ಮಗುವನ್ನು ಸ್ತನ್ಯಪಾನದಿಂದ ಬಿಡಿಸುವುದು ಹೇಗೆ?

By:
Subscribe to Boldsky

ನೋಡ ನೋಡುತ್ತ ಮಗು ಬೆಳೆದೇ ಬಿಟ್ಟಿತು. ನಿನ್ನೆ ಮೊನ್ನೆಯವರೆಗೆ ಹೊಟ್ಟೆಯಲ್ಲಿ ತೆವಳುತ್ತಿದ್ದ ಮಗು ಇವತ್ತು ಒಂದೊಂದ್‌ ಹೆಜ್ಜೆ ದಾಡೀ ದಾಡೀ... ಅಂತ ನಡೆಯುವ ಉಮೇದು ತೋರುತ್ತಿದೆ! ಒಂದು ಲೆಕ್ಕದಲ್ಲಿ ಈ ಬೆಳವಣಿಗೆ ಮನಸಿಗೆ ಖುಷಿ ಕೊಡುತ್ತದಾದರೂ, ಮಗು ಇನ್ನೂ ಎದೆ ಹಾಲನ್ನು ಅವಲಂಬಿಸಿಯೇ ಇರುವುದು ತಾಯಿಯನ್ನು ಕಾಡುತ್ತದೆ.

ಮಗು ಅಂಬೆಗಾಲಿಡುವ ಹೊತ್ತಿಗೆ ಎದೆಹಾಲು ಬಿಡಿಸಿಬಿಡಬೇಕು ಎಂದುಕೊಂಡ ತಾಯಿ, ಅದನ್ನು ಬಿಡಿಸಲಾಗದೇ ಅಸಹಾಯಕಳಾಗುತ್ತಾಳೆ. ಮತ್ತೆ ಮತ್ತೆ ಪ್ರಯತ್ನಿಸಿ ಸೋತ ಬಳಿಕವೂ ಹಲ್ಲು ಬಲಿತ ಮಗು ಎದೆ ಹಾಲಿಗಾಗಿ ಹಂಬಲಿಸುತ್ತದೆ. ಇದನ್ನು ತಪ್ಪಿಸುವುದು ತುಂಬಾ ಕಷ್ಟಕರ. ಇಲ್ಲಿ ಕೊಟ್ಟಿರುವ ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ಎದೆಹಾಲು ಬಿಡಿಸುವ ನಿಮ್ಮ ಪರಿಶ್ರಮವನ್ನು ಕಡಿಮೆ ಮಾಡಬಹುದು.

How to Stop Breastfeeding a Toddler

ಹಂತಗಳು

1. ಸ್ವ ಅಧ್ಯಯನ:

ಮಗುವಿಗೆ ಎದೆಹಾಲನ್ನು ನೀಡುವುದನ್ನು ತಪ್ಪಿಸುವುದಕ್ಕೂ ಮುನ್ನ ಸ್ವ ಅಧ್ಯಯನ ಮಾಡಿಕೊಳ್ಳುವುದು ಉತ್ತಮ. ನಿಮ್ಮ ದೇಹದಲ್ಲಾಗುತ್ತಿರುವ ನೈಸರ್ಗಿಕ ಬದಲಾವಣೆಗಳು ಹಾಗೂ, ಮಗುವಿಗೆ ಹಾಲುಣಿಸುದರಿಂದ ಮತ್ತು ಹಾಲುಣಿಸದೇ ಇದ್ದಾಗ ನಿಮ್ಮ ದೇಹದಲ್ಲಾಗುತ್ತಿರುವ ಬದಲಾವಣೆಗಳತ್ತ ಸೂಕ್ಷ್ಮವಾಗಿ ಗಮನಿಸುತ್ತಿರಿ. ಇದರಿಂದ ಸ್ತನ್ಯಪಾನ ನಿಲ್ಲಿಸುವ ಸೂಕ್ತ ಸಮಯ ಮತ್ತು ನಿಮ್ಮ ಮಗುವಿನ ಪ್ರತಿಕ್ರಿಯೆ ನಿಮಗೆ ಅರ್ಥವಾಗುತ್ತದೆ.

ಸ್ತ್ಯನ್ಯಪಾನವೆಂಬುದು ಭಾವನಾತ್ಮಕ ಅಂಶವೂ ಆಗಿರುವುದರಿಂದ ತುಸು ಜಾಸ್ತಿಯೇ ಎಚ್ಚರಿಕೆ ವಹಿಸುವುದು ಒಳ್ಳೆಯದು. ಹಾರ್ಮೋನುಗಳ ವ್ಯತ್ಯಾಸ ಕೇವಲ ಭೌತಿಕ ಬದಲಾವಣೆಯನ್ನು ತೋರುತ್ತದಾದರೂ, ಸ್ತನ್ಯಪಾನ ಬಿಡಿಸುವುದು ಭಾವನಾತ್ಮಕ ಸಂಗತಿಯೂ ಆಗಿದೆ. ನಿಮ್ಮ ಅಂಬೆಗಾಲಿಕ್ಕುತ್ತಿರುವ ಮಗುವಿನ ವರ್ತನೆಯನ್ನೂ ಸೂಕ್ಷ್ಮವಾಗಿ ಅವಲೋಕಿಸಿ ಈ ನಿಧರ್ಧಾರವನ್ನು ಕೈಗೊಳ್ಳಿ.

2. ನಿಧಾನವಾಗಿ ಮೊಲೆಯೂಡಿಸುವುದನ್ನು ತಪ್ಪಿಸಿ:

ಮಗು ಬೆಳೆದೇ ಬಿಟ್ಟಿತು ಎಂದು ಎದೆಹಾಲನ್ನು ತಪ್ಪಿಸುವಲ್ಲಿ ಅವಸರ ಬೇಡ. ಸಾಧ್ಯವಾದಷ್ಟೂ ನಿಧಾನವಾಗಿ ಮಗುವಿನ ಮನಸ್ಸನ್ನು ಬೇರೆ ಆಹಾರದತ್ತ ಸೆಳೆಯಿರಿ. ಏಕಾಏಕಿ ಮೊಲರೆಯೂಡಿಸುವುದನ್ನು ನಿಲ್ಲಿಸಿದರೆ ಮಗು ಮತ್ತು ತಾಯಿ ಇಬ್ಬರ ಆರೋಗ್ಯದಲ್ಲೂ ಏರುಪೇರು ಸಂಭವಿಸುವ ಸಾಧ್ಯತೆಯಿರುತ್ತದೆ. ಈ ವಿಚಾರದಲ್ಲಿ ನೀವು ತೆಗೆದುಕೊಂಡಷ್ಟೂ ಎಚ್ಚರಿಕೆಗಳು ಮಗು ಮತ್ತು ತಾಯಿಯನ್ನು ಆರೋಗ್ಯಯುತವಾಗಿರಿಸುತ್ತದೆ. ಒಂದು ವೇಳೆ ಮಗುವಿಗೆ ಹಾಲುಣಿಸದೇ ಇದ್ದರೆ ಮೊಲೆಗಳಲ್ಲಿ ನೋವು ಕಾಣಿಸಿಕೊಳ್ಳಬಹುದು.

ಉರಿಯೂತ ಪ್ರಾರಂಭವಾಗಬಹುದು. ಸ್ತನ್ಯನಾಳ ಮುಚ್ಚಿಹೋಗಿ ಸಮಸ್ಯೆ ಉಲ್ಬಣಿಸುವ ಸಾಧ್ಯತೆಯೂ ಇರುತ್ತದೆ. ಆದರೆ ಕ್ರಮೇಣ ಮೊಲೆಯೂಡಿಸುವುದರಿಂದ ಮಗುವನ್ನು ದೂರವಿರಿಸುತ್ತಾ ಬಂದರೆ ಈ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ. ಮೊಲೆಯುಣಿಸುವ ವೇಳೆಯಲ್ಲಿ ಮಗುವಿಗೆ ಬೇರೆ ಆಹಾರವನ್ನು ನೀಡಿ, ಅದನ್ನೇ ಅಭ್ಯಾಸ ಮಾಡಿಸಬಹುದು.ಕ್ರಮೇಣ ಬೇರೆ ಬೇರೆ ಸವಿಯ ಆಹಾರವನ್ನು ಸೇವಿಸುವ ಮಗು ಮೊಲೆಹಾಲಿನ ಅವಲಂಬನೆಯಿಂದ ದೂರ ಸರಿಯುತ್ತದೆ. ಇದು ಸಂಪೂರ್ಣ ಪರಿಣಾಮಕಾರೀ ಮಾರ್ಗ.

3. ಮೊಲೆತೊಟ್ಟು ತೋರಿಸಬೇಡಿ:

ನಿಮ್ಮ ಬೆತ್ತಲೆ ಸ್ತನದ ಪ್ರದರ್ಶನವು ಮಗುವನ್ನು ಪ್ರಚೋದಿಸುತ್ತದೆ ಎಂಬುದು ನಿಮ್ಮ ಗಮನದಲ್ಲಿರಲಿ. ಹಾಗಾಗಿ ಸಾಧ್ಯವಾದಷ್ಟೂ ಮಗುವಿನೆದುರು ಮೈ ಮುಚ್ಚಿಕೊಂಡು ಇರುವುದನ್ನು ಅಭ್ಯಾಸ ಮಾಡಿಕೊಳ್ಳಿ. ಹಾಲುಣಿಸುವುದನ್ನು ತಪ್ಪಿಸುವುದೇ ನಿಮ್ಮ ಉದ್ದೇಶವಾಗಿರುವಾಗ ಮತ್ತೆ ಸ್ತನವನ್ನು ನೆನಪಿಸಿಕೊಡುವ ಕೆಲಸ ನಿಮ್ಮಿಂದಾಗಬಾರದು. ಹಾಗಾಗಿ ಮಗುವಿನ ಜತೆಯಲ್ಲಿ ಸ್ನಾನ ಮಾಡಬಾರದು. ಅಥವಾ ನೀವು ಸ್ನಾನ ಮಾಡುವಾಗ ಮಗುವಿನ ಕಣ್ಣಿಗೆ ನಿಮ್ಮ ಎದೆ ಬೀಳದಂತೆ ಎಚ್ಚರಿಕೆ ವಹಿಸಿ. ಮಕ್ಕಳ ಗ್ರಹಿಕೆ ತುಂಬಾ ಸೂಕ್ಷ್ಮವಾಗಿರುವುದರಿಂದ ದೂರ ಸರಿದಷ್ಟೇ ವೇಗವಾಗಿ ಮತ್ತೆ ಎದೆಹಾಲಿಗಾಗಿ ಅವರು ಹಂಬಲಿಸುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಮಗುವಿನ ಆರೈಕೆ ಮಾಡುವಾಗ ತುಂಬಾ ಎಚ್ಚರಿಕೆಯ ಹೆಜ್ಜೆಯಿಡಿ. ಮೈಮುಚ್ಚಿಕೊಂಡಿರಿ!

ಮಗುವಿಗೆ ಎದೆಹಾಲು ಉಣಿಸಲು ಯಾವತ್ತೂ ಕುಳಿತುಕೊಳ್ಳುತ್ತಿದ್ದ ಜಾಗವನ್ನು ಬದಲಿಸಿ. ಇದರಿಂದ ಬಹುಬೇಗ ಮಗುವಿನ ಆಸಕ್ತಿ ಬೇರೆಡೆಗೆ ತಿರುಗುತ್ತದೆ.ಮಗುವಿನ ಮನಸ್ಸನ್ನು ಪ್ರಚೋದಿಸುವ ಮತ್ತು, ಸ್ತನ್ಯಪಾನವನ್ನು ಜ್ಞಾಪಿಸುವ ಭಂಗಿಗಳನ್ನು ಮಗುವಿನ ಎದುರು ಅನುಸರಿಸದಿರುವುದೇ ಒಳ್ಳೆಯದು.

4. ವಿಕರ್ಷಣೆಗೆ ಒಳಪಡಿಸಿ:

ಮಗುವಿನ ಗಮನವನ್ನು ಬೇರೆಡೆ ಸೆಲೆಯುವ ಮೂಲಕವಾಗಿಯೂ ನಿಮ್ಮ ಅಂಬೆಗಾಲಿಕ್ಕುವ ಮಗುವಿನ ಸ್ತನ್ಯಪಾನವನ್ನು ತಪ್ಪಿಸಬಹುದಾಗಿದೆ. ಚಿಕ್ಕಪುಟ್ಟ ಸಂಗತಿಗಳಿಗೂ ಮಕ್ಕಳು ವಿಚಲಿತರಾಗುತ್ತಾರಾದ್ದರಿಂದ ಅವರ ಗಮನವನ್ನು ಬೇರೆಡೆ ಸೆಳೆಯುವುದು ಸುಲಭವೂ ಆಗಿದೆ. ಹಾಲುಣಿಸುವ ವೇಳೆ ಮಗುವಿನ ಗಮನವನ್ನು ಬೇರೆ ವಸ್ತುಗಳತ್ತ ಕೇಂದ್ರೀಕರಿಸುವಂತೆ ಮಾಡಿ. ಸಾಧ್ಯವಾದರೆ ಹೊರಸಂಚಾರ ಮಾಡಿ. ಹೊಳೆಯುವ ಅಥವಾ ಶಬ್ದ ಮಾಡುವ ವಸ್ತುಗಳನ್ನು ತೋರಿಸಿ ಮಗುವಿನಲ್ಲಿ ದಿಗ್ಭೃಮೆಯನ್ನುಂಟು ಮಾಡಿ. ಹಾಡು ಕೇಳಿಸಿ. ಇದರಿಂದ ಮಗುವಿನ ಗಮನ ಸಹಜವಾಗಿ ಬೇರೆಡೆ ಹರಿಯುತ್ತದೆ. ಒಂದಲ್ಲಾ ಒಂದು ಸಂಗತಿಗಳಲ್ಲಿ ಮಗು ತಲ್ಲೀನವಾಗಿರುವಂತೆ ಪರಿಸ್ಥಿತಿಯನ್ನು ನಿರ್ಮಾಣ ಮಾಡಿ. ಇದರಿಂದಾಗಿ ಮಗು ಹಾಲಿಗಾಗಿ ಹಂಬಲಿಸುವ ಪ್ರಮಾಣ ಕಡಿಮೆಯಾಗುತ್ತದೆ. ಹಸಿದಿದ್ದರೂ ಬೇರೆ ತಿಂಡಿಗಳನ್ನು ನೀಡುವ ಮೂಲಕ ಕ್ರಮೇಣ ಅದನ್ನೇ ಕಲಿಯುತ್ತದೆ. ಈ ರೀತಿ ಮಾಡುವುದರಿಂದ ಮಗು ಹೊಸ ಹೊಸ ಸಂಗತಿಗಳನ್ನು ಕಲಿಯುತ್ತದೆ ಮತ್ತ ಸಹಜವಾಗಿ ಮೊಲೆ ಹಾಲಿನ ಅವಲಂಬನೆಯಿಂದ ದೂರ ಸರಿಯುತ್ತದೆ.

5. ಬದಲಿ ಆಹಾರ ಕೊಡಿ

ಸ್ತನ್ಯ ಪಾನದಿಂದ ದೂರ ಸರಿಸಿದ ಮಗುವಿಗೆ ಉತ್ತಮವಾದ ಬದಲೀ ಆಹಾರವನ್ನು ನೀಡುವುದು ಅತೀ ಮುಖ್ಯವಾಗಿದೆ. ಹುಟ್ಟಿದಾಗಿನಿಂದ ಇಲ್ಲಿಯವರೆಗೂ ನೀಡುತ್ತಿದ್ದ ಆಹಾರಕ್ಕಿಂತ ಹೊಸತೆನ್ನಿಸುವ, ನಾಲಿಗೆಗೂ ರುಚಿಯೆನ್ನಿಸುವ ಆಹಾರವನ್ನು ನೀಡಿದರೆ ಮಗು ಸಹಜವಾಗಿ ಬಹು ಬೇಗ ಹೊಸ ಆಹಾರಕ್ಕೆ ಒಗ್ಗಿಕೊಳ್ಳುತ್ತದೆ. ಹೀಗೆ ಬದಲೀ ಆಹಾರವನ್ನು ನೀಡುವಾಗ ಆರೋಗ್ಯಯುತವಾದ, ಪೌಷ್ಠಿಕಾಂಶಯುಕ್ತವಾಗಿರುವಂತೆ ಎಚ್ಚರಿಕೆ ವಹಿಸಬೇಕು. ದೇಹದ ಬೆಳವಣಿಗೆಗೆ ಈ ಆಹಾರಗಳೇ ಪೂರಕವಾಗಿರುವುದರಿಂದ ಮಗುವಿನ ಪೋಷಣೆಯತ್ತಲೂ ಗಮನ ಹರಿಸಬೇಕಿದೆ.

ಎದೆ ಹಾಲು ಕುಡಿದು ಅಭ್ಯಾಸವಾದ ಮಕ್ಕಳು ಸಾಮಾನ್ಯವಾಗಿ ಬಾಟಲಿಗಳಲ್ಲಿ ನೀಡುವ ಆಹಾರವನ್ನು ಸ್ವೀಕರಿಸಲು ನಿರಾಕರಿಸುತ್ತವೆ. ಇಂಥ ಹೊತ್ತಲ್ಲಿ ಮಕ್ಕಳನ್ನು ಮರುಳು ಮಾಡಿ ಆಹಾರ ನೀಡಬೇಕಾಗುತ್ತದೆ. ತಾಯಿಯ ತೆಕ್ಕೆಯಲ್ಲಿಯೇ ಮಲಗಿಸಿಕೊಂಡು, ಬಾಟಳಿಯಲ್ಲಿ ಹಾಲು ಹಾಕಿ ಉಣಿಸುವ ಮೂಲಕ ಮೊಲೆ ಹಾಲನ್ನು ಕುಡಿಯುತ್ತಿರುವ ಭಾವನೆಯನ್ನೇ ಮಗುವಿನಲ್ಲಿ ಮೂಡಿಸಬಹುದು. ಅರೆ ನಿದ್ದೆಯಲ್ಲಿದ್ದಾಗಲೂ ಬಾಟಲಿಯಲ್ಲಿ ಹಾಲು ನೀಡಿ ಅಭ್ಯಾಸ ಮಾಡಿಸಬಹುದು. ಮಗುವನ್ನು ಮುದ್ದಾಡುತ್ತಾ ತಾಯಿ ಬಾಟಲಿ ಮೂಲಕ ಹಾಲು ಕುಡಿಸುವುದನ್ನು ಕಲಿಸಬಹುದು. ಸಿಹಿಯಾದ ಹಣ್ಣಿನ ರಸ ಇತ್ಯಾದಿಗಳನ್ನು ಬಾಟಲಿಯ ಮೊನೆಗೆ ಲೇಪಿಸಿ, ಮಗುವಿನಲ್ಲಿ ರುಚಿಯ ಆಸೆ ಹುಟ್ಟಿಸಬಹುದು. ಒಟ್ಟಿನಲ್ಲಿ ಎದೆಹಾಲನ್ನು ತಪ್ಪಿಸಲು ಬಾಟಲಿ ಮೂಲಕ ಹಾಲು ನೀಡುವುದು ಉತ್ತಮವಾದ ಮಾರ್ಗ.

ಕ್ರಮೇಣ ಹಾಲಿನ ಜತೆಗೆ ಘನ ಆಹಾರವನ್ನೂ ನೀಡುವ ಅಭ್ಯಾಸ ಮಾಡಿಸಿ. ಇದರಿಂದ ದೇಹ ಪೋಷಣೆಗೆ ಉತ್ತಮ ಆಹಾರಗಳ ಲಭಿಸಿದಂತಾಗುತ್ತದೆ. ಆಹಾರವನ್ನು ನೀಡುವಾಗ ಮಗುವಿನ ಆರೋಗ್ಯದ ಬಗ್ಗೂ ಲಕ್ಷ್ಯವಿರಲಿ. ಏಕಾ ಏಕಿ ಎದೆಹಾಲಿನಿಂದ ಮಗು ವಂಚಿತವಾದರೆ ಬುದ್ಧಿ ಹಾಗೂ ದೇಹದ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವ ಸಾಧ್ಯತೆಯೂ ಇರುತ್ತದಾದ್ದರಿಂದ ತುಸು ಜಾಸ್ತಿಯೇ ಎಚ್ಚರಿಕೆ ವಹಿಸಿಕೊಳ್ಳುವುದೊಳ್ಳೆಯದು. ಬೇರೆ ತಿನಿಸುಗಳನ್ನು ಕೊಟ್ಟಾಗ ಮಗು ಯಾವ ಆಹಾರವನ್ನು ತುಂಬಾ ಇಷ್ಟಪಟ್ಟು ತಿನ್ನುತ್ತದೆಂಬುದನ್ನು ಗಮನಿಸಿ. ಇದರಿಂದ ಮಗುವಿಗೆ ಮತ್ತೆ ಆಹಾರ ನೀಡಲು ಅನುಕೂಲವಾಗುತ್ತದೆ.

Read more about: ಮಗು, ತಾಯಿ, baby, mother
English summary

How to Stop Breastfeeding a Toddler | ಮಗುವನ್ನು ಸ್ತನ್ಯಪಾನದಿಂದ ಬಿಡಿಸುವುದು ಹೇಗೆ?

Generally, by the time a baby becomes a toddler, his mom has already thought about weaning her baby several times. Perhaps she has even unsuccessfully attempted to do so more than once.
Please Wait while comments are loading...
Subscribe Newsletter