For Quick Alerts
ALLOW NOTIFICATIONS  
For Daily Alerts

ಲೈಂಗಿಕ ದೌರ್ಜನ್ಯ-ಮಕ್ಕಳನ್ನು ಜಾಗೃತಿಗೊಳಿಸುವುದು ಹೇಗೆ?

|

ಲೈಂಗಿಕ ದೌರ್ಜನ್ಯವು ಈಗ ಸಮಾಜದ ಅತಿ ದೊಡ್ಡ ಪಿಡುಗಾಗಿದೆ. ದುರದೃಷ್ಟವಶಾತ್ ಲೈಂಗಿಕ ದೌರ್ಜನ್ಯಕ್ಕೆ ಮಕ್ಕಳೇ ಇತ್ತೀಚೆಗೆ ಬಲಿಪಶುವಾಗುತ್ತಿದ್ದಾರೆ. ಅದು ಗಂಡು ಅಥವಾ ಹೆಣ್ಣು ಮಕ್ಕಳು ಎಂಬ ಬೇಧ ಭಾವವಿಲ್ಲದೆ ಎಲ್ಲರೂ ಈ ಮಾರಿಗೆ ಬಲಿಯಾಗುತ್ತಿದ್ದಾರೆ.

ಈ ಸಮಸ್ಯೆಯು ಪೋಷಕರನ್ನು ಸೇರಿದಂತೆ ಸಮಾಜದ ಎಲ್ಲರಿಗು ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತಮ್ಮ ಕುರಿತಾಗಿ ತಮಗೆ ಸರಿಯಾಗಿ ತಿಳಿಯದ ಆ ಹಸು ಕಂದಮ್ಮಗಳಿಗೆ ಈ ಲೈಂಗಿಕ ದೌರ್ಜನ್ಯದ ಕುರಿತು ತಿಳಿಸುವುದು ಹೇಗೆ. ಇದು ಎಲ್ಲರಿಗು ಕಾಡುತ್ತಿರುವ ಪ್ರಶ್ನೆಯಾಗಿದೆ.

ಮಗುವಿನ ಮೇಲೆ ಇಂತಹ ದೌರ್ಜನ್ಯ ನಡೆಯದಂತೆ ಮಗುವಲ್ಲಿ ಜಾಗೃತಿ ಬೆಳೆಸುವುದು ಮತ್ತು ಇಂತಹ ಕೃತ್ಯಗಳ ಪ್ರಯತ್ನ ನಡೆದಲ್ಲಿ ಆ ವಿಷಯವನ್ನು ಮಗು ನಮಗೆ ತಿಳಿಸುವಂತೆ ಮಾಡಲು ಮಗುವಿಗೆ ಆ ಕುರಿತು ಜಾಗೃತಿ ಅತ್ಯಾವಶ್ಯಕ. ಲೈಂಗಿಕ ದೌರ್ಜನ್ಯ ಎಂದರೆ ಸ್ಪರ್ಶಿಸುವುದು ಅಥವಾ ಸ್ಪರ್ಶಿಸದೆ ಇರುವುದು ಎಂಬ ವ್ಯತ್ಯಾಸಗಳಿಲ್ಲ. ಮಗುವಿನ ಚಿತ್ರವನ್ನು ತನ್ನ ಲೈಂಗಿಕ ತೃಪ್ತಿಗಾಗಿ ತೆಗೆದುಕೊಂಡರು ಸಹ ಅದನ್ನು ಲೈಂಗಿಕ ದೌರ್ಜನ್ಯದ ಸಾಲಿಗೆ ಸೇರಿಸಬೇಕಾಗುತ್ತದೆ.

How To Teach Your Child About Bad Touch

ಲೈಂಗಿಕ ದೌರ್ಜನ್ಯ ತಡೆಯಬೇಕೆಂದರೆ ಮೊದಲು ನಮಗೆ ಇದು ಹೇಗೆ ಸಂಭವಿಸುತ್ತದೆ ಎಂಬ ಅರಿವು ಇರಬೇಕು. ಆಗ ನಮಗೆ ನಮ್ಮ ಮಕ್ಕಳು ಇಂತಹ ಕೃತ್ಯಗಳಿಗೆ ಹೇಗೆ ಬಲಿಪಶುವಾಗುತ್ತಾರೆ ಎಂಬ ಒಂದು ಕಲ್ಪನೆ ಸಿಗುತ್ತದೆ. ಅದರಲ್ಲು ಮಕ್ಕಳ ಮೇಲಿನ ದೌರ್ಜನ್ಯವನ್ನು ಯಾರು, ಯಾವಾಗ ಮತ್ತು ಹೇಗೆ ಮಾಡಿದರು ಎಂಬುದನ್ನು ತಿಳಿದುಕೊಳ್ಳುವುದು ಕಷ್ಟವಾಗುತ್ತದೆ. ಅದಕ್ಕಾಗಿ ನಾವು ಮಕ್ಕಳಿಗೆ ಈ ಕುರಿತು ಶಿಕ್ಷಣವನ್ನು ನೀಡಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಮಕ್ಕಳಿಗೆ ಒಳ್ಳೆಯ ಸ್ಪರ್ಶ ಮತ್ತು ದುರುದ್ದೇಶದ ಸ್ಪರ್ಶಗಳ ವ್ಯತ್ಯಾಸವನ್ನು ತಿಳಿಸಿಕೊಡುವುದು ತೀರಾ ಮುಖ್ಯವಾಗುತ್ತದೆ. ಅದು ಸರಿ ಹೇಗೆ ಇದನ್ನು ಮಕ್ಕಳಿಗೆ ತಿಳಿಸುವುದು ಎಂಬ ಮುಜುಗರ ನಿಮ್ಮನ್ನು ಕಾಡುತ್ತಿದೆಯೇ? ಈ ಸಲಹೆಗಳನ್ನು ಪಾಲಿಸಿ. ಬೀದಿಬದಿಯ ತಿಂಡಿ, ತಿನಿಸುಗಳು ನಿಮ್ಮ ಮಕ್ಕಳಿಗೆ ಸುರಕ್ಷಿತವೇ?

ದೇಹದ ಅಂಗಗಳ ಕುರಿತು ತಿಳಿಸಿ
ಮೊದಲು ನಿಮ್ಮ ಮಗುವಿಗೆ ಅದರ ದೇಹದ ಅಂಗಗಳ ಹೆಸರನ್ನು ಸರಿಯಾಗಿ ತಿಳಿಸಿಕೊಡಿ. ಅದರಲ್ಲಿ ಗುಪ್ತಾಂಗದ ಹೆಸರುಗಳನ್ನು ಸಹ ಸೇರಿಸಿ. ಇದರಿಂದ ಮಗುವಿಗೆ ಯಾರಾದರು ಗುಪ್ತಾಂಗಗಳನ್ನು ಸ್ಪರ್ಶಿಸಿದರೆ, ಅದನ್ನು ನಿಖರವಾಗಿ ನಿಮಗೆ ಅಥವಾ ಶಿಕ್ಷಕರಿಗೆ ತಿಳಿಸಲು ಸಹಾಯವಾಗುತ್ತದೆ. ಗುಪ್ತಾಂಗಗಳನ್ನು ಸಭ್ಯತೆಯ ಎಲ್ಲೆಯಲ್ಲಿ ಹೇಗೆ ಹೆಸರಿಸಬಹುದೆಂದು ಮಕ್ಕಳಿಗೆ ತಿಳಿಸಿಕೊಡಿ. ಉದಾಹರಣೆಗೆ ಚಡ್ಡಿಯಲ್ಲಿರುವ ಅಂಗಗಳು, ಸೂಸು, ಚೂಚು, 1 ಪಾರ್ಟ್ಸ್, 2 ಪಾರ್ಟ್ಸ್ ಹೀಗೆ ನಾನಾ ಹೆಸರುಗಳನ್ನು ಬಳಸಬಹುದು. ಆದರೆ ಹೆಸರು ನಿಖರವಾಗಿ ಒಂದೇ ಅಂಗವನ್ನು ಸೂಚಿಸಲಿ. ಗೊಂದಲ ಮಾಡುವುದು ಬೇಡ.

ವಿವಿಧ ಬಗೆಯ ಸ್ಪರ್ಶಗಳನ್ನು ತಿಳಿಸಿ
ಮಕ್ಕಳು ತಾವು ಅನುಭವಿಸುವ ಮತ್ತು ಎದುರಿಸಬಹುದಾದ ಸ್ಪರ್ಶಗಳ ಕುರಿತು ತಿಳುವಳಿಕೆಯನ್ನು ನೀಡಿ. ಇದರಲ್ಲಿ ಸುರಕ್ಷಿತವಾದ ಸ್ಪರ್ಶಗಳು ಅಂದರೆ ಬೆನ್ನು ತಟ್ಟುವಿಕೆ, ಭುಜದ ಮೇಲೆ ಕೈ ಹಾಕುವುದು ಇಂತಹವುಗಳನ್ನು ತಿಳಿಸಿ. ಹಾಗೆಯೇ ಮಕ್ಕಳ ಗೌರವಕ್ಕೆ ಕುಂದು ತರುವಂತಹ ಸ್ಪರ್ಶಗಳನ್ನು ಸಹ ತಿಳಿಸಿ. ಅಂತಹ ಸ್ಪರ್ಶಗಳಿಗೆ "ನೋ" ಎನ್ನಲು ಸಹಾಯಕ್ಕಾಗಿ ಕಿರುಚಿಕೊಳ್ಳುವ ಕುರಿತು ತಿಳುವಳಿಕೆ ನೀಡಿ.

ಸ್ಪರ್ಶಗಳ ವ್ಯತ್ಯಾಸವನ್ನು ಕಂಡು ಹಿಡಿಯುವುದನನ್ನು ತಿಳಿಸಿ
ಮಕ್ಕಳ ಗುಪ್ತಾಂಗಗಳನ್ನು ಅವರ ಪೋಷಕರ ಹೊರತು ಪಡಿಸಿ ಅಥವಾ ಅನಿವಾರ್ಯ ಸಂದರ್ಭದಲ್ಲಿ ಮಕ್ಕಳ ಅನುಮತಿಯಿಲ್ಲದೆ ಇತರರು ಯಾರು ಮುಟ್ಟಬಾರದು ಎನ್ನುವ ತಿಳುವಳಿಕೆ ಮಕ್ಕಳಿಗೆ ನೀಡಿ. ಮಕ್ಕಳಿಗೆ ಮುಜುಗರ ತರುವ ಮತ್ತು ಮಕ್ಕಳು ಅಸಹ್ಯಪಡುವ ರೀತಿಯಲ್ಲಿ ಮುದ್ದಿಸುವುದು ಅಥವಾ ಅಪ್ಪಿಕೊಳ್ಳುವುದನ್ನು ಸಹ ಯಾರೂ ಮಾಡಬಾರದು ಎಂಬ ತಿಳುವಳಿಕೆ ಮಕ್ಕಳಿಗೆ ನೀಡಿ.

ಕುಟುಂಬದಲ್ಲಿ ಮಕ್ಕಳನ್ನು ಸ್ಪರ್ಶಿಸುವುದು
ಇಂದು ಮಕ್ಕಳ ಪೋಷಕರಿಗು ಸಹ ಕೆಲವೊಂದು ಲಕ್ಷ್ಮಣರೇಖೆಯ ಅಗತ್ಯವಿರುತ್ತದೆ. ಕುಟುಂಬದಲ್ಲಿನ ಸದಸ್ಯರು ಮಕ್ಕಳ ಆರೋಗ್ಯ ಮತ್ತು ಸ್ವಚ್ಛತೆಯನ್ನು ಕಾಪಾಡುವ ಉದ್ದೇಶವನ್ನು ಹೊರತುಪಡಿಸಿ ಇತರ ಸಂದರ್ಭದಲ್ಲಿ ಮಕ್ಕಳ ಗುಪ್ತಾಂಗಗಳನ್ನು ಮುಟ್ಟಬಾರದು. ಅದು ಡೈಪರ್ ಬದಲಿಸಲು, ತೊಳೆಯುವುದು ಅಥವಾ ಸ್ನಾನವನ್ನು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಆರೋಗ್ಯಕರವಾದ ಸ್ಪರ್ಶ ಎಂದರೆ ಮಗುವಿನ ಆರೋಗ್ಯದ ದೃಷ್ಟಿಯಿಂದ ನೀವು ಅಥವಾ ವೈಧ್ಯರು ಮಗುವಿನ ಗುಪ್ತಾಂಗಗಳನ್ನು ಪರೀಕ್ಷಿಸುವಾಗ ಸ್ಪರ್ಶಿಸಬಹುದು. ಅದು ತೀರಾ ಅತ್ಯಾವಶ್ಯಕವಾದರೆ ಮಾತ್ರ. ಪರೀಕ್ಷೆಗಳಿಗೆ ನಿಮ್ಮ ಮಗುವನ್ನು ಅಣಿಗೊಳಿಸುವುದು ಹೇಗೆ?

ಸಾಮಾಜಿಕ ಸ್ಪರ್ಶದ ನಿಯಮಗಳು
ನಿಮ್ಮ ಮಗುವಿನ ಗುಪ್ತಾಂಗಗಳನ್ನು ಯಾರೂ ಸ್ಪರ್ಶಿಸಲು ಬಿಡದೆ ಇರುವುದನ್ನು ತಿಳಿಸಿಕೊಟ್ಟಂತೆ, ನಿಮ್ಮ ಮಗುವನ್ನು ಸಹ ಇತರರ ಗುಪ್ತಾಂಗವನ್ನು ಸ್ಪರ್ಶಿಸದೆ ಇರುವುದನ್ನು ತಿಳಿಸಿಕೊಡಿ. ತಾವು ಯಾರ ಗುಪ್ತಾಂಗವನ್ನು ಸ್ಪರ್ಶಿಸಬಾರದು ಮತ್ತು ತಮ್ಮ ಗುಪ್ತಾಂಗಗಳನ್ನು ಸಹ ಯಾರೂ ಸ್ಪರ್ಶಿಸಬಾರದು ಎಂಬ ತಿಳುವಳಿಕೆ ಮಗುವಿಗೆ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಒಳ ಉಡುಪುಗಳ ನಿಯಮ
ಮಕ್ಕಳಿಗೆ ಈ ಒಳ್ಳೆಯ ಮತ್ತು ಕೆಟ್ಟ ಸ್ಪರ್ಶಗಳನ್ನು ತಿಳಿಸಿಕೊಡಲು ಇರುವ ಒಂದು ಉತ್ತಮ ಮಾರ್ಗವೆಂದರೆ, ಅದು ಒಳ ಉಡುಪು ನಿಯಮ್ ಅಥವಾ ಅಂಡರ್ ವೇರ್ ರೂಲ್. ಹೌದು ಯಾವ ಅಂಗಗಳನ್ನು ಒಳ ಉಡುಪಿನಿಂದ ಮುಚ್ಚಿರುತ್ತೇವೇಯೋ, ಆ ಅಂಗಗಳನ್ನು ಸ್ಪರ್ಶಿಸುವುದು ಕೆಟ್ಟದ್ದು, ತಪ್ಪು ಎಂದು ತಿಳಿಸಿ. ಇದರಿಂದ ಮಗುವಿಗೆ ಈ ವಿಚಾರವನ್ನು ನೆನಪಿನಲ್ಲಿರಿಸಿಕೊಳ್ಳಲು ಸಹಾಯವಾಗುತ್ತದೆ. ಈ ಸ್ಪರ್ಶಗಳ ಕುರಿತು ಮಗು ಒಮ್ಮೆ ತಿಳಿದುಕೊಂಡರೆ, ಆಗ ಮಗುವು ನಿರ್ಭಿತಿಯಿಂದ ಯಾರಾದರು ಅಪಮಾನ ಮಾಡುವ ಸಂದರ್ಭ ಬಂದಾಗ ಸ್ಪಷ್ಟವಾಗಿ "ನೋ" ಎನ್ನುತ್ತದೆ. ಇಲ್ಲವೇ ಇತರರನ್ನು ಸಹಾಯಕ್ಕೆ ಕರೆಯುತ್ತದೆ. ಈ ವಿಚಾರವನ್ನು ನಿಮಗೂ ಸ್ಪಷ್ಟವಾಗಿ ತಿಳಿಸುತ್ತದೆ.

English summary

How To Teach Your Child About Bad Touch

Children are the most common victims of sexual abuse these days, no matter boys or girls. Parenting is now more challenging with all the increasing rate of social evils around us. Educating your child about sexual abuse has become important like the same way how you teach them to cross a road.
Story first published: Tuesday, January 27, 2015, 14:24 [IST]
X
Desktop Bottom Promotion