಳ್ಳೆಯದು.

 

ಮಸಾಜ್ ನ ಉಪಯೋಗಗಳು

ದೇಹಕ್ಕೆ ಸರಿಯಾಗಿ ಆಗಾಗ ಮಸಾಜ್ ಮಾಡುವುದು ಸೆಳೆತಗಳಿಂದ ದೂರವುಳಿಯಲು ಅತ್ಯಂತ ಸಹಾಯಕ. ಕಾಲು ಹಾಗೂ ಮೊದಲಾದ ದೇಹದ ಯಾವುದೇ ಭಾಗದಲ್ಲಿ ಸೆಳೆತ ಕಾಣಿಸಿಕೊಂಡರೂ ಅಲ್ಲಿ ಮಸಾಜ್ ಮಾಡಿದರೆ ತಾತ್ಕಾಲಿಕ ಉಪಶಮನ ದೊರೆಯುತ್ತದೆ. ಮಸಾಜ್ ಮಾಡಲು ಉತ್ತಮವಾದ ಸುವಾಸನಾ ಭರಿತ ಎಣ್ಣೆಯನ್ನು ಬಳಸಿ.

 

 

ಗರ್ಭಿಣಿಯರಿಗೆ ಟಿಪ್ಸ್

ಗರ್ಭಿಣಿ ಸ್ತ್ರೀಯರು ಹೆರಿಗೆಯಾಗುವವರೆಗೂ ಸಾಮಾನ್ಯ ನೋವುಗಳನ್ನು ಹಾಗೂ ಸೆಳೆತಗಳನ್ನು ಸಹಿಸಲೇಬೇಕು. ಇದಕ್ಕೆ ಯಾವುದೇ ಶಾಶ್ವತ ಪರಿಹಾರಗಳಿಲ್ಲದಿದ್ದರೂ, ಮೇಲಿನ ಮಾರ್ಗಗಳಂತಹ ತಾತ್ಕಾಲಿಕ ಉಪಶಮನವನ್ನು ಕಾಣಲು ಸಾಧ್ಯ.

Story first published: Friday, May 10, 2013, 15:50 [IST]
English summary

How To Treat Pregnancy Cramps | Tips For Pregnant | ಗರ್ಭಾವಸ್ಥೆಯಲ್ಲಿ ಉಂಟಾಗುವ ಸೆಳೆತಗಳನ್ನು ತಡೆಗಟ್ಟಲು ಉಪಾಯಗಳು | ಗರ್ಭಿಣಿಯರಿಗೆ ಕೆಲ ಸಲಹೆಗಳು

One of the many common pregnancy signs includes cramps in the stomach and the abdomen area as well as legs. Though, they are not painful, but a lot of times they are the reason for discomfort. There are a few ways in which you can keep a control over pregnancy cramps or at least prevent it for a while.
Please Wait while comments are loading...
Subscribe Newsletter