For Quick Alerts
ALLOW NOTIFICATIONS  
For Daily Alerts

ಕಲ್ಪನಾ ಎಂಬ ಗಗನ ಕುಸುಮ ಕುರಿತ ಮೈನವಿರೇಳಿಸುವ ಸಂಗತಿಗಳು

By Super
|

ಅಂದು, 2003, ಫೆ 1ರ ಶನಿವಾರ, ಟೀವಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಎಂದು ಬಿತ್ತರವಾಗಿದ್ದು ನಾಸಾದ ಸ್ಪೇಸ್ ಶಟಲ್ ಗಗನನೌಕೆಯೊಂದು ಹಿಂದಿರುತ್ತಿರುವಾಗ ಆಗಸದಲ್ಲಿಯೇ ಹೊತ್ತಿ ಉರಿದು ಅದರಲ್ಲಿದ್ದ ಒಟ್ಟು ಏಳು ಗಗನಯಾತ್ರಿಗಳು ವಿಧಿವಶರಾದ ವಿಷಯ. ಅವರಲ್ಲೊಬ್ಬರು ಭಾರತೀಯ ಮೂಲಕ ಕಲ್ಪನಾ ಚಾವ್ಲಾ ಎಂಬ ಸಂಗತಿ ಪ್ರಮುಖವಾಗಿತ್ತು. ಆ ಕ್ಷಣದವರೆಗೂ ಕಲ್ಪನಾ ಚಾವ್ಲಾ ಎಂಬ ವ್ಯಕ್ತಿಯ ಬಗ್ಗೆ ಇಡಿಯ ಭಾರತದಲ್ಲಿ ಬಲ್ಲವರ ಸಂಖ್ಯೆ ಹೆಚ್ಚೇನೂ ಇರಲಿಲ್ಲ. ಆದರೆ ಆ ಬಳಿಕ ಕಲ್ಪನಾ ರವರ ಬಗ್ಗೆ ವಿವರಗಳು ಹೊರಬೀಳುತ್ತಿದ್ದಂತೆಯೇ ಭಾರತ ಕಳೆದುಕೊಂಡಿದ್ದೇನು ಎಂದು ಸ್ಪಷ್ಟವಾಗುತ್ತಾ ಹೋಗಿತ್ತು.

ಕಲ್ಪನಾ ಗಗನಯಾತ್ರಿಯಾಗಿರುವ ಎರಡನೆಯ ಭಾರತೀಯರು ಮತ್ತು ಪ್ರಥಮ ಭಾರತೀಯ ಮಹಿಳೆಯಾಗಿದ್ದಾರೆ. ನಾಸಾದ ಉನ್ನತ ಹುದ್ದೆಯಲಂಕರಿಸಿ ಕೆಲವು ಗಗನಯಾತ್ರೆಗಳನ್ನು ಪೂರೈಸಿ ಅಮೇರಿಕಾ ಮತ್ತು ಭಾರತದ ಗೌರವವನ್ನು ಇನ್ನಷ್ಟು ಹೆಚ್ಚಿಸಿದ ಖ್ಯಾತಿ ಪಡೆದಿದ್ದಾರೆ. ತಮ್ಮ ಸ್ವದೇಶದ ಬಗ್ಗೆ ಅಪಾರ ಹೆಮ್ಮೆ ಮತ್ತು ಗೌರವವಿರಿಸಿಕೊಂಡಿದ್ದ ಇವರು ಸಾವಿರಾರು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಅತ್ಯಂತ ಮೇಧಾವಿ ಹಾಗೂ ಭರವಸೆಯ ಗಗನಯಾತ್ರಿಯಾಗಿದ್ದ ಕಲ್ಪನಾ ಚಾವ್ಲಾ ರ ಬಗ್ಗೆ ಇನ್ನೂ ಹಲವು ವಿಷಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

 ಬಾಲ್ಯ ಮತ್ತು ಶಿಕ್ಷಣ

ಬಾಲ್ಯ ಮತ್ತು ಶಿಕ್ಷಣ

ಇಂದು ಹರ್ಯಾನಾ ರಾಜ್ಯದಲ್ಲಿರುವ ಕರ್ನಾಲ್ (ಆಗ ಪಂಜಾಬ್ ರಾಜ್ಯಕ್ಕೆ ಸೇರಿತ್ತು) ಎಂಬ ಪುಟ್ಟ ಪಟ್ಟಣದಲ್ಲಿ ಬನಾರಸಿಲಾಲ್ ಚಾವ್ಲಾ ಮತ್ತು ಸಂಜ್ಯೋತಿ ಚಾವ್ಲಾ ದಂಪತಿಗಳಿಗೆ ಮಾರ್ಚ್17, 1962 ರಲ್ಲಿ ಹುಟ್ಟಿದ ಕಲ್ಪನಾ ಚಾವ್ಲಾ ತಮ್ಮ ಬಾಲ್ಯವನ್ನು ಕರ್ನಾಲ್ ನಲ್ಲಿಯೇ ಕಳೆದರು. ಕರ್ನಾಲ್ ನ ಟ್ಯಾಗೋರ್ ಬಾಲ್ ನಿಕೇತನ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿ ಚಂಡೀಗಢದ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ (ವೈಮಾನಿಕಶಾಸ್ತ್ರ) ದಲ್ಲಿ 1982ರಲ್ಲಿ ಪದವಿ ಪಡೆದರು. ಬಳಿಕ ಉನ್ನತ ಶಿಕ್ಷಣಕ್ಕಾಗಿ ಅಮೇರಿಕಕ್ಕೆ ತರಳಿ ಅರ್ಲಿಂಗ್ಟನ್ ನಲ್ಲಿರುವ ಟೆಕ್ಸಸ್ ವಿಶ್ವವಿದ್ಯಾಲಯದಿಂದ 1984ರಲ್ಲಿ ಇದೇ ವಿಷಯದಲ್ಲಿ ಮಾಸ್ಟರ್ ಆಫ್ ಸೈನ್ಸ್ ಪದವಿ ಪಡೆದರು. ಬಳಿಕ ಬೌಲ್ಡರ್ ಎಂಬ ನಗರದ ಕೊಲರಾಡೋ ವಿಶ್ವವಿದ್ಯಾಲಯದಲ್ಲಿ 1986ರಲ್ಲಿ ಎರಡನೆಯ ಮಾಸ್ಟರ್ ಪದವಿ ಮತ್ತು 1988 ರಲ್ಲಿ ಪಿ.ಎಚ್.ಡಿ. ಪದವಿಗಳನ್ನು ಪಡೆದರು.

ನಾಸಾದಲ್ಲಿ ವೃತ್ತಿ

ನಾಸಾದಲ್ಲಿ ವೃತ್ತಿ

ಇವರ ಶಿಕ್ಷಣ ಮತ್ತು ಕಾರ್ಯವೈಖರಿಯನ್ನು ಗಮನಿಸಿದ ನಾಸಾ ಅವರಿಗೆ ಉದ್ಯೋಗವನ್ನು ದೊರಕಿಸಿಕೊಟ್ಟಿತು. ನಾಸಾದಂತಹ ಸಂಸ್ಥೆಯಲ್ಲಿ ಕೆಲಸ ಸಿಗುವುದೇ ಒಂದು ಭಾಗ್ಯವಾಗಿರುವಾಗ ಕಲ್ಪನಾರಿಗೆ ಅಲ್ಲಿನ (Ames Research Center) ಎಂಬ ವಿಭಾಗದಲ್ಲಿ ಉಪಾಧ್ಯಕ್ಷ ಸ್ಥಾನ ದೊರಕಿದ್ದು ಭಾರತದ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ. ಈ ವಿಭಾಗದಲ್ಲಿ ಅವರು ರಾಕೆಟ್ಟುಗಳು ನೆಲದಿಂದ ನೆಟ್ಟನೇರಕ್ಕೆ ಮೇಲೇರುವ ತಂತ್ರಜ್ಞಾನದ ಬಗ್ಗೆ ಆಳವಾದ ಅದ್ಯಯನ ನಡೆಸಿದರು. Computational fluid dynamics (CFD) ಎಂಬ ಹೆಸರಿನ ತಂತ್ರಜ್ಞಾನ ಬಳಸಿ ಇದೇ ರೀತಿ ಬೇರೆಯ ವೈಮಾನಿಕ ಸಾಧನಗಳಾದ ವಿಮಾನ, ಗ್ಲೈಡರ್, ಒಂದು ಮತ್ತು ಹಲವು ಇಂಜಿನ್ನುಗಳ ವಿಮಾನಗಳ ವಾಣಿಜ್ಯ ಬಳಕೆ, ಸಮುದ್ರದಿಂದ ನೇರವಾಗಿ ಗಾಳಿಗೆ ನೆಗೆಯುವ ಸೀಪ್ಲೇನ್ ಮೊದಲಾದ ವಾಯುನೌಕೆಗಳಿಗೆ ತರಬೇತುದಾರರಾಗಿಯೂ ಕಾರ್ಯನಿರ್ವಹಿಸಿದರು.

ಅಮೇರಿಕಾದ ಪೌರತ್ವ

ಅಮೇರಿಕಾದ ಪೌರತ್ವ

1991ರ ಏಪ್ರಿಲ್ ನಲ್ಲಿ ಅವರಿಗೆ ಅಮೇರಿಕಾದ ಪೌರತ್ವ ದೊರಕಿತು. ಬಳಿಕ ಅವರು ನಾಸಾದಲ್ಲಿಯೇ ಗಗನಯಾತ್ರಿಯಾಗಲು ಅರ್ಜಿ ಸಲ್ಲಿಸಿದರು. ಆದರೆ ಅವರ ಅರ್ಜಿ ಮಂಜೂರಾಗಲು ನಾಲ್ಕು ವರ್ಷ ಕಾಯಬೇಕಾಯಿತು. 1995ರಲ್ಲಿ ಅವರಿಗೆ ಗಗನಯಾತ್ರಿಯಾಗುವ ಅವಕಾಶ ದೊರಕಿತು. ಪ್ರಾಥಮಿಕ ತರಬೇತಿಯ ಬಳಿಕ 1996ರಲ್ಲಿ ಅವರು ಪ್ರಥಮವಾಗಿ ಭೂಮಿಯ ಕಕ್ಷೆಯಿಂದ ಹೊರಹೋಗಲು ಅವಕಾಶ ದಕ್ಕಿತು. ಭೂಕಕ್ಷೆಯಿಂದ ಹೊರಹೋದ ಬಳಿಕ ಗುರುತ್ವಾಕರ್ಷಣೆಯೇ ಇಲ್ಲದೆ ಭಾರರಹಿತ ಸ್ಥಿತಿಯನ್ನು ಅನುಭವಿಸಿದ ಅವರು ಆ ಕ್ಷಣವನ್ನು ಹೀಗೆ ದಾಖಲಿಸಿದ್ದಾರೆ -"You are just your intelligence" (ಇಲ್ಲಿ ನೀವು ನೀವಲ್ಲ, ನಿಮ್ಮ ಬುದ್ದಿಮತ್ತೆ ಮಾತ್ರ). ಈ ಯಾತ್ರೆಯಲ್ಲಿ ಅವರು 10.67ಮಿಲಿಯನ್ ಕಿ.ಮೀ (ಅಂದರೆ ಭೂಮಿಯನ್ನು 252 ಬಾರಿ ಸುತ್ತುಹೊಡೆದಷ್ಟು ದೂರ) ಪಯಣಿಸಿ ಸುರಕ್ಷಿತವಾಗಿ ಭೂಮಿಗೆ ಮರಳಿದರು.

ಪ್ರಥಮ ಶಟಲ್ ಯಾನ

ಪ್ರಥಮ ಶಟಲ್ ಯಾನ

ನವೆಂಬರ್ 19, 1997ರಂದು ಅವರು ತಮ್ಮ ಪ್ರಥಮ ಸ್ಪೇಸ್ ಶಟಲ್ ಯಾನವನ್ನು ಆರಂಭಿಸಿದರು. Space Shuttle Columbia flight STS-87 ಎಂಬ ಹೆಸರಿನ ಈ ಯಾನದಲ್ಲಿ ಒಟ್ಟು ಆರು ಗಗನಯಾತ್ರಿಗಳಿದ್ದರು. ಭೂಕಕ್ಷೆಯಿಂದ ಹೊರಹೋಗಿರುವ ಇಬ್ಬರೇ ಭಾರತೀಯರಲ್ಲಿ (ಪ್ರಥಮ ಸ್ಥಾನದಲ್ಲಿರುವ ರಾಕೇಶ್ ಶರ್ಮಾ ರವರು 1984 ರಲ್ಲಿ Soyuz T-11 ಎಂಬ ನೌಕೆಯಲ್ಲಿ ಭೂಕಕ್ಷೆಯಿಂದ ಹೊರಹೋಗಿದ್ದರು) ಇವರು ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಯನ್ನೂ ಪಡೆದರು. ಈ ಯಾತ್ರೆಯಲ್ಲಿ ಅವರು ಭೂಮಿಯನ್ನು 252 ಬಾರಿ ಸುತ್ತಿ 10.4ಮಿಲಿಯನ್ ಮೈಲುಗಳನ್ನು ಕ್ರಮಿಸಿದರು. ಒಟ್ಟು 372 ಘಂಟೆಗಳನ್ನು (ಸುಮಾರು ಹದಿನಾಲ್ಕೂವರೆ ದಿನ) ಅವರು ಭೂಮಿಯಿಂದ ಹೊರಗೆ ಕಳೆದರು.

 ಸ್ಪಾರ್ಟಾನ್ ಉಪಗ್ರಹ

ಸ್ಪಾರ್ಟಾನ್ ಉಪಗ್ರಹ

ಈ ಯಾತ್ರೆಯಲ್ಲಿ ಸ್ಪಾರ್ಟಾನ್ ಉಪಗ್ರಹ (Spartan Satellite) ಎಂಬ ವ್ಯವಸ್ಥೆ ಕೆಟ್ಟು ಹೋಗಿ ಅದನ್ನು ರಿಪೇರಿಗೊಳಿಸಲು ಆರು ಗಗನಯಾತ್ರಿಗಳ ಪೈಕಿ ಇಬ್ಬರಾದ ವಿನ್ಸ್ಟನ್ ಸ್ಕಾಟ್ ಮತ್ತು ಟಾಕಾವೋ ಡೋಯಿ ಯವರು ನೌಕೆಯಿಂದ ಹೊರಹೋಗಬೇಕಾಗಿ ಬಂದಿತ್ತು. ಈ ತೊಂದರೆಗೆ ಕಲ್ಪನಾರವರೇ ಕಾರಣ ಎಂದು ಗೂಬೆ ಕೂರಿಸಲಾಯ್ತು. ಆದರೆ ಹಿಂದಿರುಗಿದ ಬಳಿಕ ಐದು ತಿಂಗಳವರೆಗೆ ನಾಸಾ ಅತ್ಯಂತ ಕಠಿಣವಾದ ತನಿಖೆಯನ್ನು ನಡೆಸಿ ಬಳಿಕ ಈ ತೊಂದರೆಗೆ ಕಲ್ಪನಾರವರು ಕಾರಣರಲ್ಲವೆಂದೂ ನೆಲದಿಂದ ಸಾಫ್ಟ್ ವೇರ್ ಸೂಚನೆಗಳನ್ನು ಗಗನಕ್ಕೆ ಕಳಿಸುವಾಗ ಮತ್ತು ಅದನ್ನು ಸ್ವೀಕರಿಸುವಾಗ ಎಲ್ಲೋ ಕೆಲವು ಸಂಕೇತಗಳುಬಿಟ್ಟುಹೋಗಿ ತಪ್ಪಾದ ಸಂಕೇತವೆಂದು ಗಗನಯಾತ್ರಿಗಳು ಅರ್ಥೈಸಿಕೊಂಡಿದ್ದ ಆದ ಪ್ರಮಾದ ಎಂದು ತೀರ್ಪು ನೀಡಿತು.

ನಾಸಾದಲ್ಲಿ ತರಬೇತುದಾರಳಾದ ಗೌರವ

ನಾಸಾದಲ್ಲಿ ತರಬೇತುದಾರಳಾದ ಗೌರವ

ಯಾವುದೇ ಗಗನಯಾತ್ರಿ ಗಗನದಿಂದ ಮರಳಿದ ತಕ್ಷಣ ನಾವು ಬಸ್ಸಿಳಿದು ಮನೆಗೆ ಬರುವಂತೆ ಮನೆಗೆ ಬರುವ ಹಾಗಿಲ್ಲ. ಅವರು ಅಂತರಿಕ್ಷದಿಂದ ತಂದಿರಬಹುದಾದ, ಮನುಕುಲಕ್ಕೆ ಮಾರಕವಾದ ಯಾವುದೇ ಸೂಕ್ಷ್ಮ ಕ್ರಿಮಿ ಇಲ್ಲವೆಂದು ಕಠಿಣ ತಪಾಸಣೆಯ ಮೂಲಕ ಸ್ಪಷ್ಟವಾಗುವವರೆಗೂ ಅವರು ವಿಶೇಷ ಕೋಣೆಯೊಳಗೇ ಇರಬೇಕಾಗುತ್ತದೆ. ಅಮೇರಿಕಾದ ಅಧ್ಯಕ್ಷರೂ ಅಭಿನಂದನೆಗಳನ್ನು ಸಲ್ಲಿಸಬೇಕಾದರೆ ಆ ಕೋಣೆಯ ಹೊರಗಿನಿಂದ ಗಾಜಿನ ಮೂಲಕ ನೋಡಿ ಮೈಕ್ ಮೂಲಕ ತಿಳಿಸಬೇಕಾಗುತ್ತದೆ. ಇದಕ್ಕೆ ಕೆಲವು ದಿನಗಳೇ ಹಿಡಿಯಬಹುದು. ಅಂತೆಯೇ ಎಲ್ಲಾ ಪರೀಕ್ಷೆಗಳನ್ನು ಪೂರೈಸಿ ಹೊರಬಂದ ಅವರನ್ನು ಮುಕ್ತಕಂಠದಿಂದ ಸ್ವಾಗತಿಸಿದ ನಾಸಾ ತನ್ನ ಸ್ಪೇಸ್ ಸ್ಟೇಷನ್ ವಿಭಾಗದಲ್ಲಿ ತರಬೇತುದಾರಳಾಗಿ ನೇಮಿಸಿತು.

ಎರಡನೆಯ ಶಟಲ್ ಯಾನ - ದುರಂತದಲ್ಲಿ ಮುಗಿದ ಪಯಣ

ಎರಡನೆಯ ಶಟಲ್ ಯಾನ - ದುರಂತದಲ್ಲಿ ಮುಗಿದ ಪಯಣ

2000ನೇ ಇಸವಿಯಲ್ಲಿ STS-107 ಎಂಬ ಹೆಸರಿನ ಇನ್ನೊಂದು ಯಾನದಲ್ಲಿ ಗಗನಯಾತ್ರಿಯಾಗಿ ಪಯಣಿಸಲು ಕಲ್ಪನಾ ರವರು ಮತ್ತೊಮ್ಮೆ ಆಯ್ಕೆಯಾದರು. ಆದರೆ ಹಲವಾರು ತಾಂತ್ರಿಕ ತೊಂದರೆಗಳಿಂದ ಯಾತ್ರೆಯ ದಿನಾಂಕವನ್ನು ಮುಂದೂಡುತ್ತಾ ಹೋಗಲಾಯಿತು. ಏಕೆಂದರೆ ಗಗನಯಾತ್ರೆಯಲ್ಲಿ ಗಗನ ನೌಕೆ ಮಾತ್ರವಲ್ಲದೇ ಇನ್ನೂ ಹತ್ತು ಹಲವಾರು ತಾಂತ್ರಿಕ ವಿಭಾಗಗಳಿರುತ್ತವೆ. ಎಲ್ಲವೂ ಅತ್ಯಂತ ಸುವ್ಯವಸ್ಥಿತವಾಗಿ ಆಗಬೇಕು. ಎಲ್ಲಿಯಾದರೂ ಒಂದು ತೊಂದರೆ ಎದುರಾದರೂ ಇಡಿಯ ವ್ಯವಸ್ಥೆಯೇ ಪ್ರಭಾವಕ್ಕೊಳಗಾಗುತ್ತದೆ. ಕಡೆಗೂ ಎಲ್ಲಾ ತಾಂತ್ರಿಕ ತೊಂದರೆಗಳನ್ನು ಎದುರಿಸಿ 2003ರ ಜನವರಿ 16ರಂದು ಗಗನನೌಕೆ ಉಡ್ಡಯನಗೊಂಡಿತು.

ದುರಂತದಲ್ಲಿ ಮುಗಿದ ಪಯಣ

ದುರಂತದಲ್ಲಿ ಮುಗಿದ ಪಯಣ

ಈ ತರಾತುರಿಯಲ್ಲಿಯೇ ಯಾವುದೋ ಒಂದು ಚಿಕ್ಕ ಲೆಕ್ಕ ತಪ್ಪಿರಬಹುದು ಎಂದು ದುರಂತದ ಬಳಿಕ ತಜ್ಞರು ಅಭಿಪ್ರಾಯಪಡುತ್ತಾರೆ. ಈ ಪಯಣದಲ್ಲಿ ಅವರಿಗೆ ಗುರುತ್ವಾಕರ್ಷಣೆ ಇಲ್ಲದ ಸ್ಥಿತಿಯಲ್ಲಿ ಅತ್ಯಂತ ಸೂಕ್ಷ್ಮ ಪ್ರಯೋಗಗಳನ್ನು ನಡೆಸಬೇಕಾಗಿತ್ತು. ಇದಕ್ಕಾಗಿ ಅವರು ತಮ್ಮ ತಂಡದೊಂದಿಗೆ ಸುಮಾರು ಎಂಭತ್ತು ಪ್ರಯೋಗಗಳನ್ನು ನಡೆಸಿದರು. ಈ ಸ್ಥಿತಿಯಲ್ಲಿ ಗಗನಯಾತ್ರಿಗಳ ಆರೋಗ್ಯ, ಮಾನಸಿಕ ಸ್ಥಿತಿ, ಚಟುವಟಿಕೆಯ ಕಾರ್ಯಸೂಚಿ ಮೊದಲಾದ ಮಾಹಿತಿಗಳನ್ನು ಕಲೆಹಾಕಲು ಅಧ್ಯಯನ ನಡೆಸಬೇಕಿತ್ತು.

ದುರಂತದಲ್ಲಿ ಮುಗಿದ ಪಯಣ

ದುರಂತದಲ್ಲಿ ಮುಗಿದ ಪಯಣ

ಸುಮಾರು ಹದಿನೈದು ದಿನ ಈ ಪ್ರಯೋಗಗಳನ್ನು ನಡೆಸಿ ತಮ್ಮ ಪಾಲಿನ ಕರ್ತವ್ಯ ಪೂರೈಸಿ ತಂಡ ಭೂಮಿಗೆ ಹಿಂದಿರುಗಿತು. ಆದರೆ ಭೂಮಿ ತಲುಪಲು ಇನ್ನು ಕೇವಲ ಹದಿನಾರು ನಿಮಿಷಗಳ ದೂರ ಇದೆ ಎನ್ನುವಾಗ ಇಡಿಯ ಸ್ಪೇಸ್ ನೌಕೆ ಗಗನದಲ್ಲಿಯೇ ಬೆಂಕಿ ಹೊತ್ತಿ ಉರಿದು ಭಸ್ಮವಾಗಿ ಟೆಕ್ಸಸ್ ಮತ್ತು ಲೂಸಿಯಾನಾ ನಗರಗಳ ಮೇಲೆ ಧೂಳಾಗಿ ಉದುರಿತು. ಗಗನನೌಕೆಯ ಮುಖ್ಯಭಾಗ ಕರಟಿದ ಸ್ಥಿತಿಯಲ್ಲಿ ನೆಲಕ್ಕೆ ಬಿತ್ತು. ಇದರೊಂದಿಗೇ ಆ ಯಾನದಲ್ಲಿದ್ದ ಏಳೂ ಯಾತ್ರಿಗಳು ಅಮರರಾದರು.

ದುರಂತಕ್ಕೆ ಕಾರಣ

ದುರಂತಕ್ಕೆ ಕಾರಣ

1986ರ ಚಾಲೆಂಜರ್ ದುರಂತದ ಬಳಿಕ ನಡೆದ ಭೀಕರ ದುರಂತವನ್ನು ತನಿಖೆ ನಡೆಸಿದ ನಾಸಾ ಹಲವು ಮಹತ್ವದ ಕಾರಣಗಳನ್ನು ಕಂಡುಕೊಂಡಿತು. ಯಾವುದೇ ಅಂತರಿಕ್ಷದ ವಸ್ತು ಭೂಮಿಯ ಕಕ್ಷೆಯನ್ನು ಪ್ರವೇಶಿಸುವಾಗ ಭೂಮಿಯ ವಾತಾವರಣ (ಮುಖ್ಯವಾಗಿ ಗಾಳಿ) ಇದಕ್ಕೆ ಅಡ್ಡಿಪಡಿಸುತ್ತದೆ. ಸುಮ್ಮನೇ ಗಾಳಿಯಲ್ಲಿ ಕೈಯಾಡಿಸಿದರೆ ಗಾಳಿ ಒಡ್ಡುವ ತಡೆ ನಮಗೆ ಅನುಭವಕ್ಕೆ ಬರುತ್ತದೆ. ಆದರೆ ಗಗನನೌಕೆಯ ಅಥವಾ ಅಂತರಿಕ್ಷದ ವಸ್ತುಗಳ ವೇಗ ಅತ್ಯಂತ ಹೆಚ್ಚಿರುತ್ತವೆ. ಈ ವೇಗಕ್ಕೆ ಭೂಮಿಯ ವಾತಾವರಣ ಒಡ್ಡುವ ತಡೆ ಘರ್ಷಣೆಯನ್ನು ಉಂಟುಮಾಡಿ ಬಿಸಿಯಾಗಿಸುತ್ತದೆ. ಎಷ್ಟು ಬಿಸಿ ಎಂದರೆ ಸುಮಾರು ಕಬ್ಬಿಣವೂ ಕರಗುವಷ್ಟು. ಚಿಕ್ಕ ಪುಟ್ಟ ವಸ್ತುಗಳು ಗಗನದಲ್ಲಿಯೇ ಉರಿದು ಬೂದಿಯಾಗುತ್ತವೆ. ಇದನ್ನೇ ನಾವು ಉಲ್ಕೆಗಳು ಎಂದು ಕರೆಯುತ್ತೇವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದುರಂತಕ್ಕೆ ಕಾರಣ

ದುರಂತಕ್ಕೆ ಕಾರಣ

ಇದನ್ನು ತಡೆಯಲು ಇಡಿಯ ಗಗನನೌಕೆಯನ್ನು ಆ ಪ್ರಖರ ಬಿಸಿಯನ್ನು ತಡೆಯುವ ವಸ್ತುವಿನಿಂದ ಆವರಿಸಿರಲಾಗುತ್ತದೆ. ಆದರೆ ಈ ನೌಕೆಯ ಉಡಾವಣಾ ಸಮಯದಲ್ಲಿ ಗಗನನೌಕೆಯ ರೆಕ್ಕೆಯೊಂದರಲ್ಲಿ ಚಿಕ್ಕ ಸೂಟ್ ಕೇಸ್ ನ ಗಾತ್ರದಷ್ಟು ಕವಚವು ಕಿತ್ತು ಬಂದಿತ್ತು. ಇದನ್ನು ಸರಿಪಡಿಸದೇ ಉಡ್ಡಯನಗೊಳಿಸಿದ್ದೇ ಈ ದುರಂತಕ್ಕೆ ಕಾರಣವಾಯಿತು. ಭೂಮಿಯ ವಾತಾವರಣವನ್ನು ಗಗನನೌಕೆ ಪ್ರವೇಶಿಸುವಾಗ ಈ ಭಾಗದಲ್ಲಿ ಉಂಟಾದ ಭಾರಿ ಬಿಸಿ ರೆಕ್ಕೆಯನ್ನು ಕಿತ್ತು ಹಾಕಿತು. ರೆಕ್ಕೆಯಿಲ್ಲದ ಹಕ್ಕಿಯಂತಾದ ನೌಕೆ ಆಗಸದಲ್ಲಿ ಗಿರಿಗಿಟ್ಟಲೆಯಂತೆ ತಿರುಗುತ್ತಾ ತನ್ನ ಇತರ ಭಾಗಗಳಿಗೂ ಉರಿಯನ್ನು ದಾಟಿಸುತ್ತಾ ಕಡೆಗೆ ಪಟಾಕಿಯಂತೆ ಸ್ಫೋಟಿಸಿತು. ಒಂದೇ ನಿಮಿಷದಲ್ಲಿ ಎಲ್ಲಾ ಗಗನಯಾತ್ರಿಗಳು ಉರಿದು ಬೂದಿಯಾದರು.

ಮರಣೋತ್ತರ ಪ್ರಶಸ್ತಿಗಳು

ಮರಣೋತ್ತರ ಪ್ರಶಸ್ತಿಗಳು

ಕಲ್ಪನಾರವರ ಸೇವೆಯನ್ನು ಪರಿಗಣಿಸಿದ ನಾಸಾ ಈ ಪ್ರಶಸ್ತಿಗಳನ್ನು ಮರಣೋತ್ತರವಾಗಿ ನೀಡಿ ಗೌರವಿಸಿತು.

Congressional Space Medal of Honor

NASA Space Flight Medal

NASA Distinguished Service Medal

ಕಲ್ಪನಾರವರು ಬಳಸುತ್ತಿದ್ದ ಗಗನಯಾತ್ರಿಯ ಉಡುಪು ಮೊದಲಾದವುಗಳನ್ನು, ಅವರ ಪ್ರಶಸ್ತಿ ಮತ್ತು ಫಲಕಗಳನ್ನು ನಾಸಾದ ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಭಾರತ ಮತ್ತು ಅಮೇರಿಕಾದಲ್ಲಿ ಕಲ್ಪನಾರಿಗೆ ನೀಡಿದ ಭಾಷ್ಪಾಂಜಲಿ

ಭಾರತ ಮತ್ತು ಅಮೇರಿಕಾದಲ್ಲಿ ಕಲ್ಪನಾರಿಗೆ ನೀಡಿದ ಭಾಷ್ಪಾಂಜಲಿ

ಭೋಪಾಲ (ಮಧ್ಯಪ್ರದೇಶ) ದಲ್ಲಿರುವ ಮೌಲಾನಾ ಆಜಾದ್ ರಾಷ್ಟ್ರೀಯ ತಾಂತ್ರಿಕ ವಿಭಾಗದ ಮಹಿಳಾ ಹಾಸ್ಟೆಲ್ ಹೆಸರನ್ನು ಕಲ್ಪನಾ ಚಾವ್ಲಾ ಭವನ್ ಎಂದು ಮರುನಾಮಕರಣ ಮಾಡಲಾಯ್ತು.

ವಿದ್ಯಾರ್ಥಿಗಳಿಗೆ ಕಲ್ಪನಾ ಚಾವ್ಲಾರ ಹೆಸರು

ವಿದ್ಯಾರ್ಥಿಗಳಿಗೆ ಕಲ್ಪನಾ ಚಾವ್ಲಾರ ಹೆಸರು

2010ರಲ್ಲಿ International Space University (ISU) ವಿಶ್ವವಿದ್ಯಾಲಯದಿಂದ ಅಂತಾರಾಷ್ಟ್ರೀಯ ಖಗೋಳವಿಜ್ಞಾನ ವಿಷಯದಲ್ಲಿ ವ್ಯಾಸಾಂಗ ನಡೆಸುವ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿವೇತನಕ್ಕೆ ಕಲ್ಪನಾ ಚಾವ್ಲಾರ ಹೆಸರಿಡಲಾಯಿತು.

2005 ರಲ್ಲಿ

2005 ರಲ್ಲಿ

2005 ರಲ್ಲಿ ಟೆಕ್ಸಸ್ ವಿಶ್ವವಿದ್ಯಾಲಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿವೇತನಕ್ಕೆ ಕಲ್ಪನಾ ಚಾವ್ಲಾರ ಹೆಸರಿಡಲಾಯಿತು.

Kalpana Chawla Outstanding Recent Alumni Award

Kalpana Chawla Outstanding Recent Alumni Award

1983ರಿಂದಲೂ ಕೊಲರಾಡೋ ವಿಶ್ವವಿದ್ಯಾಲಯದಲ್ಲಿ ನೀಡಲಾಗುತ್ತಾ ಬರುವ Outstanding Recent Alumni Award ಪ್ರಶಸ್ತಿಗೆ The Kalpana Chawla Outstanding Recent Alumni Award ಎಂದು ಹೆಸರಿಡಲಾಯಿತು.

ಕಲ್ಪನಾ ಹೆಸರಿನಲ್ಲಿ ಮೆಡಿಕಲ್ ಕಾಲೇಜಿಗೆ ಒತ್ತಾಯ

ಕಲ್ಪನಾ ಹೆಸರಿನಲ್ಲಿ ಮೆಡಿಕಲ್ ಕಾಲೇಜಿಗೆ ಒತ್ತಾಯ

ಅವರ ಸ್ವಗ್ರಾಮವಾದ ಕರ್ನಾಲ್ ನಲ್ಲಿ ಕಲ್ಪನಾ ಚಾವ್ಲಾ ಹೆಸರಿನ ಮೆಡಿಕಲ್ ಕಾಲೇಜು ತೆರೆಯುವಂತೆ ಒತ್ತಾಯಿಸಿ ಮೂವತ್ತು ಸಾವಿರ ಶಾಲಾ ಮಕ್ಕಳು ಮತ್ತು ಪೋಷಕರು ಕೈ ಕೈ ಹಿಡಿದು 36.4 ಕಿ.ಮೀ ಯಷ್ಟು ದಾಖಲೆಯ ಮಾನವ ಸರಪಳಿ ನಡೆಸಿದರು. ಈ ಮನವಿಯನ್ನು ಆರೋಗ್ಯ ಮಂತ್ರಿ ಸಿ.ಪಿ ಠಾಕುರ್ ರವರು ಶೀಘ್ರವೇ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದ್ದರು. ಬಳಿಕ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರವರು ಅನುಮೋದಿಸಿದ್ದರು. ಆದರೆ ಈ ಭರವಸೆ ಕೇವಲ ಮಾತಿನ ಟೊಳ್ಳು ಎಂಬಂತೆ ಕಂಡುಬಂದಾಗ The Kalpana Chawla Medical College Nirman Committee ಎಂಬ ಸಂಘಟನೆ ಸ್ಥಾಪಿಸಿ ಮೂವತ್ತನಾಲ್ಕು ಶಾಲೆ ಮತ್ತು ವಿವಿಧ ಸಂಘಟನೆಗಳ ನೆರವಿನಿಂದ ಮತ್ತೊಮ್ಮೆ ಮಾನವ ಸರಪಳಿ ನಡೆಸಿ ಕಾಲೇಜು ಕಟ್ಟಡ ಸ್ಥಾಪನೆಗೆ ಒತ್ತಾಯಿಸಲಾಯಿತು.

ಕಲ್ಪನಾ ಹೆಸರಿನಲ್ಲಿ ಮೆಡಿಕಲ್ ಕಾಲೇಜಿಗೆ ಒತ್ತಾಯ

ಕಲ್ಪನಾ ಹೆಸರಿನಲ್ಲಿ ಮೆಡಿಕಲ್ ಕಾಲೇಜಿಗೆ ಒತ್ತಾಯ

ಈ ಬೇಡಿಕೆಗೆ ಮಣಿದ ರಾಜ್ಯ ಸರ್ಕಾರ 10.10.2012 ರಂದು ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿತು.44 ಎಕರೆ ಜಾಗದಲ್ಲಿ 645.77 ಕೋಟಿ ರೂ ಕೇಂದ್ರದ ಅನುದಾನದಿಂದ ಕಾಲೇಜು ಪ್ರಾರಂಭಗೊಂಡಿದ್ದು ಇಂದು ಭಾರತದ ಒಂದು ಪ್ರಮುಖ ವೈದ್ಯಕೀಯ ಶಿಕ್ಷಣಾ ಕೇಂದ್ರವಾಗಿದೆ.

ಹರ್ಯಾನಾ ರಾಜ್ಯ

ಹರ್ಯಾನಾ ರಾಜ್ಯ

ಹರ್ಯಾನಾ ರಾಜ್ಯದ ಕುರುಕ್ಷೇತ್ರದಲ್ಲಿರುವ ಜ್ಯೋತಿಸರ ಎಂಬಲ್ಲಿ ಕಲ್ಪನಾ ಚಾವ್ಲಾ ಹೆಸರಿನಲ್ಲಿ ತಾರಾಲಯ (Planetarium) ಸ್ಥಾಪಿಸಲಾಗಿದೆ. ಖರಗ್ಪುರದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ Kalpana Chawla Space Technology Cell ಎಂದು ಮರುನಾಮಕರಣ ಮಾಡಲಾಗಿದೆ.

English summary

Interesting Facts about Kalpana Chawla

Kalpana Chawla facts bring the interesting information about the first Indian American astronaut. This woman died in a disaster of the space shuttle Columbia. She was honored not only in America, but also in India due to her great contribution as an astronaut. Find out more about her in the following post below:
X
Desktop Bottom Promotion