For Quick Alerts
ALLOW NOTIFICATIONS  
For Daily Alerts

ಅಂತಾರಾಷ್ಟ್ರೀಯ ಹುಲಿ ದಿನಾಚರಣೆ-ಮೈನವಿರೇಳಿಸುವ ಸಂಗತಿ

By manu
|

ಹುಲಿ ಎಂದಾಕ್ಷಣ ಹಳದಿ ಮೈಮೇಲೆ ಕಪ್ಪು ಪಟ್ಟೆಪಟ್ಟೆಯ, ದೊಡ್ಡ ಕೋರೆ ಹಲ್ಲುಗಳ, ದೊಡ್ಡ ಬೆಕ್ಕಿನ ಗಾತ್ರದ ಪ್ರಾಣಿ ನಮ್ಮ ಕಣ್ಣ ಮುಂದೆ ಬರುತ್ತದೆ. ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿಯೂ ಹೌದು. ಆದರೆ ನಮ್ಮ ರಾಷ್ಟ್ರೀಯ ಪ್ರಾಣಿಯ ಬಗ್ಗೆ ನಾವೆಷ್ಟು ಅರಿತುಕೊಂಡಿದ್ದೇವೆ? ಅತಿ ಹೆಚ್ಚು ಎಂದರೆ ಎಂದೋ ಮೈಸೂರು ಮೃಗಾಲಯದಲ್ಲಿ ಹುಲಿಯ ಬಗ್ಗೆ ಬರೆದಿರುವ ವಿವರಣೆಗಳನ್ನು (ಅದನ್ನು ಪೂರ್ತಿಯಾಗಿ ಓದುವಷ್ಟು ವ್ಯವಧಾನವಿತ್ತೇ?) ಅಥವಾ ಹಿಂದಿನ ಯಾವುದೋ ಕಾಲದಲ್ಲಿ ಹುಲಿ ಕೊಡುತ್ತಿದ್ದ ಕಾಟವನ್ನು ಕೇಳಿ ಅಥವಾ ಓದಿ ತಿಳಿದುಕೊಂಡಿದ್ದೇವೆ.

ವಾಸ್ತವವೆಂದರೆ ಜಗತ್ತಿನಲ್ಲಿ ನಿಮ್ಮ ಮೆಚ್ಚಿನ ಕಾಡು ಪ್ರಾಣಿ ಅಥವಾ ಕ್ರೂರ ಪ್ರಾಣಿ ಯಾವುದು ಎಂಬ ಪ್ರಶ್ನೆಗೆ ಹುಲಿಗೇ ಅತಿ ಹೆಚ್ಚು ಮತಗಳು ಬಿದ್ದಿವೆ. ವಿಚಿತ್ರವೆಂದರೆ ಹುಲಿಯ ಬಗ್ಗೆ ಇಷ್ಟು ಕಾಳಜಿ ವಹಿಸುವವರಿಗೆ ಹುಲಿಯ ಬಗ್ಗೆ ತಿಳಿದಿರುವುದು ಐದು ಶೇಖಡಾಕ್ಕಿಂತಲೂ ಕಡಿಮೆ!

ಹುಲಿಯ ಬಗ್ಗೆ ತಿಳಿದಿರುವ ವಿಷಯಗಳಲ್ಲಿ ನೈಜ ವಿಷಯಗಳಿಗಿಂತ ಅವರಿವರಿಂದ ಕೇಳಿದ ಉತ್ಪ್ರೇಕ್ಷಿತ ವಿಷಯಗಳೇ ಹೆಚ್ಚು. ಆದ್ದರಿಂದ ಈಗ ಅಳಿವಿನಂಚಿನಲ್ಲಿರುವ ಹುಲಿ ಸಂತಾನವನ್ನು ಉಳಿಸಲು ಹೆಚ್ಚಿನ ವಿವರಗಳನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ. ಹುಲಿಯ ಬಗ್ಗೆ ನಿಮಗೆ ತಿಳಿದಿರದಿದ್ದ ಹಲವು ರೋಚಕ ಸಂಗತಿಗಳನ್ನು ಕಂಡು ಅಚ್ಚರಿಪಡಲು ಕೆಳಗಿನ ಮಾಹಿತಿಯನ್ನು ನೋಡೋಣ...

ಬೆಕ್ಕುಗಳಲ್ಲಿ ಅತಿ ದೊಡ್ಡದೇ ಹುಲಿ
ಹುಲಿ ದೊಡ್ಡದೋ, ಸಿಂಹ ದೊಡ್ಡದೋ ಎಂಬ ಪ್ರಶ್ನೆಗೆ ಹೆಚ್ಚಿನವರು ಸಿಂಹ ಎಂಬ ಉತ್ತರವನ್ನೇ ನೀಡುತ್ತಾರೆ. ಆದರೆ ವಾಸ್ತವವಾಗಿ ಸಿಂಹ ಬೆಳೆಯಬಲ್ಲ ಗರಿಷ್ಟ ಗಾತ್ರ ಎಂದರೆ ಇನ್ನೂರೈವತ್ತು ಕೇಜಿ, ಅದೂ ಆಫ್ರಿಕಾದ ದೈತ್ಯ ಸಿಂಹಗಳು ಮಾತ್ರ. ನಮ್ಮ ಭಾರತದ ಗಿರ್ ಅರಣ್ಯದಲ್ಲಿರುವ ಸಿಂಹಗಳು ನೂರ ಎಪ್ಪತ್ತೈದು ಕೇಜಿ ಬೆಳೆಯಬಲ್ಲವು. ಆದರೆ ಸೈಬೀರಿಯನ್ ಹುಲಿ (Panthera genus) ಸುಮಾರು ಮುನ್ನೂರಾ ಅರವತ್ತು ಕೇಜಿ ಬೆಳೆಯಬಲ್ಲುದು. ಬಾಲದ ತುದಿಯಿಂದ ಮೂಗಿನವರೆಗಿನ ಉದ್ದ 3.3ಮೀಟರ್ ! (ಮಾರುತಿ 800 ಕಾರಿನ ಉದ್ದದಷ್ಟು).

World Tiger day - Amazing Facts About Tigers

ಭಾರತದ ರಾಯಲ್ ಬೆಂಗಾಲ್ ಟೈಗರ್ ಎಂದು ಪ್ರಸಿದ್ಧವಾಗಿರುವ ಹುಲಿ ಗರಿಷ್ಟ 227 ಕೇಜಿ ತೂಗುತ್ತದೆ, ಅದೂ ತನ್ನ ಹತ್ತನೇ ವಯಸ್ಸಿನಲ್ಲಿ. ಆದ್ದರಿಂದ ಗಾತ್ರದಲ್ಲಿ ಸಿಂಹ ಎರಡನೆಯ ಸ್ಥಾನ ಪಡೆದಿದೆ. ಆದರೆ ಸಿಂಹಕ್ಕೆ ಕಾಡಿನ ರಾಜ ಎಂದೇಕೆ ಕರೆಯುತ್ತಾರೆ ಗೊತ್ತೇ? ಸಿಂಹ ಎಂದಿಗೂ ಹೆದರುವುದಿಲ್ಲ. ಹುಲಿ ಕುತಂತ್ರಿಯಾಗಿದ್ದು ಎದುರಿನ ಜೀವಿ ಎದೆಯುಬ್ಬಿಸಿ ನಿಂತರೆ ಹೆದರುತ್ತದೆ. ಗುಂಡಿಗೆಯುಳ್ಳ ಸಿಂಹಕ್ಕೆ ಅರ್ಹ ರಾಜನ ಪಟ್ಟ ಸಿಕ್ಕಿದೆ. ಹುಲಿಯಲ್ಲಿ ಮಾತ್ರ ಕಂಡುಬರುವ ವಿಶಿಷ್ಟವಾದ ಗುಣಗಳಿವು!

ಹುಲಿ ಕೇವಲ ಮಾಂಸಾಹಾರಿ
ಹುಲಿ ಹಸಿದರೂ ಹುಲ್ಲು ತಿನ್ನುವುದಿಲ್ಲ ಎಂಬುದು ಗಾದೆ. ಆದರೆ ದನ, ಮೊಲ ಮೊದಲಾದ ಪ್ರಾಣಿಗಳು ಹುಲ್ಲು ತಿನ್ನುವಂತೆಯೇ ಹುಲಿ ಕೂಡಾ ಅಪರೂಪಕ್ಕೆ ಕೆಲವು ಹಣ್ಣುಗಳು ಮತ್ತು ಹುಲ್ಲನ್ನು ತಿನ್ನುತ್ತದೆ! ಆದರೆ ಪ್ರಾಥಮಿಕವಾಗಿ ಹುಲಿ ಅಪ್ಪಟ ಮಾಂಸಾಹಾರಿ. ಜಿಂಕೆ, ಕಾಡುಹಂದಿ, ಕಾಡುಕುರಿ, ಕಾಡುಕೋಣ ಮೊದಲಾದ ಸಸ್ಯಾಹಾರಿ ಪ್ರಾಣಿಗಳ ಮಾಂಸವನ್ನು ಇವು ಹೆಚ್ಚಾಗಿ ತಿನ್ನುತ್ತವೆ. ಇತರ ಮಾಂಸಾಹಾರಿ ಪ್ರಾಣಿಗಳಂತೆ ಅತಿ ಕಿರಿಯ ಕರುಳು ಇರುವುದರಿಂದ ಹುಲಿಗೆ ಸಸ್ಯಾಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ.

ಹುಲಿ ಎಂದಿಗೂ ಒಂಟಿಯಾಗಿ ಬೇಟೆಯಾಡುತ್ತದೆ
ಸಿಂಹಗಳು, ನರಿ, ತೋಳ, ಸೀಳುನಾಯಿ ಮೊದಲಾದವು ತಂಡಗಳಲ್ಲಿ ಬೇಟೆಯಾಡಿದರೆ ಹುಲಿ ಅತಿ ಕುತಂತ್ರಿಯಾಗಿದ್ದು ಒಂಟಿಯಾಗಿಯೇ ಬೇಟೆಯಾಡುತ್ತದೆ. ಅದರಲ್ಲೂ ಅದು ರಾತ್ರಿ ಹೊತ್ತು ಹೊಂಚು ಹಾಕಿ ಹಿಂದಿನಿಂದ ಬಂದು ಹಿಡಿಯುವುದೇ ಹೆಚ್ಚು. ಒಂದು ಹುಲ್ಲು ಕೂಡಾ ಅಲ್ಲಾಡದಂತೆ ನಿಃಶಬ್ದವಾಗಿ ಬಂದು ಒಮ್ಮೆಲೇ ತನ್ನ ಬೇಟೆಯ ಮೇಲೆ ಎರಗಿ ಕುತ್ತಿಗೆ ಅಥವಾ ತಲೆಬುರುಡೆಯ ಹಿಂಭಾಗವನ್ನು ಕಚ್ಚಿ ಉಸಿರುಗಟ್ಟಿಸಿ ಸಾಯಿಸುತ್ತದೆ. ಬಳಿಕ ಹೊಟ್ಟೆ ತುಂಬುವಷ್ಟನ್ನು ತಿಂದು ಉಳಿದ ಕಳೇಬರವನ್ನು ಅಡಗಿಸಿಡುತ್ತದೆ. ಒಂದೆರಡು ದಿನಗಳ ಬಳಿಕ ಮತ್ತೆ ಬಂದು ತಿನ್ನುತ್ತದೆ.

ಹುಲಿಗಳಿಗೆ ನೀರು ಎಂದರೆ ಇಷ್ಟ
ಬೆಕ್ಕಿನ ಜಾತಿಯಲ್ಲಿ ಹುಲಿಯನ್ನು ಬಿಟ್ಟು ಯಾವುದೇ ಪ್ರಾಣಿಗೆ ನೀರು ಇಷ್ಟವಾಗುವುದಿಲ್ಲ. ಆದರೆ ಹುಲಿಗೆ ನೀರು ಎಂದರೆ ಇಷ್ಟ. ಅತ್ಯುತ್ತಮ ಈಜುಗಾರನಾದ ಹುಲಿ ಎಷ್ಟೋ ಬಾರಿ ನೀರಿನಲ್ಲಿಯೇ ಇದ್ದು ನೀರು ಕುಡಿಯಲು ಬರುವ ಪ್ರಾಣಿಗಳ ಮೇಲೆ ಎರಗುವುದುಂಟು. ತಣ್ಣನೆಯ ಸ್ಥಳವನ್ನು ಇಷ್ಟಪಡುವ ಹುಲಿ ಹೆಚ್ಚಾಗಿ ನೀರಿನ ಒರತೆ, ಝರಿ, ಜಲಪಾತಗಳಿರುವೆಡೆಯ ಗುಹೆಯಲ್ಲಿ ಆಶ್ರಯ ಪಡೆಯುತ್ತದೆ.

ಹುಲಿಯ ಘರ್ಜನೆ ಮೂರು ಕಿ.ಮೀ ವರೆಗೆ ಕೇಳಬಹುದು
ಭೇರಿ ಎಂಬ ವಾದ್ಯವನ್ನು ಜಯದ ಸಂಕೇತ ನೀಡಲು ಹಿಂದೆ ಬಳಸಲಾಗುತ್ತಿತ್ತು. (ಜಯಭೇರಿ ಎಂಬ ಪದ ಬಂದಿದ್ದೇ ಹೀಗೆ) ಮಂದ್ರಸ್ತರದ ಧ್ವನಿ ಗಾಳಿಯಲ್ಲಿ ಬಹಳ ದೂರ ಸಾಗುತ್ತದೆ. ಹುಲಿಯ ಘರ್ಜನೆಯೂ ಮಂದ್ರಸ್ತರದ್ದಾಗಿದ್ದು ಮೂರು ಕಿ.ಮೀ.ವರೆಗೂ ಕೇಳಿಸುತ್ತದೆ.

ಭಾರೀ ತೂಕ ಹೊಂದಿದ್ದರೂ ತೀವ್ರವೇಗ ಪಡೆಯಬಲ್ಲವು
ಅತಿವೇಗದಲ್ಲಿ ಚಿರತೆ ಓಡಬಲ್ಲದ್ದಾಗಿದ್ದರೂ ಕೆಲವು ಸೆಕೆಂಡುಗಳಿಗಾಗಿ ಮಾತ್ರ ಓಡಬಲ್ಲದು. ಆದರೆ ಹುಲಿ ಇಷ್ಟೊಂದು ಭಾರವಿದ್ದರೂ ಸುಮಾರು ಅರವತ್ತು ಅಥವಾ ಅರವತ್ತೈದು ಕಿ.ಮೀ ಓಡಬಲ್ಲ ಕ್ಷಮತೆ ಹೊಂದಿದೆ. ಆದರೆ ಹುಲಿ ಸಹಾ ಕೆಲವು ಸೆಕೆಂಡುಗಳವರೆಗೆ ಮಾತ್ರ ಓಡಬಲ್ಲುದು. ಅತಿ ಹೆಚ್ಚೆಂದರೆ ಸುಮಾರು ಅರ್ಧ ಕಿ.ಮೀ. ಓಡಬಲ್ಲುದು ನಂತರ ಬಿಸಿಯಾದ ದೇಹವನ್ನು ತಣಿಸಲು ವಿರಮಿಸಲೇಬೇಕು.

ಇಪ್ಪತ್ತು ಲಕ್ಷ ವರ್ಷದಿಂದಲೂ ಹುಲಿಗಳು ಈ ಭೂಮಿ ಮೇಲಿವೆ
ಪ್ರಾಕ್ತನಶಾಸ್ತ್ರಜ್ಞರಿಗೆ ಹುಲಿಯ ಪಳೆಯುಳಿಕೆಗಳು ಸಿಕ್ಕಿದ್ದು ಇದರ ಆಯಸ್ಸು ಸುಮಾರು ಇಪ್ಪತ್ತು ಲಕ್ಷ ವರ್ಷ ಹಿಂದಿನದ್ದು ಎಂದು ಕಂಡುಬಂದಿದೆ. ಅಂದರೆ ಹುಲಿಗಳು ಬಹಳ ಹಿಂದಿನಿಂದಲೂ ಭೂಮಿಯ ಮೇಲೆ ಉಳಿದುಕೊಂಡು ಬಂದಿವೆ ಎಂದಾಯ್ತು.

ಎರಡು ಹುಲಿಗಳು ಒಂದೇ ತರಹ ಇರುವುದಿಲ್ಲ
ದೂರದಿಂದ ನೋಡಲು ಎಲ್ಲಾ ಹುಲಿಗಳು ಒಂದೇ ತರಹ ಇರುವಂತೆ ಕಂಡುಬಂದರೂ ಪಟ್ಟೆಗಳ ವಿನ್ಯಾಸದಲ್ಲಿ ಪ್ರತಿ ಹುಲಿಯೂ ಭಿನ್ನವಾಗಿರುತ್ತದೆ.

ಇಂದು ಐದು ಪ್ರಬೇಧದ ಹುಲಿಗಳು ಜಗತ್ತಿನಲ್ಲಿವೆ
ಇಂದು ಅಸ್ತಿತ್ವದಲ್ಲಿರುವ ಹುಲಿಗಳಲ್ಲಿ ಐದು ಪ್ರಬೇಧಗಳು ಮಾತ್ರ ಕಂಡುಬರುತ್ತವೆ. ಅವೆಂದರೆ ರಾಯಲ್ ಬೆಂಗಾಲ್, ದಕ್ಷಿಣ ಚೀನಾ, ಇಂಡೋಚೈನೀಸ್, ಸುಮಾತ್ರನ್ ಮತ್ತು ಸೈಬೀರಿಯನ್. ಮನುಷ್ಯನ ಆಸೆಗೆ ಬಲಿಯಾಗಿ ಈಗ ಸಂತತಿಯೇ ಅಳಿದಿರುವ ಪ್ರಬೇಧಗಳೆಂದರೆ ಕ್ಯಾಸ್ಪಿಯನ್, ಬಾಲಿ ಮತ್ತು ಜಾವನ್ ಹುಲಿಗಳು. ಆದ್ದರಿಂದ ಈಗಿರುವ ಹುಲಿಗಳನ್ನು ಉಳಿಸಲು ಬಹಳಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.

ನೂರು ವರ್ಷ ಏಷಿಯಾವನ್ನು ಆಳಿದ ಹುಲಿಗಳೀಗ ಕೇವಲ ಏಳು ಶೇಖಡಾಕ್ಕಿಳಿದಿದೆ
ನೂರು ವರ್ಷಗಳ ಹಿಂದೆ ಇಡಿಯ ದಕ್ಷಿಣ ಏಶಿಯಾದ ದೇಶಗಳಲ್ಲೆಲ್ಲಾ ವಿಪುಲವಾಗಿದ್ದ ಹುಲಿಗಳು ನಿಧಾನವಾಗಿ ಸಂಖ್ಯೆಯಲ್ಲಿ ಕ್ಷೀಣಿಸುತ್ತಾ ಬಂದಿವೆ. ಇದಕ್ಕೆ ಮುಖ್ಯ ಕಾರಣ ಹುಲಿಯ ಚರ್ಮ, ಉಗುರು, ಮೂಳೆಗಳಿಗೆ ಇರುವ ಅಪಾರ ಬೇಡಿಕೆ. ಈಗ ಉಳಿದಿರುವ ಹುಲಿಗಳು ಅಂದಿಗೆ ಹೋಲಿಸಿದರೆ ಕೇವಲ ಏಳು ಶೇಖಡಾದಷ್ಟಿದ್ದು ಇವುಗಳನ್ನು ಉಳಿಸಲು ಪ್ರತಿಯೊಬ್ಬರೂ ತಮ್ಮ ಸಹಕಾರವನ್ನು ನೀಡಬೇಕಾಗಿದೆ.

Read more about: ಭಾರತ ಜೀವನ life
English summary

World Tiger day - Amazing Facts About Tigers

Tigers are some of the most amazing creatures on the planet. In fact, Animal Planet recently voted tigers to be one of the world’s most favorite animal. But a great deal of what we think we know about tigers is colored by common misconceptions or confusion with other large cats. Here are amazing facts about tigers you probably do not know…
Story first published: Wednesday, July 29, 2015, 12:59 [IST]
X
Desktop Bottom Promotion