For Quick Alerts
ALLOW NOTIFICATIONS  
For Daily Alerts

ಹೇಗಿದ್ದ ಮುಂಬೈಯ ತಾಜ್ ಹೋಟೆಲ್, ಈಗ ಹೇಗಾಗಿದೆ ನೋಡಿ!

By Super
|

ಅಮೇರಿಕಾಕ್ಕೆ 9/11 ಕರಾಳ ದಿನವಾಗಿರುವಂತೆ ಭಾರತಕ್ಕೆ 26/11 ಕರಾಳ ದಿನವಾಗಿದೆ. 2008ರ ಈ ದಿನದಂದು ಒಂಭತ್ತು ಭಯೋತ್ಪಾದಕರು ಮುಂಬೈ ನಗರದೊಳಗೆ ನುಗ್ಗಿ ಒಟ್ಟು ಎಂಟು ಕಡೆ ಅಡ್ದಾದಿಡ್ಡಿ ಗುಂಡುಹಾರಿಸಿ 164 ಜನರ ಸಾವಿಗೆ ಕಾರಣರಾಗಿ ದೇಶವೇ ತಲ್ಲಣಗೊಳ್ಳುವಂತೆ ಮಾಡಿದರು. ಇವರಲ್ಲಿ ಅಜ್ಮಲ್ ಕಸಬ್ ಎಂಬ ಓರ್ವನೇ ಭಯೋತ್ಪಾದಕ ಜೀವಂತ ಸೆರೆಸಿಕ್ಕಿದ್ದ. ಧಾಳಿ ನಡೆದ ಎಂಟು ಸ್ಥಳಗಳಲ್ಲಿ ತಾಜ್ ಮತ್ತು ಒಬೆರಾಯ್ ಹೋಟೆಲುಗಳು ಸಹಾ ಸೇರಿದ್ದವು. ಅಮೃತಸರದ ಸ್ವರ್ಣಮಂದಿರ - ಸಿಖ್ಖರ ಪಾಲಿನ ಆರಾಧ್ಯ ದೇಗುಲ

ಈ ಹೋಟೆಲುಗಳಲ್ಲಿ ತಂಗಿದ್ದ ಹತ್ತು ದೇಶಗಳ ನಾಗರಿಕರಾಗಿದ್ದ ಇಪ್ಪತ್ತೆಂಟು ವಿದೇಶೀಯರೂ ಹತರಾಗಿದ್ದರು. ಭಯೋತ್ಪಾದಕರು ಏಕಾಗಿ ಈ ಹೋಟೆಲುಗಳನ್ನು ತಮ್ಮ ಧಾಳಿಗೆ ಗುರಿಯಾಗಿಸಿದರು? ಈ ಪ್ರಶ್ನೆಯನ್ನು ಕೆದಕಿದರೆ ತಾಜ್ ಮಹಲ್ ಪ್ಯಾಲೇಸ್ ಹೋಟೆಲಿನ ಜನಪ್ರಿಯತೆ ಮತ್ತು ಭವ್ಯತೆಯ ಬಗ್ಗೆ ಅರಿವಾಗುತ್ತದೆ. ಬನ್ನಿ ನಮ್ಮ ತಾಜ್ ಮಹಲ್ ಪ್ಯಾಲೇಸ್ ಹೋಟೆಲಿನ ಬಗ್ಗೆ ತಿಳಿಯೋಣ

ಜೇಮ್ ಶೇಟಜೀ ಟಾಟಾ

ಜೇಮ್ ಶೇಟಜೀ ಟಾಟಾ

ಸ್ವಾಭಿಮಾನಿ ಭಾರತೀಯರ ಅವಗಣನೆಯನ್ನು ಒಂದು ಸವಾಲಾಗಿ ಸ್ವೀಕರಿಸಿದ ಓರ್ವ ಭಾರತೀಯ ಜಗತ್ತಿನ ಮಟ್ಟದಲ್ಲಿ ಎದೆಯುಬ್ಬಿಸಿ ನಿಲ್ಲುವ ಹೆಮ್ಮೆಯ ಪ್ರತೀಕವಾಗಿದೆ. ಹದಿನೆಂಟನೆಯ ಶತಮಾನದ ಕೊನೆಯ ವರ್ಷಗಳಲ್ಲಿ ಬ್ರಿಟಿಷ್ ಆಳ್ವಿಕೆಯಿದ್ದಾಗ ಉದ್ಯಮಿ ಜೇಮ್ ಶೇಟಜೀ ಟಾಟಾ ರವರಿಗೆ ಅಂದು ಮುಂಬೈಯ ವೈಭವಯುತ ಹೋಟೇಲಿನಲ್ಲಿ ಕೇವಲ ಭಾರತೀಯನೆಂಬ ಕಾರಣಕ್ಕಾಗಿ ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಈ ಅವಮಾನವನ್ನು ಆ ಹೋಟೆಲಿಗಿಂತಲೂ ಅದ್ದೂರಿಯಾದ ಹೋಟೆಲನ್ನು ನಿರ್ಮಿಸುವ ಮೂಲಕ ತೀರಿಸುವೆ ಎಂದು ಅಂದೇ ಮಾಡಿದ ಪ್ರತಿಜ್ಞೆ ಈ ಭವ್ಯ ಹೋಟೆಲಿಗೆ ಅಡಿಪಾಯವಾಯಿತು.

ಟಾಟಾ ಅವರ ಕನಸು

ಟಾಟಾ ಅವರ ಕನಸು

ಅಂದು ಮುಂಬೈಯಲ್ಲಿ ಕೆಲವೇ ಹೋಟೆಲುಗಳಿದ್ದು ಅತಿ ಗಣ್ಯರಿಗೆ ಮಾತ್ರ ಪ್ರವೇಶ ಲಭ್ಯವಿತ್ತು. ಅತಿ ಭವ್ಯ ಎಂದು ಭಾವಿಸಲಾಗಿದ್ದ ಮುಂಬೈ ವಾಟ್ಸನ್ಸ್ ಎಪ್ಲಾಂಡೆ ಹೋಟೆಲ್ ಸಹಾ ಓಬೀರಾಯನ ಕಾಲಕ್ಕೆ ತಕ್ಕನಾಗಿತ್ತು. ಈ ಸಮಯದಲ್ಲಿ ಏಕಾಏಕಿ ಅವರು ಮುಂಬೈನ ಅತ್ಯಂತ ಭವ್ಯ ಹೋಟೆಲ್ ಕಟ್ಟುವೆ, ಇದು ವಿಶ್ವದಲ್ಲಿಯೇ ಅದ್ವಿತೀಯವಾಗಿದ್ದು ಎಲ್ಲೆಡೆಯಿಂದ ಜನರನ್ನು ಆಕರ್ಷಿಸುವುದು ಎಂದು ಮುನ್ನುಡಿದಿದ್ದರು. 16ನೇ ಡಿಸೆಂಬರ್ 1903 ರಂದು ಪ್ರಾರಂಭವಾದಂದಿನಿಂದ ಇಂದಿಗೂ ತಾಜ್ ಪ್ಯಾಲೇಸ್ ಹೋಟೆಲ್ ಭಾರತದ ಅತ್ಯಂತ ವೈಭವದ ಮತ್ತು ದುಬಾರಿಯಾದ ಹೋಟೆಲ್ ಎಂದೇ ಪ್ರಖ್ಯಾತವಾಗಿದೆ. ಈ ಭವ್ಯ ಕಟ್ಟಡದ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ನೋಡೋಣ

ಎರಡೂವರೆ ಲಕ್ಷ ಪೌಂಡುಗಳಲ್ಲಿ ನಿರ್ಮಿತವಾದ ಕಟ್ಟಡ

ಎರಡೂವರೆ ಲಕ್ಷ ಪೌಂಡುಗಳಲ್ಲಿ ನಿರ್ಮಿತವಾದ ಕಟ್ಟಡ

ಈ ಭವ್ಯ ಕಟ್ಟಡದ ವಿನ್ಯಾಸವನ್ನು ಭಾರತೀಯ ವಾಸ್ತುಶಿಲ್ಪಿಗಳಾದ ಸೀತಾರಾಂ ಖಂಡೇರಾವ್ ವೈದ್ಯ ಮತ್ತು ಡಿ. ಎನ್. ಮಿರ್ಜಾ ರವರು ಸಿದ್ಧಪಡಿಸಿದರು. ಕಟ್ಟಡ ನಿರ್ಮಾಣದ ತಾಂತ್ರಿಕ ವಿಭಾಗವನ್ನು ಬ್ರಿಟಿಶ್ ಅಭಿಯಂತರರಾದ ಡಬ್ಲ್ಯೂ ಎ ಚೇಂಬರ್ಸ್ ವಹಿಸಿಕೊಂಡರು. ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಖಾನ್ ಸಾಹೇಬ್ ಸೋರಬ್ಜಿ ರುತ್ತೊನ್ಜಿ ಕಂಟಾಕ್ಟರ್ ರವರು ವಹಿಸಿಕೊಂಡರು.

ಭವ್ಯ ಕಟ್ಟಡದ ವಿನ್ಯಾಸ

ಭವ್ಯ ಕಟ್ಟಡದ ವಿನ್ಯಾಸ

ಮೂಲ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಿ ಒಳಗಣ ಪಾವಟಿಗೆಗಳು ನೀರಿನ ಮೇಲೆ ತೇಲುವಂತೆ ವಿಶಿಷ್ಟವಾಗಿ ವಿನ್ಯಾಸಗೊಳಿಸಿದರು. 1903ರಲ್ಲಿ ಈ ಕಟ್ಟಡ ಪೂರ್ಣಗೊಂಡಾಗ ಒಟ್ಟ ಆದ ಖರ್ಚು ಎರಡೂವರೆ ಲಕ್ಷ ಪೌಂಡು. ಇಂದಿನ ದಿನದಲ್ಲಿ ಇದೇ ಕಟ್ಟಡವನ್ನು ನಿರ್ಮಾಣ ಮಾಡುವುದಾದರೆ 127 ಮಿಲಿಯನ್ ಪೌಂಡ್ ಬೇಕು. (ಇಂದಿನ ವಿನಿಮಯ ದರದ ಪ್ರಕಾರ 11,70,20,71,748.62 ರೂಪಾಯಿಗಳು)

ಹೋಟೆಲಿನ ಗುಮ್ಮಟಕ್ಕೆ ಐಫೆಲ್ ಟವರ್ ಗೆ ಕಬ್ಬಿಣದ ಬಳಕೆ

ಹೋಟೆಲಿನ ಗುಮ್ಮಟಕ್ಕೆ ಐಫೆಲ್ ಟವರ್ ಗೆ ಕಬ್ಬಿಣದ ಬಳಕೆ

ಪ್ಯಾರಿಸ್ ನ ಐಫೆಲ್ ಟವರ್ ಗೆ ಉತ್ತಮ ಗುಣಮಟ್ಟದ ಕಬ್ಬಿಣವನ್ನು ಉಪಯೋಗಿಸಲಾಗಿದೆ. ತಾಜ್ ಹೋಟೆಲಿಗೂ ಇದೇ ಕಬ್ಬಿಣವನ್ನು ಉಪಯೋಗಿಸಿ ಗುಮ್ಮಟವನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ಅಗತ್ಯವಾದ ಕಬ್ಬಿಣವನ್ನು ಫ್ರಾನ್ಸ್ ನಿಂದ ಆಮದು ಮಾಡಿಕೊಳ್ಳಲಾಯಿತು.

ಮೊದಲ ಬಾರಿಗೆ ಜರ್ಮನಿ ನಿರ್ಮಿತ ಹಬೆಶಕ್ತಿ

ಮೊದಲ ಬಾರಿಗೆ ಜರ್ಮನಿ ನಿರ್ಮಿತ ಹಬೆಶಕ್ತಿ

ಒಟ್ಟು ಏಳು ಅಂತಸ್ತುಗಳಿರುವ ಈ ಕಟ್ಟಡದಲ್ಲಿ ಅಂತಸ್ತುಗಳ ನಡುವೆ ಓಡಾಡಲು ಭಾರತದಲ್ಲಿಯೇ ಮೊತ್ತ ಮೊದಲ ಬಾರಿಗೆ ಜರ್ಮನಿ ನಿರ್ಮಿತ ಹಬೆಶಕ್ತಿಯನ್ನು ಉಪಯೋಗಿಸಿ ಚಲಿಸುವ ಲಿಫ್ಟ್ ಗಳನ್ನು ಅಳವಡಿಸಲಾಯಿತು. ಅಲ್ಲದೇ ಅಮೇರಿಕಾದಿಂದ ಆಮದು ಮಾಡಿದ ಪಂಖಗಳೂ, ಟರ್ಕಿ ದೇಶದ ಸ್ನಾನಗೃಹ ಮತ್ತು ಸ್ನಾನದ ಬೋಗುಣಿಗಳನ್ನು ಸ್ಥಾಪಿಸಲಾಯಿತು. ಮೊತ್ತ ಮೊದಲ ಬಾರಿಗೆ ಭಾರತೀಯರು ಮಾಲಿಕರಾದ ಸಂಸ್ಥೆಯಲ್ಲಿ ಬ್ರಿಟಿಶ್ ಬಾಣಸಿಗರು ಕೆಲಸ ಮಾಡುವಂತಾಯಿತು.

ತಾಜ್ ಮಹಲ್ ಟವರ್‌ನ ಕಥೆ

ತಾಜ್ ಮಹಲ್ ಟವರ್‌ನ ಕಥೆ

ಈ ಭವ್ಯ ಹೋಟೆಲಿನ ಪಕ್ಕದಲ್ಲಿಯೇ ಇಂದು ಇಪ್ಪತ್ತೆರಡು ಅಂತಸ್ತುಗಳ ಕಟ್ಟಡ ನಿಂತಿದೆ. 1973ರಲ್ಲಿ ನಿರ್ಮಾಣವಾದ ಈ ಕಟ್ಟಡವಿರುವ ಸ್ಥಳದಲ್ಲಿ ಮೊದಲು ಗ್ರೀನ್ಸ್ ಹೋಟೆಲ್ ಎಂಬ ವಸತಿಗೃಹವಿತ್ತು. ಈ ಸ್ಥಳಕ್ಕೆ ಅಪೋಲೋ ಬಂದರ್ ಎಂದು ಕರೆಯಲಾಗುತ್ತದೆ. ಸಮುದ್ರತೀರದಲ್ಲಿರುವ ಮತ್ತು ಅಗ್ಗವಾಗಿರುವ ಕಾಣದ ಹಡಗುಗಳಲ್ಲಿ ಆಗಮಿಸುವ ನಾವಿಕರು ಮತ್ತು ಯಾತ್ರಿಕರಿಗೆ ಈ ಹೋಟೆಲು ಪ್ರಶಸ್ತವಾದ ತಂಗುದಾಣವಾಗಿತ್ತು. ಈ ಹೋಟೆಲ್ ಮತ್ತು ಸ್ಥಳವನ್ನು ತಾಜ್ ಮಹಲ್ ಹೋಟೆಲ್ ಸಂಸ್ಥೆ ಖರೀದಿಸಿ ಇಡಿಯ ಹೋಟೆಲನ್ನು ನೆಲಸಮ ಮಾಡಿ ಇಂದಿರುವ ಕಟ್ಟಡವನ್ನು ನಿರ್ಮಿಸಿತು.

1970ರಲ್ಲಿ ಕೋಣೆಗಳ ಸಂಖ್ಯೆ 225 ರಿಂದ 565ಕ್ಕೇರಿಕೆ

1970ರಲ್ಲಿ ಕೋಣೆಗಳ ಸಂಖ್ಯೆ 225 ರಿಂದ 565ಕ್ಕೇರಿಕೆ

1903ರಲ್ಲಿ ಪ್ರಾರಂಭವಾದಾಗ ಈ ಹೋಟೆಲಿನ ಕೋಣೆಗಳ ಸಂಖ್ಯೆ 225 ಆಗಿತ್ತು. ದಿನೇ ದಿನೇ ಏರುತ್ತಿದ್ದ ಬೇಡಿಕೆ ಮತ್ತು ಆಗಮಿಸುವ ಅತಿಥಿಗಳ ಸಂಖ್ಯೆಗಳ ಹೆಚ್ಚಳದ ಕಾರಣ ಪಕ್ಕದಲ್ಲಿ ತಾಜ್ ಮಹಲ್ ಟವರ್ ಮತ್ತು ಮುಖ್ಯ ಕಟ್ಟಡವನ್ನೂ ಬಹುಮಟ್ಟಿಗೆ ವಿಸ್ತಾರಗೊಳಿಸಲಾಯಿತು. ಆ ಬಳಿಕ ಒಟ್ಟು ಕೋಣೆಗಳ ಸಂಖ್ಯೆ 565ಕ್ಕೇರಿದೆ. ಇದರಲ್ಲಿ 44 ಅತಿಗಣ್ಯರಿಗಾಗಿ ಇರುವ ಸ್ಯೂಟ್ ಮತ್ತು ಹನ್ನೊಂದು ಪಾಕಶಾಲೆಗಳಿವೆ.

 ಗೇಟ್ವೇ ಆಫ್ ಇಂಡಿಯಾ ಪಕ್ಕ ಇರುವ ಪಂಚತಾರಾ ಹೋಟೆಲು

ಗೇಟ್ವೇ ಆಫ್ ಇಂಡಿಯಾ ಪಕ್ಕ ಇರುವ ಪಂಚತಾರಾ ಹೋಟೆಲು

ಈ ಹೋಟೆಲನ್ನು ಸಮುದ್ರಕ್ಕೆ ಮುಖಮಾಡಿರುವಂತೆ ನಿರ್ಮಿಸಲಾಗಿದೆ. 1911ರಲ್ಲಿ ಬ್ರಿಟನ್ ರಾಜ ಐದನೆಯ ಜಾರ್ಜ್ ಮತ್ತು ರಾಣಿ ಮೇರಿಯವರು ಮುಂಬೈಗೆ ಭೇಟಿದ ಸ್ಮರಣಾರ್ಥ ಹೆಬ್ಬಾಗಿಲಿನ ರೂಪದ ಗೇಟ್ ವೇ ಆಫ್ ಇಂಡಿಯಾ ಕಟ್ಟಡವನ್ನು ನಿರ್ಮಿಸಲಾಯಿತು. ಈ ಐತಿಹಾಸಿಕ ಕಟ್ಟಡವನ್ನು ತಾಜ್ ಹೋಟೆಲಿನ ಎದುರಿಗೇ ನಿರ್ಮಿಸಲು ಸ್ಥಳವನ್ನು ಆಯ್ಕೆ ಮಾಡಲಾಯಿತು. 1914ರಲ್ಲಿ ಪ್ರಾರಂಭವಾಗಿ 1924ಕ್ಕೆ ಪೂರ್ಣಗೊಂಡಿತು. ಈ ಸ್ಮಾರಕ ಮತ್ತು ತಾಜ್ ಹೋಟೆಲ್ ಮುಂಬೈಯ ಖ್ಯಾತಿಯನ್ನು ವಿಶ್ವಮಟ್ಟದಲ್ಲಿ ಎತ್ತರಿಸಿದವು.

ಭಾರತಕ್ಕೆ ಹಲವು ಪ್ರಥಮಗಳನ್ನು ನೀಡಿದ ಹೋಟೆಲ್

ಭಾರತಕ್ಕೆ ಹಲವು ಪ್ರಥಮಗಳನ್ನು ನೀಡಿದ ಹೋಟೆಲ್

ಭಾರತದ ಇತಿಹಾಸದಲ್ಲಿ ಕಂಡು ಕೇಳರಿಯದ ವಿಷಯಗಳನ್ನು ಈ ಹೋಟೆಲಿನ ಮೂಲಕ ಪ್ರಥಮವಾಗಿ ಪ್ರಾರಂಭಿಸಲಾಯಿತು. ಇದರಲ್ಲಿ ಪ್ರಮುಖವಾದುದು 1972ರಲ್ಲಿ ಪ್ರಾರಂಭವಾದ ದಿನದ ಇಪ್ಪತ್ತನಾಲ್ಕೂ ಘಂಟೆ ತೆರೆದಿರುವ ಕಾಫಿ ಗೃಹ. ಮೊದಲ ಬಾರಿಗೆ ಚೀನೀ ಅಡುಗೆಗಳ ಸಿಚುವಾನ್ ಮತ್ತು ಗೋಲ್ಡನ್ ಡ್ರಾಗನ್ ಪಾಕಶಾಲೆಗಳನ್ನೂ ಪ್ರಾರಂಭಿಸಲಾಯಿತು. ಭಾರತದಲ್ಲಿಯೇ ಪ್ರಥಮವಾಗಿ ಆಂಗ್ಲ ಬಾಣಸಿಗರನ್ನು ಪರಿಚಯಿಸಿದ ಹೋಟೆಲ್ ಸಹಾ ಆಗಿದೆ.

ಹೋಟೆಲ್ ಹೊರತಾದ ಬಳಕೆ

ಹೋಟೆಲ್ ಹೊರತಾದ ಬಳಕೆ

ಪ್ರಥಮ ವಿಶ್ವಯುದ್ದದ ಸಮಯದಲ್ಲಿ ಇಡಿಯ ಹೋಟೆಲ್ ಕಟ್ಟಡವನ್ನು ಆಸ್ಪತ್ರೆಯಾಗಿ ಉಪಯೋಗಿಸಲಾಯಿತು. ಒಟ್ಟು ಆರುನೂರು ಹಾಸಿಗೆಗಳು ಲಭ್ಯವಿದ್ದು ಸಾವಿರಾರು ಯುದ್ಧದಲ್ಲಿ ಗಾಯಗೊಂಡಿದ್ದ ಯೋಧರಿಗೆ ಶುಶ್ರೂಶೆ ನೀಡಲಾಯಿತು.

ಕಲಾಕೃತಿಗಳ ಆಗರವಾಗಿರುವ ಭವ್ಯ ಹೋಟೆಲ್

ಕಲಾಕೃತಿಗಳ ಆಗರವಾಗಿರುವ ಭವ್ಯ ಹೋಟೆಲ್

ಸಾಮಾನ್ಯವಾಗಿ ಖ್ಯಾತ ಕಲಾವಿದರ ಕಲಾಕೃತಿಗಳನ್ನು ಭವ್ಯ ಹೋಟೆಲುಗಳು ಕೊಂಡುಕೊಂಡು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಪ್ರಾಯಶಃ ಭಾರತದಲ್ಲಿ ಈ ಕ್ರಿಯೆಗೆ ತಾಜ್ ಹೋಟೆಲ್ ಪ್ರಾರಂಭ ನೀಡಿರಬಹುದು, ಆದರೆ ಅಧಿಕೃತವಾದ ದಾಖಲೆಗಳಿಲ್ಲ. ಏಕೆಂದರೆ ಅಂದಿನ ರಾಜ ಮಹಾರಾಜರೂ ಕಲಾಕೃತಿಗಳನ್ನು ಕೊಳ್ಳುತ್ತಿದ್ದರು ಮತ್ತು ತಮ್ಮ ಅರಮನೆಗಳಲ್ಲಿ ಪ್ರದರ್ಶಿಸುತ್ತಿದ್ದರು. ಇಂದು ಆ ಅರಮನೆಗಳೂ ಹೋಟೆಲುಗಳಾಗಿ ಪರಿವರ್ತಿತವಾಗಿರುವುದರಿಂದ ತಾಜ್ ಗಿಂತಲೂ ಹಳೆಯ ಕಲಾಕೃತಿಗಳು ಲಭ್ಯವಿವೆ. ಆದರೆ ಪ್ರಾರಂಭವಾದಂದಿನಿಂದಲೂ ತಾಜ್ ಹೋಟೆಲಿನ ಎಲ್ಲಾ ಕೋಣೆ ಮತ್ತು ಒಳಭಾಗದಲ್ಲಿ ಅಮೂಲ್ಯ ಕಲಾಕೃತಿಗಳನ್ನು ಸಂಗ್ರಹಿಸಿಡಲಾಗಿದೆ. ಅದರಲ್ಲೂ ತೈಲವರ್ಣಚಿತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಸಾಗರದೆಡೆ ಮುಖಮಾಡಿರುವ ಭಾರತದ ಪ್ರಥಮ ಹೋಟೆಲ್

ಸಾಗರದೆಡೆ ಮುಖಮಾಡಿರುವ ಭಾರತದ ಪ್ರಥಮ ಹೋಟೆಲ್

ಅಂದಿನ ದಿನಗಳಲ್ಲಿ ಮುಂಬೈಯ ಕಟ್ಟಡಗಳಲ್ಲಿ ಸಾಗರಕ್ಕೆ ವಿರುದ್ಧವಾಗಿ ಅಂದರೆ ಪೂರ್ವದೆಡೆ ಮುಖ ಮಾಡಿದಂತೆಯೇ ಮನೆಗಳನ್ನು ನಿರ್ಮಿಸಲಾಗುತ್ತಿತ್ತು. ಸೂರ್ಯನ ಪ್ರಥಮ ಕಿರಣಗಳು ಮನೆಯೊಳಗೆ ಪ್ರವೇಶಪಡೆದರೆ ದುಷ್ಟಶಕ್ತಿಗಳು ದೂರಾಗುತ್ತವೆ ಎಂಬ ನಂಬಿಕೆಯೇ ಇದಕ್ಕೆ ಕಾರಣ. ಆದರೆ ಇದಕ್ಕೆ ವಿರುದ್ಧವಾಗಿ ಟಾಟಾರವರು ಸಮುದ್ರಕ್ಕೆ ಮುಖವಾಗಿರುವಂತೆ ಕಟ್ಟಡವನ್ನು ನಿರ್ಮಿಸಲು ಯೋಜಿಸಿದ್ದುದು ಅಂದಿನ ಸಂಪ್ರದಾಯವಾದಿಗಳಿಗೆ ಅಸಂಬದ್ಧವಾಗಿ ಕಂಡಿತ್ತು. ಈ ಬಗ್ಗೆ ಕಟ್ಟುಕಥೆಯೊಂದು ಪ್ರಚಲಿತವಾಗಿದೆ.

ವಾಸ್ತು ಪ್ರಕಾರ

ವಾಸ್ತು ಪ್ರಕಾರ

ವಾಸ್ತು ಪ್ರಕಾರ ಪೂರ್ವಕ್ಕೆ ಮುಖಮಾಡಿದಂತೆ ನಿರ್ಮಿಸುವ ಬದಲು ಸಮುದ್ರಕ್ಕೆ ಮುಖಮಾಡಿದಂತೆ ನಿರ್ಮಿಸಿದ ವಾಸ್ತುಶಿಲ್ಪಿ ಐದು ಅಂತಸ್ತುಗಳು ಕಟ್ಟಿದ ಮೇಲೆ ತನ್ನ ತಪ್ಪಿನ ಅರಿವಾಗಿ ಅವಮಾನ ತಾಳಲಾಗದೇ ಐದನೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡನಂತೆ. ಆದರೆ ವಾಸ್ತವವಾಗಿ ಟಾಟಾರವರು ಆಶಿಸಿದ್ದಂತೆಯೇ ಸಮುದ್ರಕ್ಕೆ ಮುಖಮಾಡಿದಂತೆಯೇ ಈ ಕಟ್ಟಡವನ್ನು ಕಟ್ಟಲಾಗಿದೆ ಎಂದು ದಾಖಲೆಗಳು ತಿಳಿಸುತ್ತವೆ.

ರಾಜಮಹಾರಾಜರ ನೆಚ್ಚಿನ ಹೋಟೆಲ್

ರಾಜಮಹಾರಾಜರ ನೆಚ್ಚಿನ ಹೋಟೆಲ್

ಪ್ರಾರಂಭವಾದಂದಿನಿಂದಲೂ ಹೋಟೆಲಿಗೆ ಅತಿಥಿಗಳಾಗಿ ಆಗಮಿಸಿರುವ ಗಣ್ಯ ಮತ್ತು ಅತಿಗಣ್ಯರ ಪೈಕಿ ಭಾರತದ ರಾಜ ಮಹಾರಾಜರೂ, ನವಾಬರೂ, ಸಾಮಂತರೂ ಅಗಮಿಸುತ್ತಿದ್ದರು. ಈ ರಾಜರು ಒಬ್ಬರೇ ಬರುತ್ತಿರಲಿಲ್ಲ. ತಮ್ಮೊಂದಿಗೆ ತಮ್ಮ ಪರಿವಾರವನ್ನೂ ಕರೆತರುತ್ತಿದ್ದರು. ಈ ಪರಿವಾರದ ಸದಸ್ಯರನ್ನು ನೋಡಿ ಸ್ವಾಗತಕಾರಿಣಿಯ ಹೃದಯವೇ ಬಾಯಿಗೆ ಬಂದಂತಾಗುತ್ತಿತ್ತು. ಏಕೆಂದರೆ ಈ ಪರಿವಾರದಲ್ಲಿ ಮನುಷ್ಯರ ಜೊತೆ ಕುದುರೆ ಮತ್ತು ಅವರ ಪ್ರೀತಿಯ ಸಾಕುಪ್ರಾಣಿಯಾದ ಹುಲಿಯನ್ನೂ ಸರಪಳಿ ಕಟ್ಟಿ ನಾಯಿಯಂತೆ ಕರೆದುಕೊಂಡು ಬರಲಾಗುತ್ತಿತ್ತು.

ಪ್ರಾರಂಭದಿಂದಲೂ ದುಬಾರಿಯಾಗಿರುವ ಹೋಟೆಲ್

ಪ್ರಾರಂಭದಿಂದಲೂ ದುಬಾರಿಯಾಗಿರುವ ಹೋಟೆಲ್

1903ರಲ್ಲಿ ಹೋಟೆಲ್ ಪ್ರಾರಂಭವಾದಾದ ಅಂದಿನ ಒಂದು ಕೋಣೆಯ ಬಾಡಿಗೆ ಪ್ರತಿದಿನಕ್ಕೆ ಹತ್ತು ರೂಪಾಯಿಗಳಾಗಿದ್ದವು. ಹದಿಮೂರು ರೂಪಾಯಿ ಕೊಟ್ಟರೆ 'ಫ್ಯಾನ್ ಮತ್ತು ಜೊತೆಯಲ್ಲಿರುವ ಶೌಚಾಲಯ'ದ ವಿಶೇಷ ಸೌಲಭ್ಯ ನೀಡಲಾಗುತ್ತಿತ್ತು. ಒಂದು ಇಡಿಯ ದಿನದ ಊಟಕ್ಕೆ ಒಟ್ಟು ಇಪ್ಪತ್ತು ರೂಪಾಯಿಗಳಾಗುತ್ತಿದ್ದವು. ಅಂದು ಚಿಲ್ಲರೆಗೂ ಕಡಿಮೆಯಾಗಿರುವ ಈ ಮೊತ್ತ ಅಂದಿನ ದಿನಗಳಲ್ಲಿ ಓರ್ವ ಮಧ್ಯಮವರ್ಗದ ಕಾರ್ಮಿಕನ ಒಂದು ತಿಂಗಳ ವೇತನವಾಗಿತ್ತು.

 ಇಂದಿಗೂ ದುಬಾರಿಯಾಗಿಯೇ ಉಳಿದಿದೆ

ಇಂದಿಗೂ ದುಬಾರಿಯಾಗಿಯೇ ಉಳಿದಿದೆ

ಇಂದಿಗೂ ತಾಜ್ ಹೋಟೆಲ್ ದುಬಾರಿಯಾಗಿಯೇ ಉಳಿದಿದೆ. ಇಂದಿಗೂ ಪ್ರತಿದಿನದ ಬಾಡಿಗೆ ಕನಿಷ್ಟವೆಂದರೆ ರೂ. 10,535ರೂ (ನಗರದೆಡೆ ಕಿಟಕಿ ಇರುವ ಕೋಣೆ) ಇದೇ ಕೋಣೆ ಸಮುದ್ರಕ್ಕೆ ಕಿಟಕಿ ಇದ್ದರೆ 12470ರೂ. ಹೀಗೇ ಹಂತಹಂತವಾಗಿ ಮೇಲೇರುತ್ತಾ ಹೋಗುವ ದಿನದ ಬಾಡಿಗೆ ಅತಿಗಣ್ಯ ವ್ಯಕ್ತಿಗಳ ಗ್ರಾಂಡ್ ಲಕ್ಶುರಿ ಸ್ಯೂಟ್ ಗೆ 1,85,000ರೂ ಪ್ರತಿದಿನಕ್ಕೆ. ಅಬ್ಬಾ ಎಂದಿರಾ, ತಾಳಿ, ತೆರಿಗೆ ಮತ್ತು ಟಿಪ್ಸ್ ಪ್ರತ್ಯೇಕ....!

English summary

Things to know about the Taj Mahal Palace Hotel

The hotel's original building was commissioned by Tata and first opened its doors to guests on 16 December 1903. It is widely believed that Jamsedji Tata decided to build the hotel after he was refused entry to one of the city's grand hotels of the time.. have a look
X
Desktop Bottom Promotion