For Quick Alerts
ALLOW NOTIFICATIONS  
For Daily Alerts

ಶಿಶುಗಳಿಗೆ ತಮ್ಮದೇ ಆದ ಪ್ರತ್ಯೇಕ ಹಾಸಿಗೆ ಏಕೆ ಅತ್ಯವಶ್ಯಕ?

By Super
|

ಮಗುವಿನ ಜನನದ ನಂತರ ಸಾಧಾರಣವಾಗಿ ಎಲ್ಲಾ ಧರ್ಮಗಳಲ್ಲೂ ಒಂದು ಸಮಾನವಾದ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಅದೇ ಮಗುವನ್ನು ತೊಟ್ಟಿಲಿಗೆ ಹಾಕುವುದು. ಬಂಧು ಬಳಗ, ಸ್ನೇಹಿತರು, ನೆರೆಹೊರೆಯವರು ಈ ಸಮಾರಂಭದಲ್ಲಿ ಭಾಗವಹಿಸಿ ಮಗುವಿನ ಉಜ್ವಲ ಭವಿಶ್ಯಕ್ಕೆ ಶುಭಹಾರೈಸುತ್ತಾರೆ.

ತೊಟ್ಟಿಲು ಕೊಳ್ಳಲು ಅನುಕೂಲವಿರದ ಬಡವರೂ ಹಳೆಯ ಸೀರೆಯೊಂದನ್ನು ಮನೆಯ ಛಾವಣಿಯ ಯಾವುದೋ ಒಂದು ಕೊಕ್ಕೆಗೆ ಸಿಕ್ಕಿಸಿ ಸುಲಭವಾದ ತೊಟ್ಟಿಲನ್ನು ಮಾಡಿಕೊಳ್ಳುತ್ತಾರೆ. ಅಂದರೆ ಮಗುವಿಗೆ ಒಂದು ಪ್ರತ್ಯೇಕವಾದ ಮಲಗುವ ಸ್ಥಳದ ಏರ್ಪಾಡಾಗುತ್ತದೆ. ಆದರೆ ಹಲವರು ಸದಾ ತಮ್ಮ ಮಗು ತಮ್ಮ ಎದೆಗವಚಿಕೊಂಡೇ ಇರಬೇಕು, ಇದರಿಂದಾಗಿ ತಮ್ಮ ನಡುವಣ ಬಾಂಧವ್ಯ ಬೆಸೆಯುತ್ತದೆ ಎಂದು ನಂಬುತ್ತಾರೆ.

ಆದರೆ ಮನಃಶಾಸ್ತ್ರಜ್ಞರು ಮಗುವಿಗೆ ಮಲಗಲು ಪ್ರತ್ಯೇಕವಾದ ಸ್ಥಳವೇ ಅತ್ಯಂತ ಪ್ರಶಸ್ತ ಎಂದು ಅಭಿಪ್ರಾಯಪಡುತ್ತಾರೆ. ಹೆಚ್ಚಿನ ನಿದ್ದೆಯ ಅಗತ್ಯವಿರುವ ಮಕ್ಕಳು ಪ್ರತ್ಯೇಕವಾಗಿ ಮಲಗುವ ಮೂಲಕ ಉತ್ತಮ ಬೆಳವಣಿಗೆ ಮತ್ತು ಸ್ವತಂತ್ರರಾದ ವಯಸ್ಕರಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. ಆದರೆ ಕೆಲವು ಮಕ್ಕಳು ತಮ್ಮ ತಾಯಂದಿರನ್ನು ಬಿಟ್ಟು ಮಲಗಲು ಒಪ್ಪುವುದೇ ಇಲ್ಲ. ಈ ಲೇಖನದಲ್ಲಿ ಮಗುವನ್ನು ಪ್ರತ್ಯೇಕವಾಗಿ ಮಲಗಿಸಲು ಅನುಕೂಲಕರವಾದ ಕೆಲವು ಸಲಹೆಗಳನ್ನು ನೀಡಲಾಗಿದೆ. ನಿಮ್ಮ ಮಗುವಿನೊ೦ದಿಗೆ ಸ್ನೇಹಮಯಿಯಾಗಿರುವುದು ಹೇಗೆ?

Why Babies Should Sleep In Their Own Bed

ಇದಕ್ಕೂ ಮುನ್ನ ಕೆಲವು ವಿಷಯಗಳನ್ನು ನಿಮ್ಮ ವೈದ್ಯರೊಡನೆ ಪರಾಮರ್ಶಿಸಿಕೊಳ್ಳುವುದು ಒಳಿತು. ಮಗುವಿನ ವಯಸ್ಸು, ರಾತ್ರಿ ಎಷ್ಟು ಬಾರಿ ನಿದ್ದೆಯಿಂದೆದ್ದು ಮತ್ತೆ ಮಲಗುತ್ತದೆ, ರಾತ್ರಿ ಹಾಲು ಕುಡಿಯಬೇಕೆಂದು ಹಟ ಹಿಡಿಯುತ್ತದೆಯೇ ಎಂಬ ಕೆಲವು ವಿಷಯಗಳನ್ನು ಆಧರಿಸಿ ನಿಮಗೆ ಅತ್ಯಂತ ಸೂಕ್ತವಾದ ಸಲಹೆಯನ್ನು ಪಾಲಿಸಿ. ಇನ್ನೊಂದು ಪ್ರಮುಖ ವಿಷಯವೆಂದರೆ ಮಗು ರಾತ್ರಿ ಹೊರಳಾಡುವ ಸಂಭವಿರುವುದರಿಂದ ಸೂಕ್ತ ರಕ್ಷಣೆಯನ್ನು ಕಲ್ಪಿಸುವುದು ಅಗತ್ಯವಾಗಿದೆ.

ಸಿಡ್ಸ್ (Sudden Infant Death Syndrome)ನಿಂದ ಮರಣ ಹೊಂದುವುದನ್ನು ತಡೆಯಬಹುದು
ಯಾವುದೇ ಕಾರಣವಿಲ್ಲದೇ ತಾಯಿಯ ಮಡಿಲಲ್ಲಿ ಮಲಗಿರುವ ಮಗು ಬೆಳಿಗ್ಗೆದ್ದಾಗ ಮರಣಹೊಂದಿರುವ ನೂರಾರು ಘಟನೆಗಳು ವೈದ್ಯಲೋಕವನ್ನು ವಿಸ್ಮಯದಲ್ಲಿ ಮುಳುಗಿಸಿದೆ. ಇದಕ್ಕೆ ಕಾರಣ ಅಥವಾ ಚಿಕಿತ್ಸೆಯನ್ನು ಇದುವರೆಗೆ ಕಂಡುಹಿಡಿಯಲಾಗಿಲ್ಲ. ಮೂಲತಃ ಯಾವುದೇ ಒಂದು ಕೊಂಡಿ ಈ ಸಾವುಗಳಿಗೆ ಮೂಲ ಎಂದು ಇದುವರೆಗೆ ಪತ್ತೆಹಚ್ಚಲಾಗಿಲ್ಲ. ಮಲಗಿದ್ದಾಗ ತಾಯಿಯ ಕೈ ಅಥವಾ ಹೊದಿಕೆ ಮಗುವಿನ ಉಸಿರಾಟಕ್ಕೆ ಅಡ್ಡಿಯಾಗಿ ಸಾವು ಸಂಭವಿಸಿರಬಹುದೆಂದು ಸ್ಥೂಲವಾಗಿ ಅಂದಾಜಿಸಬಹುದು. ಈ ತೊಂದರೆಯಿಂದ ಮುಕ್ತಿ ಪಡೆಯಲು ಮಗುವನ್ನು ಪ್ರತ್ಯೇಕವಾಗಿ ಮಲಗಿಸುವುದು ಒಳ್ಳೆಯದು ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.

ತಮ್ಮನ್ನು ತಾವೇ ಸಂತೈಸಿಕೊಳ್ಳಲು ಸಾಧ್ಯವಾಗುತ್ತದೆ
ತಮ್ಮ ತಂದೆತಾಯಿಯರೊಟ್ಟಿಗೆ ಮಲಗುವ ಮಕ್ಕಳಲ್ಲಿ ಯಾವುದೇ ವಿಷಯಕ್ಕೂ ತಮ್ಮ ತಂದೆತಾಯಿಗಳನ್ನೇ ಅವಲಂಬಿಸುವ ಗುಣ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದಾಗಿ ಯಾವುದೇ ತೊಂದರೆಗೂ ತಮ್ಮ ತಂದೆತಾಯಿಯರೇ "ಪಾಪ, ಮಗು ಅಳುತ್ತಾ ಇದೆ, ಪಾಪ, ಮಗುವಿಗೆ ಹಸಿವಾಗಿದೆಯೋ ಏನೋ" ಎಂಬ ವ್ಯಾಕುಲತೆಯನ್ನು ಪ್ರಕಟಿಸುವುದು ಮಗುವಿಗೆ ಅಭ್ಯಾಸವಾಗಿ ಒಂಟಿಯಾಗಿ ಮಲಗುವುದಕ್ಕೆ ತುಂಬಾ ವರ್ಷಗಳವರೆಗೂ ತೊಂದರೆ ನೀಡಬಹುದು. ಬದಲಿಗೆ ಚಿಕ್ಕವಯಸ್ಸಿನಿಂದಲೇ ಒಂಟಿಯಾಗಿ ಮಲಗಿಸುವ ಅಭ್ಯಾಸ ಮಾಡಿಸಿದರೆ ಮಗು ತನ್ನನ್ನು ತಾನೇ ಸಂತೈಸಿಕೊಳ್ಳಲು ಕಲಿಯುತ್ತದೆ ಹಾಗೂ ಮುಂದೆ ಸ್ವತಂತ್ರ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ.

ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ
ಶಿಶುಗಳನ್ನು ಮಲಗಿಸಲು ಲಾಲಿ ಹಾಡುವುದನ್ನು ಕ್ರಮೇಣ ಕಡಿಮೆ ಮಾಡಿಕೊಳ್ಳುತ್ತಾ ಬರಬೇಕು. ಬದಲಿಗೆ ನೀತಿಕತೆ ಮತ್ತು ಧಾರ್ಮಿಕ ವಿಷಯಗಳನ್ನು ತಿಳಿಸಿ ಸ್ವತಂತ್ರವಾಗಿ ಮಲಗಿಕೊಳ್ಳಲು ಪ್ರೇರೇಪಿಸುವುದು ಆರೋಗ್ಯಕರವಾಗಿದೆ. ಇಲ್ಲದಿದ್ದರೆ ಪ್ರತಿಬಾರಿಯೂ ಮಗು ಮಲಗುವ ಮುನ್ನ ತಂದೆತಾಯಿಯರ ಇರುವಿಕೆಯನ್ನು ಆಗ್ರಹಿಸುತ್ತವೆ. ಯಾವುದೋ ಕಾರಣಕ್ಕೆ ಪಾಲಕರು ಉಪಸ್ಥಿತರಿಲ್ಲದೇ ಇದ್ದರೆ ಮಗು ಮಲಗದೇ ಇಡಿಯ ರಾತ್ರಿ ಮನೆಯವರಿಗೆಲ್ಲಾ ತೊಂದರೆ ನೀಡುತ್ತದೆ. ಇದಕ್ಕಾಗಿ ಪ್ರತಿದಿನ ಒಬ್ಬರೇ ಕಥೆ ಹೇಳದೇ ಬಾರಿಬಾರಿಯಾಗಿ ಹೇಳುವುದು ಉತ್ತಮ.

ತಾಯಿಯನ್ನು ಅಂಟಿಕೊಂಡೇ ಇರುವ ತೊಂದರೆಯಿಂದ ತಪ್ಪಿಸಿದಂತಾಗುತ್ತದೆ
ಒಂದು ವೇಳೆ ಮಗುವನ್ನು ಸದಾ ಎದೆಗವಚಿಕೊಂಡೇ ಇದ್ದರೆ ಒಂದು ಕ್ಷಣದ ಅಗಲಿಕೆಯನ್ನೂ ಮಗು ಸಹಿಸುವುದಿಲ್ಲ. ಇದು ಖಂಡಿತಾ ನಿಮ್ಮ ಬಾಂಧವ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಮಗು ಬೆಳೆಯುತ್ತಾ ಬಂದಂತೆ ತಾಯಿಯಿಂದ ಕೆಲಕಾಲ ದೂರವಿರುವುದು ತುಂಬಾ ಅಗತ್ಯವಾಗಿದೆ. ಉದಾಹರಣೆಗೆ ಶಾಲೆಗೆ ಹೋಗುವ ಸಮಯ. ಆ ವೇಳೆಯಲ್ಲಿಯೂ ತಾಯಿ ಜೊತೆಗೇ ಇರಬೇಕೆಂದು ರಚ್ಚೆ ಹಿಡಿದರೆ ಈ ತೊಂದರೆಯಿಂದ ಹೊರಬರುವುದು ತುಂಬಾ ಕಷ್ಟಕರವಾಗಿದೆ. ಇದಕ್ಕಾಗಿ ಚಿಕ್ಕವಯಸ್ಸಿನಿಂದಲೇ ಮಕ್ಕಳನ್ನು ಪ್ರತ್ಯೇಕವಾಗಿ ಮಲಗಿಸುವ ಮೂಲಕ ಸ್ವತಂತ್ರ ಮನೋಭಾವವನ್ನು ಬೆಳೆಸಿದರೆ ಈ ತೊಂದರೆ ಎದುರಾಗದು.

ತಾಯಿ ಮಗುವಿನ ಬಾಂಧವ್ಯ ಹೆಚ್ಚಿಸಲು ನೆರವಾಗುತ್ತದೆ
ಪ್ರತಿ ಮಹಿಳೆಗೂ ತನ್ನ ಮಗುವಿನ ಲಾಲನೆ ಪಾಲನೆಯ ಜೊತೆಜೊತೆಗೇ ಇತರ ಕೆಲಸಗಳೂ ಬಹಳಷ್ಟಿರುತ್ತವೆ. ಮಗುವಿಗೆ ನಾಲ್ಕರಿಂದ ಆರು ವಾರಗಳಾಗುವವರೆಗೆ ಮಗುವನ್ನು ಜೊತೆಗೆ ಮಲಗಿಸಿಕೊಂಡರೂ ಆರು ವಾರಗಳ ಬಳಿಕ ನಿಧಾನವಾಗಿ ಪ್ರತ್ಯೇಕ ಹಾಸಿಗೆಯನ್ನು ಏರ್ಪಾಡು ಮಾಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಇದರಿಂದಾಗಿ ತಾಯಿ ಮಗುವಿನ ಬಾಂಧವ್ಯ ಉತ್ತಮವಾಗುವುದು ಮಾತ್ರವಲ್ಲದೇ ತಾಯಿಯನ್ನೇ ನೆಚ್ಚಿಕೊಳ್ಳುವ ಅಭ್ಯಾಸವೂ ಕಡಿಮೆಯಾಗುತ್ತದೆ.

English summary

Why Babies Should Sleep In Their Own Bed

This is a matter of debate where all have different opinions. But, the best solution for this depends on what works out best for the parents and the kids. There are different options that one can try out – either have the child sleep with the parents or use a cradle near the parent’s bed or use a separate room for the child.
X
Desktop Bottom Promotion