For Quick Alerts
ALLOW NOTIFICATIONS  
For Daily Alerts

ಯಕ್ಷ ಪ್ರಶ್ನೆಯಂತೆ ಕಾಡುವ, ಈ ವ್ಯಕ್ತಿಗಳ ಚಿದಂಬರ ರಹಸ್ಯ..!

By Manu
|

ಇಂದು ಹೆಚ್ಚೂ ಕಡಿಮೆ ಕಣ್ಮರೆಯಾಗಿರುವ ದೊಂಬರಾಟದಲ್ಲಿ ಜನಸಾಮಾನ್ಯರು ಮಾಡಲಾಗದಂತಹ ಕೆಲವು ಕಾಯಕಗಳನ್ನು ಮಾಡುತ್ತಿದ್ದ ಜನರು ನಮಗೆ ರಹಸ್ಯಮಯರಾಗಿ ತೋರುತ್ತಿದ್ದರು. ಅಂಗೈಯಗಲಕ್ಕಿಂತ ಕೊಂಚವೇ ದೊಡ್ಡದಿದ್ದ ಲೋಹದ ಬಳೆಯಲ್ಲಿ ತೂರುವ ಬಾಲಕಿ, ತಲೆಕೆಳಗಾಗಿ ಕೈಗಳ ಮೂಲಕ ನಡೆಯುತ್ತಿದ್ದ ಬಾಲಕ, ಹಗ್ಗದ ಮೇಲೆ ನಡೆಯುತ್ತಿದ್ದ ಪುರುಷ ಇತ್ಯಾದಿಗಳೆಲ್ಲಾ ಒಂದು ಕಾಲದಲ್ಲಿ ಹಳ್ಳಿಜನರನ್ನು ರಂಜಿಸುವ ದೊಂಬರಾಟದವರಿಗೆ ಇವೆಲ್ಲಾ ಹೊಟ್ಟೆಪಾಡಿನ ಕಾಯಕಗಳಾಗಿದ್ದವು. ಸರ್ಕಸ್ ಮೊದಲಾದ ಕಡೆಯಲ್ಲಿ ಕೆಲಸ ಮಾಡುವ ಕಲಾವಿದರು ಸಹಾ ಕೆಲವು ಪಟ್ಟುಗಳನ್ನು ಹೊಟ್ಟೆಪಾಡಿಗಾಗಿ ಮಾಡುವುದನ್ನು ಕಾಣಬಹುದು.

ಆದರೆ ಕೆಲವು ವ್ಯಕ್ತಿಗಳ ವರ್ತನೆ ನಮ್ಮ ಊಹೆ, ತರ್ಕ, ನಂಬಿಕೆ, ಸಾಧ್ಯತೆಗಳನ್ನೆಲ್ಲಾ ತಲೆಕೆಳಗಾಗಿಸಿ ತಬ್ಬಿಬ್ಬುಗೊಳಿಸುತ್ತವೆ. ಈ ಕೆಲಸಗಳನ್ನು ಅವರು ಮಾಡುವುದಾದರೂ ಹೇಗೆ ಎಂಬ ಕುತೂಹಲ ಮೂಡುತ್ತದೆ. ಉದಾಹರಣೆಗೆ ನಮ್ಮ ಕರ್ನಾಟಕದವನೇ ಆದ ಪಕೀರಪ್ಪ ಹುನಗುಂದಿ ಎಂಬ ಪುರುಷ ಇಟ್ಟಿಗೆಗಳನ್ನು ತಿನ್ನುವ ಬಗೆ ಯಾರನ್ನಾದರೂ ಚಕಿತಗೊಳಿಸುತ್ತದೆ.

ಈತ ಇಟ್ಟಿಗೆ, ಮರಳು ಚಿಕ್ಕಪುಟ್ಟ ಕಲ್ಲು ಸಹಾ ತಿಂದು ನೀರು ಕುಡಿಯಬಲ್ಲ. ಇನ್ನೋರ್ವ ಮಹಿಳೆ ಪ್ರಬಲ ಆಮ್ಲವನ್ನೂ ಲಿಂಬೆಹಣ್ಣಿನ ಶರಬತ್ತಿನಂತೆ ಗಟಗಟ ಕುಡಿಬಲ್ಲಳು, ಆಕೆಯ ಯಾವುದೇ ಭಾಗಕ್ಕೆ ಏನೂ ಹಾನಿಯಾಗದಿರುವುದು ವೈದ್ಯರನ್ನೂ ತಬ್ಬಿಬ್ಬುಗೊಳಿಸಿದೆ. ಕೆಲವರಿಗೆ ವಿದ್ಯುತ್ತಿನ ಶಾಕ್ ಸಹಾ ತಗಲುವುದಿಲ್ಲ. ಜಗತ್ತಿನಲ್ಲಿ ಇಂತಹ ಹಲವಾರು ವ್ಯಕ್ತಿಗಳಿದ್ದು ಇತಿಹಾಸ ಸೃಷ್ಟಿಸಿ ಹೋಗಿದ್ದಾರೆ. ಆದರೆ ಓದುಗರಿಗೆ ಮೊದಲೇ ನೀಡುವ ಎಚ್ಚರಿಕೆ ಎಂದರೆ ಇವರು ಸಾಧಿಸಿದ ಯಾವುದೇ ಚಟುವಟಿಕೆಗಳನ್ನು ಸಾಧಿಸುವುದಿರಲಿ, ಪ್ರಯತ್ನವನ್ನೂ ಮಾಡದಿರಿ. ಏಕೆಂದರೆ ಇದು ನಿಮಗೆ ಮಾರಕವಾಗಬಹುದು! ಬನ್ನಿ ಚಕಿತಗೊಳ್ಳಲು ಕೆಳಗಿನ ಸ್ಲೈಡ್ ಶೋ ನೋಡುತ್ತಾ ಸಾಗಿ....

ಲೆ ಲೋಯೋನ್

ಲೆ ಲೋಯೋನ್

ಸ್ವಿಟ್ಜರ್ಲ್ಯಾಂಡಿನ ಹಿಮಾಚ್ಛಾದಿತ ಪರ್ವತಗಲ ತಪ್ಪಿನಲ್ಲಿರುವ ಸೂಜಿಪರ್ಣ ಎಲೆಗಳ ಕಾಡಿನಲ್ಲಿರುವ ಪುಟ್ಟ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬ ಮಿಲಿಟರಿ ಸಮವಸ್ತ್ರ ಧರಿಸಿ ಗ್ಯಾಸ್ ಮುಖವಾಡವೊಂದನ್ನು ತೊಟ್ಟು ಕಾಡಿನಲ್ಲೆಲ್ಲಾ ಅಲೆಯುತ್ತಿದ್ದ. ಏನಪ್ಪಾ, ಏನು ವಿಷಯ ಎಂದು ಕೇಳಿದವರಿಗೆಲ್ಲಾ ಈತ ಕೇವಲ ದುರುಗುಟ್ಟಿ ನೋಡಿ ಏನೊಂದೂ ಮಾತನಾಡದೇ ಅಲ್ಲಿಂದ ನಿರ್ಗಮಿಸುತ್ತಿದ್ದ. ಒಂದಲ್ಲ, ಎರಡಲ್ಲ, ಸರಿಸುಮಾರು ಹತ್ತು ವರ್ಷ ಹೀಗೇ ಕಳೆಯಿತು. ಮುಂದೊಂದು ದಿನ ಆತ ಅಲ್ಲಿಂದ ತನ್ನ ಬಟ್ಟೆ ಮತ್ತು ಮುಖವಾಡಗಳನ್ನು ಬಿಟ್ಟು ಅದೃಶ್ಯನಾದ. ಜೊತೆಗೊಂದು ಚೀಟಿ ಇಟ್ಟು ತಾನು ನಿರ್ಗಮಿಸುತ್ತಿದ್ದೇನೆ, ಗುಡ್ ಬೈ ಎಂದು ಬರೆದಿದ್ದ. ಆದರೆ ಅಲ್ಲಿಂದ ಎಲ್ಲಿ ಹೋದ ಎಂದು ಯಾರು ಎಷ್ಟು ಹುಡುಕಿದರೂ ಇದುವರೆಗೆ ಪತ್ತೆಯಿಲ್ಲ.

Image Courtesy

ಜೋ ಜಿರಾರ್ಡೆಲ್ಲಿ (Jo Girardelli)

ಜೋ ಜಿರಾರ್ಡೆಲ್ಲಿ (Jo Girardelli)

1800ರ ಆಸುಪಾಸಿನಲ್ಲಿ ಜೀವಂತವಿದ್ದ ಜೋ ಜಿರಾರ್ಡೆಲ್ಲಿ ಎಂಬ ಇಟಲಿಯ ಮಹಿಳೆಗೆ ನಿಗಿನಿಗಿ ಕೆಂಡ ಮತ್ತು ಕೆಂಪೆಗೆ ಬಿಸಿಯಾಗಿರುವ ವಸ್ತುಗಳನ್ನು ನೇರವಾಗಿ ತಿನ್ನುವ ಅಭ್ಯಾಸವಿತ್ತು. ಇದೇ ಕಾರಣಕ್ಕೆ ಆಕೆಗೆ "Queen of the Fire Eaters" ಎಂಬ ಅನ್ವರ್ಥನಾಮವೂ ದಕ್ಕಿತ್ತು. ಅಷ್ಟೇ ಅಲ್ಲ, ಪ್ರಬಲ ಆಮ್ಲ ಕೂಡಾ ತನಗೇನೂ ಮಾಡದು ಎಂದು ಪುರಾವೆಗೊಳಿಸಲು ಆಕೆ ಪ್ರಬಲ ನೈಟ್ರಿಕ್ ಅಮ್ಲವನ್ನು ನೀರಿನಿಂದ ಮುಕ್ಕಳಿಸಿದಂತೆ ಮುಕ್ಕಳಿಸಿ ಉಗಿಯುತ್ತಿದ್ದಳು. ಉಗಿದ ಆಮ್ಲವೂ ಲೋಹವನ್ನು ಕರಗಿಸುವಷ್ಟು ಪ್ರಬಲವಾಗಿತ್ತು. ಜಗತ್ತು ಆಕೆಯನ್ನು ಅಚ್ಚರಿಯ ದೃಷ್ಟಿಯಿಂದ ನೋಡುತ್ತಿದ್ದಂತೆಯೇ ಸಂಪ್ರದಾಯವಾದಿಗಳಿಗೆ ಈಕೆಯ ಚರ್ಯೆ ಅಲೌಕಿಕ ಮತ್ತು ದೇವರ ಇಚ್ಛೆಗೆ ವಿರುದ್ದವಾಗಿ ಕಂಡುಬಂದಿತ್ತು. ಏಕಾಏಕಿ ಆಕೆ ಅಲ್ಲಿಂದ ಅದೃಶ್ಯಳಾದಳು, ಆಕೆಯ ಕಥೆ ಏನಾಯಿತು ಎಂದು ಇದುವರೆಗೆ ಯಾರಿಗೂ ತಿಳಿದಿಲ್ಲ.

Image Courtesy

ಇಸ್ಡಾಲ್ ಮಹಿಳೆ (The Isdal Woman)

ಇಸ್ಡಾಲ್ ಮಹಿಳೆ (The Isdal Woman)

1970ರಲ್ಲಿ ನಾರ್ವೆ ದೇಶದ ಬರ್ಗನ್ ನಗರದ ಸಾವಿನ ಕಣಿವೆ ಅಥವಾ "Death Valley" ಎಂಬ ಸ್ಥಳದಲ್ಲಿ ಗುರುತು ಹಿಡಿಯಲಾಗದ ಮಹಿಳೆಯೊಬ್ಬರ ಶವ ಸಿಕ್ಕಿತ್ತು. ಪೂರ್ಣವಾಗಿ ವಿವಸ್ತ್ರವಾಗಿದ್ದ ಶವದ ಬಳಿ ಒಂದು ಬಾಟಲಿ ಇದ್ದು ಇದರಲ್ಲಿ ಅರ್ಧದಷ್ಟು ನಿದ್ದೆ ಮಾತ್ರೆಗಳಿದ್ದವು. ಈಕೆಯ ಬಗ್ಗೆ ತನಿಖೆ ನಡೆಸಿದ ಪೋಲೀಸರಿಗೆ ಆಘಾತ ಕಾದಿತ್ತು. ಈಕೆ ಯೂರೋಪಿನಾದ್ಯಂತ ಸಂಚರಿಸುತ್ತಿದ್ದು ಒಟ್ಟು ಒಂಭತ್ತು ಗುರುತುಪತ್ರಗಳನ್ನು ಹೊಂದಿದ್ದಳು. ನಿದ್ದೆಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆಗೆ ಮರಣೋತ್ತರ ಪರೀಕ್ಷೆ ಪುರಾವೆ ಒದಗಿಸಿತಾದರೂ ವಿವಸ್ತ್ರವಾಗಿರಲು ಕಾರಣವೇನು ಗೊತ್ತಾಗಲಿಲ್ಲ. ಅಷ್ಟಕ್ಕೂ ಒಂಬತ್ತು ಬಗೆಯ ಗುರುತುಪತ್ರಗಳನ್ನು ಆಕೆ ಪಡೆದದ್ದಾದರೂ ಹೇಗೆ? ಇದೊಂದು ಬಗೆಹರಿಯಲಾರದ ವಿಚಿತ್ರವಾಗಿದೆ.

Image courtesy

 ವೂಲ್ಪಿಟ್ ನ ಹಸಿರುಮಕ್ಕಳು (Green Children Of Woolpit)

ವೂಲ್ಪಿಟ್ ನ ಹಸಿರುಮಕ್ಕಳು (Green Children Of Woolpit)

ಇಂಗ್ಲೆಂಡಿನ ವೂಲ್ಪಿಟ್ ಎಂಬ ಪುಟ್ಟ ಗ್ರಾಮದಲ್ಲಿ ಹನ್ನೆರಡನೇ ಶತಮಾನದಲ್ಲಿ ತೋಳದ ಬದುವಿನ ಬಳಿ ಸಿಕ್ಕ ಇಬ್ಬರು ಮಕ್ಕಳು ಹಸಿರು ಬಣ್ಣದ ಚರ್ಮವನ್ನು ಹೊಂದಿದ್ದರಂತೆ. ಸಹೋದರ ಸಹೋದರಿಯರಾದ ಈ ಮಕ್ಕಳ ಚರ್ಮ ತಿಳಿಹಸಿರು ಬಣ್ಣದಲ್ಲಿದ್ದು ಕೇವಲ ಬೀನ್ಸ್ ಗಳನ್ನು ಮಾತ್ರವೇ ತಿನ್ನುತ್ತಿದ್ದರಂತೆ. ಯಾರೊಂದಿಗೂ ಹೆಚ್ಚು ಮಾತನಾಡದೇ ಇರುತ್ತಿದ್ದ ಇವರು ನಿಧಾನಕ್ಕೆ ಇಂಗ್ಲಿಶ್ ಕಲಿತು ಸುತ್ತಮುತ್ತಲ ಜನರೊಂದಿಗೆ ಮಾತನಾಡಲು ತೊಡಗಿದರಂತೆ. ಇವರು ಎಲ್ಲಿಯವರು ಎಂದು ಕುತೂಹಲದಿಂದ ಪ್ರಶ್ನಿಸಿದವರಿಗೆ "Saint Martin's Land" ಅಂದರೆ ಸೂರ್ಯನ ಬೆಳಕೇ ಬರದಿದ್ದ ಮತ್ತು ಎಲ್ಲವೂ ಅಚ್ಚ ಹಸಿರಾಗಿದ್ದ ನಾಡಿನಿಂದ ಬಂದಿದ್ದೇವೆ ಎಂದು ತಿಳಿಸಿದರಂತೆ. ಕಾಲಕಳೆದಂತೆ ಹುಡುಗ ನಿಃಶಕ್ತನಾಗುತ್ತಾ ಬಂದು ಕೊನೆಗೊಂದು ದಿನ ಕೊನೆಯುಸಿರೆಳೆದ. ಆ ಬಳಿಕ ಹುಡುಗಿಯ ಚರ್ಮ ನಿಧಾನವಾಗಿ ತನ್ನ ಹಸಿರು ಬಣ್ಣವನ್ನು ಕಳೆದುಕೊಳ್ಳುತ್ತಾ ಬಂದು ಇತರರಂತಾದಳಂತೆ. ಈ ಮಕ್ಕಳ ನೆನಪಿಗಾಗಿ ವೂಲ್ಪಿಟ್ ಗ್ರಾಮದ ಲಾಂಛನದಲ್ಲಿಯೇ ಈ ಮಕ್ಕಳ ರೂಪವನ್ನು ಇರಿಸಿ ಗ್ರಾಮಕ್ಕೆ ಸ್ವಾಗತಿಸುವ ಬೋರ್ಡ್ ಒಂದನ್ನು 1977ರಲ್ಲಿ ಸ್ಥಾಪಿಸಲಾಗಿದೆ.

Image courtesy

ಜಾಕ್ ದ ರಿಪ್ಪರ್

ಜಾಕ್ ದ ರಿಪ್ಪರ್

ಈತನೊಬ್ಬ ಲಂಡನ್ನಿನ ಸರಣಿ ಕೊಲೆಗಾರನಾಗಿದ್ದು ಬಹುತೇಕವಾಗಿ ವೈಟ್ ಚಾಪೆಲ್ ಎಂಬ ಸ್ಥಳದ ನಿವಾಸಿ ವೇಶ್ಯಾವೃತ್ತಿ ನಡೆಸುತ್ತಿದ್ದ ಮಹಿಳೆಯರನ್ನೇ ತನ್ನ ಗುರಿಯಾಗಿಸಿಕೊಳ್ಳುತ್ತಿದ್ದ. ಮೊದಲು ಕುತ್ತಿಗೆಯನ್ನು ಕತ್ತರಿಸಿ ಬಳಿಕ ಶವದಿಂದ ಕೈಕಾಲುಗಳನ್ನು ಬೇರ್ಪಡಿಸುತ್ತಿದ್ದ. ಬಳಿಕ ಹೊಟ್ಟೆಯೊಳಗಣ ಅಂಗಗಳನ್ನು ಬಹಳ ನಾಜೂಕಿನಿಂದ ಬೇರ್ಪಡಿಸುತ್ತಿದ್ದ. ಇದೇ ಕಾರಣಕ್ಕೆ ಇವನ ಹೆಸರಿನೊಂದಿಗೆ ರಿಪ್ಪರ್ ಅಥವಾ ಅಂಗವಿಚ್ಛೇದಕ ಎಂಬ ವಿಶೇಷಣ ಸೇರಿಕೊಂಡಿದೆ. ಈತ ಅಂಗಗಳನ್ನು ಕತ್ತರಿಸುವ ಕಲೆಯಿಂದಾಗಿ ಈತನೊಬ್ಬ ಶಸ್ತ್ರಚಿಕಿತ್ಸಕನಿರಬಹುದು ಎಂಬ ಗುಮಾನಿಯ ಮೇಲೆ ತನಿಖೆ ಆರಂಭಿಸಿದ ಸ್ಕಾಟ್ಲೆಂಡ್ ಯಾರ್ಡ್ ಪೋಲೀಸ್ ವಿಭಾಗಕ್ಕೂ ಈತ ನಿಜವಾಗಿ ಯಾರು ಎಂದು ಕಂಡುಹಿಡಿಯಲು ಕೊನೆಗೂ ಸಾಧ್ಯವಾಗಲೇ ಇಲ್ಲ.

Image courtesy

ತೌರೇದ್ ನ ಪುರುಷ (The Man From Taured)

ತೌರೇದ್ ನ ಪುರುಷ (The Man From Taured)

1954ರಲ್ಲಿ ಜಪಾನಿನ ಟೋಕಿಯೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಓರ್ವ ಮನುಷ್ಯನನ್ನು ವಿಚಾರಿಸಿ ನೀನು ಎಲ್ಲಿಂದ ಬಂದೆ ಎಂದು ಕೇಳಿದಾಗ ತಾನು ಆಂಡ್ಯೋರಾ ಎಂದ ಪ್ರದೇಶದಲ್ಲಿರುವ ತೌರೇದ್ ಎಂಬ ದೇಶದಿಂದ ಬಂದೆ ಎಂದು ಉತ್ತರಿಸಿದ. ಈತನ ಉತ್ತರ ಅಧಿಕಾರಿಗಳನ್ನು ತಬ್ಬಿಬ್ಬಾಗಿಸಿತು. ಎಕೆಂದರೆ ಈ ದೇಶ ಕೇವಲ ಮಕ್ಕಳ ಕಥಾಪುಸ್ತಕದಲ್ಲಿದ್ದು ಸಾವಿರ ವರ್ಷಕ್ಕೂ ಹಿಂದೆ ಅಸ್ತಿತ್ವದಲ್ಲಿತ್ತು ಎಂದು ಜಪಾನೀಯರ ಇತಿಹಾಸದಲ್ಲಿ ದಾಖಲಾಗಿದೆ. ಅನುಮಾನಗೊಂಡ ಈ ವ್ಯಕ್ತಿಯನ್ನು ಬಂಧಿಸಿ ಕೋಣೆಯೊಂದರಲ್ಲಿ ಕೂಡಿ ಹಾಕಲಾಯಿತು. ಆದರೆ ಮರುದಿನ ಬೆಳಿಗ್ಗೆ ನೋಡಿದಾಗ ಕೋಣೆ ಖಾಲಿಯಾಗಿತ್ತು, ಆ ಬಳಿಕ ಆತನನ್ನು ಯಾರೂ ಎಂದೂ ನೋಡೇ ಇಲ್ಲ.

Image courtesy

ಡಿ.ಬಿ.ಕೂಪರ್

ಡಿ.ಬಿ.ಕೂಪರ್

1971ರಲ್ಲಿ ಅಮೇರಿಕಾದ ಒರೆಗಾನ್ ನಿಂದ ವಾಷಿಂಗ್ಟನ್ ಗೆ ತೆರಳುತ್ತಿದ್ದ ವಿಮಾನವೊಂದರಲ್ಲಿ ಪಯಣಿಸುತ್ತಿದ್ದ ಸಮಯದಲ್ಲಿ ತನ್ನ ಸೂಟ್ ಕೇಸಿನಲ್ಲಿ ಬಾಂಬ್ ಇದೆ ಎಂದು ಹೆದರಿಸಿ ವ್ಯಕ್ತಿಯೊಬ್ಬ ಬೋಯಿಂಗ್ 727 ವಿಮಾನವನ್ನೇ ಅಪಹರಿಸಿದ್ದ. ಜನರು ಸುರಕ್ಷಿತರಾಗಿ ಮನೆಗೆ ಹೋಗಬೇಕೆಂದರೆ ತನಗೆ ಎರಡು ಲಕ್ಷ ಡಾಲರ್ ಹಣ ಬೇಕು ಎಂಬ ಬೇಡಿಕೆಯಿಟ್ಟಿದ್ದ. ಇದರೊಂದಿಗೆ ನಾಲ್ಕು ಪ್ಯಾರಾಚೂಟ್ ಸಹಾ ಬೇಕು ಎಂಬ ಇನ್ನೊಂದು ವಿಚಿತ್ರ ಬೇಡಿಕೆಯನ್ನೂ ಇಟ್ಟಿದ್ದ. ಈತನ ಬೇಡಿಕೆ ಈಡೇರಿಸಿದ ಬಳಿಕ ನಡುದಾರಿಯಲ್ಲಿ ವಿಮಾನದಿಂದ ಪ್ಯಾರಾಚೂಟ್ ಧರಿಸಿ ಪರಾರಿಯಾದ. ಈ ವ್ಯಕ್ತಿ ಯಾರು ಎಂಬ ತನಿಖೆಯನ್ನು ಪ್ರಾರಂಭಿಸಿದ ಎಫ್ ಬಿ ಐ ಈತ ಖರೀದಿಸಿದ ಟಿಕೆಟ್ ಮೂಲಕ ಡಾನ್ ಕೂಪರ್ ಎಂಬ ಕಾಲ್ಪನಿಕ ಹೆಸರನ್ನು ಕಂಡುಕೊಂಡಿತು. ಅಂದಿನಿಂದ ಪ್ರಾರಂಭವಾದ ತನಿಖೆ ಇದುವರೆಗೂ ಪ್ರಗತಿಯಲ್ಲಿದ್ದು ಪ್ರಸ್ತುತ ಅರವತ್ತು ಸಂಪುಟಗಳನ್ನೊಳಗೊಂಡಿದೆ. ಈತನ ಕಾಲ್ಪನಿಕೆ ಚಿತ್ರವನ್ನು ಬಿಡುಗಡೆ ಮಾಡಿ ಡಿ.ಬಿ.ಕೂಪರ್ ಎಂಬ ಹೆಸರಿನೊಂದಿಗೆ ಹುಡುಕಾಟ ಜಾರಿಯಲ್ಲಿದೆ. ಆದರೆ ಈತ ಇದುವರೆಗೆ ಸಿಕ್ಕಿಲ್ಲ.

Image courtesy

English summary

Amazing People With Real Super powers

Generally, when we come across anything that is mysterious, it catches our attention. We try to figure out and know more about the mystery by doing some research ourself. In this article, we are here to share some of the stories of mysterious people who've baffled the world with their mystifying ways. These people shocked the world and it can make us wonder as to how can anyone even think of doing such a thing.
X
Desktop Bottom Promotion