For Quick Alerts
ALLOW NOTIFICATIONS  
For Daily Alerts

ಕ್ಷಣ ಕ್ಷಣಕ್ಕೂ ನಿಬ್ಬೆರಗಾಗಿಸುವ ಕುದ್ರೋಳಿ ಗಣೇಶ್‌‌ರ ವಿಸ್ಮಯ ಜಾದೂ!

By Arshad
|

ಈ ಪಟ್ಟಿಯಲ್ಲಿ ಪ್ರಮುಖವಾಗಿರುವ ಇನ್ನೊಂದು ಹೆಸರೆಂದರೆ ಕುದ್ರೋಳಿ ಗಣೇಶ್. ತಮ್ಮ ಜಾದೂ ತಂಡಕ್ಕೆ 'ವಿಸ್ಮಯ ಜಾದೂ' ಎಂಬ ಹೆಸರನ್ನಿಟ್ಟುಕೊಂಡು ದೇಶ ವಿದೇಶಗಳಲ್ಲಿ 1500ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿ ಭಾರತದ ಕೀರ್ತಿಯನ್ನು ವಿಸ್ತರಿಸಿದ್ದಾರೆ. ಇದಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ ಜಾದೂಗಾರರು ಇರಬಹುದು, ಆದರೆ ತಮ್ಮ ಜಾದೂವಿನ ಮೂಲಕ ತಮ್ಮ ತಾಯ್ನಾಡ ಸಂಸ್ಕೃತಿಯನ್ನು ಪಸರಿಸುವ ಮೂಲಕ ಗಣೇಶ್ ನಮ್ಮೆಲ್ಲರ ಹೆಮ್ಮೆಯ ಜಾದೂಗಾರರಾಗಿದ್ದಾರೆ.

ಅವರ ಜಾದೂ ಪ್ರದರ್ಶನದಲ್ಲಿ ಅವರ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಸಾಂಸ್ಕೃತಿಕ ಕಲೆ, ರಂಗಮಂಚದ ಪಾತ್ರಗಳನ್ನು ಜಾದೂವಿನೊಳಗೆ ಅತ್ಯಂತ ಆಕರ್ಷಕ ರೀತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಹೊರದೇಶದವರು ಬಿಡಿ, ದಕ್ಷಿಣ ಕನ್ನಡದ ಜನರಿಗೇ ಅವರದ್ದೇ ಕಲಾಪ್ರಾಕಾರಗಳು ಜಾದೂ ಮೂಲಕ ನಿಜವಾಗಿಯೂ ವಿಸ್ಮಯ ಮೂಡಿಸುತ್ತದೆ. ಈ ಪ್ರದರ್ಶನಗಳಿಗಾಗಿ ಅವರು ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅದರಲ್ಲಿ ಪ್ರಮುಖವಾದುದೆಂದರೆ ಇಂದ್ರಜಾಲ ಪ್ರತಿಭಾ ಮೆಗಾ ಮ್ಯಾಜಿಕ್ ಪ್ರಶಸ್ತಿ, ಇಲ್ಲ್ಯೂಷನ್ ಮ್ಯಾಜಿಕ್ ಅವಾರ್ಡ್, ಮತ್ತು ಎರಡು ಬಾರಿ ಚಿನ್ನದ ಪದಕವನ್ನೂ ಪಡೆದಿದ್ದಾರೆ.

ಕುದ್ರೋಳಿ ಗಣೇಶ್ ರವರು ಚಿಕ್ಕಂದಿನಿಂದಲೂ ಜಾದೂ ವಿದ್ಯೆಯನ್ನು ಒಂದು ಹವ್ಯಾಸವನ್ನಾಗಿ ಬೆಳೆಸಿಕೊಂಡು ಬಂದಿದ್ದರೇ ಹೊರತು ಇದನ್ನೇ ವೃತ್ತಿಯನ್ನಾಗಿಸಿಕೊಳ್ಳಬೇಕೆಂಬ ಬಯಕೆಯೇನೂ ಇರಲಿಲ್ಲ.ಅಲ್ಲದೇ ಕೊಂಚ ದುಬಾರಿಯೂ ಆಗಿರುವ, ಅಪಾರ ತಾಳ್ಮೆ, ಪರಿಶ್ರಮ, ಸಮಯ, ಸತತ ಅಭ್ಯಾಸ, ನಿರಂತರವಾಗಿ ಹೊಸತನ್ನು ಅನ್ವೇಶಿಸುತ್ತಿರುವ ಕಲೆ ಸಾಮಾನ್ಯವಾಗಿ ಎಲ್ಲರಿಗೂ ಸಿದ್ಧಿಸದು. ಮಧ್ಯಮವರ್ಗಕ್ಕೆ ಸೇರಿದ ಗಣೇಶ್ ಎದೆಗುಂದದೇ ತಮಗೆ ಲಭ್ಯವಿದ್ದ ಸುಲಭ ಸಲಕರಣೆಗಳಿಂದಲೇ ಜಾದೂವನ್ನು ಪ್ರದರ್ಶಿಸಿ ತಮ್ಮ ಪ್ರತಿಭೆಯನ್ನು ಮೆರೆಯುತ್ತಿದ್ದರು.

Mangalore famous Magician kudroli ganesh

1999ರಲ್ಲಿ ಈ ಹವ್ಯಾಸವನ್ನು ಜಿಲ್ಲೆಯಿಂದ ಹೊರಗೂ ಪ್ರದರ್ಶಿಸಲು ಚಿಕ್ಕ ತಂಡವನ್ನು ಕಟ್ಟಿಕೊಂಡರು. ನಿಧಾನಕ್ಕೆ ಪ್ರದರ್ಶನಗಳು ಜನಪ್ರಿಯತೆ ಪಡೆಯತೊಡಗಿತು. 2001ರಲ್ಲಿ ಮಂಗಳೂರಿನ ಟೌನ್ ಹಾಲ್ ನಲ್ಲಿ ಪ್ರದರ್ಶಿತಗೊಂಡ ಪ್ರದರ್ಶನವೊಂದರಲ್ಲಿ ಸಚಿವರನ್ನೇ ಮಾಯಮಾಡಿದ ಗಣೇಶ್ ರಾಜ್ಯಮಟ್ಟದಲ್ಲಿ ಖ್ಯಾತಿ ಪಡೆದರು. ಆ ಸಚಿವರು ಬೇರೆ ಯಾರೂ ಅಲ್ಲ, ಅಂದು ಸಾರಿಗೆ ಸಚಿವರಾಗಿದ್ದ ಶ್ರೀ ಬಿ. ರಮಾನಾಥ ರೈ ಯವರೇ ಆಗಿದ್ದರು. ಮುಂದಿನ ಕ್ಷಣ ಸಚಿವರು ಅಲ್ಲಿಂದ ಸುಮಾರು ಐದು ಕಿ.ಮೀ ದೂರವಿರುವ ಮೋತಿಮಹಲ್ ಹೋಟೆಲಿನಲ್ಲಿ ಪ್ರತ್ಯಕ್ಷರಾಗಿದ್ದರು!

ಜನವರಿ 14, 2001ರಂದು ಮಂಗಳೂರಿನ ಬಳಿಯ ಪಣಂಬೂರಿನಲ್ಲಿ ತಮ್ಮ ಜಾದೂ ಪ್ರದರ್ಶನಗಳಲ್ಲಿ ಅವರು ಕೊಂಚ ಅಪಾಯಕರ ಸಾಹಸಗಳನ್ನೂ ಅಳವಡಿಸಿಕೊಂಡ ಪ್ರದರ್ಶನ ನೀಡಿದರು. ಹಿಂದಿನ ಪ್ರದರ್ಶನವನ್ನು ತಪ್ಪಿಸಿಕೂಂಡು ಕೈ ಕೈ ಹಿಸುಕಿಕೊಂಡಿದ್ದ ಒಂದು ಲಕ್ಷಕ್ಕೂ ಹೆಚ್ಚು ಜನರು ಈ ಸದವಕಾಶವನ್ನು ಕಳೆದುಕೊಳ್ಳಲಿಚ್ಛಿಸದೇ ಪ್ರಾಂಗಣದಲ್ಲಿ ಕಿಕ್ಕಿರೆದು ನೆರೆದಿದ್ದರು. ಅಷ್ಟೂ ಜನರ ಮುಂದೆ ಗಾರುಡಿಗ ಪಾದದಿಂದ ಕುತ್ತಿಗೆಯವರೆಗೆ ಬಲವಾದ ಕಬ್ಬಿಣದ ಸರಪಳಿಯಿಂದ ತನ್ನನ್ನು ತಾನೇ ಬಂಧಿಸಿಕೊಂಡು ಪಟಾಕಿಗಳಿಂದ ತುಂಬಿದ್ದ ಮರದ ಪೆಠಾರಿಯೊಳಗೆ ಬಂಧಿಯಾದರು. ನೋಡುನೋಡುತ್ತಿದ್ದಂತೆಯೇ ಪಟಾಕಿಗಳು ಸಿಡಿದು ಪೆಠಾರಿ ಛಿದ್ರವಾಗಿ ಮರುಕ್ಷಣ ಅಲ್ಲಿ ಹೊಗೆ ಮತ್ತು ಕಾಗದ, ಮರದ ಚೂರುಗಳು ಗಾಳಿಯಲ್ಲಿ ಹಾರಾಡುತ್ತಿದ್ದವು. ಎಲ್ಲಿ ಹೋದರು ಎಂದು ನೋಡುತ್ತಿದ್ದವರಿಗೆ ಸಮುದ್ರದಲ್ಲಿ ತೇಲಿ ಬರುತ್ತಿದ್ದ ದೋಣಿಯಲ್ಲಿ ಯಾವ ಬಂಧನವೂ ಇಲ್ಲದ ಕುದ್ರೋಳಿ ಗಣೇಶ್ ನಗುತ್ತಾ ದಡದೆಡೆಗೆ ಧಾವಿಸುತ್ತಿದ್ದರು.

ಹಲವು ಸಾಕ್ಷಿಗಳ ಎದುರಿಗೇ ತಮ್ಮ ಎರಡೂ ಕಣ್ಣುಗಳಿಗೆ ಹತ್ತಿಯ ಉಂಡೆಗಳನ್ನಿರಿಸಿ ಅದರ ಮೇಲೆ ಬಟ್ಟೆಯ ಪಟ್ಟಿಯಿಂದ ಎರಡೂ ಕಣ್ಣುಗಳನ್ನು ಮುಚ್ಚಿಕೊಂಡು ಬೈಕ್ ಓಡಿಸುವುದು ಇವರ ಇನ್ನೊಂದು ಯಶಸ್ವೀ ಪ್ರದರ್ಶನ. ಬೈಕ್ ತೆರೆದ ಮೈದಾನದಲ್ಲಿ ಮತ್ತು ಯಾರೂ ಇಲ್ಲದೆಡೆ ಓಡಿಸಿದರೆ ಅದರಲ್ಲಿ ವಿಶೇಷವೇನೂ ಇಲ್ಲ. ಆದರೆ ಇವರು ಓಡಿಸುವುದು ಜನನಿಬಿಡ ಸ್ಥಳಗಳಲ್ಲಿ, ಅದೂ ಹತ್ತು ಹಲವು ಇತರ ವಾಹನಗಳು ಓಡಾಡುತ್ತಿರುವ ರಸ್ತೆಯಲ್ಲಿಯೇ. ನೆರೆದವರು ಇವರು ಕಣ್ಣು ಮುಚ್ಚಿದ್ದರೂ ಕಣ್ಣು ತೆರೆದವರಿಗಿಂತಲೂ ಸುರಕ್ಷಿತವಾಗಿ ಬೈಕ್ ಚಾಲನೆ ಮಾಡುವುದನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ.

2001ರಿಂದ ಪ್ರಾರಂಭವಾದ ಅವರ ಪ್ರದರ್ಶನಗಳು ಅಂದಿನಿಂದ ಎಂದೂ ಹಿಂದೆ ತಿರುಗಿ ನೋಡಲಿಲ್ಲ. ಇದುವರೆಗೆ ಭಾರತ ಮತ್ತು ಹಲವು ವಿದೇಶಗಳಲ್ಲಿ 1500ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ.ಪ್ರತಿ ವರ್ಷವೂ ವಿನೂತನ ಪ್ರಯೋಗಗಳನ್ನು ಮಾಡಿ ಸಭಿಕರನ್ನು ವಿಸ್ಮಯಗೊಳಿಸುತ್ತಾರೆ. ವಿಶೇಷವೆಂದರೆ ತಮ್ಮ ಪ್ರದರ್ಶನಗಳಲ್ಲಿ ನಮ್ಮ ರಾಜ್ಯದ, ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡದ ಕಲೆ, ಸಂಸ್ಕೃತಿಗಳನ್ನು ಮೆರೆಸುತ್ತಾರೆ.

ಸಾಮಾಜಿಕ ಕಳಕಳಿ, ಸುರಕ್ಷಾ ಸಂದೇಶ, ಪೋಲೀಯೋ ಲಸಿಕೆಯ ಮಹತ್ವ, ಮದ್ಯಪಾನದ ದುಷ್ಪರಿಣಾಮಗಳು, ಏಡ್ಸ್ ಬಗ್ಗೆ ವಿವರಣೆ ಮೊದಲಾದವುಗಳನ್ನು ಇವರು ತಮ್ಮ ಜಾದೂ ಕಲೆಯ ಮೂಲಕ ಜನರಲ್ಲಿ ಅರಿವು ಮೂಡುಸುವುದು ವಿಸ್ಮಯ ತಂಡದ ವಿಸ್ಮಯವಾಗಿದೆ. ಇದೇ ಕಾರಣಕ್ಕೆ ಕುದ್ರೋಳಿ ಗಣೇಶ್ ಇತರ ಜಾದೂಗಾರರಿಗಿಂತ ಭಿನ್ನವಾಗಿ ತಮ್ಮ ಕಲೆಗಿಂತ ಹೆಚ್ಚಾಗಿ ಮಾನವೀಯತೆಯ ಹರಿಕಾರರಾಗಿ ಹೃದಯಕ್ಕೆ ಹತ್ತಿರಾಗುತ್ತಾರೆ.

ಕೇರಳದ ಮ್ಯಾಜಿಕ್ ಸರ್ಕಲ್ ಸಂಸ್ಥೆಯು 1998ರಲ್ಲಿ ನೀಡಿದ ಪ್ರಶಸ್ತಿ ಭಾರತದ ಜಾದೂಪ್ರಪಂಚದ ಉನ್ನತ ಪ್ರಶಸ್ತಿಯಾಗಿದೆ. ತಮ್ಮ ಜಾದೂವಿನಲ್ಲಿ ದಕ್ಷಿಣ ಕನ್ನಡದ 'ಭೂತದ ಕೋಲ' ಪಾತ್ರವನ್ನು ಅಳವಡಿಸಿಕೊಂಡು ನೀಡಿದ ವಿಭಿನ್ನ ಮತ್ತು ವಿನೂತನ ಪ್ರಯೋಗವನ್ನು ಶ್ಲಾಘಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

English summary

Mangalore famous Magician kudroli ganesh

Kudroli Ganesh is a name to reckon with in the world of Magic in this sub-continent,who has relentlessly strived to revive the mysticism of ancient Indian Magic.Having performed over 1500 shows in the country and across the borders with his "Vismaya"Magic Troupe
X
Desktop Bottom Promotion