For Quick Alerts
ALLOW NOTIFICATIONS  
For Daily Alerts

ನಮ್ಮನ್ನು ಅತೀವ ಮುಜುಗರಕ್ಕೀಡು ಮಾಡಿದ ಆ ಸವಿ ನೆನಪುಗಳು!

|

ಮನುಷ್ಯ ಸಂಘಜೀವಿ. ಸಮಾಜದಲ್ಲಿದ್ದಾಗ ಕೆಲವೊಂದು ನಿಯಮಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯ. ಉದಾಹರಣೆಗೆ ಮೈಪೂರ್ತಿ ಬಟ್ಟೆ ತೊಡುವುದು, ಶುಚಿಯಾಗಿರುವುದು, ಒಪ್ಪವಾಗಿ ತಲೆ ಬಾಚಿಕೊಳ್ಳುವುದು ಮೊದಲಾದವು. ಈ ಸ್ಥಿತಿಯಲ್ಲಿ ನಾವು ಎಲ್ಲರೊಂದಿಗೆ ಮನಃಪೂರ್ವಕವಾಗಿ ಬೆರೆತು ಕ್ಷಣಗಳನ್ನು ಸಂತೋಷವಾಗಿ ಕಳೆಯುತ್ತೇವೆ. ಆದರೆ ಕೆಲವೊಮ್ಮೆ ನಮಗೆ ಅರಿವಿಲ್ಲದಂತೆಯೇ ಕೆಲವು ಕ್ಷಣಗಳಲ್ಲಿ ಪರಿಸ್ಥಿತಿ ಇಕ್ಕಟ್ಟಾಗಿ ಅತೀವ ಮುಜುಗರ ತರಿಸುತ್ತದೆ.

ಉದಾಹರಣೆಗೆ ತರಗತಿಯೊಂದರಲ್ಲಿ ಪಾಠ ಹೇಳುತ್ತಿದ್ದಾಗ ಉಪಾಧ್ಯಾಯರ ಹೊಟ್ಟೆಯಲ್ಲಿ ವಾಯುಪ್ರಕೋಪ ವಿಪರೀತವಾಗಿ ಸದ್ದಿಲ್ಲದೇ ಶಮನಗೊಳಿಸುವ ಯತ್ನದಲ್ಲಿ ಕೊಂಚ ಎಡವಟ್ಟಾಗಿ ಚಿಕ್ಕದಾಗಿ ಸದ್ದಾದಾಗ ವಿದ್ಯಾರ್ಥಿಗಳು ಹೆಂಚು ಹಾರಿ ಹೋಗುವಂತೆ ನಕ್ಕಾಗ ಆ ಕ್ಷಣ ಉಪಾಧ್ಯಾಯರಿಗೆ ವಿಪರೀತ ಮುಜುಗರ ತರಿಸುತ್ತದೆ. ನಾವೆಲ್ಲರೂ ಇಂತಹ ಸಂಗಿಗ್ಧದ ಪರಿಸ್ಥಿತಿಗೆ ಒಂದಲ್ಲಾ ಒಂದು ರೀತಿ ಒಳಗಾಗಿಯೇ ಇರುತ್ತೇವೆ. ಇಂತಹ ಪರಿಸ್ಥಿತಿಗಳಲ್ಲಿ ಅತೀವ ಮುಜುಗರಕ್ಕೀಡು ಮಾಡುವ ಕೆಲವು ಸಾಮಾನ್ಯ ಪ್ರಸಂಗಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಹಲ್ಲಿನಲ್ಲಿ ಆಹಾರದ ತುಣುಕು ಉಳಿದಿರುವುದು
ಕೆಲಸದ ಮೇಲೆ ಅಥವಾ ಬೇರಾವುದೋ ಕಾರಣದಿಂದ ಒಂದು ಹೊತ್ತಿನ ಊಟವನ್ನು ಹೊರಗೆ ಊಟ ಮಾಡಬೇಕಾಗಿ ಬಂದಾಗ ಅಥವಾ ವಾರಾಂತ್ಯದ ಊಟವನ್ನು ಒಳ್ಳೆಯ ಹೋಟೆಲೊಂದರಲ್ಲಿ ಮಾಡುವ ಇರಾದೆಯಿಂದ ಊಟ ಮಾಡಿ ಹೊರಬರುವಾಗ ಮುಕ್ಕಳಿಸಿದ್ದು ಸರಿಯಾಗಿಲ್ಲದಿದ್ದು ಆಹಾರದ ತುಣುಕೊಂದು ಮುಂದಿನ ಹಲ್ಲುಗಳ ನಡುವೆ ಸಿಲುಕಿಕೊಂಡಿದ್ದು ಎದುರಿನವರು ಗಮನಿಸಿದರೆ ಅತಿವ ಮುಜುಗರ ಉಂಟಾಗುತ್ತದೆ. ವಿಪರ್ಯಾಸವೆಂದರೆ ಎದುರಿನವರು ಈ ಬಗ್ಗೆ ಸೊಲ್ಲೇ ಎತ್ತುವುದಿಲ್ಲ. ಅನುಮಾನಗೊಂಡ ನೀವೇ ಕನ್ನಡಿಯಲ್ಲಿ ನೋಡಿಕೊಂಡ ಬಳಿಕವೇ ಹಲ್ಲಿನಲ್ಲಿ ಸಿಲುಕಿಕೊಂಡಿದ್ದ ಆಹಾರದ ಬಗ್ಗೆ ತಿಳಿದಾಗ ಈ ಮುಜುಗರ ಇನ್ನಷ್ಟು ಹೆಚ್ಚುತ್ತದೆ. ನೈಜತೆಯ ಅನುಭವವನ್ನು ನೀಡುವ 15 ಕಾರ್ಟೂನ್ ಪಾತ್ರಗಳು

Embarrassing Moments That We All Face

ಸಾರ್ವಜನಿಕ ಸ್ಥಳದಲ್ಲಿ ಜಾರಿ ಬೀಳುವುದು
ಕೆಲವೊಮ್ಮೆ ಎತ್ತಲೋ ನೋಡುತ್ತಾ ಕಾಲಿನಡಿ ಬಿದ್ದಿದ್ದ ಬಾಳೆಸಿಪ್ಪೆ, ಅಡ್ಡಬಿದ್ದಿರುವ ಇಟ್ಟಿಗೆ, ರಸ್ತೆಯಿಂದ ಕೆಲವೇ ಇಂಚು ಮೇಲೆ ನೇತಾಡುತ್ತಿರುವ ತಂತಿ ಮೊದಲಾದವುಗಳಿಗೆ ಎಡವಿ ಬಿದ್ದಾಕ್ಷಣ ನೆರೆದವರು ಮೊದಲು ಮಾಡುವ ಕೆಲಸವೆಂದರೆ ಮನಃಪೂರ್ತಿ ನಗುವುದು. ಬಳಿಕವೇ ನಿಮ್ಮನ್ನು ಎದ್ದು ನಿಲ್ಲಲು ಕೈನೀಡುವರು. ನೀವು ಏನೂ ತೊಂದರೆಯಾಗಿಲ್ಲ, ಕೊಂಚ ತರಚಿದ ಗಾಯ ಅಷ್ಟೇ ಎಂದು ಮೇಲೆದ್ದು ನಿಲ್ಲುವಿರಿ. ಈ ಕ್ಷಣ ಎಂತಹವರಿಗಾದರೂ ಅತೀವ ಮುಜುಗರ ತರಿಸುತ್ತದೆ. ಈ ಮುಜುಗರ ಈ ಪರಿಸ್ಥಿತಿಗೆ ಕಾರಣವಾದ ವಸ್ತುವಿನ ಮೇಲೆ, ತನ್ಮೂಲಕ ಸಂಬಂಧಪಟ್ಟ ವ್ಯಕ್ತಿಗೆ ಬೈಗುಳದ ಅರ್ಚನೆಯಾಗುತ್ತದೆ.

ಪ್ಯಾಂಟಿನ ಜಿಪ್ ಅಥವಾ ಬಟನ್ ಹಾಕದೇ ಇರುವುದು
ಎಷ್ಟೋ ಸಂದರ್ಭಗಳಲ್ಲಿ ಗಣ್ಯವಕ್ತಿಗಳು ಸಹಾ ತಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವ ಭರದಲ್ಲಿ ಪ್ಯಾಂಟಿನ ಜಿಪ್ ಅಥವಾ ಗುಂಡಿಗಳನ್ನು ಹಾಕಲು ಮರೆತೇ ಬಿಟ್ಟಿರುತ್ತಾರೆ. ಇದೇ ಸ್ಥಿತಿಯಲ್ಲಿ ವೇದಿಕೆಗೆ ಆಗಮಿಸಿದಾಗ ಗಮನಿಸಿದವರು ಕಿಸಕ್ಕನೆ ನಕ್ಕಾಗ, ಪಿಸುಪಿಸು ಮಾತಿನಲ್ಲಿ ಜಿಪ್ ಹಾಕಲು ಮರೆತ್ತಿದ್ದಾರೆ ಎಂದಾಗ ಅತೀವ ಮುಜುಗರಕ್ಕೀಡಾಗುತ್ತೇವೆ.

ಕರ್ಕಶವಾದ ರಿಂಗ್ ಟೋನ್
ಸಾಮಾನ್ಯವಾಗಿ ತಂದೆಯರು ಮಕ್ಕಳಿಗೆ ತಮ್ಮ ಮೊಬೈಲುಗಳನ್ನು ನೀಡುವುದರಲ್ಲಿ ತಾಯಿಯರಿಗಿಂತಲೂ ಹೆಚ್ಚಿನ ಧಾರಾಳಿತನ ತೋರುತ್ತಾರೆ. ಇದರ ಪ್ರಯೋಜನ ಪಡೆದ ಮಕ್ಕಳು ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಮೊಬೈಲಿನ ರಿಂಗ್ ಟೋನ್ ಗಳನ್ನು ಒಂದಾದ ಮೇಲೊಂದರಂತೆ ಬದಲಿಸುತ್ತಾ ಹೋಗುತ್ತಾರೆ. ಯಾವುದೋ ಭೂತದ ಶಬ್ದ ಅಥವಾ ಕರ್ಕಶವಾದ ರಿಂಗ್ ಟೋನ್ ಬಂದಾಕ್ಷಣ ಟೀವಿಯಲ್ಲಿ ಟಾಮ್ ಅಂಡ್ ಜೆರ್ರಿ ಪ್ರಾರಂಭವಾಯಿತೋ ಅಲ್ಲಿಗೇ ಮೊಬೈಲನ್ನು ಬಿಸುಟು ಕಾರ್ಟೂನು ನೋಡಲು ಹೋಗುತ್ತಾರೆ.

ಇತ್ತ ನಿಮ್ಮ ಮೊಬೈಲಿನಲ್ಲಿ ಅದೇ ರಿಂಗ್ ಟೋನ್ ಸ್ಥಾಪನೆಯಾಗಿಬಿಡುತ್ತದೆ. ಬಳಿಕ ಸಾರ್ವಜನಿಕ ಸ್ಥಳದಲ್ಲಿ ನಿಮ್ಮ ಮೊಬೈಲ್ ಕರ್ಕಶವಾಗಿ ಮೊಳಗುತ್ತಿದ್ದಾಗ ಎಲ್ಲರೂ ನಿಮ್ಮತ್ತಲೇ ನೋಡುತ್ತಿದ್ದರೂ ನಿಮಗೆ ಪರಿಚಿತವಲ್ಲದ ಈ ರಿಂಗ್ ಟೋನ್ ನಿಮ್ಮದಲ್ಲ ಎಂದೇ ಭಾವಿಸಿ ಬೇರೆಯವರ ಕಡೆಗೆ ನೋಡುತ್ತೀರಿ. ಕಡೆಗೆ ತಡವಿ ನಿಮ್ಮ ಮೊಬೈಲೇ ಎಂದು ಖಚಿತವಾದಾಗ ಅಕ್ಕಪಕ್ಕದವರೆಲ್ಲಾ ನಿಮ್ಮನ್ನು ನೋಡುವ ನೋಟ ಅತ್ಯಂತ ಮುಜುಗರಕ್ಕೀಡುಮಾಡುತ್ತದೆ.

ಎದುರಿನವರೊಂದಿಗೆ ವಿಶ್ವಾಸದೊಂದಿಗೆ ಮಾತನಾಡಿದ ಬಳಿಕವೂ ನೆನಪು ಹೆಸರಿಗೆ ಬಾರದೇ ಇರುವುದು
ಸಾಮಾನ್ಯವಾಗಿ ವರ್ಷಕ್ಕೊಂದುಬಾರಿಯೋ ಎರಡು ವರ್ಷಕ್ಕೊಂದು ಬಾರಿಯೋ ವಿದೇಶದಲ್ಲಿ ಕೆಲಸ ಮಾಡುತ್ತಿರುವವರು ಊರಿಗೆ ಬಂದಾಗ ಅನುಭವಿಸುವ ನಿತ್ಯದ ಮುಜುಗರ ಇದು. ಏನೆಂದರೆ ತುಂಬಾ ದಿನಗಳ ಬಳಿಕ ಊರಿಗೆ ಮರಳಿದಾಗ ಕೆಲವು ಮುಖಗಳು ಪರಿಚಿತವೆಂಬಂತೆ ಕಂಡುಬಂದರೂ ಅವರ ಹೆಸರು ನೆನಪಿಗೆ ಬಾರದೇ ಇರುವುದು. ಆದರೆ ಎದುರಿನವರು ಮಾತ್ರ ನಿಮಗೆ ಅವರ ಹೆಸರು ತಿಳಿದಿದೆ ಎಂಬಂತೆಯೇ ವ್ಯವಹರಿಸಿ ಪರಸ್ಪರ ಬೀಳ್ಕೊಟ್ಟಾಗ ಮಾತ್ರ ಹೆಚ್ಚು ತೊಂದರೆಯಾಗುವುದಿಲ್ಲ. ಆದರೆ ಒಂದು ವೇಳೆ ಅದೇ ವೇಳೆ ನಿಮ್ಮ ಸ್ನೇಹಿತರೂ ಅಲ್ಲಿ ಆಗಮಿಸಿ ನಿಮ್ಮ ಎದುರಿನವರ ಪರಿಚಯ ಕೇಳಿದಾಗ ಪೇಚಾಟ ಎದುರಾಗುತ್ತದೆ. ಕುಡಿತದ ಮತ್ತಿನಲ್ಲಿ ತೇಲಾಡುವ ಹುಡುಗರು ಬಿಚ್ಚಿಡುವ ಸತ್ಯಾಸತ್ಯತೆ ಏನು?

ಚೈನೀಸ್ ನೂಡಲ್ಸ್ ತಿನ್ನುವಾಗ
ಇತ್ತೀಚೆಗೆ ಎಲ್ಲಾ ಹೋಟೆಲುಗಳಲ್ಲಿಯೂ ಚೈನೀಸ್ ಊಟವನ್ನು ಬಡಿಸಲಾಗುತ್ತದೆ. ಚಿಕ್ಕ ಚಿಕ್ಕ ಕಡ್ಡಿಗಳಂತಿರುವ ಶ್ಯಾವಿಗೆಯಂತಹ ತಿಂಡಿ ತಿನಿಸುಗಳಾದರೆ ಪರವಾಗಿಲ್ಲ, ಚಮಚದಲ್ಲಿ ತಿನ್ನಬಹುದು. ಆದರೆ ಕೆಲವು ಚೈನೀಸ್ ತಿಂಡಿಗಳಲ್ಲಿ (ಉದಾಹರಣೆಗೆ ಪಾಸ್ತಾ) ಶ್ಯಾವಿಗೆಯ ಒಂದೇ ಎಳೆ ಮೀಟರುಗಟ್ಟಲೆ ಉದ್ದವಿದ್ದು, ಟೊಮೇಟೊ ರಸದಲ್ಲಿ ಮುಳುಗಿರುವುದರಿಂದ ಮೂರು ಮುಳ್ಳಿನ ಚಮಚ (ಫೋರ್ಕ್)ಕ್ಕೆ ಸಿಗುವುದೇ ಇಲ್ಲ. ಇದನ್ನು ಚೈನೀಯರು ಸ್ಟ್ರಾದಿಂದ ನೀರನ್ನು ಕುಡಿಯುವ ಹಾಗೆ ಇಡಿಯ ಶ್ಯಾವಿಗೆಯನ್ನು ಎಳೆದುಕೊಳ್ಳಲು ಸಿದ್ಧಹಸ್ತರು. ಆದರೆ ಅನ್ನ ಊಟಮಾಡುವ ನಮಗೆ ಈ ವಿದ್ಯೆ ಗೊತ್ತಿಲ್ಲದೇ ಇರುವುದರಿಂದ ಪಾಸ್ತಾದೇವಿ ನಮಗೆ ಶರಣಾಗುವುದೇ ಇಲ್ಲ. ಪ್ರತಿ ಪ್ರಯತ್ನದಲ್ಲಿಯೂ ಬಾಯಿಯಿಂದ ಜಾರಿ ಮತ್ತೆ ಮತ್ತೆ ತಟ್ಟೆಗೆ ಬೀಳುತ್ತಿರುತ್ತಾಳೆ. ಈ ಪರಿಯನ್ನು ಗಮನಿಸಿದ ಇತರರು ಕಿಸಕ್ಕನೇ ನಕ್ಕಾಗ ಅತೀವ ಮುಜುಗರ ಎದುರಾಗುತ್ತದೆ.


ಇಂತಹ ಹತ್ತು ಹಲವು ಮುಜುಗರಕ್ಕೀಡುಮಾಡುವ ಸಂದರ್ಭಗಳು ನಮಗೆಲ್ಲರಿಗೂ ಉಂಟಾಗುತ್ತವೆ. ಇದರಿಂದ ಪಾರಾಗಲು ಸಾಧ್ಯವಿಲ್ಲ. ಆದರೆ ಈ ಪರಿಸ್ಥಿತಿಯ ಬಳಿಕ ಹಾರ್ದಿಕವಾಗಿ ನಕ್ಕು ಮುಜುಗರದಿಂದ ಹೊರಬರುವುದೇ ಅತ್ಯಂತ ಉತ್ತಮ ಪರಿಹಾರವಾಗಿದೆ. ನಿಮ್ಮ ಪರಿಸ್ಥಿತಿಯನ್ನು ನೋಡಿ ನಕ್ಕವರೇ ನಿಮಗೆ ಸಹಾಯ ಮಾಡುತ್ತಾರೆ. ಮೇಲಿನ ಪರಿಸ್ಥಿತಿಗಳಲ್ಲಿ ನೀವು ಮಾಡಬೇಕಾದುದು ಇಷ್ಟೇ:
೧) ಛೇ ಕಾಲಿನಡಿ ಇದ್ದದ್ದು ಕಣ್ಣಿಗೆ ಕಾಣಲೇ ಇಲ್ಲ, ಇನ್ನು ಮುಂದೆ ಸರಿಯಾಗಿ ನೋಡಿ ನಡೆಯುತ್ತೇನೆ.
೨) ಏಕೆ ನಗುತ್ತಿದ್ದೀರಿ, ನನ್ನ ಮುಖದಲ್ಲಿ ಏನಾಗಿದೆ? ಹಲ್ಲಿನಲ್ಲಿ ಎಲೆ ಸಿಕ್ಕಿಕೊಂಡಿದೆಯೇ. ಒಂದೇ ನಿಮಿಷ ಈಗಲೇ ಸ್ವಚ್ಛಗೊಳಿಸುತ್ತೇನೆ
೩) ಗಮನಕ್ಕೆ ಬಂದ ಬಳಿಕ, ಒಂದು ಕ್ಷಣ ಈಗಲೇ ಬರುತ್ತೇನೆ ಎಂದು ಮರೆಗೆ ಹೋಗಿ ಜಿಪ್ ಹಾಕಿಕೊಂಡು ಏನೂ ಆಗಲಿಲ್ಲವೆಂಬಂತೆ ವರ್ತಿಸುವುದು
೪) ಒಹ್, ನನ್ನ ಮಗ ರಿಂಗ್ ಟೋನ್ ಬದಲಿಸಿಬಿಟ್ಟಿದ್ದಾನೆ, ಗೊತ್ತೇ ಆಗಲಿಲ್ಲ ನೋಡಿ, ದಯವಿಟ್ಟು ಕ್ಷಮಿಸಿ.
೫) ವಾರ್ತಾಲಾಪಕ್ಕೂ ಮುಂಚೆಯೇ 'ತುಂಬಾ ದಿನಗಳ ನಂತರ ಊರಿಗೆ ಬಂದಿದ್ದೇನೆ, ಎಲ್ಲರ ಹೆಸರು ನೆನಪಿಲ್ಲ, ನಿಮ್ಮ ಹೆಸರೂ ನೆನಪಿಲ್ಲ, ದಯವಿಟ್ಟು ನಿಮ್ಮ ಹೆಸರು ಹೇಳುವಿರಾ' ಎಂದು ನೇರವಾಗಿಯೇ ಕೇಳಿ. ಇದರಿಂದ ನಿಮ್ಮ ಎದುರಿನ ವ್ಯಕ್ತಿಯೂ ನಿಮ್ಮಲ್ಲಿ ವಿಶ್ವಾಸ ತಾಳುತ್ತಾರೆ.
೬) ಈ ನೂಡಲ್ಸ್ ತಿನ್ನುವ ಇತರರನ್ನು ನೋಡಿ ಕಲಿಯಿರಿ. ಇಲ್ಲದಿದ್ದರೆ ಪಕ್ಕದ ಟೇಬಲ್‌ನವರಲ್ಲಿ ಇದನ್ನು ತಿನ್ನುವುದು ಹೇಗೆ? ನಾನು ಮೊದಲನೇ ಬಾರಿಗೆ ಪ್ರಯತ್ನಿಸುತ್ತಿರುವುದು ಎಂದು ನೇರವಾಗಿ ಹೇಳಿ. ಖಂಡಿತಾ ಯಾವುದೇ ದೇಶದವರಾದರೂ ನಿಮಗೆ ಸಹಾಯ ಮಾಡಿಯೇ ಮಾಡುತ್ತಾರೆ ಅಂದ ಹಾಗೆ ಲೇಖನದ ಮೊದಲ ಭಾಗದಲ್ಲಿ ಉಪಾಧ್ಯಾಯರಿಗೆ ಎದುರಾದ ಮುಜುಗರದಿಂದ ಹೇಗೆ ಪಾರಾದರು ಗೊತ್ತೇ? ಮಕ್ಕಳೇ, ಹಾಗೆಲ್ಲಾ ನಗಾಡಬಾರದು, ಇದು ದೇವರು ಕೊಟ್ಟ ಪೀಪಿ ಗೊತಾಯ್ತೇ. ನಿಮಗೂ ಇಂತಹ ಪ್ರಸಂಗಳು ಎದುರಾಗಿರಬೇಕಲ್ಲಾ, ಅದನ್ನು ಹೇಗೆ ನಿಭಾಯಿಸಿದಿರಿ ಎಂದು ನಮ್ಮೊಂದಿಗೆ ಹಂಚಿಕೊಳ್ಳುತ್ತೀರಿ ತಾನೇ?
English summary

Embarrassing Moments That We All Face

Life is full of surprises and we do not know when one comes up before us. But not all surprises turn out to be pleasant ones. Some are so humiliating that they get ranked as the most embarrassing moments that happen to everyone. If you have you must be well aware of how embarrassing they are.
Story first published: Tuesday, January 27, 2015, 17:11 [IST]
X
Desktop Bottom Promotion