For Quick Alerts
ALLOW NOTIFICATIONS  
For Daily Alerts

ಆಧುನಿಕ ತಂತ್ರಜ್ಞಾನ ಮಕ್ಕಳನ್ನು ದಿಕ್ಕು ತಪ್ಪಿಸುತ್ತಿದೆಯೇ?

By Super
|

ಸುಮಾರು ಮೂವತ್ತು ವರ್ಷಗಳ ಹಿಂದೆ ಒಂದು ಮಧ್ಯಮ ವರ್ಗದ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ಉಪಕರಣವೆಂದರೆ ರೇಡಿಯೋ, ಟೇಪ್ ರಿಕಾರ್ಡರ್ ಮಾತ್ರ. ಸ್ವಲ್ಪ ಅನುಕೂಲಸ್ಥರಿಗೆ ಮನೆಯಲ್ಲೊಂದು ಲ್ಯಾಂಡ್ ಲೈನ್ ಫೋನು. ಆಗ ಮಕ್ಕಳಿಗೆ ಈ ಉಪಕರಣಗಳನ್ನು ಮುಟ್ಟಲು ಅವಕಾಶವೇ ಇರಲಿಲ್ಲ. ಇಡಿಯ ಊರಿಗೆ ಕೇಳುವಂತೆ ಹಳೆಯ ಹತ್ತು ಕೇಜಿ ತೂಕದ ಕಪ್ಪನೆಯ ಟೆಲಿಫೋನ್ ರಿಂಗಣಿಸಿದರೂ ಪಕ್ಕದಲ್ಲಿ ಆಟವಾಡುತ್ತಿರುವ ಮಕ್ಕಳಿಗೆ ಫೋನ್ ಎತ್ತುವ ಅಪ್ಪಣೆ ಇದ್ದಿರಲಿಲ್ಲ.

ಅವರಿಗೆ ಇದ್ದ ಸ್ವಾತಂತ್ರ್ಯವೆಂದರೆ ದೂರದಲ್ಲೆಲ್ಲೋ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದ ಹಿರಿಯರಿಗೆ 'ಫೋನ್ ಬಂದಿದೆ' ಎಂಬ ಸಂದೇಶ ಮುಟ್ಟಿಸುವುದು ಮಾತ್ರ. ಇನ್ನೂ ಸ್ವಲ್ಪ ಮುಂದುವರೆದರೆ ಹಿರಿಯರ ಅನುಪಸ್ಥಿತಿಯಲ್ಲಿ ಫೋನ್ ಕರೆ ಸ್ವೀಕರಿಸಿ ಮನೆಯ ಹಿರಿಯರು ಇಲ್ಲ, ಬಂದರೆ ಏನು ತಿಳಿಸಬೇಕು ಎಂಬ ಸಂದೇಶ ಪಡೆದುಕೊಳ್ಳುವುದು. ರೇಡಿಯೋ, ಟೀವಿಗಳನ್ನು ಹಿರಿಯರ ಅಪ್ಪಣೆಯಿಲ್ಲದೆ ಮುಟ್ಟುವಂತೆಯೇ ಇರಲಿಲ್ಲ.

How Technology Spoils Kids?

ಈಗ ಕಾಲ ಬದಲಾಗಿದೆ. ಅಜ್ಜನೇ ತನ್ನ ಮೊಮ್ಮಗನ ಹತ್ತಿರ ತನ್ನ ಮೊಬೈಲಿನಲ್ಲಿರುವ ಯಾವುದೋ ವೈಶಿಷ್ಟ್ಯವನ್ನು ವಿವರಿಸಲು ಕೇಳಬೇಕಿದೆ. ಹಿಂದೆ ಮಕ್ಕಳಿಗೆ ಆಟವಾಡುವುದೆಂದರೆ ಅದರಲ್ಲಿ ಹಣ ಖರ್ಚು ಮಾಡಿ ಆಟದ ವಸ್ತುವೊಂದನ್ನು ತರುವಂತಹ ಪ್ರಮೇಯವೇ ಇರಲಿಲ್ಲ. ಇಂದು ಅವರ ಆಟದ ಸಾಮಾನುಗಳಿಗೇ ತಿಂಗಳಿಗೆ ಒಂದಿಷ್ಟು ಹಣ ಮುಡಿಪಾಗಿಡಬೇಕು. ಇಂದು ಮಕ್ಕಳ ಕೈಯಲ್ಲಿ ಆಟದ ಸಾಮಾನುಗಳ ಬದಲಿಗೆ ಮೊಬೈಲು, ಟ್ಯಾಬ್, ಮೊದಲಾದವು ಬಂದಿವೆ. ಇವುಗಳಲ್ಲಿರುವ ಕಂಪ್ಯೂಟರ್ ಆಧಾರಿತ ಆಟಗಳಿಗೆ ಸರಿಸುಮಾರು ಪ್ರತಿಯೊಂದು ಮಗುವೂ ವ್ಯಸನಿಯಾಗಿದೆ.

ಆದರೆ ಇದರಿಂದ ನಮ್ಮ ಮಕ್ಕಳು ತಮ್ಮ ಸ್ವಾಭಾವಿಕ ಬಾಲ್ಯದಿಂದ ವಂಚಿತರಾಗುತ್ತಿದ್ದಾರೆಯೇ? ಇಂದು ಇದು ನಮ್ಮ ಎದುರಿಗಿರುವ ಚಿಂತನೆಯ ವಿಚಾರ. ಆಧುನಿಕ ತಂತ್ರಜ್ಞಾನದ ಬಳಕೆ ಬಾಲ್ಯದಿಂದಲೇ ಆದರೆ ಭವಿಷ್ಯದಲ್ಲಿ ಒಳ್ಳೆಯದು ಎಂಬ ವಾದವನ್ನು ಒಪ್ಪಬಹುದಾದರೂ ಇದೇ ಸಮಯದಲ್ಲಿ ಅವರ ನಿಜವಾದ ಬಾಲ್ಯದ ಆಟ, ನಿಸರ್ಗವನ್ನು ಅರ್ಥೈಸಿಕೊಳ್ಳುವ, ಜನರೊಂದಿಗೆ ಬೆರೆಯುವ, ನಮ್ಮ ಸಂಸ್ಕೃತಿಯನ್ನು ಕಲಿಯುವ, ನಮ್ಮ ಧರ್ಮ, ಇತಿಹಾಸ, ಪವಿತ್ರ ಗ್ರಂಥಗಳನ್ನು ಅರಿಯುವ, ಹಿರಿಯರಿಗೆ ನೀಡುವ ಗೌರವ, ಅವರಿಂದ ಪಡೆಯಬೇಕಾದ ಆಶೀರ್ವಾದ, ಗುರುಗಳಿಂದ ಪಡೆಯಬೇಕಾದ ವಿದ್ಯೆ ಮೊದಲಾದ ಹತ್ತು ಹಲವು ಅಂಶಗಳಿಂದ ಅವರನ್ನು ವಂಚಿಸುತ್ತಿದ್ದೇವೆಯೇ ಎಂದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ. ಉದಾಹರಣೆಗೆ ಕಂಪ್ಯೂಟರ್ ನಲ್ಲಿ ಥೀಫ್ (ಕಳ್ಳ) ಎಂಬ ಆಟ ಇದೆ. ಇದನ್ನು ಆಟವಾಡುತ್ತಾ ಮಗು ಮನದಲ್ಲಿ ತಾನೇ ಕಳ್ಳನಾಗುತ್ತಾ ಹೋಗುತ್ತದೆ. ಮಗುವಿಗೆ ಎಣ್ಣೆ ಮಸಾಜ್ ಒಳ್ಳೆಯದೇ?

ಕೊನೆಗೊಮ್ಮೆ ಮಗುವಿನ ಯೋಚನೆಯೂ ಕಳ್ಳನಂತೆಯೇ ಆಗುತ್ತಾ ಹೋಗುತ್ತದೆ. ಸಂಶೋಧನೆಯೊಂದು ಇಂದಿನ ಮಕ್ಕಳು ತಮ್ಮ ಗ್ಯಾಜೆಟ್‌ಗಳ ಮೂಲಕ ಹಿಂದಿನ ಮಕ್ಕಳಿಗಿಂತಲೂ ಹೆಚ್ಚಿನ ಐಕ್ಯೂ ಪಡೆದಿದ್ದಾರೆ ಎಂದು ತಿಳಿಸುತ್ತದೆ. ಆದರೆ ಈ ಐಕ್ಯೂ ಪಡೆಯುವ ಭರದಲ್ಲಿ ಆ ಮಗು ತನ್ನ ಬಾಲ್ಯವನ್ನೇ ಕಳೆದುಕೊಳ್ಳಬೇಕಾಯ್ತೇ?

ಇಂದು ಸುಮ್ಮನೇ ಅತ್ತಿತ್ತ ಕಣ್ಣು ಹಾಯಿಸಿದರೆ ಹೆಚ್ಚೂ ಕಡಿಮೆ ಎಲ್ಲಾ ಮಕ್ಕಳು ಒಂದಲ್ಲಾ ಒಂದು ಗ್ಯಾಜೆಟ್ಟಿನಲ್ಲಿ ಮಗ್ನರಾಗಿರುವುದು ಕಂಡುಬರುತ್ತದೆ. ಬಾಲ್ಯವನ್ನೇ ತಿನ್ನುತ್ತಿರುವ ಈ ರಾಕ್ಷಸನ ಇಂದಿನ ಮಂದಹಾಸ ನಾಳೆ ಅಟ್ಟಹಾಸವಾಗುವ ಮುನ್ನ ಹಿರಿಯರೆಲ್ಲರೂ ಈ ಬಗ್ಗೆ ಚಿಂತಿಸುವ ಅಗತ್ಯವಿದೆ. ನಾಳೆ ಮಕ್ಕಳು ವಯಸ್ಕರಾದ ಬಳಿಕ ವೃದ್ದಾಪ್ಯವನ್ನು ತಲುಪಿದ ತಮ್ಮ ಹೆತ್ತವರ ಬಗ್ಗೆ ಕಾಳಜಿಯಿಂದ ವಿಮುಖರಾಗಿರುವುದು ಈಗ ಮುಂದುವರೆದ ದೇಶಗಳಲ್ಲಿ ಕಂಡುಬರುತ್ತಿರುವ ವಾಸ್ತವ. ಈ ಬಗ್ಗೆ ಕೆಲವು ವಿವರಗಳನ್ನು ನೋಡೋಣ

ಮಗು ಸಮಾಜದೊಂದಿಗೆ ಬೆರೆಯುವುದನ್ನು ಕಡಿಮೆ ಮಾಡುತ್ತದೆ
ತಂದೆತಾಯಿಗಳು ಎಲ್ಲಾದರೂ ಕರೆದರೆ ಮಗು ಬರುವುದಿಲ್ಲವೆನ್ನುತ್ತದೆಯೇ? ಸ್ನೇಹಿತರೊಂದಿಗೆ ಆಟವಾಡಿಕೋ ಹೋಗು ಎಂದು ತಿಳಿಸಿದರೆ ನೆಟ್ಟಗೆ ತನ್ನ ಟ್ಯಾಬ್ ಅಥವಾ ಗೇಮ್ ಗ್ಯಾಜೆಟ್ಟನ್ನು ಕೈಗೆ ತೆಗೆದುಕೊಳ್ಳುತ್ತಿದೆಯೇ? ಇದಕ್ಕೆ ಉತ್ತರ ಹೌದು ಎಂದಾದರೆ ಮಗು ತನ್ನ ಗ್ಯಾಜೆಟ್ಟಿಗೆ ವ್ಯಸನವಾಗಿದೆ ಎಂದೇ ಅರ್ಥ. ಕ್ರಮೇಣ ಮಗು ಸಮಾಜದಿಂದ ವಿಮುಖನಾಗುತ್ತಾ ಹೋಗಿ ಕಡೆಗೆ ತನ್ನ ಗೂಡಿನಲ್ಲಿ ಬಂದಿಯಾಗಿಬಿಡುತ್ತದೆ. ಸಮಾಜದಿಂದ ವಿಮುಖನಾಗುವುದು ಭವಿಷ್ಯದಲ್ಲಿ ಭಾರೀ ನಷ್ಟ ಮತ್ತು ಕಷ್ಟಗಳಿಗೆ ಕಾರಣವಾಗುತ್ತದೆ. ಈ ಜಗತ್ತಿನಲ್ಲಿ ಜೀವನಕ್ಕೆ ನಮಗೆಲ್ಲರಿಗೂ ಒಬ್ಬರನ್ನೊಬ್ಬರ ಒಡನಾಟ ಬಹು ಮುಖ್ಯ. ನಾಳೆ ಸಮಾಜದ ವಿಭಿನ್ನ ಜನರೊಂದಿಗೆ ಬೆರೆತು ಉತ್ತಮ ಜೀವನ ನಡೆಸಲು ಬಾಲ್ಯದಿಂದಲೇ ಜನರೊಂದಿಗಿನ ಒಡನಾಟ ಅಗತ್ಯ. ವ್ಯಸನಿಯಾದ ಮಗು ತನ್ನ ಗ್ಯಾಜೆಟ್ಟಿನಲ್ಲಿರುವ ಆಟದ ರೂಪಕಕ್ಕೇ ಸುತ್ತಮುತ್ತಲಿನ ಜನರಿಗಿಂತ ಹೆಚ್ಚಿನ ಮಹತ್ವ ನೀಡುವುದು ಸಮಾಜದ ದೃಷ್ಟಿಯಿಂದ ಮಾರಕವಾಗಿದೆ. ಚಟುವಟಿಕೆಯಲ್ಲಿ ಜಡತೆ, ನಿರುತ್ಸಾಹ, ದೈಹಿಕ ವ್ಯಾಯಾಮ ಮಾಡಲು ಹಿಂದೇಟು ಹಾಕುವುದು ನಿಮ್ಮ ಮಗುವಿನ ಬಿಡುವಿನ ವೇಳೆಯಲ್ಲಿ ಯಾವ ಆಟ ಆಡಲು ಉತ್ಸಾಹ ತೋರಿಸುತ್ತದೆ ಎಂದು ಗಮನಿಸಿ.

ಒಂದು ವೇಳೆ ಹೊರಗೆ ಹೋಗಿ ಬಾಸ್ಕೆಟ್ ಬಾಲ್, ಕ್ರಿಕೆಟ್, ಕಬಡ್ಡಿ ಮೊದಲಾದ ದೈಹಿಕ ಶ್ರಮ ಬೇಡುವ ಆಟಗಳ ಬದಲಾಗಿ ಕಂಪ್ಯೂಟರ್ ನಲ್ಲಿ ಅಥವಾ ಗ್ಯಾಜೆಟ್ಟಿನಲ್ಲಿ ಆಟ ಆಡಲು ಬಯಸುತ್ತಿದೆಯೇ? ಸ್ನೇಹಿತರ ಜೊತೆ ಹೊರಗೆ ಆಟವಾಡುವ ಬದಲು ಟೀವಿ ನೋಡುವುದನ್ನು ಬಯಸುತ್ತಿದೆಯೇ? ಹೌದು ಎಂದಾದರೆ ಗ್ಯಾಜೆಟ್ಟಿನ ವ್ಯಸನದ ಇನ್ನೊಂದು ಮುಖವಾದ ಜಡತೆ ಆವರಿಸಿಕೊಂಡಿದೆ ಎಂದು ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಇದರ ಪರಿಣಾಮವಾಗಿ ಬಾಲ್ಯದ ಆಟಗಳಿಂದ ವಂಚಿತರಾಗಿ ಆರೋಗ್ಯಕರ ಮೈಕಟ್ಟು ಹೊಂದುವುದರಿಂದ ವಂಚಿತರಾಗುತ್ತಾರೆ. ನಿಧಾನವಾಗಿ ಸ್ಥೂಲಕಾಯ ಆವರಿಸುತ್ತಾ ಹೋಗುತ್ತದೆ. ತತ್ಪರಿಣಾಮವಾಗಿ ಮಧುಮೇಹ, ಹೃದಯಸಂಬಂಧಿ ರೋಗಗಳು, ಎಂದೋ ಆಗಮಿಸಬೇಕಾಗಿದ್ದ ರೋಗಗಳು ಚಿಕ್ಕವಯಸ್ಸಿನಲ್ಲಿಯೇ ಆವರಿಸುತ್ತವೆ. ಮಗುವಿನ ಬೇಧಿ ಹೋಗಲಾಡಿಸಲು ಮನೆ ಮದ್ದು

ಸಿಡುಕಿನ ಪ್ರವೃತ್ತಿ ಹೆಚ್ಚುತ್ತದೆ
ಒಂದು ವೇಳೆ ಮಗು ತನ್ನ ಗ್ಯಾಜೆಟ್ಟಿನಲ್ಲಿ ಇಡೀ ದಿನ ಆಟವಾಡುತ್ತಾ ಅಥವಾ ಟೀವಿ ನೋಡುತ್ತಾ ಕಾಲ ಕಳೆದು ತನ್ನ ಊಟ, ಆಟ, ಹಿರಿಯರೊಂದಿಗೆಲ್ಲೋ ಹೋಗಬೇಕಾಗಿದ್ದ ಕಾರ್ಯಕ್ರಮ ಮೊದಲಾದವುಗಳಿಂದ ವಂಚಿತರಾಗುತ್ತಿದ್ದಾರೆಯೇ? ಇದರ ಪರಿಣಾಮ ಸಿಡುಕಿನ ಪ್ರವೃತ್ತಿ ಹೆಚ್ಚುವುದು. ಇಡಿಯ ದಿನ ಆಟವಾಡಿದ ಬಳಿಕ ಆ ಆಟ ಒಂದು ರೋಚಕ ಹಂತಕ್ಕೆ ತಲುಪಿದ್ದು ಇನ್ನು ಕೆಲವೇ ಸಮಯದಲ್ಲಿ ಪ್ರಮುಖ ಹಂತವೊಂದನ್ನು ದಾಟುವ ಪ್ರಯತ್ನದಲ್ಲಿರುತ್ತದೆ. ಈ ಪ್ರಯತ್ನ ಇಡಿಯ ದಿನ ಮುಂದುವರೆಯುತ್ತಲೇ ಹೋಗುತ್ತದೆ.

ಒಂದು ವೇಳೆ ಈ ಸಮಯದಲ್ಲಿ ಊಟಕ್ಕೋ, ಆಟಕ್ಕೋ ಕರೆದರೆ ಮಗು ಆಟದಲ್ಲಿ ತನ್ನ ಸ್ಥಾನವನ್ನು ಕಳೆದುಕೊಳ್ಳಲು ಎಂದೂ ಸಿದ್ಧವಾಗುವುದಿಲ್ಲ, ಬದಲಿಗೆ ತನ್ನ ಸಿಡುಕನ್ನು ಪ್ರಕಟಿಸುತ್ತದೆ. ಕ್ರಮೇಣ ಆಟ, ಊಟ, ಹಿರಿಯರ ಸಲಹೆ, ಆಜ್ಞೆಗಳೆಲ್ಲಾ ಆಟದ ಮುಂದೆ ತೃಣಸಮಾನವಾಗಿ ಸಿಡುಕುವುದು ಸಿದ್ಧ ಉತ್ತರವಾಗಿಬಿಡುತ್ತದೆ. ಸ್ವಲ್ಪ ಒತ್ತಡ ಹೇರಿದರೆ ಸಿಡುಕು ಕೋಪವಾಗಿ ಪರಿವರ್ತನೆಗೊಂಡು ವರ್ತನೆ ಬೇರೆಯೇ ರೂಪ ಪಡೆದುಕೊಳ್ಳುತ್ತದೆ. ಬಲವಂತವಾಗಿ ಮಗುವಿನ ಕೈಯಿಂದ ಗ್ಯಾಜೆಟ್ ಕಿತ್ತುಕೊಂಡರೆ ಕೋಪ ಭುಗಿಲೆದ್ದು ಪ್ರಾಣ ತೆಗೆಯುವ ಅಥವಾ ಪ್ರಾಣ ಕಳೆದುಕೊಳ್ಳುವವರೆಗಿನ ತೀರ್ಮಾನವನ್ನು ಮಗು ತೆಗೆದುಕೊಳ್ಳಬಹುದು.

ಮಂದವಾಗುವ ದೃಷ್ಟಿ, ಕುಂಠಿತವಾಗುವ ಕಣ್ಣುಗಳ ಸಾಮರ್ಥ್ಯ
ಕಣ್ಣುಗಳ ಉತ್ತಮ ವ್ಯಾಯಾಮಕ್ಕೆ ಹತ್ತಿರ ಹಾಗೂ ದೂರದ ವಸ್ತುಗಳನ್ನು ಸರಿಸಮಾನವಾಗಿ ನೋಡುತ್ತಿರುವುದು ಅಗತ್ಯವಾಗಿದೆ. ಒಂದು ವೇಳೆ ಕೇವಲ ಹತ್ತಿರದ ಬಿಂಬವನ್ನೇ ನೋಡುತ್ತಾ ಇಡಿಯ ದಿನ ಕಳೆಯುವುದರಿಂದ ದೂರ ನೋಡಲು ಅಗತ್ಯವಿರುವ ಸ್ನಾಯುಗಳಿಗೆ ಕೆಲಸವೇ ಇಲ್ಲದೇ ಸೊರಗಿ ಅಗತ್ಯಬಿದ್ದಾಗ ತನ್ನ ಸಾಮರ್ಥ್ಯಕ್ಕೆ ಅನುಸಾರವಾಗಿ ಕೆಲಸ ಮಾಡಲು ಅಸಮರ್ಥವಾಗುತ್ತವೆ. ಪರಿಣಾಮವಾಗಿ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡಕ ಮೂಗಿಗೇರುತ್ತದೆ. ಇಂದು ನಮ್ಮ ಸುತ್ತಮುತ್ತಲಿರುವ ಮಕ್ಕಳಲ್ಲಿ ಹೆಚ್ಚಿನವರು ಕನ್ನಡಕ ತೊಡುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.

English summary

How Technology Spoils Kids?

We may be beaming parents and grandparents of children who can easily understand how to use a computer and tablet, while we make efforts to master them. But do we really have something to be proud of here? Technology and kids are becoming inseparable and this is leading to various complications in the lives of children.
X
Desktop Bottom Promotion