For Quick Alerts
ALLOW NOTIFICATIONS  
For Daily Alerts

ವಿಜ್ಞಾನಿಗಳಿಗೂ ಯಕ್ಷ ಪ್ರಶ್ನೆಯಂತೆ ಕಾಡುವ ಭೂಕಂಪದ ರಹಸ್ಯ!

By Arshad
|

ಕೆಲದಿನಗಳ ಹಿಂದೆ ನೇಪಾಳದಲ್ಲಿ ಸಂಭವಿಸಿದ ಭೂಕಂಪ ಎಲ್ಲರ ಮನ ಕಲಕಿದೆ. ಪತ್ರಿಕೆಗಳಲ್ಲಿ ಬರುವ ಸಾವುನೋವಿನ ಅಂಕಿಅಂಶಗಳು ಕಣ್ಣುಗಳನ್ನು ತೇವಗೊಳಿಸುತ್ತವೆ. ಸುನಾಮಿ, ಜ್ವಾಲಾಮುಖಿ, ಚಂಡಮಾರುತ, ಸುಂಟರಗಾಳಿ ಮೊದಲಾದ ನೈಸರ್ಗಿಕ ಪ್ರಕೋಪಗಳಂತೆಯೇ ಭೂಕಂಪ ಕೂಡ ಒಂದು ಪ್ರಬಲ ನೈಸರ್ಗಿಕ ಪ್ರಕೋಪವಾಗಿದೆ.

ಆದರೆ ಇದರ ಸಂಭವಿಕೆಯನ್ನು ಮೊದಲೇ ಗ್ರಹಿಸಲು ಸಾಧ್ಯವಾಗದಿರುವುದೇ ಸಾವುನೋವಿಗೆ ಪ್ರಮುಖ ಕಾರಣವಾಗಿದೆ. ಅಂಕಿ ಅಂಶಗಳ ಪ್ರಕಾರ ಕಳೆದ ನಾಲ್ಕು ಸಾವಿರ ವರ್ಷಗಳಲ್ಲಿ ಸಂಭವಿಸಿದ ಭೂಕಂಪಗಳಲ್ಲಿ ಒಂದು ಕೋಟಿ ಮೂವತ್ತು ಲಕ್ಷ ಜನರು ಸಾವಿಗೀಡಾಗಿದ್ದಾರೆ. ಈ ಅಂಕಿಅಂಶಗಳು ಖಚಿತಪಟ್ಟಿರುವ ಸಂಖ್ಯೆ ಮಾತ್ರ...!

ಏಕೆಂದರೆ ಭೂಕಂಪದಿಂದಾಗಿ ಧರೆಗುರುಳಿದ ಕಟ್ಟಡ, ಮನೆಗಳ ಅವಶೇಷಗಳಡಿ ಸಮಾಧಿಯಾಗಿ ಮೂಳೆ ಕೂಡ ಸಿಕ್ಕಿಲ್ಲದವರ ಲೆಕ್ಕ ಹಿಡಿದರೆ ಈ ಅಂಕಿಅಂಶಗಳು ಇನ್ನಷ್ಟು ಮೇಲೇರಬಹುದು! ಈ ಭೂಕಂಪ ಹೇಗೆ ಸಂಭವಿಸುತ್ತದೆ? ಭೂಕಂಪವಾದರೆ ಏಕಿಷ್ಟು ಸಂಖ್ಯೆಯಲ್ಲಿ ಜನರು ಸಾವಿಗೀಡಾಗುತ್ತಾರೆ? ಭೂಕಂಪ ಒಂದು ನಿರ್ಧಾರಿತ ಸ್ಥಳದಲ್ಲಿ ಅಥವಾ ಕ್ರಮದಲ್ಲಿಯೇ ಸಂಭವಿಸುತ್ತದೆಯೇ?

ಇದನ್ನು ತಡೆಯಲು ಏನು ಮಾಡಬಹುದು? ನೀವು ಕುಳಿತಿರುವಲ್ಲಿಯೇ ಭೂಮಿ ಕಂಪಿಸಿದರೆ ಏನು ಮಾಡಬೇಕು? ಎಂಬೆಲ್ಲಾ ಪ್ರಶ್ನೆಗಳು ನಿಮ್ಮಲ್ಲಿ ಉದ್ಭವಿಸಿದೆಯೇ? ಇದೋ, ಭೂಕಂಪದ ಬಗ್ಗೆ ಹಲವು ಕುತೂಹಲಕರ ರಹಸ್ಯವನ್ನು ಇಲ್ಲಿ ನೀಡಲಾಗಿದೆ.

ಭೂಕಂಪಕ್ಕೆ ಕಾರಣವೇನು?

ಭೂಕಂಪಕ್ಕೆ ಕಾರಣವೇನು?

ಈ ಪ್ರಶ್ನೆಗೆ ಉತ್ತರ ಕೆದಕಿದರೆ ಭೂಮಿಯ ಉಗಮದವರೆಗೆ ಹಿಂದೆ ಹೋಗಬೇಕಾಗುತ್ತದೆ. ಒಂದಾನೊಂದು ಕಾಲದಲ್ಲಿ ಈಗ ಭೂಮಿ ಇರುವ ಭಾಗವೆಲ್ಲಾ 'ಗೊಂಡ್ವಾನ' ಎಂಬ ಒಂದೇ ಖಂಡವಾಗಿತ್ತು ಕಾಲಾಂತರದರಲ್ಲಿ ಇವೆಲ್ಲಾ ತುಂಡುತುಂಡಾಗಿ ಅತ್ತಿತ್ತ ಚಲಿಸಿದ ಕಾರಣ ಇಂದಿನ ಖಂಡಗಳ ರೂಪ ಪಡೆದಿವೆ. ಭಾರತ ಇರುವ ಭೂಭಾಗ ಅಂದು ಈಗ ಅಂಟಾರ್ಕ್ಟಿಕ ಖಂಡವಿರುವ ಭಾಗದಿಂದ ನೇರ ಉತ್ತರಕ್ಕೆ ಚಲಿಸಿ ರಷ್ಯಾ ಇರುವ ಭಾಗಕ್ಕೆ ಢಿಕ್ಕಿ ಹೊಡೆಯಿತು. ಈ ಢಿಕ್ಕಿಯ ಪರಿಣಾಮವಾಗಿ ಹಿಮಾಲಯ ಪರ್ವತ ಶ್ರೇಣಿ ಉಗಮವಾಯಿತು. ಈ ಚಲನೆ ಭೂಪದರಗಳು ಒಂದರ ಮೇಲೊಂದು ಜಾರುತ್ತಾ ಹೋದಂತೆ ಇರುತ್ತದೆ. ಭೂಮಿಯಾಳದಲ್ಲಿ ಈ ಚಲನೆ ಇಂದಿಗೂ ಜೀವಂತವಾಗಿದೆ. ಈ ಪದರಗಳು ನಯವಾಗಿದ್ದು ತಡೆಯಿಲ್ಲದಿದ್ದರೆ ತೊಂದರೆಯಿಲ್ಲ, ಜಾರುತ್ತಾ ಮುನ್ನಡೆಯುತ್ತವೆ. ಆದರೆ ಕೆಲವೆಡೆ ಈ ಚಲನೆಗೆ ತಡೆಯಾಗುತ್ತದೆ. ಆದರೆ ನಿಧಾನವಾಗಿ ಒತ್ತಡ ಹೆಚ್ಚುತ್ತಾ ಒಂದು ದಿನ ತಾಳಿಕೊಳ್ಳುವ ಮಿತಿ ಮೀರಿ ಒಂದು ಪದರ ಮೇಲೇಳುತ್ತದೆ. ಇದೇ ಕ್ಷಣದಲ್ಲಿ ಸಂಭವಿಸಿದ ಅದುರುವಿಕೆಗೆ ಎಷ್ಟೋ ಕಿಲೋಮೀಟರ್ ಮೇಲಿರುವ ಭೂಮಿಯ ಮೇಲ್ಮೈ ಸಹಾ ಅದುರುತ್ತದೆ. ಇದೇ ಭೂಕಂಪ.

ಭೂಕಂಪದಿಂದ ನೇರವಾಗಿ ಸಾವು ಸಂಭವಿಸುವುದಿಲ್ಲ...!

ಭೂಕಂಪದಿಂದ ನೇರವಾಗಿ ಸಾವು ಸಂಭವಿಸುವುದಿಲ್ಲ...!

ವಾಸ್ತವವಾಗಿ ಭೂಕಂಪದಿಂದ ಸಾವು ನೋವು ಸಂಭವಿಸುವುದಿಲ್ಲ. ಆ ಭಾಗದಲ್ಲಿರುವ ಕಟ್ಟಡಗಳು, ಮರ ಗಿಡ, ಮನೆಗಳು ಕುಸಿದು ಅದರಡಿಯಲ್ಲಿ ಸಿಲುಕಿಯೇ ಸಾವು ಸಂಭವಿಸುತ್ತದೆ. ಆಗಾಗ ಭೂಮಿಯ ಮೇಲ್ಮೈಯ ಮೇಲೆ ಅತಿವೇಗದಲ್ಲಿ ಬೀಳುವ ಉಲ್ಕೆಗಳೂ ಭೂಕಂಪ ಉಂಟುಮಾಡುತ್ತವೆ. ಕಲ್ಲು ಒಡೆಯಲು ಉಪಯೋಗಿಸುವ ಸ್ಫೋಟಕ, ಗಣಿಯಲ್ಲಿ ಭೂಮಿಯನ್ನು ಕೆದಕಲು ಉಪಯೋಗಿಸುವ ಸ್ಫೋಟಕ, ಅಣುಶಕ್ತಿಯಾಧಾರಿತ ಸಾಧನಗಳ ಪರೀಕ್ಷೆಯಲ್ಲಿಯೂ ಭೂಮಿ ಅದುರುತ್ತದೆ. ಆದರೆ ಈ ಅದುರುವಿಕೆಯಿಂದಲೇ ನೇರವಾಗಿ ಸಾವು ಸಂಭವಿಸುವುದಿಲ್ಲ.

ಭೂಕಂಪಕ್ಕೆ ಚಂದ್ರ ಮತ್ತು ಸೂರ್ಯನ ಗುರುತ್ವಾಕರ್ಷಣೆಯೂ ಕಾರಣವಾಗಿದೆ

ಭೂಕಂಪಕ್ಕೆ ಚಂದ್ರ ಮತ್ತು ಸೂರ್ಯನ ಗುರುತ್ವಾಕರ್ಷಣೆಯೂ ಕಾರಣವಾಗಿದೆ

ಭೂಮಿಯನ್ನು ಸತತವಾಗಿ ಸೆಳೆಯುವ ಚಂದ್ರ ಮತ್ತು ಸೂರ್ಯನ ಗುರುತ್ವಾಕರ್ಷಣೆಯೂ ಪರೋಕ್ಷವಾಗಿ ಕಾರಣವಾಗಬಹುದು. ಸಮುದ್ರದ ಅಲೆಗಳಿಗೆ ಕಾರಣವಾಗುವ ಈ ಶಕ್ತಿಯೇ ಭೂಮಿಯ ಮೇಲ್ಮೈ ಮೇಲೆ ಅದುರುವಿಕೆಯ ಅಲೆಯನ್ನೂ ಸೃಷ್ಟಿಸಬಹುದು. ಆದರೆ ಈ ಅಲೆಗಳು ಅತಿಸೂಕ್ಷ್ಮ ಕಂಪನಗಳನ್ನು ಗ್ರಹಿಸುವ ಉಪಕರಣಗಳಿಗೆ ಮಾತ್ರ ಗೋಚರವಾಗುವುದರಿಂದ ನಮ್ಮ ಅರಿವಿಗೆ ಬರುವುದೇ ಇಲ್ಲ.

ಒಂದು ವರ್ಷದಲ್ಲಿ ಹತ್ತು ಲಕ್ಷ ಭೂಕಂಪಗಳು ಸಂಭವಿಸುತ್ತವೆ..!

ಒಂದು ವರ್ಷದಲ್ಲಿ ಹತ್ತು ಲಕ್ಷ ಭೂಕಂಪಗಳು ಸಂಭವಿಸುತ್ತವೆ..!

ಇಂದು ಭೂಮಿಯಲ್ಲಿ ಸಂಭವಿಸುವ ಅತಿಸೂಕ್ಷ್ಮ ಭೂಕಂಪವನ್ನು ಸಹಾ ಗ್ರಹಿಸಿ ಅಂಕಿ ಅಂಶಗಳನ್ನು ಕಲೆಹಾಕುವ ಸಂಸ್ಥೆಗಳಿವೆ. ಇದರಲ್ಲಿ ಪ್ರಮುಖವಾದ NEIC or National Earthquake Information Center ಸಂಸ್ಥೆಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಇಡಿಯ ಭೂಮಿಯಲ್ಲಿ ಪ್ರತಿವರ್ಷ ಹತ್ತು ಲಕ್ಷಕ್ಕೂ ಹೆಚ್ಚು ಬಾರಿ ಭೂಮಿ ಅದುರಿದೆ.ಆದರಲ್ಲಿ ವರ್ಷಕ್ಕೆ ಇಪ್ಪತ್ತು ಸಾವಿರದಷ್ಟು ಭೂಕಂಪಗಳು ಗಣನೆಗೆ ತೆಗೆದುಕೊಳ್ಳಬಹುದಾಗಿದ್ದು ಉಳಿದವು ಗ್ರಹಿಕೆಗೇ ನಿಲುಕದಷ್ಟು ನಿರಪಾಯಕಾರಿಯಾಗಿವೆ. ಈ ಇಪ್ಪತ್ತು ಸಾವಿರ ಭೂಕಂಪಗಳು ಸಹಾ ಕೊಂಚ ಆತಂಕ ತರುವಂತಿದ್ದರೂ ಅಪಾಯ ತರಲಾರವು.ಆದರೆ ಸುಮಾರು ನೂರರಷ್ಟು ಭೂಕಂಪಗಳು ಮಾತ್ರ ಹಾನಿ ಸಂಭವಿಸುವಷ್ಟು ಆತಂಕಕ್ಕೆ ಕಾರಣವಾಗಿವೆ.

ಭೂಕಂಪದ ಪರೋಕ್ಷ ಪರಿಣಾಮಗಳೇ ಹೆಚ್ಚು ಸಾವಿಗೆ ಕಾರಣವಾಗುತ್ತವೆ

ಭೂಕಂಪದ ಪರೋಕ್ಷ ಪರಿಣಾಮಗಳೇ ಹೆಚ್ಚು ಸಾವಿಗೆ ಕಾರಣವಾಗುತ್ತವೆ

ವಾಸ್ತವವಾಗಿ ಭೂಕಂಪದ ಪರಿಣಾಮವಾಗಿ ಸಂಭವಿಸುವ ಸುನಾಮಿ ಅಲೆಗಳು, ಕುಸಿಯುವ ಕಟ್ಟಡ, ಜರಿಯುವ ಗುಡ್ಡ, ಹಿಮಬೆಟ್ಟಗಳ ಮೇಲೆ ಟೊಪ್ಪಿಯಂತೆ ಕುಳಿತಿದ್ದ ಹಿಮಪದರ ಸಡಿಲವಾಗಿ ಇಳಿಜಾರಿನಲ್ಲಿ ಭಾರೀ ವೇಗದಲ್ಲಿ ಧಾವಿಸುವುದು (ಅವಲಾಂಚ್), ಜ್ವಾಲಾಮುಖಿ ತೆರೆದುಕೊಳ್ಳುವುದು ಮೊದಲಾದ ಕಾರಣಗಳಿಂದ ಅತಿ ಹೆಚ್ಚು ಸಾವು ಸಂಭವಿಸುತ್ತದೆ.

ಅತಿಹೆಚ್ಚು ಭೂಕಂಪಗಳು 7 ಭೂಪದರ ಜೊತೆಯಾಗುವ ಸ್ಥಳಗಳಲ್ಲಿಯೇ ಸಂಭವಿಸುತ್ತದೆ

ಅತಿಹೆಚ್ಚು ಭೂಕಂಪಗಳು 7 ಭೂಪದರ ಜೊತೆಯಾಗುವ ಸ್ಥಳಗಳಲ್ಲಿಯೇ ಸಂಭವಿಸುತ್ತದೆ

ಗೊಂಡ್ವಾನದಿಂದ ಬೇರ್ಪಟ್ಟು ಪ್ರತ್ಯೇಕ ಖಂಡಗಳಾಗುವಾಗ ಮುಖ್ಯ ಭಾಗಗಳಲ್ಲಿ ಅತಿ ಹೆಚ್ಚು ಒತ್ತಡ ಇರುವ ಸ್ಥಳಗಳಲ್ಲಿ ಭೂಪದರಗಳು ಒಂದಕ್ಕೊಂದು ತಿಕ್ಕುವುದು ಹೆಚ್ಚು. ಈ ಸ್ಥಳಗಳಿರುವ ಒಟ್ಟು ಏಳು ಸ್ಥಳಗಳನ್ನು ಗುರುತಿಸಲಾಗಿದೆ. ಕುತೂಹಲಕರ ಅಂಶವೆಂದರೆ ಈ ಸ್ಥಳಗಳ ಅಕ್ಕಪಕ್ಕದಲ್ಲಿಯೇ ಅತಿಹೆಚ್ಚು ಭೂಕಂಪಗಳು ಸಂಭವಿಸಿವೆ.

ಪೆಸಿಫಿಕ್ ರಿಂಗ್ ಆಫ್ ಫೈರ್ ಸ್ಥಳದಲ್ಲಿ ಶೇ ಎಂಭತ್ತಕ್ಕೂ ಹೆಚ್ಚು ಭೂಕಂಪ ಸಂಭವಿಸಿವೆ

ಪೆಸಿಫಿಕ್ ರಿಂಗ್ ಆಫ್ ಫೈರ್ ಸ್ಥಳದಲ್ಲಿ ಶೇ ಎಂಭತ್ತಕ್ಕೂ ಹೆಚ್ಚು ಭೂಕಂಪ ಸಂಭವಿಸಿವೆ

ಭೂಮಿಯ ಗೋಳದಲ್ಲಿ ಭಾರತವಿರುವ ಭಾಗದ ವಿರುದ್ಧ ಭಾಗದಲ್ಲಿ ಫೆಸಿಫಿಕ್ ಸಾಗರ ಎಲ್ಲೆಲ್ಲಿ ತೀರವನ್ನು ಹೊಂದಿದೆಯೋ ಅಲ್ಲೆಲ್ಲಾ ಸ್ಥೂಲವಾಗಿ ಒಂದು ರೇಖೆಯನ್ನೆಳೆದರೆ ಇದನ್ನೇ ಪೆಸಿಫಿಕ್ ರಿಂಗ್ ಆಫ್ ಫೈರ್ ಎಂದು ಕರೆಯಬಹುದು. ಏಕೆಂದರೆ ಈ ಸ್ಥಳಗಳಲ್ಲಿಯೇ ವಿಶ್ವದಲ್ಲಿ ಇದುವರೆಗೆ ಸಂಭವಿಸಿದ ಭೂಕಂಪಗಳ ಪೈಕಿ ಶೇಖಡಾ ಎಂಭತ್ತಕ್ಕೂ ಹೆಚ್ಚು ಭೂಕಂಪಗಳು ಸಂಭವಿಸಿವೆ. ಗೊಂಡ್ವಾನದಿಂದ ಬೇರ್ಪಟ್ಟ ಬಳಿಕ ನೆಲದಾಳದಲ್ಲಿ ಭೂಪದರಗಳು ಒಂದರ ಮೇಲೊಂದು ಜಾರುತ್ತಿರುವುದು ಈ ಸ್ಥಳಗಳಲ್ಲೇ ಹೆಚ್ಚು.

ಪೆಸಿಫಿಕ್ ರಿಂಗ್ ಆಫ್ ಫೈರ್ ಬಿಟ್ಟರೆ ಹೆಚ್ಚು ಭೂಕಂಪ ಸಂಭವಿಸಿರುವುದು ಆಲ್ಪೈಡ್ ಬೆಲ್ಟ್‌ನಲ್ಲಿ

ಪೆಸಿಫಿಕ್ ರಿಂಗ್ ಆಫ್ ಫೈರ್ ಬಿಟ್ಟರೆ ಹೆಚ್ಚು ಭೂಕಂಪ ಸಂಭವಿಸಿರುವುದು ಆಲ್ಪೈಡ್ ಬೆಲ್ಟ್‌ನಲ್ಲಿ

ಪೆಸಿಫಿಕ್ ರಿಂಗ್ ಆಫ್ ಫೈರ್ ಇರುವ ವಿರುದ್ಧ ಸ್ಥಳದಲ್ಲಿ ಅಂದರೆ ಭಾರತ, ತುರ್ಕಿ ಮತ್ತು ಪಾಕಿಸ್ತಾನ ಇರುವ ಆಲ್ಪೈಡ್ ಬೆಲ್ಟ್ ಎಂಬ ಪ್ರದೇಶದಲ್ಲಿ ಪೆಸಿಫಿಕ್ ರಿಂಗ್ ಆಫ್ ಫೈರ್ ಸ್ಥಳಗಳಲ್ಲಿ ಆಗುವ ಸ್ಥಳವನ್ನು ಹೊರತುಪಡಿಸಿದರೆ ಅತಿಹೆಚ್ಚು ಭೂಕಂಪ ಸಂಭವಿಸುತ್ತದೆ.

ಭೂಕಂಪದ ಶಕ್ತಿ

ಭೂಕಂಪದ ಶಕ್ತಿ

ಒಂದು ವೇಳೆ ಭೂಕಂಪದಿಂದ ಬಿಡುಗಡೆಯಾದ ಶಕ್ತಿಯನ್ನು ಸಂಗ್ರಹಿಸಲು ಸಾಧ್ಯವಾದರೆ ಅದು 1945ರಲ್ಲಿ ಎರಡನೇ ಮಹಾಯುದ್ಧದ ವೇಳೆ ಜಪಾನಿನ ಹಿರೋಶಿಮಾ ನಗರದ ಮೇಲೆ ಪ್ರಯೋಗಿಸಿದ ಅಣುಬಾಂಬ್ ಗಿಂತಲೂ ನೂರು ಪಟ್ಟು ಹೆಚ್ಚು ಶಕ್ತಿಯುತವಾಗಿರುತ್ತದೆ.

ಭೂಕಂಪಕ್ಕೂ ಮೊದಲು ಕೆರೆ ಮತ್ತು ಕೊಳಗಳಿಂದ ಕಮಟು ವಾಸನೆ ಬರುತ್ತದೆ

ಭೂಕಂಪಕ್ಕೂ ಮೊದಲು ಕೆರೆ ಮತ್ತು ಕೊಳಗಳಿಂದ ಕಮಟು ವಾಸನೆ ಬರುತ್ತದೆ

ಭೂಕಂಪ ಸಂಭವಿಸುವ ಮೊದಲು ಕೆಲವೆಡೆ ಭೂಮಿಯ ಬಿರುಕಿನಿಂದ ಕೆಲವು ಅನಿಲಗಳು ಹೊರಸೂಸಿ ಅಂತರ್ಜಲದ ಮೂಲಕ ಕೊಳ ಮತ್ತು ಕೆರೆಗಳಿಗೆ ತಲುಪಿ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಈ ಅನಿಲಗಳು ಕೊಂಚ ಕಮಟುವಾಸನೆಯನ್ನು ಹೊಂದಿರುತ್ತವೆ. ಅಲ್ಲದೇ ಈ ಅನಿಲ ಬಿಸಿಯಾಗಿರುವುದರಿಂದ ನೀರು ಕೊಂಚ ಬಿಸಿಯೂ ಆಗುತ್ತದೆ. ಒಂದು ವೇಳೆ ಇವೆರಡೂ ಗಮನಕ್ಕೆ ಬಂದರೆ ಭೂಕಂಪದ ಮುನ್ಸೂಚನೆಯನ್ನು ಪಡೆಯಬಹುದು.

ದೊಡ್ಡ ಭೂಕಂಪಕ್ಕೂ ಮುನ್ನ ಮತ್ತು ನಂತರ ಕೆಲವು ಚಿಕ್ಕ ಭೂಕಂಪಗಳು ಸಂಭವಿಸುತ್ತವೆ

ದೊಡ್ಡ ಭೂಕಂಪಕ್ಕೂ ಮುನ್ನ ಮತ್ತು ನಂತರ ಕೆಲವು ಚಿಕ್ಕ ಭೂಕಂಪಗಳು ಸಂಭವಿಸುತ್ತವೆ

ಯಾವುದೇ ಭೂಕಂಪ ಒಂಟಿಯಾಗಿ ಬರುವುದಿಲ್ಲ. ದೊಡ್ಡ ಭೂಕಂಪ ಸಂಭವಿಸುವ ಮೊದಲು ಹಲವು ಚಿಕ್ಕ ಚಿಕ್ಕ ಕಂಪನಗಳು ಸಂಭವಿಸುತ್ತವೆ. (foreshocks). ಆದರೆ ಇವುಗಳು ಪ್ರಬಲ ಭೂಕಂಪದ ಮುನ್ಸೂಚನೆಯೋ. ಅಥವಾ ಅತಿ ಕಡಿಮೆ ಪ್ರಾಬಲ್ಯದ ಪ್ರಮುಖ ಕಂಪನವೋ ಹೇಳಲಾಗದುದರಿಂದ ಭೂಕಂಪದ ಮುನ್ಸೂಚನೆಯನ್ನು ಸ್ಪಷ್ಟವಾಗಿ ನೀಡಲು ಸಾಧ್ಯವಿಲ್ಲ. ಪ್ರಬಲ ಭೂಕಂಪದ ಬಳಿಕವೂ ಹಲವು ಚಿಕ್ಕ ಚಿಕ್ಕ ಕಂಪನಗಳು ಸಂಭವಿಸುತ್ತವೆ (aftershocks). ಇವು ಕೆಲವೊಮ್ಮೆ ಕೆಲವು ದಿನಗಳವರೆಗೂ, ಕೆಲವೊಮ್ಮೆ ವಾರಗಟ್ಟಲೆ, ವರ್ಷಗಟ್ಟಲೆಯೂ ಮುಂದುವರೆಯಬಹುದು.

ಭೂಕಂಪ ಕೆಲವು ಕ್ಷಣದಿಂದ ಹತ್ತು ನಿಮಿಷಗಳವರೆಗೂ ಸಂಭವಿಸಬಹುದು

ಭೂಕಂಪ ಕೆಲವು ಕ್ಷಣದಿಂದ ಹತ್ತು ನಿಮಿಷಗಳವರೆಗೂ ಸಂಭವಿಸಬಹುದು

ಬಹುತೇಕ ಭೂಕಂಪಗಳು ಕೆಲವು ಕ್ಷಣಗಳಷ್ಟು ಹೊತ್ತು ಮಾತ್ರ ಸಂಭವಿಸಬಹುದು. ಸಾಮಾನ್ಯವಾಗಿ ಹತ್ತು ಹದಿನೈದು ಕ್ಷಣಗಳು ಮಾತ್ರ. ಆದರೆ 2004ರಲ್ಲಿ ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ ಭೂಕಂಪ ಹತ್ತು ನಿಮಿಷಗಳಷ್ಟು ಕಾಲ ಭೂಮಿಯನ್ನು ಅದುರಿಸಿತ್ತು.

ಡಿಸೆಂಬರ 26, 2004ರಲ್ಲಿ ಸಂಭವಿಸಿದ ಭೂಕಂಪ ಹಲವು ಸುನಾಮಿ ಅಲೆಗಳನ್ನು ಸೃಷ್ಟಿಸಿತ್ತು

ಡಿಸೆಂಬರ 26, 2004ರಲ್ಲಿ ಸಂಭವಿಸಿದ ಭೂಕಂಪ ಹಲವು ಸುನಾಮಿ ಅಲೆಗಳನ್ನು ಸೃಷ್ಟಿಸಿತ್ತು

ಸಾಗರದ ತಳದಲ್ಲಿರುವ ನೆಲದಲ್ಲಿ ಭೂಕಂಪ ಸಂಭವಿಸಿದರೆ ಅದರ ಮೇಲಿರುವ ಸಾಗರದಲ್ಲಿ ದೈತ್ಯ ಅಲೆಗಳು ಏಳುತ್ತವೆ. ಅಲ್ಲಿಂದ ವೃತ್ತಾಕಾರದಲ್ಲಿ ಹೊರನಡೆಯುವ ಈ ಅಲೆಗಳೇ ಸುನಾಮಿ ಅಲೆಗಳು. ೧೩) ಡಿಸೆಂಬರ 26, 2004ರಲ್ಲಿ ಸಂಭವಿಸಿದ ಇಂತಹ ಒಂದು ಭೂಕಂಪ ಒಂದರ ಹಿಂದೊಂದರಂತೆ ನೂರಡಿಹೂ ಎತ್ತರದ ಹಲವು ಅತಿದೈತ್ಯ ಅಲೆಗಳನ್ನು ಸೃಷ್ಟಿಸಿ ಹನ್ನೊಂದು ರಾಷ್ಟ್ರಗಳಲ್ಲಿ 225,000 ಜನರನ್ನು ಬಲಿ ತೆಗೆದುಕೊಂಡಿದೆ.

ಸುನಾಮಿ ಅಲೆಗಳ ವೇಗ 970 ಕಿ.ಮೀ

ಸುನಾಮಿ ಅಲೆಗಳ ವೇಗ 970 ಕಿ.ಮೀ

ಭೂಕಂಪದಂತೆಯೇ ಸುನಾಮಿ ಅಲೆಗಳ ಪ್ರಕೋಪವನ್ನು ಮುನ್ಸೂಚನೆ ಮೂಲಕ ನೀಡಲು ಸಾಧ್ಯವಿಲ್ಲ. ಏಕೆಂದರೆ ಭೂಕಂಪ ನಡೆದ ಸ್ಥಳದಲ್ಲಿ ಈ ಅಲೆಗಳು ನೀರಿನ ಮಟ್ಟಕ್ಕಿಂತ ಕೆಲವು ಅಡಿಗಳಷ್ಟು ಮಾತ್ರ ಮೇಲೇರಿಸುತ್ತವೆ. ಆದರೆ ಈ ಅಲೆಗಳು 970 ಕಿ.ಮೀ ವೇಗದಲ್ಲಿ ವೃತ್ತಾಕಾರವಾಗಿ ಅಗಲವಾಗುತ್ತಾ ಹೋಗುತ್ತವೆ ಹಾಗೂ ತೀರ ಹತ್ತಿರಾದಂತೆ ತಮ್ಮ ನೈಜ ಎತ್ತರವನ್ನು ಪಡೆದುಕೊಳ್ಳುತ್ತವೆ. ಸುಮಾರು ನೂರಡಿಯಷ್ಟು ಎತ್ತರದ ಅಲೆ ತೀರಪ್ರದೇಶದ ಮೇಲೆ ಧೊಪ್ಪನೆ ಬಿದ್ದು ಎಷ್ಟೋ ಕಿಲೋಮೀಟರ್ ವರೆಗೆ ಧಾವಿಸುತ್ತದೆ. ಅಪಾರ ದ್ರವ್ಯರಾಶಿ ಇರುವ ಸಾಗರದ ನೀರು ಅಷ್ಟೆತ್ತರದಿಂದ ಬಿದ್ದ ಹೊಡೆತಕ್ಕೆ ಕಟ್ಟಡಗಳು ತರಗೆಲೆಯಂತೆ ಉದುರಿ ಕೊಚ್ಚಿಹೋಗುತ್ತವೆ.

ಭೂಮಿಯ ಮೇಲಿನ ಅಲೆಗಳೂ 360ಕಿಮೀ ವೇಗದಲ್ಲಿ ಹರಡುತ್ತವೆ

ಭೂಮಿಯ ಮೇಲಿನ ಅಲೆಗಳೂ 360ಕಿಮೀ ವೇಗದಲ್ಲಿ ಹರಡುತ್ತವೆ

ಭೂಮಿಯಾಳದಲ್ಲಿ ಸಂಭವಿಸಿದ ಭೂಕಂಪದಿಂದ ನೆಲಮಟ್ಟದಲ್ಲಿ ಹರಡುವ ಭೂಕಂಪದ ಅಲೆಗಳು ಸಹಾ ಅತಿವೇಗದಲ್ಲಿ ಮತ್ತು ವೃತ್ತಾಕಾರದಲ್ಲಿ ವಿಸ್ತರಿಸುತ್ತಾ ಹೋಗುತ್ತವೆ. ಹಾಗಾಗಿ ಭೂಕಂಪ ಸಂಭವಿಸಿದ ಸ್ಥಳದ ಸುತ್ತ ಮುತ್ತ ಇರುವ ಊರುಗಳಲ್ಲಿಯೂ ವ್ಯಾಪಕ ಹಾನಿಯಾಗುತ್ತದೆ. ಕಳೆದ ವಾರ ನೇಪಾಳದಲ್ಲಿ ಸಂಭವಿಸಿದ ಭೂಕಂಪ ಕಾಠ್ಮಂಡು ನಗರದಿಂದ ಎಂಭತ್ತು ಕಿ.ಮೀ ದೂರವಿದೆ. ಆದರೂ ಕಾಠ್ಮಂಡು ನಗರದಲ್ಲಿ ಭೂಕಂಪ ಸಂಭವಿಸಿ ಅಪಾರ ಸಾವುನೋವು ಸಂಭವಿಸಿದೆ.

ಅತಿಹೆಚ್ಚು ಭೂಕಂಪ ಸಂಭವಿಸುವ ಪ್ರದೇಶ-ಜಪಾನ್

ಅತಿಹೆಚ್ಚು ಭೂಕಂಪ ಸಂಭವಿಸುವ ಪ್ರದೇಶ-ಜಪಾನ್

ಜಗತ್ತಿನಲ್ಲಿಯೇ ಅತಿಹೆಚ್ಚು ಭೂಕಂಪ ಸಂಭವಿಸುವ ದೇಶ ಜಪಾನ್. ಇಲ್ಲಿ ಪ್ರತಿವರ್ಷ ಸಾವಿರಾರು ಭೂಕಂಪ ಸಂಭವಿಸುತ್ತದೆ. ಆದರೆ ಅವುಗಳಲ್ಲಿ ಬಹುತೇಕ ಭೂಕಂಪಗಳು ಗಮನಕ್ಕೆ ಬಾರದಷ್ಟು ಅಲ್ಪ ಪ್ರಾಬಲ್ಯ ಹೊಂದಿರುತ್ತವೆ.

ಭೂಗೋಳದ ಉತ್ತರಾರ್ಧದಲ್ಲಿ ಹೆಚ್ಚು ಭೂಕಂಪ ಸಂಭವಿಸುತ್ತವೆ

ಭೂಗೋಳದ ಉತ್ತರಾರ್ಧದಲ್ಲಿ ಹೆಚ್ಚು ಭೂಕಂಪ ಸಂಭವಿಸುತ್ತವೆ

ಇದುವರೆಗೆ ಸಂಭವಿಸಿದ ಭೀಕರ ಭೂಕಂಪಗಳ ಅಂಕಿ ಅಂಶಗಳನ್ನು ಗಮನಿಸಿದರೆ ಬಹುತೇಕ ಭೂಕಂಪಗಳು ಭೂಗೋಳದ ಉತ್ತರಾರ್ಧದಲ್ಲಿಯೇ ಸಂಭವಿಸಿವೆ.

ಭೂಮಿಯಾಳದಲ್ಲಿ ಭೂಕಂಪ ಸಂಭವಿಸಿದ ಸ್ಥಳಕ್ಕೆ epicenter ಎಂದು ಕರೆಯುತ್ತಾರೆ

ಭೂಮಿಯಾಳದಲ್ಲಿ ಭೂಕಂಪ ಸಂಭವಿಸಿದ ಸ್ಥಳಕ್ಕೆ epicenter ಎಂದು ಕರೆಯುತ್ತಾರೆ

ಭೂಕಂಪ ಭೂಮಿಯಾಳದಲ್ಲಿ ಎಲ್ಲೋ ಸಂಭವಿಸಿ ಅದರ ಪರಿಣಾಮ ಅಲೆಗಳ ಮೂಲಕ ಸುತ್ತಲೂ ಹರಡುತ್ತದೆ. ಇದು ಮೊತ್ತ ಮೊದಲು ಆ ಬಿಂದುವಿನ ಮೇಲಿರುವ ಭೂಭಾಗಕ್ಕೆ ಅತಿ ಹೆಚ್ಚು ಕಂಪನವನ್ನು ನೀಡುತ್ತದೆ. ಇದೇ epicenter. ಆದರೆ ನಿಜವಾದ ಭೂಕಂಪ ಸಂಭವಿಸಿದ ಸ್ಥಳ ಭೂಮಿಯಾಳದಲ್ಲಿ (ಅಥವಾ ಸಾಗರತಳದ ನೆಲದ ಆಳದಲ್ಲಿ) ಸಂಭವಿಸಿದ್ದು ಈ ಬಿಂದುವಿಗೆ hypocenter ಎಂದು ಕರೆಯುತ್ತಾರೆ. ಭೂಮಿ ಈ ಬಿಂದುವಿನಿಂದಲೇ ಬಿರುಕು ಬಿಡಲು ತೊಡಗುತ್ತದೆ. ಈ ಬಿರುಕು ಉದ್ದವಾದಷ್ಟೂ ಹಾನಿಯ ಪ್ರಮಾಣ ಹೆಚ್ಚು.

ಭೂಕಂಪದ ಬಳಿಕ ಬರುವ ಚಿಕ್ಕ ಕಂಪನಗಳು ಭೂಮಿಯ ಸ್ತರಗಳು ಹಿಂದೆ ಬರುವುದಾಗಿದೆ

ಭೂಕಂಪದ ಬಳಿಕ ಬರುವ ಚಿಕ್ಕ ಕಂಪನಗಳು ಭೂಮಿಯ ಸ್ತರಗಳು ಹಿಂದೆ ಬರುವುದಾಗಿದೆ

ಮೊದಲ ಪ್ರಬಲ ಭೂಕಂಪ ಬಂದ ಬಳಿಕ ಆ ಪ್ರದೇಶದ ಜನರನ್ನು ಬೇರೆಡೆಗೆ ಸ್ಥಳಾಂತರಿಸುವುದು ಅಥವಾ ಜನರನ್ನು ಮನೆಯಿಂದ ಹೊರಗಿರಲು ಹೇಳಲಾಗುತ್ತದೆ. ಏಕೆಂದರೆ ಪ್ರಬಲ ಭೂಕಂಪದ ಬಳಿಕ ಬರುವ ಚಿಕ್ಕ ಕಂಪನಗಳು (aftershokcs) ಸಹಾ ಸಾಕಷ್ಟು ಪ್ರಬಲವಾಗಿದ್ದು ಈಗಾಗಲೇ ಆಗಿರುವ ವಿನಾಶವನ್ನು ಕೊಂಚ ಹೆಚ್ಚಿಸಬಹುದು. ಆದರೆ ಈ ಕಂಪನಗಳು ಭೂಮಿಯಾಳದಿಂದ ಸಂಭವಿಸಿದ ಭೂಕಂಪವಲ್ಲ. ಬದಲಿಗೆ ಮೊದಲ ಭೂಕಂಪಕ್ಕೆ ಭೂಮಿಯ ಕೆಲವು ಪದರಗಳು ಅದುರಿ ಪಕ್ಕಕ್ಕೆ ಜರುಗಿದ್ದು ನಿಧಾನವಾಗಿ ತನ್ನ ಸ್ವಸ್ಥಾನಕ್ಕೆ ಮರಳುವಾಗ ಆಗುವ ಕಂಪನಗಳಾಗಿವೆ.

ಭೂಕಂಪದ ಅವಧಿಯ ಸರಾಸರಿ ಒಂದು ನಿಮಿಷಗಳು

ಭೂಕಂಪದ ಅವಧಿಯ ಸರಾಸರಿ ಒಂದು ನಿಮಿಷಗಳು

ವಿಶ್ವದ ಪ್ರಮುಖ ಭೂಕಂಪ ಸಂಭವಿಸಿದ ಅವಧಿಯ ಸರಾಸರಿ ತೆಗೆದುಕೊಂಡರೆ ಸರಿಸುಮಾರು ಒಂದು ನಿಮಿಷದ ಲೆಕ್ಕ ಸಿಗುತ್ತದೆ. ಏಕೆಂದರೆ ಬಹುತೇಕ ಭೂಕಂಪಗಳು ಕೆಲವು ಸೆಕೆಂಡುಗಳಷ್ಟೇ ಕಾಲ ಅದುರುತ್ತವೆ.ಒಂದರಿಂದ ನಾಲ್ಕು ನಿಮಿಷಗಳವರೆಗೆ ಅದುರುವ ಭೂಕಂಪಗಳು ಸಾಮಾನ್ಯ ಸಂಖ್ಯೆಯಲ್ಲಿವೆ. ಅತಿಹೆಚ್ಚು ಕಾಲ (ಸುಮಾರು ಹತ್ತು ನಿಮಿಷಗಳು) ಒಂದೆರಡು ಬಾರಿ ಮಾತ್ರ ಸಂಭವಿಸಿವೆ.

ಭೂಕಂಪದ hypocenter ಮೂವತ್ತೆರಡು ಕಿಮೀ ಯಷ್ಟು ಆಳದಲ್ಲೂ ಸಂಭವಿಸಬಹುದು

ಭೂಕಂಪದ hypocenter ಮೂವತ್ತೆರಡು ಕಿಮೀ ಯಷ್ಟು ಆಳದಲ್ಲೂ ಸಂಭವಿಸಬಹುದು

ಭೂಕಂಪದ ಪ್ರಾಬಲ್ಯತೆಯನ್ನು ಅಳೆಯುವ ರಿಕ್ಟರ್ ಮಾಪಕ epicenter ನಲ್ಲಿರುವ ಭೂಕಂಪದ ಪ್ರಮಾಣವನ್ನು ಕಲೆಹಾಕಿ ಒಂದು ಮಾಪನವನ್ನು ನೀಡುತ್ತದೆ. ಆದರೆ ಭೂಮಿಯಾಳದ hypocenter ನಲ್ಲಿ ಸಂಭವಿಸಿದ ಭೂಕಂಪದ ಪ್ರಾಬಲ್ಯ ಎಷ್ಟೋ ಸಾವಿರ ಪಟ್ಟುಹೆಚ್ಚಿರುತ್ತದೆ. epicenterನ ಪ್ರಾಬಲ್ಯತೆ ಮತ್ತು ಭೂ ಅಲೆಗಳು ಹರಡುವ ದಿಕ್ಕನ್ನು ಅನುಸರಿಸಿ ಭೂಕಂಪದ hypocenter ಎಷ್ಟು ಆಳ

ರಿಕ್ಟರ್ ಮಾಪನ ಹೇಗೆ?

ರಿಕ್ಟರ್ ಮಾಪನ ಹೇಗೆ?

ಪತ್ರಿಕೆಗಳಲ್ಲಿ ಭೂಕಂಪದ ಮಾಪನದ ಬಗ್ಗೆ ಬರುವ ಮಾಹಿತಿ ಸಾಮಾನ್ಯರಿಗೆ ಸುಲಭವಾಗಿ ಗ್ರಹಿಕೆಗೆ ನಿಲುಕುವುದಿಲ್ಲ. ಏಕೆಂದರೆ ಈ ಮಾಪನ ಲಾಗರಿಥಮಿಕ್ ಅಳತೆಯಲ್ಲಿದೆ. ನಮ್ಮ ಲೆಕ್ಕಾಚಾರಗಳು ನೂರು ಇನ್ನೂರು ಮುನ್ನೂರು ಈ ತರಹ ಏರಿಕೆ ಕ್ರಮದಲ್ಲಿದ್ದರೆ ರಿಕ್ಟರ್ ಮಾಪನದಲ್ಲಿ ಒಂದೊಂದು ಅಂಕೆಯೂ ಅಷ್ಟು ಪ್ರಮಾಣದ ಸೊನ್ನೆಗಳನ್ನು ಒಂದರ ಮುಂದೆ ಹಾಕಿದಂತಿರುತ್ತದೆ. ಉದಾಹರಣೆಗೆ 5.0 ಎಂದರೆ ಒಂದರ ಮುಂದೆ ಐದು ಸೊನ್ನೆ ಹಾಕಿದರೆ ಎಷ್ಟು ಪ್ರಬಲವಿರುತ್ತದೋ ಅಷ್ಟು. ಹಾಗಾಗಿ 8.0 ಪ್ರಾಬಲ್ಯತೆ ಇರುವ ಭೂಕಂಪ 5.0 ಕ್ಕಿಂದಲೂ ಸಾವಿರ ಪಟ್ಟು ಹೆಚ್ಚಿರುತ್ತದೆ. (ಮೂರು ಪಟ್ಟು ಅಲ್ಲ!). ಇದುವರೆಗೆ ಸಂಭವಿಸಿದ ಭೂಕಂಪಗಳ ಅಂಕಿ ಅಂಶಗಳನ್ನು ಗಮನಿಸಿದರೆ 6.0 - 6.4 ರ ನಡುವೆ ಇರುವ ರಿಕ್ಟರ್ ಮಾಪಕ ಅತಿಹೆಚ್ಚು ಸಂಭವಿಸಿರುವುದು ಗಮನಕ್ಕೆ ಬರುತ್ತದೆ.

ರಿಕ್ಟರ್ ಮಾಪಕ -ಶೇಖಡಾವಾರು ಸಂಭವತೆ

8.5 - 8.9 0.3

8.0 - 8.4 1.1

7.5 - 7.9 3.1

7.0 - 7.4 15

6.5 - 6.9 56

6.0 - 6.4 210

6.0ಕ್ಕಿಂತಲೂ ಕಡಿಮೆ ಇರುವ ಭೂಕಂಪಗಳು ಭೂಮಿಯನ್ನು ಅದುರಿಸಿ ಸಾಮಾನುಗಳನ್ನು ಬೀಳುಸುವಷ್ಟು ಪ್ರಾಬಲ್ಯ ಹೊಂದಿರುತ್ತವೆ. 6.0ಕ್ಕಿಂತಲೂ ಹೆಚ್ಚಿನ ಪ್ರಾಬಲ್ಯ ವಿನಾಶಕ್ಕೆ ಕಾರಣವಾಗುತ್ತವೆ.

English summary

Interesting Facts about Earthquake

Our earth consists of several tectonic plates. These plates keep moving constantly. As these plates move, huge pressure is generated which create cracks on earth’s surface or crust. This pressure is then released through these cracks.
X
Desktop Bottom Promotion