For Quick Alerts
ALLOW NOTIFICATIONS  
For Daily Alerts

ಜೀವಸತ್ವಗಳಿಂದ ಕೂಡಿರಲಿ ಮಕ್ಕಳ ಉಪಹಾರ

|

ಬೆಳಿಗ್ಗೆ ಎದ್ದ ತಕ್ಷಣ ಶ್ರೀಮಂತ ತಿನಿಸುಗಳು ಎನ್ನಿಸಿಕೊಂಡಿರುವ ಸ್ಯಾಂಡ್ ವಿಚ್,ಬ್ರೆಡ್ ರೋಸ್ಟ್ ಗಳಂತಹ ತಿಂಡಿಗಳನ್ನು ಮಕ್ಕಳಿಗೆ ನೀಡುವುದರ ಮೂಲಕ ಅವರ ಆರೋಗ್ಯಕರ ಬೆಳವಣಿಗೆಗೆ ಸ್ವತಃ ನಾವೇ ಎಷ್ಟು ತಡೆಯೊಡ್ಡುತ್ತಿದ್ದೇವೆ ಎಂಬುದನ್ನೋಮ್ಮೆ ಯೋಚಿಸಿ ನೋಡಿ. ಪ್ರತಿದಿನ ನಾವು ತಿನ್ನುವ ಆಹಾರದಲ್ಲೇ ಎಲ್ಲಾ ಪೋಷಕಾಂಶಗಳೂ ಅಡಗಿರುವುದರಿಂದ ಅವುಗಳನ್ನೇ ಮಕ್ಕಳಿಗೆ ಸೇವಿಸಲು ನೀಡಿ ನಮ್ಮ ಕಣ್ಮುಂದೆಯೇ ಅವರು ಆರೋಗ್ಯವಾಗಿ ತುಂಟಾಟವಾಡುವುದನ್ನು ನೋಡುವುದೇ ಸೂಕ್ತವಲ್ಲವೇ?

ಮಕ್ಕಳ ಬೆಳವಣಿಗೆಯಲ್ಲಿ ಮುತುವರ್ಜಿ ವಹಿಸುವುದು ಬಹಳ ಮುಖ್ಯವಾದ ವಿಷಯ. ಮಕ್ಕಳ ಸಂಪೂರ್ಣ ಆರೋಗ್ಯಕ್ಕೆ ಯಾವ ಯಾವ ವಿಟಮಿನ್ ಗಳ ಅವಶ್ಯಕತೆಯಿದೆಯೋ ಅಂತಹ ವಿಟಮಿನ್ ಅಥವಾ ಪೋಷಕಾಂಶಗಳಿರುವ ತಿಂಡಿತಿನಿಸುಗಳನ್ನೇ ಮಕ್ಕಳಿಗೆ ಕೊಡುವುದು ಅತ್ಯವಶ್ಯಕ.

Healthy Breakfast Recipes for Kids

ವಿಟಮಿನ್ ಎ : ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಬಹಳ ಪ್ರಮುಖವಾದ ಅಂಶ. ಇತ್ತೀಚಿಗೆ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದ್ದು ಶಾಲೆಗೆ ಹೋಗುವ ಮಗು ಇದರಿಂದ ದೂರ ಉಳಿಯಬೇಕಾದ್ದು ಅಗತ್ಯ. ಆದ್ದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ ಎ ಅಂಶವಿರುವ ಉಪಹಾರವನ್ನು ನಿಮ್ಮ ಮಗುವಿಗೆ ತಿನಿಸುವುದು ಒಳಿತು. ದಿನಬಳಕೆಯ ಕ್ಯಾರೆಟ್, ಗೆಣಸು, ಮೊಟ್ಟೆ, ಹಾಲು ಮುಂತಾದವುಗಳಲ್ಲಿ ಪೋಷಕಾಂಶ 'ಎ'ಯನ್ನು ಒಳಗೊಂಡಿದೆ. ಆದರೆ ಮಕ್ಕಳು ಈ ತರಕಾರಿಗಳನ್ನು ಹಾಗೆಯೇ ತಿನ್ನಲುಕೊಟ್ಟರೆ ಅಥವಾ ಪ್ರತಿದಿನದಂತೆ ಉಪಹಾರ ತಯಾರಿಸಿದರೆ ತಿನ್ನದೇ ಹೋಗಬಹುದು. ಕ್ಯಾರೆಟನ್ನು ಬಳಸಿ ವಿವಿಧ ತಿಂಡಿಗಳನ್ನು ತಯಾರಿಸಬಹುದು. ಸಾಮಾನ್ಯವಾಗಿ ತಯಾರಿಸುವಂತೆ ಇಡ್ಲಿ ಮಾಡಿದರೆ ಅದು ನಿಮ್ಮ ಮಗುವಿಗೆ ಇಷ್ಟಾವಾಗದೇ ಇರಬಹುದು. ಕ್ಯಾರೆಟನ್ನು ತುರಿದು ಜೊತೆಗೆ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಇಡ್ಲಿ ಹಿಟ್ಟಿನೊಂದಿಗೆ ಬೆರೆಸಿ ಇಡ್ಲಿ ಮಾಡಿ. ಇದರಿಂದ ತಿಂಡಿಯು ಕಲರ್ ಫುಲ್ ಆಗಿರುವುದರ ಜೊತೆಗೆ ಮಕ್ಕಳು ಖುಷಿಯಿಂದ ಸೇವಿಸುತ್ತಾರೆ.

ನಿಮ್ಮ ಮಗುವಿಗೆ ಹಾಲನ್ನಂತೂ ದಿನವೂ ಕೊಡುತ್ತೀರಲ್ಲ? ಅದೂ ನಿಮ್ಮ ಮಗುವಿಗೆ ಬೇಡವಾಗಬಹುದು. ಆದರೆ ಸರಿಯಾದ ರೀತಿಯಲ್ಲಿ ಮಗುವಿನ ಬೆಳವಣಿಗೆಗೆ ಹಾಲು ಬೇಕೆ ಬೇಕು. ಕೇವಲ ಹಾಲನ್ನು ಕೊಡುವ ಬದಲು ಅದಕ್ಕೆ ಧಾನ್ಯಗಳನ್ನು ಒಣಗಿಸಿ ಪುಡಿಮಾಡಿ ದಿನಕ್ಕೊಂದು ಧಾನ್ಯದ ಪುಡಿಯನ್ನು ಮಿಶ್ರಣ ಮಾಡಿ ಕೊಡಿ. ಬೆಳಿಗ್ಗೆ ಒಂದು ಲೋಟ ಧಾನ್ಯ ಮಿಶ್ರಿತ ಹಾಲು ನಿಮ್ಮ ಮಗುವನ್ನು ದಿನವಿಡಿ ಲವಲವಿಕೆಯಿಂದ ಇರುವಂತೆ ಮಾಡುತ್ತದೆ. ರಾಗಿ, ಗೋಧಿ, ನೆಲಗಡಲೆ ಮುಂತಾದ ಧಾನ್ಯಗಳು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಮಕ್ಕಳ ಕಣ್ಣು ಹಾಗೂ ಚರ್ಮದ ಆರೋಗ್ಯಕ್ಕೂ ಉತ್ತಮವಾದವು.

ವಿಟಮಿನ ಬಿ: ಬೆಳೆಯುತ್ತಿರುವ ಮಕ್ಕಳಲ್ಲಿ ಶಕ್ತಿ (ಎನರ್ಜಿ), ಚುರುಕುತನ, ತುಂಟಾಟ ಇವೆಲ್ಲ ಇರಲೇಬೇಕು. ಆದರೆ ಯಾವುದೇ ಮಗು ಮಂದ ಬುದ್ಧಿಯಿಂದ ಮೂಲೆಹಿಡಿದು ಕುಳಿತಿದ್ದರೆ ಯಾವುದೇ ಪಾಲಕರಿಗೆ ಆಘಾತವಾಗುವುದು ಸಹಜ. ಸಾಮಾನ್ಯವಾಗಿ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಮಕ್ಕಳಲ್ಲಿ ವಿಟಮಿನ್ ಬಿ (ಬಿ೨, ಬಿ೩, ಬಿ೬,ಬಿ೧೨)ಯ ಪ್ರಮಾಣ ಕಡಿಮೆಯಿರುತ್ತದೆ. ಆದ್ದರಿಂದ ಮಗುವಿನ ಬೆಳವಣಿಗೆಯ ಪ್ರತಿ ಹಂತದಲ್ಲೂ ಅವರ ಆಹಾರ ಕ್ರಮಗಳಲ್ಲೂ ಗಮನವಿಡಬೇಕಾದ್ದು ತಂದೆ ತಾಯಿಗಳ ಕರ್ತವ್ಯ. ಹಸಿರು ಪದಾರ್ಥಗಳಾದ ಬೀನ್ಸ್ ನಂತಹ ತರಕಾರಿಗಳಲ್ಲಿ ಹೆಚ್ಚಾಗಿ ಪೋಷಕಾಂಶಗಳಿರುತ್ತವೆ.

ವಾರದಲ್ಲಿ ಒಂದೆರಡು ಬಾರಿ ಈ ಹಸಿರು ತರಕಾರಿಗಳು ನಿಮ್ಮ ಮಗುವಿನ ದೇಹ ಸೇರುವಂತೆ ಮಾಡಿ. ಅವಲಕ್ಕಿಯನ್ನು ಮಕ್ಕಳಿಗೆ ಮಾಮೂಲಿಯಂತೆ ತಿನ್ನಲು ಕೊಟ್ಟರೆ ನಿಮ್ಮ ತಿನ್ನಿಸುವ ಪ್ರಯತ್ನ ವೃಥಾ ಶ್ರಮ. ಅದರ ಬದಲಿಗೆ ಅದನ್ನು ಇನ್ನಷ್ಟು ವಿಭಿನ್ನವಾಗಿ ಮಾಡಿ. ಎಲ್ಲಾ ತರಕಾರಿಗಳನ್ನು ಮಿಶ್ರಣ ಮಾಡಿ, ಒಣ ದ್ರಾಕ್ಷಿ, ಕೊಬ್ಬರಿ, ಗೋಡಂಬಿ, ಬಾದಾಮಿಗಳನ್ನು ಬೆರೆಸಿ ತಿನ್ನಲು ಕೊಡಿ. ತರಕಾರಿಗಳನ್ನು ಮಕ್ಕಳಿಗೆ ಆಕರ್ಷಣೀಯ ಎನಿಸುವ ಹಾಗೆ ಕತ್ತರಿಸುವುದನ್ನೂ ನೆನಪಿಡಿ.

ಸೋಯಾಬೀನ್ ಬಳಸಿ ರುಚಿಕರವಾದ ಸೋಯಾಬೀನ್ ರೈಸ್ ಕೂಡ ಮಕ್ಕಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕಾರಿ.

ವಿಟಮಿನ್ ಸಿ :

ಪಚನಾಂಗಗಳು, ಸ್ನಾಯುಗಳು ಸರಿಯಾಗಿ ಕೆಲಸ ಮಾಡಿದರೆ ಮಾತ್ರ ಮಕ್ಕಳಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಬೆಳವಣಿಗೆ ಸಾಧ್ಯ. ಅದಕ್ಕೆ ಎಲ್ಲದಕ್ಕಿಂದ ಮುಖ್ಯವಾಗಿ ಮಕ್ಕಳ ಆಹಾರ ಪದ್ಧತಿ ಸರಿಯಾಗಿರಬೇಕು. ಆಯಾ ಕಾಲದಲ್ಲಿ ಬೆಳೆಯುವ ಹಣ್ಣುಗಳನ್ನು ಮಕ್ಕಳಿಗೆ ಕೊಡುವುದರಿಂದ ಮಕ್ಕಳಲ್ಲಿ ಯಾವುದೇ ಕಾಯಿಲೆಗಳೂ ಬಾರದಂತೆ ತಡೆಯುತ್ತವೆ.

ಸಿಟ್ರಿಕ್ ಅಂಶಗಳನ್ನು ಹೊಂದಿರುವ ಹಣ್ಣುಗಳನ್ನು ಮಕ್ಕಳಿಗೆ ತಿನ್ನಲು ಕೊಡುವುದು ಆರೋಗ್ಯಕರ. ಆದರೆ ಮಕ್ಕಳು ಹಣ್ಣುಗಳನ್ನು ಸರಿಯಾಗಿ ತಿನ್ನದೇ ಅವರ ಸರಿಯಾದ ಬೆಳವಣಿಗೆಯಲ್ಲಿ ವಿಳಂಬವಾಗಬಹುದು. ಸ್ಟ್ರಾಬೆರಿ ಹಣ್ಣನ್ನು ಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ. ಇದರಿಂದಲೂ ಬೆಳಗಿನ ಉಪಹಾರಗಳನ್ನು ತಯಾರಿಸಿ ನಿಮ್ಮ ಮಗುವಿಗೆ ಕೊಡಬಹುದು.

ಮೊಳಕೆ ತರಿಸಿದ ಧಾನ್ಯ / ಕಾಳುಗಳನ್ನು ಬೇಯಿಸಿ ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಸುಂದರವಾಗಿ ಹೆಚ್ಚಿರುವ ಟೊಮ್ಯಾಟೋ, ಸ್ಟ್ರಾಬೆರಿ, ಬ್ರೋಕಾಲಿಗಳಿಂದ ಅಲಂಕರಿಸಿ ಮಕ್ಕಳಿಗೆ ಸವಿಯಲು ಕೊಡಿ. ಇದರಿಂದ ಮಕ್ಕಳ ಚರ್ಮವೂ ಕೂಡಾ ಅಕಾಲಿಕ ಸುಕ್ಕುಗಟ್ಟುವಿಕೆಯಿಂದ ದೂರವಾಗುತ್ತವೆ. ಅಲ್ಲದೇ ಮಕ್ಕಳ ಹಲ್ಲಿನ ಆರೋಗ್ಯಕ್ಕೂ ಮೊಳಕೆ ತರಿಸಿದ ಕಾಳುಗಳು ಬಹಳ ಉತ್ತಮವಾದವು.

ಕ್ಯಾಲ್ಸಿಯಂ:

ನಮ್ಮ ದೇಶದಲ್ಲಿ ಕ್ಯಾಲ್ಸಿಯಂ ಕೊರತೆಯಿಂದಾಗಿ ಅಂಗವಿಕಲತೆಯಂತಹ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿದೆ. ಆದ್ದರಿಂದ ಮಕ್ಕಳನ್ನು ದಿನದ ಆಹಾರದ ಮೂಲಕವೂ ಅವರು ಸದೃಢರನ್ನಾಗಿ ಮಾಡುವುದು ಪಾಲಕರ ಹೊಣೆ. ಹಾಲು ಮತ್ತು ಮೊಸರು ಕ್ಯಾಲ್ಸ್ಶಿಯಂ ಪೋಷಕಾಂಶಗಳನ್ನು ಕೊಡುವ ಪ್ರಮುಖ ವಸ್ತುಗಳು. ಪ್ರತಿ ದಿನದ ಆಹಾರದ ಜೊತೆಗೆ ಮೊಸರಿನಿಂದ ತಯಾರಿಸಿದ ಸಲಾಡ್ ನಿಮ್ಮ ಮಗುವಿಗೆ ನೀಡಿ. ಮೊಳಕೆ ಕಾಳುಗಳು, ಹಣ್ಣು, ಡ್ರೈ ಫ್ರುಟ್ಸ್ ಇವುಗಳನ್ನು ಮೊಸರಿಗೆ ಮಿಶ್ರಣ ಮಾಡಿ ರುಚಿಗೆ ತಕ್ಕಷ್ಟು ಸಕ್ಕರೆಯನ್ನೂ ಸೇರಿಸಿ ತಿನ್ನಲು ಕೊಡಿ. ಕ್ಯಾಲ್ಸ್ಶಿಯಂ ಸಾಂದ್ರವಿರುವ ಕಿತ್ತಳೆ ಹಣ್ಣಿನ ರಸವನ್ನೂ ಆಗಾಗ ಕೊಡುತ್ತಿರಿ.

ಕಬ್ಬಿಣದ ಅಂಶಗಳು:

ಸ್ನಾಯುಗಳ ಬೆಳವಣಿಗೆಗೆ ದೇಹದಲ್ಲಿ ಕಬ್ಬಿಣದ ಅಂಶ ಇರಲೇಬೇಕು. ಮಕ್ಕಳು ಸಿಹಿತಿಂದರೆ ಹಲ್ಲು ಹಾಳಾಗುತ್ತದೆ ಅಥವಾ ಹೊಟ್ಟೆ ಕೆಡುತ್ತದೆ ಎಂದೆಲ್ಲಾ ಹೇಳಿ ಮಕ್ಕಳನ್ನು ಸಿಹಿಯಿಂದ ಆದಷ್ಟೂ ದೂರ ಇಡುತ್ತೇವೆ. ಆದರೆ ಮಕ್ಕಳ ದೇಹದಲ್ಲಿ ಮಿತ ಪ್ರಮಾಣದಲ್ಲಿ ಸಿಹಿ ಅಂಶ ಸೇರಿದರೆ ಕಬ್ಬಿಣದ ಅಂಶಗಳು ಹೆಚ್ಚಾಗುತ್ತದೆ. ಬೆಳ್ಗಿನ ಉಪಹಾರದ ಜೊತೆಗೆ ಒಂದಿಷ್ಟು ಸಿಹಿ ವಸ್ತುಗಳನ್ನೂ ತಿನ್ನಲಿ ನೀಡಿ (ಮನೆಯಲ್ಲಿ ನೀವೇ ತಯಾರಿಸಿದ ಕೇಸರಿ ಬಾತ್ ನಂತಹ ತಿಂಡಿಗಳು ಉತ್ತಮ ) ಬೆಲ್ಲದಲ್ಲಿಯೂ ಕಬ್ಬಿಣದ ಅಂಶ ಹೆಚ್ಚಾಗಿರುವುದರಿಂದ ದೋಸೆಯಂತಹ ತಿಂಡಿಗಳಿಗೆ ಬೆಲ್ಲವನ್ನು ನೆಕ್ಕಲು ಕೊಡುವುದು ಒಳ್ಳೆಯದು.

ಜೀವಸತ್ವಗಳು ಮಕ್ಕಳಿಗೆ ಸರಿಯಾದ ಪ್ರಮಾಣದಲ್ಲಿ ದೊರಕಬೇಕು. ಮಕ್ಕಳಿಗೆ ಹಸಿರು ತರಕಾರಿಗಳನ್ನು ಬೆಯಿಸುವುದಲ್ಲಿಂತ ಹಾಗೆಯೇ ಹಸಿಯಾಗಿ ಮೊಸರಿನ ಜೊತೆ ಅಥವಾ ನೆನೆಯಿಟ್ಟ ಕಾಳುಗಳ ಜೊತೆ ಬೆಳಗಿನ ಉಪಹಾರಕ್ಕೆ ಕೊಟ್ಟರೆ ಮಗುವಿನ ಸದೃಡ ಬೆಳ್ವಣಿಗೆ ಸರಿಯಾದ ಕಾಲಕ್ಕೆ ಸರಿಯಾಗಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಎಷ್ಟಾದರೂ ನಮ್ಮ ಮಕ್ಕಳ ಸರಿಯಾದ ಬೆಳವಣಿಗೆ ಪಾಲಕರಾದ ನಮ್ಮ ಪ್ರಥಮ ಕರ್ತವ್ಯವಲ್ಲವೇ?

English summary

Healthy Breakfast Recipes for Kids | ಜೀವಸತ್ವಗಳಿಂದ ಕೂಡಿರಲಿ ಮಕ್ಕಳ ಉಪಹಾರ

You have probably heard this before: Breakfast is the most important meal of the day. If you have children, you want to make sure their breakfast is healthy and nutritious. Y
X
Desktop Bottom Promotion