For Quick Alerts
ALLOW NOTIFICATIONS  
For Daily Alerts

ಇಂತಹ ಚಿತ್ರ ವಿಚಿತ್ರ ಐಷಾರಾಮಿ ಹೋಟೆಲ್‌ಗೆ ಬೆರಗಾಗಲೇಬೇಕು!

By Super
|

"There is no sincerer love than the love of food"- George Bernard Shaw ಜೀವನದಲ್ಲಿ ಆಹಾರದ ಪ್ರೀತಿಯೇ ಅತ್ಯಂತ ಪ್ರಾಮಾಣಿಕ ಪ್ರೀತಿ ಎಂಬ ಜಾರ್ಜ್ ಬರ್ನಾಡ್ ಶಾ ರವರ ಮಾತು ಇಂದು ಅಕ್ಷರಶಃ ಸತ್ಯವಾಗಿದೆ. ಏಕೆಂದರೆ ಯಾವುದೇ ಕಾರ್ಯಕ್ರಮ, ವಾಣಿಜ್ಯ ಮಳಿಗೆ, ಬಸ್, ರೈಲು ನಿಲ್ದಾಣ ಮೊದಲಾದೆಡೆ ಪ್ರಮುಖ ಕಾರಣಕ್ಕೂ ಹೆಚ್ಚಿನ ಮಹತ್ವವನ್ನು ಆಹಾರದ ಮಳಿಗೆಗಳಿಗೆ ನೀಡಲಾಗುತ್ತಿದೆ.

ಯಾರನ್ನಾದರೂ ಭೇಟಿಯಾಗಬೇಕಾದರೆ, ಮಾತುಕತೆ ನಡೆಸಲು, ಸುಮ್ಮನೇ ಹೊರಗಡೆ ತಿರುಗಾಡಲು ಹೋದಾಗಲೂ ಉಪಹಾರಗೃಹಗಳೇ ಈ ಎಲ್ಲಕ್ಕೂ ಸೂಕ್ತ ವೇದಿಕೆ ಒದಗಿಸುತ್ತದೆ. ಹಿಂದೆ ಬಸ್ ನಿಲ್ದಾಣದ ಬಳಿ ಇದ್ದ ತಳ್ಳುಗಾಡಿ ಅಥವಾ ಉಡುಪಿ ಹೋಟೆಲ್‌ಗಳೇ ಈ ಕಾರ್ಯ ನಿರ್ವಹಿಸುತ್ತಿದ್ದವು. ಇಂದಿನ ಉಪಾಹಾರಗೃಹಗಳು ಈ ಆಯಾಮವನ್ನು ಎಂದೋ ಮೀರಿ ಹೋಗಿವೆ. ಬಹುದೊಡ್ಡ ಬಂಡವಾಳದ, ಆಹಾರವನ್ನು ದುಬಾರಿ ವಸ್ತುವಾಗಿ ಮಾರಾಟಮಾಡುವ ಮಳಿಗೆಗಳಾಗಿ ಮಾರ್ಪಟ್ಟಿವೆ. ಹೇಗಿದ್ದ ಮುಂಬೈಯ ತಾಜ್ ಹೋಟೆಲ್, ಈಗ ಹೇಗಾಗಿದೆ ನೋಡಿ!

ಅಂತೆಯೇ ದುಬಾರಿಯಾದ ಉಪಹಾರಗೃಹಗಳಿಗೆ ಭೇಟಿ ನೀಡುವವರೂ ದುಬಾರಿ ಖರ್ಚು ಮಾಡುವವರೇ ಆಗಿರುತ್ತಾರೆ. ಇಂತಹ ಗ್ರಾಹಕರನ್ನು ಸೆಳೆಯುವುದು ಅಷ್ಟು ಸುಲಭವಲ್ಲ. ಏಕೆಂದರೆ ಹೆಚ್ಚು ಹಣ ನೀಡುವ ಗ್ರಾಹಕರಿಗೆ ಆಹಾರಕ್ಕಿಂತ ಆಹಾರ ನೀಡುವ ತಟ್ಟೆ, ಚಮಚಗಳು, ಕುಳಿತುಕೊಳ್ಳುವ ಮೇಜು ಕುರ್ಚಿಗಳು, ಕೋಣೆಯ ಅಂದಚೆಂದ, ಒಳಗಡೆ ನಡೆಯುತ್ತಿರುವ ಹವಾನಿಯಂತ್ರಣ, ವಿವಿಧ ರೀತಿಯ ಆಹಾರಗಳ ಆಯ್ಕೆ, ಆಹಾರಕ್ಕೆ ಆರ್ಡರ್ ನೀಡಿದ ಕೆಲ ಕ್ಷಣಗಳಲ್ಲಿಯೇ ಲಭ್ಯವಾಗುವ ತಕ್ಷಣದ ಸೇವೆ, ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡುವ ವ್ಯವಸ್ಥೆ, ಕಾರು ಪಾರ್ಕ್ ಮಾಡಲು ಸ್ಥಳಾವಕಾಶ, ಒಳಾಂಗಣ ಮತ್ತು ಹೊರಾಂಗಣದ ಹಸಿರು ಮತ್ತು ಹೂಗಿಡಗಳು ಮೊದಲಾದವುಗಳಿಂದ ಮಾತ್ರ ಈ ಗ್ರಾಹಕರನ್ನು ಸೆಳೆಯಬಹುದು.

ಇವರಲ್ಲಿಯೂ ಕೆಲವರು ಎಲ್ಲೂ ಇಲ್ಲದ ಸೇವೆ ಅಥವಾ ಆಕರ್ಷಣೆಯನ್ನು ಬಯಸುತ್ತಾರೆ. ಉದಾಹರಣೆಗೆ ಹೈದರಾಬಾದಿನ ಚಟ್ನೀಸ್ ಹೋಟೆಲ್. ಈ ಹೋಟೆಲಿನೊಳಗೆ ಪಿರಮಿಡ್ಡಿನಾಕಾರದ ಚೌಕಟ್ಟಿನಲ್ಲಿ ನೂರಾರು ವಿಧದ ಚಟ್ನಿಗಳನ್ನು ಮಾಡಿ ಇಟ್ಟಿರುತ್ತಾರೆ. ಗ್ರಾಹಕ ಕೌಂಟರಿನಲ್ಲಿ ಕೊಳ್ಳುವುದು ಇಡ್ಲಿ ಮಾತ್ರ, ಚಟ್ನಿಗಳನ್ನು ಗ್ರಾಹಕ ತಾನೇ ಯಾವುದು ಬೇಕೋ ಆಯ್ದುಕೊಳ್ಳಬಹುದು. ಇದೇ ಇದರ ವೈಶಿಷ್ಟ್ಯ.

ಈ ಪರಿಯನ್ನು ಮೆಚ್ಚುವ ಗ್ರಾಹಕದಿಂದ ಈ ಹೋಟೆಲ್ ಪ್ರತಿದಿನ ತುಂಬಿ ತುಳುಕುತ್ತಿರುತ್ತದೆ. ಭಾರತದಲ್ಲಿಯೇ ಹೀಗಿರಬೇಕಾದರೆ ವಿಶ್ವದ ಇತರೆಡೆ ಇನ್ನೆಷ್ಟು ಪರಿಯ ವೈವಿಧ್ಯತೆ ಇರಬಹುದು? ಕುತೂಹಲ ಮೂಡಿತೇ, ಮುಂದೆ ಓದಿ ಕುತೂಹಲ ತಣಿಸಿಕೊಳ್ಳಿ.

ಕಾಯಾಬುಕಿಯಾ ಟ್ಯಾವರ್ನ್, ಜಪಾನ್

ಕಾಯಾಬುಕಿಯಾ ಟ್ಯಾವರ್ನ್, ಜಪಾನ್

ಜಪಾನ್ ನಾಗರಿಕರು ಬುದ್ದಿವಂತಿಕೆಗೆ ಹೆಸರುವಾಸಿ. ಆದರೆ ಜಪಾನ್ ದೇಶದ ಪ್ರಾಣಿಗಳು? ಈ ಹೋಟೆಲಿಗೆ ಬಂದರೆ ಈ ವಿಷಯವೂ ಕೊಂಚ ಮಟ್ಟಿಗೆ ನಿಜ ಎಂದು ಕಂಡುಬರುತ್ತದೆ. ಏಕೆಂದರೆ ಈ ಹೋಟೆಲಿನಲ್ಲಿ ಅಡುಗೆ ಬಡಿಸುವವರು ಮಾನವರಲ್ಲ, ಮಂಗಗಳು. ಉಟ್ಸೋನೊಮಿಯಾ ಎಂಬ ನಗರದಲ್ಲಿರುವ ಈ ಹೋಟೆಲಿನಲ್ಲಿ ಮಂಗಗಳು ಗ್ರಾಹಕರಿಗೆ ಅಡುಗೆಯನ್ನು ಬಡಿಸುತ್ತವೆ. ಕಾವೋರು ಒಟ್ಸುಕಾ (Kaoru Otsuka) ಎಂಬುವರಿಗೆ ಸೇರಿದ ಈ ಹೋಟೆಲಿನಲ್ಲಿ ಅವರು ತರಬೇತಿ ನೀಡಿದ ಎರಡು ಮಕಾವ್ ಮಂಗಗಳಲ್ಲಿ ಮೊದಲನೆಯದು ಗ್ರಾಹಕರು ಆರ್ಡರ್ ನೀಡಿದ ಪಾನೀಯ ಮತ್ತು ಆಹಾರವನ್ನು ಅಡುಗೆ ಕೋಣೆಯಿಂದ ಮೇಜಿನವರೆಗೆ ತಂದು ಇರಿಸಿದರೆ ಎರಡನೆಯ ಮಂಗ ಗ್ರಾಹಕರಿಗೆ ಊಟಕ್ಕೂ ಮೊದಲು ಕೈ ಒರೆಸಿಕೊಳ್ಳಲು ಬಿಸಿನೀರಿನಲ್ಲಿ ಅದ್ದಿದ ಬಟ್ಟೆಯನ್ನು ನೀಡುವ ಮತ್ತು ಬಳಿಕ ಹಿಂದೆ ಪಡೆದುಕೊಳ್ಳುವ ಕೆಲಸವನ್ನು ನಿರ್ವಹಿಸುತ್ತದೆ. ಈ ಸೇವೆಯನ್ನು ಪಡೆಯಲೆಂದೇ ಗ್ರಾಹಕರು ಈ ಹೋಟೆಲಿಗೆ ಮುಗಿಬೀಳುತ್ತಾರೆ.

ನೀರಿನಡಿಯ ರೆಸ್ಟೋರೆಂಟ್, ಮಾಲ್ಡೀವ್ಸ್

ನೀರಿನಡಿಯ ರೆಸ್ಟೋರೆಂಟ್, ಮಾಲ್ಡೀವ್ಸ್

ಪ್ರವಾಸೋದ್ಯಮವೇ ಪ್ರಮುಖ ಆದಾಯವಾಗಿರುವ ಪುಟ್ಟ ರಾಷ್ಟ್ರ ಮಾಲ್ಡೀವ್ಸ್. ಸಮುದ್ರ ಮಟ್ಟದಿಂದ ಕೆಲವೇ ಇಂಚುಗಳಷ್ಟು ಮೇಲೆದ್ದಿರುವ,ಸಮುದ್ರದ ಮಟ್ಟ ಏರಿದರೆ ಮುಳುಗುವ ಅಪಾಯದಲ್ಲಿರುವ ರಾಷ್ಟ್ರವೂ ಹೌದು. ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಈಗ ನೀರಿನಡಿಯಲ್ಲಿ ಆಹಾರ ಸವಿಯುವ ವಿಚಿತ್ರ ಆಕರ್ಷಣೆ ನೀಡುವ ಮೂಲಕ ಈಗ ಮಾಲ್ಡೀವ್ಸ್‌ನ ಹಿಲ್ಟನ್ ಹೋಟೆಲ್ ರೆಸಾರ್ಟ್ ಮತ್ತು ಸ್ಪಾ ಸಂಸ್ಥೆ ವಿಭಿನ್ನ ಪ್ರಯೋಗ ನಡೆಸಿದೆ. ಸಮುದ್ರಮಟ್ಟಕ್ಕಿಂತ ಐದು ಮೀಟರ್ ಆಳದಲ್ಲಿ ಸುತ್ತಲ ಮೀನುಗಳನ್ನು ನೋಡುತ್ತಾ ಆಹಾರ ಸವಿಯುವ ಅವಕಾಶವಿರುವ ಈ ವ್ಯವಸ್ಥೆಯಲ್ಲಿ ಪ್ರತಿ ಬಾರಿ ಹದಿನಾಲ್ಕು ಗ್ರಾಹಕರಿಗೆ ಮಾತ್ರ ಅವಕಾಶವಿದೆ.

ಚೀನಾದ ಕತ್ತಲ ರೆಸ್ಟೋರೆಂಟ್

ಚೀನಾದ ಕತ್ತಲ ರೆಸ್ಟೋರೆಂಟ್

ಕಹಿ ಔಷಧಿಯನ್ನು ಕುಡಿಯಬೇಕೇ? ಇದಕ್ಕೊಂದು ಚಿಕ್ಕ ತಂತ್ರವಿದೆ. ಮೂಗು ಮುಚ್ಚಿಕೊಂಡು ಗಟಗಟ ಕುಡಿದುಬಿಡುವುದು. ಏಕೆಂದರೆ ಒಂದು ಇಂದ್ರಿಯದ ಗ್ರಹಿಕೆಯನ್ನು ಕಡಿಮೆ ಮಾಡುವ ಮೂಲಕ ಇತರ ಇಂದ್ರಿಯಗಳು ಗ್ರಹಿಸುವ ಪರಿ ಕೊಂಚ ಭಿನ್ನವಾಗಿರುತ್ತದೆ. ಇದೇ ತಂತ್ರವನ್ನು ಚೀನಾದ ರೆಸ್ಟೋರೆಂಟ್ ಒಂದು ಗ್ರಾಹಕರನ್ನು ಸೆಳೆಯುವ ತಂತ್ರವನ್ನಾಗಿ ಬಳಸಿಕೊಂಡಿದೆ. ಈ ಹೋಟೆಲಿನಲ್ಲಿ ಗ್ರಾಹಕರನ್ನು ಮೇಜಿನವರೆಗೆ ಸಹಾಯಕರು ಕೊಂಡೊಯ್ದು ಕುಳ್ಳಿರಿಸಿ ಆಹಾರವನ್ನು ಬಡಿಸುತ್ತಾರೆ. ತಟ್ಟೆಯಲ್ಲಿ ಏನಿದೆ ಎಂದು ಕಣ್ಣಿನಿಂದ ನೋಡಲು ಸಾಧ್ಯವಿಲ್ಲದ ಪರಿಸರದಲ್ಲಿ ಕೇವಲ ರುಚಿ ಮತ್ತು ಸ್ಪರ್ಶದಿಂದ ಊಹಿಸಿಕೊಳ್ಳುತ್ತಾ ತಿನ್ನುವುದು ಗ್ರಾಹಕರಿಗೆ ಭಿನ್ನವಾದ ಅನುಭವ ನೀಡುತ್ತದೆ. ಬಡಿಸುವವರು ಕತ್ತಲಲ್ಲೂ ನೋಡಬಹುದಾದ ಕನ್ನಡಕಗಳನ್ನು ಧರಿಸಿರುವುದರಿಂದ ಎಲ್ಲವನ್ನೂ ನೋಡಬಲ್ಲವರಾಗಿದ್ದು ಗ್ರಾಹಕರಿಗೆ ಅಗತ್ಯವಿರುವ ನೆರವು ನೀಡುತ್ತಾರೆ.

ತೈವಾನಿನ ಶೌಚಾಲಯಮಾದರಿಯ ಹೋಟೆಲ್

ತೈವಾನಿನ ಶೌಚಾಲಯಮಾದರಿಯ ಹೋಟೆಲ್

ನಮ್ಮಲ್ಲಿ ಕದ್ದು ಬೀಡಿ ಸೇದುವವರಿಗೆ ಅತ್ಯಂತ ಪ್ರಶಸ್ತ ಸ್ಥಳವೆಂದರೆ ಶೌಚಾಲಯ. ಅದು ಬಿಟ್ಟರೆ ಮನೆಯಲ್ಲಿ ಅನುಮತಿ ನೀಡದ ಕಡಲೆಕಾಯಿ ಅಥವಾ ಹುರಿಗಡಲೆಯನ್ನು ಕದ್ದು ತಿನ್ನಲು ಬಳಸಬಹುದಷ್ಟೇ ಹೊರತು ಊಟದ ಇತರ ವಸ್ತುಗಳಿಗೆ ಪ್ರವೇಶವಿಲ್ಲ. ಆದರೆ ತೈವಾನಿನ ಈ ರೆಸ್ಟೋರೆಂಟಿನ ಎಲ್ಲಾ ವಸ್ತುಗಳೂ ಶೌಚಾಲಯದಲ್ಲಿರುವ ಬಳಕೆಯ ವಸ್ತುಗಳ ರೂಪದಲ್ಲಿಯೇ ಇವೆ. ಕುಳಿತುಕೊಳ್ಳುವ ಕುರ್ಚಿ, ಮೇಜು, ಬಡಿಸುವ ಬೋಗುಣಿ ತಟ್ಟೆಗಳು, ನೀವೇನಾದರೂ ತೈವಾನಿಗೆ ಹೋದರೆ ಈ ಹೋಟೆಲಿನಲ್ಲಿ ಊಟ ಮಾಡಬಯಸುವಿರಾ?

ಅಹ್ಮದಾಬಾದಿನ ಗೋರಿಗಳ ಹೋಟೆಲು

ಅಹ್ಮದಾಬಾದಿನ ಗೋರಿಗಳ ಹೋಟೆಲು

ಗುಜರಾತಿನ ಅಹ್ಮದಾಬಾದ್ ನಲ್ಲಿರುವ Tombs restaurant ಎಂಬ ಹೋಟೆಲನ್ನು ಹಿಂದೆ ಸ್ಮಶಾನವಿದ್ದ ಸ್ಥಳದಲ್ಲಿ ಕಟ್ಟಲಾಗಿದೆ.ಆದರೆ ಇಲ್ಲಿರುವ ಗೋರಿಗಳನ್ನೇನು ಮಾಡುವುದು? ಅಗಿದು ಬೇರೆಡೆಗೆ ಸಾಗಿಸುವಂತೆಯೂ ಇಲ್ಲ, ಯಾರದ್ದೆಂದು ಗೊತ್ತಿಲ್ಲದೇ ಇರುವುದರಿಂದ ಬೇರೆಯವರಿಗೆ ನೀಡುವಂತೆಯೂ ಇಲ್ಲ. ಈ ಪರಿಸ್ಥಿತಿಯನ್ನು ಇದ್ದ ಹಾಗೇ ಬಳಸಲು ತೊಡಗಿದ ಮಾಲಿಕರು ಗೋರಿಗಳ ನಡುವೆಯೇ ಟೇಬಲ್ಲುಗಳನ್ನಿರಿಸಿ ವ್ಯಾಪಾರ ಪ್ರಾರಂಭಿಸಿದ್ದಾರೆ. ತಮ್ಮ ಜಾಗ ಆಕ್ರಮಿಸಿದ್ದಾರೆ ಎಂದು ಇದುವರೆಗೂ ಯಾವುದೇ ಗೋರಿಯಿಂದ ಕಂಪ್ಲೇಂಟು ಬಂದಿಲ್ಲವಂತೆ.

ನ್ಯೋತೈಮೋರಿ (Nyotaimori), ಜಪಾನ್

ನ್ಯೋತೈಮೋರಿ (Nyotaimori), ಜಪಾನ್

ಭಾರತೀಯರು ಎಂದಿಗೂ ಕೈಗಳನ್ನು ಬಿಟ್ಟು ಬೇರೆ ಯಾವುದೇ ಅಂಗದಿಂದ ಆಹಾರವನ್ನು ಬಡಿಸುವ ಅಥವಾ ಸ್ವೀಕರಿಸುವ ಕಲ್ಪನೆಯನ್ನೂ ಮಾಡಲು ಸಾಧ್ಯವಿಲ್ಲ. ಆದರೆ ಜಪಾನ್ ನಲ್ಲಿ ಮಲಗಿರುವ ಮಹಿಳೆಯ ದೇಹದ ಮೇಲೆ ತಣ್ಣನೆಯ ಆಹಾರವನ್ನಿಟ್ಟು ಬಡಿಸಲಾಗುತ್ತದೆ. ಗ್ರಾಹಕರು ತಮಗಿಷ್ಟವಾದ ಆಹಾರವನ್ನು ಎರಡು ಕಡ್ಡಿಗಳ ಮೂಲಕ ಆರಿಸಿಕೊಳ್ಳಬಹುದು. ಇದೇ ಪುರುಷನ ದೇಹವಾದರೆ ನಾನ್ತೈಮೋರಿ (Nantaimori) ಎಂದು ಕರೆಯಲಾಗುತ್ತದೆ. ಮೇಲ್ನೋಟಕ್ಕೆ ಸುಲಭವಾಗಿ ಕಾಣುವ ಈ ಪರಿ ಅಷ್ಟು ಸುಲಭವಲ್ಲ. ಈ ಮಹಿಳೆ ತನ್ನ ದೇಹದ ಮೇಲೆ ತಣ್ಣಗಿನ ಆಹಾರವನ್ನಿರಿಸಿಕೊಂಡು ಘಂಟೆಗಟ್ಟಲೇ ಅಲ್ಲಾಡದಂತೆ, ತಮ್ಮ ಮೈಮೇಲಿರುವ ಆಹಾರ ಬೀಳದಂತೆ ಶವಾಸನದಲ್ಲಿರಬೇಕು. ಆಹಾರ ಖಾಲಿಯಾಗುತ್ತಿದ್ದಂತೆ ಬೆತ್ತಲೆ ಶರೀರ ಪೂರ್ಣವಾಗಿ ಗ್ರಾಹಕರ ಕಣ್ಣಿಗೆ ತೆರೆದುಕೊಳ್ಳುವುದರಿಂದ ಆ ನೋಟವನ್ನು ಎದುರಿಸಲು ಸಿದ್ಧರಿರಬೇಕು.

ನ್ಯೂಯಾರ್ಕಿನ ನಿಂಜಾ ನ್ಯೂಯಾರ್ಕ್ ಹೋಟೆಲ್

ನ್ಯೂಯಾರ್ಕಿನ ನಿಂಜಾ ನ್ಯೂಯಾರ್ಕ್ ಹೋಟೆಲ್

ಅಮೇರಿಕಾದಲ್ಲಿ ಚೀನೀಯರ ಕರಾಟೆ ಮತ್ತು ಜಪಾನಿನ ನಿಂಜಾ ಕಲೆ ಜನರಿಗೆ ತುಂಬಾ ಪ್ರಿಯವಾಗಿದೆ. ಜನರ ಈ ಹುಚ್ಚನ್ನು ನಗದೀಕರಿಸಲು ಒಂದು ಪ್ರದೇಶವನ್ನು ಜಪಾನಿನ ಹದಿನೈದನೇ ಶತಮಾನದ ಫ್ಯೂಡಲ್ ಗ್ರಾಮದ ರೀತಿಯಂತೆಯೇ ನಿರ್ಮಿಸಲಾಗಿದೆ.

ಕೆನಡಾದ ಮಾಂಟ್ರಿಯಲ್ ನಗರದ 'ಆಗಸದಲ್ಲಿ ಊಟ' (Dinner In The Sky)

ಕೆನಡಾದ ಮಾಂಟ್ರಿಯಲ್ ನಗರದ 'ಆಗಸದಲ್ಲಿ ಊಟ' (Dinner In The Sky)

ನೀವು ಕುಳಿತಿರುವ ಕುರ್ಚಿಯನ್ನು ಸುಮಾರು ಆರಡಿ ಮೇಲಕ್ಕೆತ್ತಿ ಕೆಳಗೆ ನೋಡಲು ಹೇಳಿದರೆ ಹೇಗಿರುತ್ತದೆ? ಮೈ ಜುಮ್ಮೆನ್ನತ್ತದೆಯೇ? ಒಂದು ವೇಳೆ ನೂರಾ ಅರವತ್ತು ಮೀಟರ್ ಮೇಲಕ್ಕೆತ್ತಿದರೆ? ಒಂದು ವೇಳೆ ತಳವಿರುವ ಹಲಗೆಯೊಂದರ ಮೇಲೆ ಮೇಜು ಕುರ್ಚಿಗಳನ್ನು ಜೋಡಿಸಿ ಗ್ರಾಹಕರು ಕುಳಿತ ಬಳಿಕ ಕ್ರೇನ್ ಮೂಲಕ ಇಡಿಯ ಮೇಜನ್ನೇ ಅನ್ನು ನೂರಾ ಅವರತ್ತು ಅಡಿ ಮೇಲಕ್ಕೆತ್ತಲಾಗುತ್ತದೆ. ತಳದ ಮೂಲಕ ನೆಲದ ಎಲ್ಲಾ ಚಟುವಟಿಕೆಗಳು ಚಿಕ್ಕದಾಗಿ ಕಾಣುತ್ತಿರುವಂತೆ ಆಹಾರ ಸೇವಿಸುವ ಮೂಲಕ ಭಿನ್ನವಾದ ಅನುಭವ ನೀಡುತ್ತದೆ.

ಫ್ಲಾರಿಡಾದ ಗುಳ್ಳೆಗಳ ಕೋಣೆ (The Bubble Room, Florida)

ಫ್ಲಾರಿಡಾದ ಗುಳ್ಳೆಗಳ ಕೋಣೆ (The Bubble Room, Florida)

1979ದಲ್ಲಿ ಪ್ರಾರಂಭವಾದ ಹೋಟೆಲಿನ ತುಂಬಾ ಗುಳ್ಳೆಗಳಿರಬಹುದೆಂಬ ಕಲ್ಪನೆ ಇದ್ದರೆ ಅದು ತಪ್ಪು. ಏಕೆಂದರೆ ಮೂರಂತಸ್ತಿನ ಈ ಹೋಟೆಲಿಗೆ ಈ ಹೆಸರು ಬರಲು ಇಲ್ಲಿನ ಪರಿಚಾರಕರು ತೊಡುವ crazu hat ಎಂಬ ಟೊಪ್ಪಿಗಳಾಗಿವೆ. ಇವುಗಳಿಗೆ 'Bubble Scouts' ಎಂಬ ಹೆಸರಿರುವುದರಿಂದ ಈ ಹೋಟೆಲಿಗೆ ಗುಳ್ಳೆಗಳ ಹೆಸರು ಬಂದಿದೆ. ಈ ಟೊಪ್ಪಿಗಳು ಪ್ರತಿದಿನವೂ ಬದಲಾಗುವುದರಿಂದ ಪ್ರತಿಬಾರಿಯೂ ಗ್ರಾಹಕರಿಗೆ ಬೇರೆ ಬೇರೆ ಅನುಭವಗಳಾಗುತ್ತವೆ. ಇದೇ ಕಾರಣಕ್ಕೆ ಈ ಹೋಟೆಲಿಗೆ ಪ್ರತಿದಿನವೂ ಕ್ರಿಸ್ಮಸ್ ಆಚರಿಸುವ ಹೋಟೆಲ್ ಎಂಬ ಅನ್ವರ್ಥನಾಮ ಒದಗಿದೆ.

ನ್ಯೂಜಿಲೆಂಡಿನ ಮರದಮನೆಯಲ್ಲಿರುವ ಹೋಟೆಲ್

ನ್ಯೂಜಿಲೆಂಡಿನ ಮರದಮನೆಯಲ್ಲಿರುವ ಹೋಟೆಲ್

ನ್ಯೂಜಿಲೆಂಡಿನಲ್ಲಿ ಅತಿ ಪುರಾತನವಾದ, ಅತಿ ಎತ್ತರ ಬೆಳೆಯುವ ರೆಡ್ವುಡ್ ಎಂಬ ಮರಗಳಿವೆ. ನೆಟ್ಟನೇರದ ಕಂಭಗಳಂತೆ ಬೆಳೆಯುವ ಈ ಮರದ ಮೇಲೆ ಸುಮಾರು ಮೂವತ್ತೆರಡು ಅಡಿ ಎತ್ತರದಲ್ಲಿ ಮರದಮನೆಗಳನ್ನು ನಿರ್ಮಿಸಲಾಗಿದ್ದು ಇದರಲ್ಲಿ ರೆಸ್ಟೋರೆಂಟ್ ಒಂದನ್ನು ಪ್ರಾರಂಭಿಸಲಾಗಿದೆ. ಆದರೆ ಈ ರೆಸ್ಟೋರೆಂಟಿನ ಆಕರ್ಷಣೆ ಇರುವುದು ಇಲ್ಲಿನ ಆಹಾರದಲ್ಲಿ ಅಲ್ಲ, ಈ ಹೋಟೆಲು ತಲುಪಲು ಏರಬೇಕಾದ ಇಳಿಜಾರಾದ ದಾರಿಯಲ್ಲಿ. ಇದನ್ನು ಕ್ರಮಿಸಲೆಂದೇ ಜನರು ಈ ಹೋಟೆಲಿಗೆ ಭೇಟಿ ನೀಡುತ್ತಾರೆ. ರಾತ್ರಿಯ ಹೊತ್ತಿನಲ್ಲಿ ಈ ಪಥ ಮತ್ತು ಗೋಲಾಕಾರದ ಹೋಟೆಲುಗಳನ್ನು ಪ್ರಖರ ಬೆಳಕಿನಿಂದ ಕೋರೈಸುವಂತೆ ಮಾಡಿ ದೂರದ ನೋಟವನ್ನು ಅದ್ಭುತವಾಗಿ ಕಾಣುವಂತೆ ಮಾಡಿರುವುದೇ ಈ ಹೋಟೆಲಿನ ವೈಶಿಷ್ಟ್ಯವಾಗಿದೆ.

English summary

10 Weird Restaurants In The World

"There is no sincerer love than the love of food"- George Bernard Shaw Food is the soul for our survival and it is our necessity too. But now it has become bigger than that. The best of the food creations are awarded and it has become a challenge to the human race to invent more and more
X
Desktop Bottom Promotion