For Quick Alerts
ALLOW NOTIFICATIONS  
For Daily Alerts

ಬೀದಿಬದಿಯ ತಿಂಡಿ, ತಿನಿಸುಗಳು ನಿಮ್ಮ ಮಕ್ಕಳಿಗೆ ಸುರಕ್ಷಿತವೇ?

By Super
|

ಭಾರತದ ಬಗ್ಗೆ ಹರಿದಾಡುತ್ತಿರುವ ಹಲವು ಜೋಕುಗಳಲ್ಲಿ ಒಂದು ಈ ತರಹಾ ಇದೆ: ಭಾರತದಲ್ಲಿ ಮಾತ್ರ ತರಕಾರಿಗಳನ್ನು ರಸ್ತೆಬದಿಯಲ್ಲಿ ಮಾರಲಾಗುತ್ತದೆ ಮತ್ತು ಚಪ್ಪಲಿಗಳನ್ನು ಹವಾನಿಯಂತ್ರಿತ ಮಳಿಗೆಗಳಲ್ಲಿ ಮಾರಲಾಗುತ್ತಿದೆ. ಕೊಂಚ ವಿಪರ್ಯಾಸ ಎಂದರೂ ಈ ಸಂಗತಿ ವಾಸ್ತವವಾಗಿದೆ. ಏಕೆಂದರೆ ಬಹುತೇಕ ಭಾರತೀಯರು ಮೊತ್ತಮೊದಲಾಗಿ ವಸ್ತುವಿನ ಬೆಲೆ ನೋಡುತ್ತಾರೆ, ಬಳಿಕ ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡುತ್ತಾರೆ.

ಇದನ್ನು ಮನಗಂಡವರು ಉತ್ತಮ ಗುಣಮಟ್ಟದ ವಸ್ತುಗಳನ್ನು ಕಡಿಮೆ ಬೆಲೆಗೆ ನೀಡಲು ಅಂಗಡಿಯ ಬಾಡಿಗೆ ಉಳಿಸಿ ರಸ್ತೆಬದಿಯ ತಳ್ಳುಗಾಡಿಯನ್ನು ಆಶ್ರಯಿಸುತ್ತಾರೆ. ಆಹಾರದ ವಿಷಯದಲ್ಲೂ ಅಷ್ಟೇ, ಸಂಜೆಯಾದಂತೆ ನಿಧಾನವಾಗಿ ತೆರೆದುಕೊಳ್ಳುವು ಒಂದೊಂದೇ ಅಂಗಡಿಗಳು ಉತ್ತಮ ಗುಣಮಟ್ಟದ, ಸಾಕಷ್ಟು ಸ್ವಚ್ಛತೆಗಳನ್ನು ಕಾಪಾಡಿಕೊಳ್ಳುತ್ತಾ ಅಗ್ಗದ ದರದಲ್ಲಿ ಮಧ್ಯಮವರ್ಗ ಮತ್ತು ಕೆಳವರ್ಗದ ಗ್ರಾಹಕರನ್ನು ಸೆಳೆಯುತ್ತವೆ.

Is Roadside Food Safe For Your Kids?

ನಿಂತುಕೊಂಡೇ ತಿನ್ನಬೇಕು ಎಂಬ ಒಂದೇ ಕೊರತೆ ಬಿಟ್ಟರೆ ಬೇರೆಲ್ಲಾ ರೀತಿಯಲ್ಲಿ ಹೋಟೇಲಿಗೆ ಕಡಿಮೆ ಇಲ್ಲದ ರುಚಿ ಮತ್ತು ಬೆಲೆಯಲ್ಲಿ ಲಭ್ಯವಾಗುತ್ತಿರುವ ತಿನಿಸುಗಳನ್ನು ಜನರೂ ಇಷ್ಟಪಡುತ್ತಾರೆ. ಇಂದು ಐಸ್ ಕ್ಯಾಂಡಿಯಿಂದ ಹಿಡಿದು ಚಿಕನ್ ಫ್ರೈವರೆಗೆ, ಇಡ್ಲಿ, ದೋಸೆ, ಉಪ್ಪಿಟ್ಟು, ಬರ್ಗರ್, ಗೋಬಿ ಫ್ರೈ, ವಿವಿಧ ಚಾಟ್ ಮೊದಲಾದ ತಿನಿಸುಗಳು ಹಾದಿಬದಿ ದೊರಕುತ್ತಿವೆ.

ಆದರೆ ಈ ತಿಂಡಿಗಳು ಆರೋಗ್ಯಕರವಲ್ಲ ಎಂಬ ಅಪವಾದವೂ ಕೇಳಿಬರುತ್ತಿದೆ. ಏಕೆಂದರೆ ಇದರಲ್ಲಿ ಉಪಯೋಗಿಸುವ ತರಕಾರಿ, ಆಹಾರವಸ್ತುಗಳು ಮತ್ತು ಮುಖ್ಯವಾಗಿ ಎಣ್ಣೆಗಳನ್ನು ಕಳಪೆದರ್ಜೆಯವನ್ನು ಖರೀದಿಸುತ್ತಾರೆ ಎಂಬ ಆರೋಪ ಹೊರಿಸಲಾಗುತ್ತಿದೆ. ಒಂದರ್ಥದಲ್ಲಿ ವ್ಯಾಪಾರದಿಂದ ಬರುವ ಲಾಭವೇ ಎಲ್ಲರಿಗೂ ಮುಖ್ಯವಾಗಿರುವಾಗ ಈ ಆರೋಪವೂ ಬಹುಮಟ್ಟಿಗೆ ಸರಿಯಾಗಿದೆ. ವಯಸ್ಕರಿಗೆ ಹೆಚ್ಚು ತೊಂದರೆಯಾಗದ ಈ ಆಹಾರಗಳು ಮಕ್ಕಳ ಮತ್ತು ಗರ್ಭಿಣಿಯರ ಪಾಲಿಗೆ ಉತ್ತಮವಲ್ಲ ಎಂಬುದು ಆಹಾರತಜ್ಞರ ಅಭಿಪ್ರಾಯವಾಗಿದೆ. ಆದರೆ ತಮಗೆ ಸಿಗುವ ಪಾಕೆಟ್ ಮನಿ ಹಣದಲ್ಲಿ ಶಾಲೆಯ ಅಥವಾ ಆಟದ ಮೈದಾನದ ಬಳಿ ಸುಲಭವಾಗಿ ಸಿಗುವ ಈ ತಿನಿಸುಗಳಿಗೆ ಮಕ್ಕಳು ಮಾರುಹೋಗುತ್ತಾರೆ.

ಈ ತಿನಿಸು ನಿಮಗೆ ಒಳ್ಳೆಯದಲ್ಲ ಎಂದು ಮಕ್ಕಳಿಗೆ ಹೇಳುವ ಮುನ್ನ ಈ ತಿನಿಸುಗಳು ನಿಮಗೇಕೆ ಒಳ್ಳೆಯದಲ್ಲ ಎಂದು ಹೇಳುವುದು ಹೆಚ್ಚು ಸೂಕ್ತವಾಗಿದೆ. ತಮ್ಮ ಮಕ್ಕಳನ್ನು ಹಾದಿಬದಿಯ ತಿನಿಸುಗಳಿಂದ ದೂರವಿರಿಸಲು ಪಾಲಕರಿಗೆ ಈ ಮಾಹಿತಿಗಳು ಉಪಯುಕ್ತವಾಗಿವೆ. ಮಕ್ಕಳಿಗಾಗಿ ಟಾಪ್ 6 ಆರೋಗ್ಯಕರ ಮಿಲ್ಕ್‌ಶೇಕ್‌ಗಳು

ಹಸಿ ತರಕಾರಿ ಮತ್ತು ಹಣ್ಣುಗಳು ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ
ಯಾವುದೇ ತರಕಾರಿ ಅಂಗಡಿಯವರಲ್ಲಿ ಒಂದು ಮಾತು ಕೇಳಿ ನೋಡಿ. ಗ್ರಾಹಕರು ತರಕಾರಿ ಕೊಳ್ಳುವಾಗ ಬಲಿತದ್ದನ್ನು ಬಿಟ್ಟು ಎಳೆಯದನ್ನೇ ಆರಿಸಿ ಕೊಂಡೊಯ್ಯುತ್ತಾರೆ. ಕಡೆಗೆ ಬುಟ್ಟಿಯಲ್ಲಿ ಉಳಿದ ತರಕಾರಿಯನ್ನು(ಬಲಿತದ್ದನ್ನು) ಯಾರು ಕೊಳ್ಳುತ್ತಾರೆ? ಥಟ್ಟನೇ ಉತ್ತರ ಬರುತ್ತದೆ, ಅದನ್ನು ಹೋಟೆಲಿನವರಿಗೆ ಕೊಡುತ್ತೇವೆ. ಈ ವಿಷಯ ಹಾದಿಬದಿ ತಿನಿಸು ವ್ಯಾಪಾರಿಗಳಿಗೂ ಅನ್ವಯಿಸುತ್ತದೆ. ಎಲ್ಲರೂ ಕೊಂಡು ಉಳಿದ ತರಕಾರಿಯನ್ನೇ ಬಳಸುವುದರಿಂದ, ಹಾಗೂ ದೊಡ್ಡಪ್ರಮಾಣದಲ್ಲಿ ಕೊಂಡ ತರಕಾರಿಗಳನ್ನು ಚೆನ್ನಾಗಿ ತೊಳೆಯಲು ಸಮಯಾವಕಾಶವಿಲ್ಲದೇ ಇರುವುದರಿಂದ ಈ ತರಕಾರಿಗಳಿಂದ ತಯಾರಿಸಿದ ತಿನಿಸುಗಳು ಆರೋಗ್ಯಕರವಲ್ಲ.

ಇದೇ ಮಾತು ಹಣ್ಣುಗಳಿಗೂ ಅನ್ವಯಿಸುತ್ತದೆ. ಸಾಧಾರಣವಾಗಿ ಹಣ್ಣುಗಳನ್ನು ಮೊದಲೇ ಕತ್ತರಿಸಿ ತಂದಿರುವುದರಿಂದ ವ್ಯಾಪಾರಿಗಳು ಹಣ್ಣಿನ ಮಳಿಗೆಗಳಲ್ಲಿ ಉಳಿದ ಹಣ್ಣುಗಳ ಕೆಟ್ಟಭಾಗವನ್ನು ವರ್ಜಿಸಿ ಉಳಿದ ಭಾಗವನ್ನು ಮಾತ್ರ ಬಳಸುವುದು ಸಾಮಾನ್ಯವಾಗಿದೆ. ಆದುದರಿಂದ ಹಸಿ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುವುದು ಮಕ್ಕಳಿಗೆ ಸಲ್ಲದು. ಒಂದು ವೇಳೆ ಬೇಯಿಸಿದ ತರಕಾರಿಯಾದರೆ (ಬೇಯಿಸಿದ ಆಲುಗಡ್ಡೆ, ಬಟಾಣಿ) ಅವುಗಳನ್ನು ಸೇವಿಸಬಹುದು.

ತುಂಬಾ ಹಿಂದೆ ಬೇಯಿಸಿದ ತರಕಾರಿಗಳು
ಸಾಧಾರಣವಾಗಿ ಹಾದಿಬದಿಯ ತಿನಿಸುಗಳನ್ನು ಹಗಲಿನಲ್ಲಿಯೇ ಮನೆಯಲ್ಲಿ ತಯಾರಿಸಿ ಸಂಜೆಯವೇಳೆ ಮಾರುಕಟ್ಟೆಗೆ ತರಲಾಗುತ್ತದೆ. ತರಕಾರಿಯನ್ನು ಬೆಂದ ಬಳಿಕ ಹೆಚ್ಚು ಹೊತ್ತು ಇಡಬಾರದು. ಏಕೆಂದರೆ ಬೆಂದ ತರಕಾರಿ ತಣಿಯುತ್ತಿದ್ದಂತೆ ಬ್ಯಾಕ್ಟೀರಿಯಾಗಳ ಧಾಳಿಗೆ ಸುಲಭವಾಗಿ ತುತ್ತಾಗುತ್ತದೆ. ವಿಶೇಷವಾಗಿ ಬೆಂದ ಆಲುಗಡ್ಡೆ ಬೇಗನೇ ಹಾಳಾಗುತ್ತದೆ. ಈ ತರಕಾರಿಗಳನ್ನು ಉಳಿದ ಖಾರದ ಅಥವಾ ಹುಳಿಯಾದ ರಸಗಳೊಡನೆ ಮಿಶ್ರಣ ಮಾಡಿ ನೀಡಿದರೆ ಆಲುಗಡ್ಡೆ ಹಾಳಾಗಿದ್ದುದು ಗೊತ್ತೇ ಆಗುವುದಿಲ್ಲ. ಆದರೆ ಮಕ್ಕಳ ಜಠರ ಈ ಬ್ಯಾಕ್ಟೀರಿಯಾಗಳ ಧಾಳಿಗೆ ಸುಲಭವಗಿ ತುತ್ತಾಗಿ ಅನಾರೋಗ್ಯ ಆವರಿಸುತ್ತದೆ. ಈ ಬಗ್ಗೆ ಖಚಿತವಾದ ಮಾಹಿತಿ ಪಡೆಯದೇ ತುಂಬಾ ಹಿಂದೆ ಬೇಯಿಸಿದ ತರಕಾರಿ ಸೇವಿಸುವುದರಿಂದ ಮಕ್ಕಳಿಗೂ ಹಿರಿಯರಿಗೂ ಮಾರಕವಾಗಿದೆ.

ಹಾಲು ಮತ್ತು ಮೊಸರುಗಳನ್ನು ಸೇವಿಸದಿರಿ
ವಿವಿಧ ಚಾಟ್ ಗಳಲ್ಲಿ ಮೊಸರನ್ನು ಸೇರಿಸಲಾಗುತ್ತದೆ. ಆದರೆ ಈ ಮೊಸರಿನ ಗುಣಮಟ್ಟ ಹೇಗಿದೆಯೋ ಎಂದು ಪರಿಗಣಿಸದೇ ಸೇವಿಸುವುದು ಅಪಾಯಕ್ಕೆ ಆಹ್ವಾನ ನೀಡುವುದಾಗಿದೆ. ಮಕ್ಕಳಿಗೆ ಮೊಸರು ಇಲ್ಲದೇ ಇರುವ ತಿನಿಸುಗಳನ್ನು ಪರಿಗಣಿಸುವುದು ಸೂಕ್ತ. ಅಂತೆಯೇ ಹಾಲನ್ನು ಉಪಯೋಗಿಸುವ ಮಿಲ್ಕ್ ಶೇಕ್, ಫಾಲೂದಾ ಮೊದಲಾದವನ್ನೂ ಮಕ್ಕಳಿಗೆ ನೀಡದೇ ಇರುವುದು ಒಳಿತು. ಇಂದಿನ ದಿನಗಳಲ್ಲಿ ಕೃತಕ ಹಾಲನ್ನೂ ಅಗ್ಗದ ದರದಲ್ಲಿ ಮಾರುತ್ತಿರುವುದು ಹಾಗೂ ಹಾದಿಬದಿಯ ವ್ಯಾಪಾರಸ್ಥರು ಲಾಭದ ಆಸೆಗಾಗಿ ಇವನ್ನು ಕೊಳ್ಳುವುದು ಸಹಾ ಈ ನಿರ್ಧಾರಕ್ಕೆ ಪೂರಕವಾಗಿದೆ.

ಕಲುಷಿತಗೊಂಡ ನೀರು
ಯಾವುದೇ ತಿನಿಸುಗಳನ್ನು ತಯಾರಿಸುವಾಗ ನೀರಿನ ಅವಶ್ಯಕತೆ ಇದೆ. ವ್ಯಾಪಾರಸ್ಥರು ತಯಾರಿಸುವ ಸ್ಥಳದಲ್ಲಿ ಲಭ್ಯವಾಗುತ್ತಿರುವ ನೀರು ಯಾವ ಗುಣಮಟ್ಟದ್ದು ಎಂದು ಯಾರಿಗೂ ಗೊತ್ತಿರುವುದಿಲ್ಲ. ಅಲ್ಲದೇ ನೀರನ್ನು ಶೇಖರಿಸಿರುವ ಪಾತ್ರೆಗಳ ಸ್ವಚ್ಛತೆ, ನೀರು ಬರುತ್ತಿರುವ ನಲ್ಲಿ ತುಕ್ಕು ಹಿಡಿದಿರುವುದು ಮೊದಲಾದವು ಆ ನೀರಿನ ಗುಣಮಟ್ಟವನ್ನು ಕುಂಠಿತಗೊಳಿಸುತ್ತವೆ. ಅಲ್ಲದೇ ವ್ಯಾಪಾರದ ಸ್ಥಳದವರೆಗೂ ಕುಡಿಯುವ ನೀರನ್ನು ಅವರು ಹೊತ್ತು ತರುವುದು ಅನುಮಾನ. ಅಲ್ಲಿಯೇ ಬದಿಯಲ್ಲೆಲ್ಲಾದರೂ ನಲ್ಲಿ ಇದ್ದರೆ ಆ ನೀರನ್ನೇ ತುಂಬಿಸಿಕೊಂಡು ಬರುತ್ತಾರೆ. ಈ ನೀರನ್ನು ಕುಡಿಯುವುದು ಅಪಾಯಕ್ಕೆ ಆಹ್ವಾನ ನೀಡುವುದಾಗಿದೆ. ಈ ನೀರಿನಲ್ಲಿಯೇ ಜ್ಯೂಸ್ ಮೊದಲಾದವುಗಳನ್ನು ತಯಾರಿಸಲಾಗುತ್ತದೆ. ಇವುಗಳಿಂದ ದೂರವಿರುವುದು ಉತ್ತಮ.

ಪಾಮ್ ಆಯಿಲ್ (ತಾಳೆ ಎಣ್ಣೆ ಬಳಕೆ)
ಆರೋಗ್ಯದ ದೃಷ್ಟಿಯಿಂದ ಅದರಲ್ಲೂ ಮಕ್ಕಳ ಆರೋಗ್ಯಕ್ಕೆ ತಾಳೆ ಎಣ್ಣೆ ಖಂಡಿತಾ ಒಳ್ಳೆಯದಲ್ಲ. ಏಕೆಂದರೆ ಇದರಲ್ಲಿರುವ saturated vegetable fats ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಾರಣದಿಂದ ಮುಂದುವರೆದ ದೇಶಗಳಲ್ಲಿ ಈಗಾಗಲೇ ತಾಳೆ ಎಣ್ಣೆಯನ್ನು ನಿಷೇಧಿಸಲಾಗಿದೆ. ಆದರೆ ಅಪಾರ ಪ್ರಮಾಣದಲ್ಲಿ ಈಗಾಗಲೇ ಉತ್ಪತ್ತಿಯಾಗಿರುವ ಎಣ್ಣೆಯನ್ನು ಮಾಡುವುದಾದರೂ ಏನು? ಈ ಪ್ರಶ್ನೆಗೆ ಈ ದೇಶಗಳು ಭಾರತ ಸೇರಿ ತೃತೀಯ ದೇಶಗಳಿಗೆ ಅಗ್ಗದ ದರದಲ್ಲಿ ನೀಡುತ್ತಿವೆ. ಇದರ ಅರಿವಿಲ್ಲದ ಜನತೆ ಕೇವಲ ಅಗ್ಗ ಎಂಬ ಒಂದೇ ಕಾರಣಕ್ಕಾಗಿ ತಾಳೆ ಎಣ್ಣೆಯನ್ನು ಬಳಸುತ್ತಿದ್ದಾರೆ. ಲಾಭದ ದೃಷ್ಟಿಯಿಂದ ಮತ್ತು ತುಂಬಾ ಹೆಚ್ಚಿನ ತಿನಿಸುಗಳನ್ನು ಈ ಎಣ್ಣೆಯಲ್ಲಿ ಕರಿಯಲು ಸಾಧ್ಯ ಎಂದು ಮನಗಂಡಿರುವ ವ್ಯಾಪಾರಿಗಳು ತಾಳೆ ಎಣ್ಣೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಎಣ್ಣೆಯಲ್ಲಿ ಕರಿದ, ಹುರಿದ ತಿಂಡಿಗಳು ಎಲ್ಲರ ಆರೋಗ್ಯಕ್ಕೆ ಮಾರಕವಾಗಿವೆ.

ಅಗ್ಗ ಮತ್ತು ರುಚಿಯ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು
ಹೋಟೆಲಿಗಿಂತಲೂ ಅಗ್ಗ ಮತ್ತು ಅದಕ್ಕಿಂತಲೂ ರುಚಿ ಎಂಬ ಕಾರಣದಿಂದ ಹೆಚ್ಚಿನವರು ಒಂದಕ್ಕಿಂತಲೂ ಹೆಚ್ಚಿನ ಪ್ರಕಾರದ ತಿನಿಸುಗಳನ್ನು ಸೇವಿಸುತ್ತಾರೆ. ಮಕ್ಕಳೂ ಇದಕ್ಕೆ ಹೊರತಲ್ಲ. ಕೆಲವೊಮ್ಮೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ ಮನೆಯಲ್ಲಿ ಊಟವನ್ನೇ ಮಾಡುವುದಿಲ್ಲ. ಒಂದು ವೇಳೆ ಹಾದಿಬದಿಯ ತಿನಿಸು ತಿನ್ನುವುದು ಅನಿವಾರ್ಯವಾದರೆ ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ತರ. ಬಸ್ ಪ್ರಯಾಣದ ವೇಳೆ ಸಾಮಾನ್ಯವಾಗಿ ಬಸ್ಸುಗಳು ತಮಗೆ ಅನುಕೂಲವಾದ ಸ್ಥಳದಲ್ಲಿಯೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಊಟಕ್ಕೆ ಬಿಡುವುದು ವಾಡಿಕೆ. ಈ ಸ್ಥಳಗಳಲ್ಲಿರುವ ಹಾದಿಬದಿಯ ತಿನಿಸುಗಳನ್ನು ತಿನ್ನದಿರುವುದೇ ಲೇಸು. ಏಕೆಂದರೆ ಈ ಆಹಾರವನ್ನು ತಿಂದ ಬಳಿಕ ಆರೋಗ್ಯ ಕೆಟ್ಟರೆ ಆ ಅಂಗಡಿಯವನನ್ನು ವಿಚಾರಿಸಲು ನೀವು ಈ ಊರಿನಲ್ಲಿರುವುದಿಲ್ಲ. ಇಂತಹ ಸ್ಥಳಗಳಲ್ಲಿ ಮನೆಯಿಂದ ಸಿದ್ಧಪಡಿಸಿಕೊಂಡು ತಂದ ಆಹಾರ ಅತ್ಯಂತ ಉತ್ತಮವಾಗಿದೆ.

English summary

Is Roadside Food Safe For Your Kids?

The taste of food from roadside vendor is always unexplainable. There is no doubt that the roadside food tastes much better than most of the leading restaurants. Road side shops are a very common sight in many parts of India.The following are a few of the reasons why roadside food is not good for health.
X
Desktop Bottom Promotion