For Quick Alerts
ALLOW NOTIFICATIONS  
For Daily Alerts

ಕಾಲೇಜ್ ಲೈಫ್: ಜೀವನದಲ್ಲಿ ಎಂದೂ ಮರೆಯಲಾಗದ ಸವಿ ನೆನಪು!

By Arshad
|

ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಎಂಬ ಆಂಗ್ಲಾ ಸುಭಾಷಿತ ಎಲ್ಲಾ ವರ್ಗಕ್ಕೆ ಅನ್ವಯಿಸಿದರೂ ನಿಜವಾದ ಸುವರ್ಣದಿನಗಳು ಪ್ರಾರಂಭವಾಗುವುದೇ ಕಾಲೇಜಿನ ಮೆಟ್ಟಿಲು ತುಳಿಯುವ ಮೂಲಕ. ಜೀವನಪರ್ಯಂತ ಉಳಿಯುವ ಗೆಳೆತನ, ಪ್ರೇಮಾಂಕುರ ಮೂಲಕ ಜೀವನಸಂಗಾತಿಯ ಆಯ್ಕೆ, ವೃತ್ತಿಪರ ಜೀವನಕ್ಕೆ ಅಗತ್ಯವಾದ ತರಬೇತಿ, ಮುಂದಿನ ದಿನಗಳಲ್ಲಿ ಅಗತ್ಯವಾದ ಹಲವು ಕಲೆಗಳ ಬಗ್ಗೆ ತರಬೇತಿ ಮೊದಲಾದವುಗಳಿಗೆಲ್ಲಾ ಪರ್ವಕಾಲ. ಇವೆಲ್ಲಾ ಕಾಲೇಜು ದಿನಗಳ ಒಳ್ಳೆಯ ಅಂಶಗಳಾದರೆ ಕೆಟ್ಟ ಅಂಶಗಳೂ ಇವೆ.

ಕ್ಷುಲ್ಲುಕ ಕಾರಣದಿಂದ ಜಗಳ ಹುಟ್ಟಿ ವೈಷಮ್ಯಕ್ಕೆ ಕಾರಣವಾಗುವುದು, ಓರ್ವ ಪ್ರೇಮಿಯ ಹಿಂದೆ ಇಬ್ಬರು ಬಿದ್ದು ಅವರಲ್ಲೊಬ್ಬರು ತಮ್ಮ ಪ್ರಾಣಕ್ಕೇ ಕುಂದು ತಂದುಕೊಳ್ಳುವುದು, ಹುಡುಗಾಟದ ಭರದಲ್ಲಿ ಎಡವಟ್ಟು ಮಾಡಿಕೊಂಡು ಪ್ರಾಣಪಾಯವನ್ನು ಮೈಮೇಲೆಳೆದುಕೊಳ್ಳುವುದು, ಹೆಚ್ಚು ಖರ್ಚು ಮಾಡುವ ಸಾಮರ್ಥ್ಯವಿರುವವರ ಜೊತೆ ಹೋರಾಡಲಾಗದೇ ಕೀಳರಿಮೆ ಬೆಳೆಸಿಕೊಳ್ಳುವುದು ಮೊದಲಾದವು ಋಣಾತ್ಮಕ ಅಂಶಗಳಾಗಿವೆ. ಏನೇ ಆದರು ಕಾಲೇಜಿನ ದಿನಗಳು ಜೀವನದ ಅತ್ಯಂತ ವರ್ಣರಂಜಿತ ದಿನಗಳು ಎಂಬುವುದರಲ್ಲಿ ಎರಡು ಮಾತಿಲ್ಲ.

ಪ್ರತಿಯೊಬ್ಬರ ನೆನಪಿದಲ್ಲಿಯೂ ಕಾಲೇಜಿನ ಆ ದಿನಗಳ ಪ್ರಸಂಗಗಳು ಇದೀಗ ತಾನೇ ನಡೆದಿದ್ದು ಎಂಬಷ್ಟು ಸ್ಪಷ್ಟವಾಗಿ ನೆನಪಿರುತ್ತದೆ. ಆದರೆ ಕಾಲೇಜಿನ ದಿನಗಳ ಬಗ್ಗೆ ವಾಸ್ತವಕ್ಕಿಂತಲೂ ಉತ್ಪ್ರೇಕ್ಷೆಯೇ ಹೆಚ್ಚಾಗಿರುವುದನ್ನು ಕಾಣಬಹುದು. ಉದಾಹರಣೆಗೆ ಬೈಕಿನಲ್ಲಿ ವೇಗವಾಗಿ ಹೋಗುತ್ತಿರುವ ಪಡ್ಡೆಹುಡುಗರನ್ನು ಕಂಡು ಯಾರೋ ಕಾಲೇಜು ಹುಡುಗರು, ಬುದ್ಧಿಯಿಲ್ಲ, ಸ್ಪೀಡಾಗಿ ಹೋಗುತ್ತಿದ್ದಾರೆ ಎಂದು ಸುತ್ತಲವರು ಮಾತಾಡಿಕೊಳ್ಳುವುದನ್ನು ಕಾಣಬಹುದು. ಆದರೆ ವಾಸ್ತವದಲ್ಲಿ ಆ ಪಡ್ಡೆಹುಡುಗರು ಯಾರದ್ದೋ ಜೀವ ಉಳಿಸಲು ರಕ್ತದಾನಕ್ಕಾಗಿ ಹೋಗುತ್ತಿದ್ದ ಸಂಗತಿ ಮಾತ್ರ ಅವರಿಗೆ ಗೊತ್ತಿರಲಿಲ್ಲ! ಜೀವನ ಶೈಲಿ ನಿಮ್ಮ ಬದುಕನ್ನು ಹೇಗೆ ಬದಲಾಯಿಸಬಹುದು?

ಇಂದಿನ ದಿನಗಳಲ್ಲಿ ಕಾಲೇಜು ಪರಿಸರ ಹಿಂದಿನಂತೆ ಉಳಿದಿಲ್ಲ. ಕಾಲೇಜು ಸೇರಿದ ಪ್ರಾರಂಭಿಕ ದಿನಗಳಲ್ಲಿ ನವಯುವಕರು ಆ ಪರಿಸರಕ್ಕೆ ಹೊಂದಿಕೊಳ್ಳಲು ತಡವರಿಸುವುದನ್ನು ಕಾಣಬಹುದು. ಏಕೆಂದರೆ ಇಂದು ಪ್ರತಿಯೊಬ್ಬರ ಬಾಯಿಯಲ್ಲಿ ಕೇಳಿ ಬರುತ್ತಿರುವ ಮಾತೆಂದರೆ 'ಬೀ ಕೂಲ್'. ಕೂಲ್ ಎಂದರೇನು? ಸ್ಪಷ್ಟವಾಗಿ ಹೇಳಬೇಕೆಂದರೆ ತಣ್ಣಗೇ ಇರುವುದು. ಆದರೆ ಅವರ ಅರ್ಥ ನಿಮ್ಮತನವನ್ನು ಉಳಿಸಿಕೊಳ್ಳಿ.

ಯಾರದ್ದೂ ಪ್ರಭಾವಕ್ಕೆ ಅಥವಾ ಹಂಗಿಗೆ ಒಳಗಾಗಿ ನಿಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳಬೇಡಿ. ಆದರೂ ನವಯುವಕರು ನಮ್ಮ ಸಹಪಾಠಿಗಳ, ಹಿರಿಯ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸುತ್ತಾ ಅವರಂತೆಯೇ ವರ್ತಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಈ ಪ್ರಯತ್ನದಲ್ಲಿ ಇತ್ತ ತಮ್ಮ ಸ್ವಂತಿಕೆಯನ್ನೂ ಕಳೆದುಕೊಂಡು, ಅತ್ತ ಅವರ ವ್ಯಕ್ತಿತ್ವವನ್ನೂ ಪಡೆಯಲಾಗದೇ ಗೊಂದಲದಲ್ಲಿರುವುದು ಸ್ಪಷ್ಟವಾಗುತ್ತದೆ. ಕಾಲೇಜು ದಿನಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಈಗ ನೋಡೋಣ

 ಕೂಲ್ ಆಗಿರಿ ಅಥವಾ ಅದನ್ನು ಪಡೆಯಲು ಶ್ರಮಿಸಿ

ಕೂಲ್ ಆಗಿರಿ ಅಥವಾ ಅದನ್ನು ಪಡೆಯಲು ಶ್ರಮಿಸಿ

ಇಂದು ಕೂಲ್ ಪದದ ವ್ಯಾಖ್ಯಾನವೇ ಬದಲಾಗಿ ಹೋಗಿದೆ. ಈ ಪರಿಸರದಲ್ಲಿ ಉಳಿದವರು ಹೇಗಿದ್ದಾರೋ ಹಾಗೀ ಇರುವುದನ್ನೇ ಕೂಲ್ ಎಂದು ಪರಿಗಣಿಸಲ್ಪಡುತ್ತದೆ. ಹೈಸ್ಕೂಲು ಬಿಟ್ಟು ಕಾಲೇಜಿಗೆ ಬಂದ ಕೂಡಲೇ ಈ ಆಗಾಧವಾದ ವ್ಯತ್ಯಾಸವನ್ನು ಎದುರಿಸಬೇಕಾಗಿ ಬರುತ್ತದೆ. ಇದುವರೆಗೆ ಶಾಲಾ ಸಮವಸ್ತ್ರ ಹಾಕಿಕೊಳ್ಳುತ್ತಿದ್ದುದು ಬದಲಾಗಿ ನಿಮ್ಮ ನೆಚ್ಚಿನ ಉಡುಗೆ ತೊಡಬೇಕಾಗಿ ಬರುತ್ತದೆ. ಆದರೆ ಇಂದಿನ ಉಡುಗೆಗಳೆಂದರೆ ಬೇಕೆಂದಲೇ ವಿರೂಪಗೊಳಿಸಿರುವ ಟೀ ಶರ್ಟ್, ಗಣಿ ಕೆಲಸಗಾರರು ತಮ್ಮ ಕೆಲಸದಲ್ಲಿ ಉಜ್ಜಿ ಉಜ್ಜಿ ಬಣ್ಣಗೆಟ್ಟ ಜೀನ್ಸ್ ನಂತೆಯೇ ಕೃತಕವಾಗಿ ಬಣ್ಣಗೆಡಿಸಿದ, ಬೇಕೆಂದಲೇ ಹರಿದು ತೂತು ಮಾಡಿದ ಜೀನ್ಸ್, ಬಣ್ಣಕ್ಕೂ, ಪರಿಸ್ಥಿತಿಗೂ ಸಂಬಂಧವೇ ಇಲ್ಲದ ಬೂಟು, ಇನ್ನಿತರ ಪರಿಕರಗಳು, ಕೆದರಿದ ಕೂದಲು. ಇಂತಹ ಉಡುಗೆಗಳನ್ನು ತೊಟ್ಟು ಹೋದಿರೋ ಸರಿ, ನೀವೂ ಕೂಲ್, ಬದಲಿಗೆ ನೀಟಾಗಿ ತಲೆಬಾಚಿ, ಇಸ್ತ್ರಿ ಮಾಡಿದ ಶರ್ಟ್ ಮತ್ತು ಪ್ಯಾಂಟ್ ತೊಟ್ಟು ಸಮಬಣ್ಣದ ಚರ್ಮದ ಬೂಟು ತೊಟ್ಟು ಹೋದಿರೋ, ಆ ಪಂಗಡ ಹೋ ಎಂದು ಅರಚಿ ಜೀವನಾನಂದ ಪಡೆಯುತ್ತದೆ. ಅನಿವಾರ್ಯವಾಗಿ ನಿಮಗೂ ಕೂಲ್ ಆಗಿರುವ ಉಡುಗೆಗಳನ್ನೇ ಇಷ್ಟವಿಲ್ಲದಿದ್ದರೂ ತೊಡಬೇಕಾಗಿ ಬರುತ್ತದೆ.

ನಿಮ್ಮ ನೆಚ್ಚಿನ ಕ್ರೀಡಾ ತಂಡವೊಂದನ್ನು ಸೇರಿಕೊಳ್ಳುವುದು ಅನಿವಾರ್ಯ

ನಿಮ್ಮ ನೆಚ್ಚಿನ ಕ್ರೀಡಾ ತಂಡವೊಂದನ್ನು ಸೇರಿಕೊಳ್ಳುವುದು ಅನಿವಾರ್ಯ

ಕಾಲೇಜು ಸೇರುವ ದಿನಗಳಲ್ಲಿ ನವತಾರುಣ್ಯ ಉಕ್ಕಿ ಹರಿಯುತ್ತಿದ್ದಾಗ ನೈಸರ್ಗಿಕವಾಗಿ ವಿರುದ್ಧ ಲಿಂಗದವರ ಬಗ್ಗೆ ಆಕರ್ಷಣೆ ಮೂಡುವುದು ವಯೋಸಹಜವಾಗಿದೆ. ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದವರು ಅತ್ಯಂತ ಹೆಚ್ಚಿನ ಆಕರ್ಷಣೆ ಪಡೆಯುತ್ತಾರೆ ಎಂಬುವುದು ನಮ್ಮೆಲ್ಲರ ತಲೆಗಳಲ್ಲಿ ಅಚ್ಚಾಗಿ ಹೋಗಿರುವ ಪೂರ್ವಾಗ್ರಹವಾಗಿದೆ. ಇದನ್ನು ಒಪ್ಪಿದ ಎಲ್ಲರೂ ಒಂದಲ್ಲಾ ಒಂದು ಕ್ರೀಡಾತಂಡದಲ್ಲಿ ಸೇರಿಕೊಳ್ಳುವುದನ್ನು ಗಮನಿಸಬಹುದು. ಇದು ಒಂದರ್ಥದಲ್ಲಿ ನಿಜವಾದರೂ ಪೂರ್ಣವಾಗಿ ಅಲ್ಲ. ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಿಯೂ ಉಳಿದ ವಿಷಯಗಳಲ್ಲಿ ಪದ್ದುತನವಿರುವವರನ್ನು ಯಾವ ಹುಡುಗಿಯರು ಇಷ್ಟಪಡುವುದಿಲ್ಲ, ಅಲ್ಲದೇ ಕೇವಲ ಕ್ರೀಡೆಯಲ್ಲಿ ಉತ್ತಮನೆಂಬ ಕಾರಣಕ್ಕೆ ಆತನ ಅಡಿಯಾಳಾಗಿರಲೂ ಬಯಸುವುದಿಲ್ಲ. ನಿಮ್ಮನ್ನು ಉಳಿದವರು ಇಷ್ಟಪಡಲು ಕ್ರೀಡೆಯೇ ಆಗಬೇಕೆಂದೇನಿಲ್ಲ, ಮೆದುಳಿಗೆ ಸಾಣೆ ಹಿಡಿಯುವ ರಸಪ್ರಶ್ನೆ ಅಥವಾ ದೈಹಿಕ ಚಾಕಚಕ್ಯತೆಯ ಪರ್ವತಾರೋಹಣ ಮೊದಲಾದ ಚಟುವಟಿಕೆಗಳನ್ನೂ ಪ್ರಯತ್ನಿಸಿ.

ಕಾಲೇಜಿನ ಪಾಠಗಳೇ ವೃತ್ತಿಜೀವನಕ್ಕೆ ಮೂಲ

ಕಾಲೇಜಿನ ಪಾಠಗಳೇ ವೃತ್ತಿಜೀವನಕ್ಕೆ ಮೂಲ

ಕಾಲೇಜಿನ ತರಗತಿಗಳಲ್ಲಿ ನೀಡುವ ಪಾಠಗಳು ಪರೀಕ್ಷೆಗೆ ಸಿದ್ಧ ಮಾಡುತ್ತವೆಯೇ ಹೊರತು ಜೀವನದಲ್ಲಿ ಎದುರಾಗುವ ಸಂಕಷ್ಟಗಳಿಗಲ್ಲ. ನಿಜವಾದ ಪಾಠ ನಮಗೆ ತರಗತಿಗಳ ಹೊರಗೇ ಸಿಗುತ್ತದೆ. ಇದುವರೆಗೆ ಮಕ್ಕಳೆಂದೇ ಪರಿಗಣಿಸಿ ಯಾವುದಕ್ಕೂ ಮುಂದೆಬರಲು ಬಿಡದ ಹಿರಿಯರ ಕಾರಣ ಮೊದ್ದುಗಳಾಗಿಯೇ ಉಳಿದಿದ್ದ ನಮಗೆ ಜೀವನವನ್ನು ಸಂಘರ್ಷಿಸಲು ಕಲಿಸುವುದೇ ಕಾಲೇಜು. ಚಿಕ್ಕಪುಟ್ಟ ಜಗಳ, ಸಮಾಜದಲ್ಲಿ ಹೇಗೆ ವರ್ತಿಸಬೇಕು, ಕಷ್ಟಕರ ಪರಿಸ್ಥಿತಿಯಲ್ಲಿ, ತುರ್ತು ಪರಿಸ್ಥಿತಿಯಲ್ಲಿ ಹೇಗೆ ವರ್ತಿಸಬೇಕು ಮೊದಲಾದ ಹತ್ತು ಹಲವು ವಿಷಯಗಳ ಬಗ್ಗೆ ಕಾಲೇಜಿನಲ್ಲಿ ಕಲಿಯುವಷ್ಟನ್ನು ಇನ್ನೆಲ್ಲೂ ಕಲಿಯಲಾರಿರಿ. ಈ ಅನುಭವಗಳು ಮತ್ತು ಹೊಣೆಗಾರಿಕೆಗಳು ಕಾಲೇಜಿನ ಬಳಿಕ ನಿಜಜೀವನದಲ್ಲಿ ಅಡಿಯಿಡುವ ನಿಮಗೆ ಸದಾ ನೆರವಿಗೆ ಬರುತ್ತವೆ.

ಹುಡುಗ-ಹುಡುಗಿಯರೆಲ್ಲಾ ಒಂದು ಸಂಬಂಧದಲ್ಲಿ ಇದ್ದೇ ಇರುತ್ತಾರೆ

ಹುಡುಗ-ಹುಡುಗಿಯರೆಲ್ಲಾ ಒಂದು ಸಂಬಂಧದಲ್ಲಿ ಇದ್ದೇ ಇರುತ್ತಾರೆ

ಕಾಲೇಜಿಗೆ ಬಂದ ಕೂಡಲೇ ಸುತ್ತ ಮುತ್ತಲ ಪರಿಸರವನ್ನು ಗಮನಿಸಿದಾಗ ಒಬ್ಬ ಹುಡುಗನಿಗೆ ಓರ್ವ ಹುಡುಗಿ, ಈಕೆ ಆತನ ಗರ್ಲ್ ಫ್ರೆಂಡ್, ಆತ ಈಕೆಯ ಬಾಯ್ ಫ್ರೆಂಡ್ ಎಂಬೆಲ್ಲಾ ಕುರಿತಾಗಿ ಗುಸುಗುಸು ಆಗುತ್ತಲೇ ಇರುತ್ತದೆ. ಅದರಲ್ಲೂ ಯಾವುದೋ ಕಾರಣದಿಂದ ಒಂದು ಜೋಡಿಯಲ್ಲಿ ಜಗಳವಾಗಿ ಬೇರ್ಪಟ್ಟರೆ ಈ ಗುಸುಗುಸು ನೂರು ಪಟ್ಟು ಹೆಚ್ಚುತ್ತದೆ. ಅಂದಿನ ದಿನದ ಬ್ರೇಕಿಂಗ್ ನ್ಯೂಸ್ ಇದೇ. ಪರಿಣಾಮವಾಗಿ ಕಾಲೇಜಿನ ಅಷ್ಟೂ ಯುವಕ ಯುವತಿಯರು ಒಬ್ಬರೊಂದಿಗೆ ಇನ್ನೊಬ್ಬರು ಸಂಬಂಧದಲ್ಲಿರುವವರೆಂದೇ ಉತ್ಪ್ರೇಕ್ಷಿಸಲಾಗುತ್ತದೆ. ಒಂದು ವೇಳೆ ಇಲ್ಲ ಎಂದಾದರೆ, ಪ್ರಯತ್ನಿಸುತ್ತಿರಿ, ಶೀಘ್ರವೇ ಸಿಗುತ್ತದೆ ಎಂಬ ಭರವಸೆ ಸಿಗುತ್ತದೆ. ಅಂದರೆ ಕಾಲೇಜಿನ ದಿನಗಳಲ್ಲಿ ಒಂದು ಸಂಬಂಧದಲ್ಲಿರುವುದು ಅನಿವಾರ್ಯ ಎಂಬಂತೆ ಬಿಂಬಿಸಲಾಗುತ್ತದೆ. ಇದರಲ್ಲಿ ಒಂದಕ್ಕಿಂತಲೂ ಕಡಿಮೆ ಶೇಖಡಾ ಜನರು ಮಾತ್ರ ಈ ಸಂಬಂಧಗಳನ್ನು ಗಂಭೀರವಾಗಿ ಪರಿಗಣಿಸಿ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಡುವುದನ್ನು ಗಮನಿಸಬಹುದು. ಇನ್ನುಳಿದವೆಲ್ಲಾ ಕಾಲೇಜು ಮುಗಿದ ಬಳಿಕ ಗಾಳಿಗೆ ತೂರಿ ಹೋದ ಭತ್ತದ ಹೊಟ್ಟಿನಂತೆ ಕಾಳುಗಳಿಂದ ಬೇರ್ಪಡುವುದು ವಾಸ್ತವವಾಗಿದೆ.

ಕಾಲೇಜಿಗೆ ಹಾಜರಿ ಕಡಿಮೆ ಇದ್ದರೆ ಪರೀಕ್ಷೆಗೆ ಕೂರಿಸುವುದಿಲ್ಲ

ಕಾಲೇಜಿಗೆ ಹಾಜರಿ ಕಡಿಮೆ ಇದ್ದರೆ ಪರೀಕ್ಷೆಗೆ ಕೂರಿಸುವುದಿಲ್ಲ

ಕಾಲೇಜಿನ ತರಗತಿಗಳನ್ನು ನಡೆಸುವ ಮುಖ್ಯ ಕಾರಣವೇ ವಿದ್ಯಾರ್ಜನೆ. ತರಗತಿಗೆ ಬರದೇ ಇದ್ದರೆ ಇನ್ನು ವಿದ್ಯಾರ್ಜನೆ ಎಲ್ಲಿಂದ? ಕಾಲೇಜಿನ ತರಗತಿಗಳು ನಡುನಡುವೆ ಬಿಡುವು ನೀಡುವಂತಿರುವುದರಿಂದ ಕಾಲೇಜಿನ ವಠಾರದಲ್ಲಿ ಸದಾ ವಿದ್ಯಾರ್ಥಿಗಳು ತಿರುಗುತ್ತಿರುವುದನ್ನು ಗಮನಿಸಬಹುದು. ಈ ಸಮಯದಲ್ಲಿ ಕೊಚ್ಚುವ ಹರಟೆ, ವಿನಿಮಯ ಮಾಡಿಕೊಳ್ಳುವ ವಿಷಯ, ಮೊಬೈಲಿನಲ್ಲಿರುವ ವೀಡಿಯೋ ಮೊದಲಾದವುಗಳು ತರಗತಿಗಳಿಗಿಂತಲೂ ರೋಚಕವಾಗಿರುವುದರಿಂದ ಹಲವರು ತರಗತಿಗಳಿಗೆ ತಿಲಾಂಜಲಿಯಿತ್ತು ಇಲ್ಲಿಯೇ ಕಾಲ ಕಳೆದುಬಿಡುತ್ತಾರೆ. ಅತ್ತ ತರಗತಿಯಲ್ಲಿ ಹಾಜರಿ ಕಡಿಮೆಯಾಗುತ್ತದೆ. ಪ್ರತಿ ಕಾಲೇಜಿನಲ್ಲಿ ಇಷ್ಟು ಹಾಜರಿ ಇರಲೇಬೇಕು,ಇಲ್ಲದಿದ್ದರೆ ಪರೀಕ್ಷೆಗೆ ಕೂರಿಸುವುದಿಲ್ಲ ಎಂಬ ಕಟ್ಟಪ್ಪಣೆ ಇರುತ್ತದೆ. ಆದರೆ ಇದು ವಾಸ್ತವವಾಗಿ ವಿದ್ಯಾರ್ಥಿಗಳನ್ನು ತರಗತಿಗೆ ಸೆಳೆಯುವ ತಂತ್ರವೇ ಹೊರತು ನಿಜವಾಗಿ ಪರೀಕ್ಷೆಗೆ ಕೂರಿಸದೇ ಇರುವುದಿಲ್ಲ. ಅತ್ಯಂತ ಕಡಿಮೆ ಹಾಜರಿ ಇದ್ದರೂ ಕೊಂಚ ದಂಡ ಅಥವಾ ಪಾಲಕರೊಡನೆ ವಿಮರ್ಶಿಸಿದ ಬಳಿಕ ಪರೀಕ್ಷೆಗೆ ಬರೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಇನ್ನೂ ಹಲವರು ಕಾಲೇಜಿನ ಹೊರಗೆ ಖಾಸಗಿಯಾಗಿ ಪಾಠಗಳನ್ನು ಪಡೆದುಕೊಂಡಿರುವ ಕಾರಣ ಆ ತರಗತಿಗಳಿಗೆ ಹೋಗುವುದು ಅನಿವಾರ್ಯ ಎಂದು ಭಾವಿಸುವುದಿಲ್ಲ.

ಕಾಲೇಜು ಹುಡುಗರೆಲ್ಲಾ ರಾತ್ರಿಯಿಡೀ ಹೊರಗೇ ಇರುತ್ತಾರೆ

ಕಾಲೇಜು ಹುಡುಗರೆಲ್ಲಾ ರಾತ್ರಿಯಿಡೀ ಹೊರಗೇ ಇರುತ್ತಾರೆ

ಸಾಮಾನ್ಯವಾಗಿ ಬೆಳಿಗ್ಗೆ ಗೂಬೆಮುಖ, ಕೆಂಪಾದ ಕಣ್ಣು, ಕೆದರಿದ ಕೂದಲಿನೊಂದಿಗೆ ತರಗತಿ ಪ್ರವೇಶಿಸಿದ ಹುಡುಗರನ್ನು ಕಂಡ ಕೂಡಲೇ ಎಲ್ಲರೂ ಈತ ರಾತ್ರಿ ಇಡೀ ಹೊರಗೆಲ್ಲೋ ತಿರುಗಾಡಿ ಈಗ ಬಂದಿದ್ದಾನೆ ಎಂಬ ಅಭಿಪ್ರಾಯಕ್ಕೆ ಬಂದುಬಿಡುತ್ತಾರೆ. ಅದರಲ್ಲೂ ರಾತ್ರಿ ಹೊರಗಿರುವುದು ಎಂದರೆ ಒಬ್ಬೊಬ್ಬರೂ ಒಂದೊಂದು ರೀತಿ ಅರ್ಥೈಸಿಕೊಳ್ಳುತ್ತಾರೆ. ಕೆಲವರು ಇಸ್ಪೀಟಾಡಿ ಬಂದಿದ್ದಾನೆಂದು, ಇನ್ನೂ ಕೆಲವರು ಮದ್ಯ ಕುಡಿಯಲು ಹೋಗಿದ್ದನೆಂದೂ ತಮ್ಮ ಮನಸ್ಸಿಗೆ ತೋಚಿದ್ದಂತೆ ಆಡಿಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ಈ ಆರೋಪಗಳು ಎಲ್ಲೋ ಒಂದೆರಡು ಹತೋಟಿ ತಪ್ಪಿದ ಹುಡುಗರಿಗೆ ಅನ್ವಯಿಸಬಹುದೇ ಹೊರತು ಎಲ್ಲರಿಗೂ ಅಲ್ಲ.ಗುಂಪಿನಲ್ಲಿ ರಾತ್ರಿ ಹೊರಹೋಗಿ ಸಂತೋಷವಾಗಿ ಕಾಲ ಕಳೆಯುವುದು ಎಲ್ಲೋ ವರ್ಷದಲ್ಲಿ ಒಂದೆರಡು ದಿನಗಳು ಮಾತ್ರ. ಅದರಲ್ಲೂ ಇಂತಹ ಕೂಟಗಳಿಗೆ ಹಿರಿಯರ ಅಪ್ಪಣೆ ಅವಶ್ಯವಾದುದರಿಂದ ಆತಂಕ ಪಡಬೇಕಾದ ಅಗತ್ಯವಿಲ್ಲ. ಆದರೂ ಬೇರಾವುದೋ ಸಕಾರಣಕ್ಕೆ ರಾತ್ರಿ ನಿದ್ದೆಗೆಟ್ಟು ಬೆಳಿಗ್ಗೆ ತರಗತಿಗೆ ಹೋಗುವ ವಿದ್ಯಾರ್ಥಿಗೂ ಅನಿವಾರ್ಯವಾಗಿ ಇಂತಹ ಸುಳ್ಳು ಅಪವಾದಗಳನ್ನು ಕೇಳಬೇಕಾಗಿ ಬರುತ್ತದೆ.

English summary

Most Overrated Things About College Life

College life is perhaps the most happening time of everyone's life. So much is happening that you don't even have time to comprehend half of it. You're falling in and out of love. Friendship's are forged in blood overnight. Read on to find out some of the most overrated things about college life.
X
Desktop Bottom Promotion