For Quick Alerts
ALLOW NOTIFICATIONS  
For Daily Alerts

ಪಿಜಿ ಜೀವನದಲ್ಲಿ ಮಹಿಳೆಯರು ಅನುಭವಿಸುವ ಸವಾಲುಗಳು

By Super
|

ಇಂದು ಹೆಚ್ಚು ಹೆಚ್ಚು ಹೆಣ್ಣು ಮಕ್ಕಳು ವಿದ್ಯಾವಂತರಾಗುತ್ತಿದ್ದಾರೆ. ಪುರುಷರಿಗೆ ಸರಿಸಮಾನರಾಗಿ ಸಮಾಜದಲ್ಲಿ ದುಡಿದು ಉನ್ನತಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಇದಕ್ಕಾಗಿ ಹುಟ್ಟೂರನ್ನು ಬಿಟ್ಟು ನಗರಗಳೆಡೆಗೆ, ಕೆಲವೊಮ್ಮೆ ತಮ್ಮ ರಾಜ್ಯವನ್ನು ತೊರೆದು ಬೇರೆ ರಾಜ್ಯಗಳಿಗೆ ಧಾವಿಸುವುದು ಅನಿವಾರ್ಯವಾಗುತ್ತದೆ. ಹೀಗೇ ಆಗಮಿಸಿದ ಯುವತಿಯರಿಗೆ ವಾಸ್ತವ್ಯಕ್ಕಾಗಿ ಸುಲಭವಾಗಿ ಕಂಡುಬರುವ ಮಾರ್ಗವೆಂದರೆ ಪೀಜಿ ಅಥವಾ ಪೇಯಿಂಗ್ ಗೆಸ್ಟ್ (ದರ ನೀಡುವ ಅತಿಥಿ).

ಇದು ಒಂದು ತರಹಾ ಮಿಲಿಟರಿ ಬ್ಯಾರಕ್ಕುಗಳು ಅಥವಾ ಹಾಸ್ಟೆಲಿನ ಜೀವನ. ಆದರೆ ಅಲ್ಲಿಗೂ ಇಲ್ಲಿಗೂ ಕೊಂಚ ವ್ಯತ್ಯಾಸವಿರುತ್ತದೆ. ಏನೆಂದರೆ ಹಾಸ್ಟೇಲ್‌ಗಳು ತಾವೆಷ್ಟು ವರ್ಷ ಇರುತ್ತೇವೆ ಎಂಬ ಅರಿವು ಇರುತ್ತದೆ ಹಾಗೂ ವಿದ್ಯಾಭ್ಯಾಸ ಮೊದಲ ಪ್ರಾಶಸ್ತ್ಯವಾಗಿರುತ್ತದೆ. ಜೊತೆಯಲ್ಲಿರುವವರೂ ಸರಿಸುಮಾರು ಒಂದೇ ವಯಸ್ಸಿನವರು ಹಾಗೂ ಒಂದೇ ಅವಧಿಯಲ್ಲಿ ಬಂದಿರುವವರು ಹಾಗೂ ಜೊತೆಗೇ ಹೊರಹೋಗುವವರಾಗಿರುತ್ತಾರೆ.

ಆದರೆ ಪೀಜಿಯಲ್ಲಿ ಹಾಗಲ್ಲ, ಪ್ರತಿಬಾರಿಯೂ ಬರುವವರು ಹೋಗುವವರು ಬದಲಾಗುತ್ತಾ ಇರುತ್ತಾರೆ. ಹೆಚ್ಚಿನವರು ಉದ್ಯೋಗಸ್ಥೆಯಾಗಿರುವುದರಿಂದ ವಯಸ್ಸು, ಹುಟ್ಟೂರು, ವಾಸಿಸುತ್ತಿರುವ ಸ್ಥಳ, ಬೆಳೆದುಬಂದಿರುವ ವಾತಾವರಣ ಮೊದಲಾದವು ಬೇರೆಬೇರೆಯಾಗಿರುತ್ತವೆ. ಪರಿಣಾಮವಾಗಿ ವಿವಿಧ ಸಂಸ್ಕೃತಿಗಳ ನಡುವೆ ಬೆರೆಯಬೇಕಾಗಿ ಬರುತ್ತದೆ. ಕೊಂಚ ಅನುಕೂಲವಾದ ತಕ್ಷಣ ತಮ್ಮದೇ ಕೆಲವು ಸಂಗಡಿಗರನ್ನು ಒಟ್ಟು ಮಾಡಿ ಫ್ಲಾಟ್ ಒಂದನ್ನು ಬಾಡಿಗೆಗೆ ಪಡೆದು ಪ್ರತ್ಯೇಕವಾಗಿ ವಾಸಿಸಲು ಪೀಜಿಯಿಂದ ದೂರವಾದರೂ ಪೀಜಿಯಲ್ಲಿ ಕಳೆದ ಪ್ರತಿಕ್ಷಣವೂ ಸ್ಮರಣೀಯವಾಗಿರುತ್ತದೆ. ಏಕೆಂದರೆ ಈ ಜಗತ್ತಿನಲ್ಲಿ ಜೀವಿಸಲು ಈ ಪೀಜಿಯಲ್ಲಿ ಹೆಚ್ಚಿನ ಜ್ಞಾನ, ಶಕ್ತಿ ಹಾಗೂ ಸಾಮರ್ಥ್ಯವನ್ನು ಪಡೆದಿರುವುದು ಮಾತ್ರ ಅಲ್ಲಗಳೆಯಲಾಗದು.

Things Girls Staying as Paying Guest Can Relate To

ಪೀಜಿಯ ಜೀವನ ಪ್ರಾರಂಭದಲ್ಲಿ ಅತಿ ಕಷ್ಟಕರವಾಗಿದ್ದರೂ ದಿನಕಳೆದಂತೆ ಪೀಜಿಯ ಸಾಂಗತ್ಯ ಹಿತಕರವಾಗತೊಡಗುತ್ತದೆ. ದೇಶದ, ನಮ್ಮದೇ ರಾಜ್ಯದ ವಿವಿಧ ಊರುಗಳಿಂದ ಆಗಮಿಸಿರುವವರ ಸುಖ ದುಃಖಗಳಲ್ಲಿ ಭಾಗಿಯಾಗಲು ಅವಕಾಶ ದೊರೆತು ಜೀವನದ ವಿವಿಧ ಮಜಲುಗಳ ಪರಿಚಯವಾಗುತ್ತದೆ. ಹುಟ್ಟುಹಬ್ಬದ ಪಾರ್ಟಿ, ಗೊಡ್ಡುಹರಟೆ, ವಸ್ತುಗಳನ್ನು ಹಂಚಿಕೊಳ್ಳುವುದು, ಇನ್ನೊಂದು ಸಂಸ್ಕೃತಿಯಿಂದ ಬಂದವರ ಬಗ್ಗೆ ಅರಿಯುವುದು ಮೊದಲಾದವು ಪ್ರತಿದಿನದ ಪೀಜಿಯ ಚಟುವಟಿಕೆಗಳಾಗುತ್ತವೆ. ಸುತ್ತಲಿನಲ್ಲಿರುವ ಕೆಲವರು ಅತ್ಯಂತ ಆತ್ಮೀಯರಾದರೆ ಕೆಲವರ ಬಗ್ಗೆ ದ್ವೇಶ ಹೆಚ್ಚುತ್ತಾ ಹೋಗುತ್ತದೆ. ಪೀಜಿಯ ಜೀವನದಲ್ಲಿ ಈ ಕೆಳಕಂಡ ಸ್ವಾರಸ್ಯಗಳು ಜೀವನಪರ್ಯಂತ ಮೆಲುಕು ಹಾಕುವಂತಿರುತ್ತವೆ.

ಇನ್ನೊಂದು ಸಂಸ್ಕೃತಿಯ ಬಗ್ಗೆ ಮೂಡುವ ಚಕಿತತೆ
ಸಾಮಾನ್ಯವಾಗಿ ಪೀಜಿಯಲ್ಲಿರುವ ಇತರರು ಬೇರೆ ರಾಜ್ಯಗಳಿಂದ ಅಥವಾ ನಮ್ಮದೇ ರಾಜ್ಯದ ಬೇರೆ ಊರುಗಳಿಂದ ಆಗಮಿಸಿರುವವರಾಗಿರುತ್ತಾರೆ. ಪ್ರತಿಯೊಬ್ಬರ ಸಂಸ್ಕೃತಿಗೆ ತಕ್ಕಂತೆ ಅವರ ಹಾವಭಾವ, ಆಚಾರ-ವಿಚಾರ, ನಡೆ-ನುಡಿಗಳು ಬೇರೆಬೇರೆಯಾಗಿರುತ್ತವೆ. ಈ ಬಗ್ಗೆ ಅರಿವಿಲ್ಲದ ನಿಮಗೆ ಆ ಆಚರಣೆಗಳು ಚಕಿತರನ್ನಾಗಿಸುತ್ತವೆ. ಆದರೆ ಕಾಲಕ್ರಮೇಣ ಇವು ಅಭ್ಯಾಸವಾಗಿ ವೈವಿಧ್ಯತೆಯ ಬಗ್ಗೆ ಅಭಿಮಾನ ಮೂಡುತ್ತದೆ.

ಸ್ನಾನಕ್ಕೂ ಶೌಚಕ್ಕೂ ಸರತಿ
ಸಾಮಾನ್ಯವಾಗಿ ಪ್ರತಿಯೊಂದೂ ಪೀಜಿಯಲ್ಲಿ ಕಂಡುಬರುವ ತೊಂದರೆ ಎಂದರೆ ಶೌಚಾಲಯಕ್ಕೆ ನಿಗದಿಗೊಳಿಸುವ ಸಮಯ. ಪ್ರತಿಯೊಬ್ಬರಿಗೂ ಬೆಳಗ್ಗಿನ ಸಮಯವೇ ಬೇಕು, ಎಲ್ಲರಿಗೂ ಹೆಚ್ಚಿನ ಸಮಯವೇ ಬೇಕು. ಇರುವ ಸಮಯವನ್ನು ಎಲ್ಲರಿಗೂ ಕೊಡಲು ಸಾಧ್ಯವಿಲ್ಲ. ಅಂತೆಯೇ ಒಬ್ಬರಿಗೆ ಇಷ್ಟು ನಿಮಿಷ ಎಂಬ ವೇಳಾಪಟ್ಟಿಯನ್ನು ಶೌಚಾಲಯದ ಬಾಗಿಲಿನ ಮೇಲೆ ಪ್ರತಿಷ್ಠಾಪಿಸಲಾಗುತ್ತದೆ. ಆ ಪ್ರಕಾರ ಅಷ್ಟೇ ನಿಮಿಷಗಳಲ್ಲಿ ನಿಮ್ಮೆಲ್ಲಾ ಕೆಲಸಗಳನ್ನು ಮುಗಿಸಿ ಹೊರಬರಬೇಕು. ಒಂದು ನಿಮಿಷ ತಡವಾದರೂ ಮುಂದಿನ ಸರತಿಯ ಯುವತಿ ದಡದಡನೇ ಬಾಗಿಲು ಒಡೆಯುವಂತೆ ಬಡಿಯಲು ಪ್ರಾರಂಭಿಸುತ್ತಾಳೆ. ಕೆಲವೊಮ್ಮೆ ತುರ್ತಾಗಿ ಶೌಚಾಲಯಕ್ಕೆ ಕೂಡಲೇ ಹೋಗಬೇಕಾದ ಅನಿವಾರ್ಯತೆಯುಂಟಾದಾಗ ಮಮತಾಮಯಿಯಾದ ಸ್ನೇಹಿತೆ ತನ್ನ ಸಮಯವನ್ನು ಬಿಟ್ಟುಕೊಟ್ಟು ನೆರವಾಗುವುದು ಜೀವನಪರ್ಯಂತ ನೆನಪಿರುವ ವಿಷಯಗಳಲ್ಲೊಂದಾಗುತ್ತದೆ.

ಹಣವಿಲ್ಲದೇ ಕೋಣೆ ಹಂಚಿಕೊಳ್ಳುವ ಕ್ರಿಮಿಗಳು
ಪೀಜಿಯಲ್ಲಿ ನಿಮ್ಮೊಂದಿಗೆ ಹಲವು ಕ್ರಿಮಿಗಳೂ ಆಶ್ರಯ ಪಡೆದಿರುತ್ತವೆ. ಎಷ್ಟು ಕೀಟನಾಶಕ ಸಿಂಪಡಿಸಿದರೂ, ಅಂದು ಮಾಯವಾದ ಕ್ರಿಮಿಗಳು ಎರಡನೇ ದಿನ 'ನಾವು ಬಂದೆವು' ಎಂದು ಯಾವುದೋ ಮೂಲೆಯಲ್ಲಿ ಮತ್ತೆ ವಿಜೃಂಭಿಸುತ್ತವೆ. ತಿಗಣೆ, ಜಿರಳೆ, ಇಲಿ, ಹಲ್ಲಿ ಮೊದಲಾದವುಗಳನ್ನು ಕಾಲಕ್ರಮೇಣ ಅಲಕ್ಷಿಸಲು ಕಲಿಯುತ್ತೀರಿ.

ಸಮಯ, ವಸ್ತುಗಳನ್ನು ಹಂಚಿಕೊಳ್ಳುವುದು ಅಭ್ಯಾಸವಾಗುತ್ತದೆ
ಪೀಜಿಯಲ್ಲಿ ಅನಿವಾರ್ಯವಾದ ಇನ್ನೊಂದು ವಿಷಯವೆಂದರೆ ಹಂಚಿಕೊಳ್ಳುವುದು. ಸಮಯ, ಟೀವಿ, ಆಹಾರ, ಮಲಗುವ ಸಮಯ, ಉಡುಗೆ ಮೊದಲಾದವು ಹಂಚಿಕೊಳ್ಳುವ ಮೂಲಕ ಸ್ನೇಹ ವೃದ್ಧಿಸುತ್ತದೆ.

ಸಿಟ್ಟುಬರಿಸುವ ಕೆಲವು ಸಂಗಾತಿಗಳು
ಕೆಲವು ಸಂಗಾತಿಗಳು ಜೀವಸಂಗಾತಿಗಳಾದರೆ ಕೆಲವರು ಪೂರ್ವಜನ್ಮದ ವೈರಿಗಳಂತೆ ಕಂಡುಬರುತ್ತಾರೆ. ತಮ್ಮ ಆಫೀಸಿನ ಕೆಲಸವನ್ನು ಮನೆಗೆ ತಂದು ಪೂರ್ಣಗೊಳಿಸಲು ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು ಇಡಿಯ ಕೋಣೆಯ ದೀಪಗಳನ್ನು ಬೆಳಗಿಸುವುದು, ಬೇರೆಯವರಿಗೆ ತೊಂದರೆಯಾಗುವ ಬಗ್ಗೆ ಕಿಂಚಿತ್ತೂ ಯೋಚಿಸದೇ ತಮ್ಮ ಭಾಷೆಯ ಹಾಡುಗಳನ್ನು ಜೋರಾಗಿ ಹಾಕುವುದು, ಒದ್ದೆ ಬಟ್ಟೆಗಳನ್ನು ಮನಬಂದಂತೆ ಒಣಗಿಸುವುದು, ಗಲೀಜಾದ ಬಟ್ಟೆಗಳನ್ನು ಎಲ್ಲೆಂದಲ್ಲಿ ಎಸೆಯುವುದು, ಸ್ವಚ್ಛತೆಯನ್ನು ಕಾಪಾಡದೇ ಇರುವುದು, ನಿಮಗೆ ಸಲ್ಲದ ಆಹಾರ, ಪಾನೀಯಗಳನ್ನು ಸೇವಿಸುವುದು ಮೊದಲಾದವುಗಳ ಮೂಲಕ ನಿಮ್ಮಲ್ಲಿ ವೈರತ್ವವನ್ನು ಮೂಡಿಸುತ್ತಾರೆ.

ಏರಿದ ಬಾಡಿಗೆ ಬಗ್ಗೆ ಮನೆಮಾಲೀಕನನ್ನು ಹಳಿಯುವುದು
ಸರ್ವೇಸಾಧಾರಣವಾದ ಇನ್ನೊಂದು ತೊಂದರೆ ಎಂದರೆ ಏರಿದ ಬಾಡಿಗೆ ಬಗ್ಗೆ ಮನೆಯ ಮಾಲಿಕರೊಂದಿಗೆ ಜಗಳವಾಡುವುದು. ಬೇರೆಡೆ ಬಾಡಿಗೆ ಬಗ್ಗೆ ಸ್ಪಷ್ಟ ಕಾನೂನುಗಳಿದ್ದರೂ ಪೀಜಿಯಲ್ಲಿ ಮಾತ್ರ ಈ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ತಮ್ಮದೇ ನಿಯಮಗಳನ್ನು ಸ್ಥಾಪಿಸುವುದು ಮನೆ ಮಾಲಿಕರಿಗೆ ಅಭ್ಯಾಸವಾಗಿರುತ್ತದೆ. ತದಕಾರಣ ಪ್ರತಿತಿಂಗಳೂ ಬಾಡಿಗೆ ಏರಿಕೆಯ ಪುಂಗಿ ಊದುತ್ತಲೇ ಇರುತ್ತಾರೆ. ಪೀಜಿಯ ಸದಸ್ಯರು ಪ್ರತಿತಿಂಗಳೂ ಏರಿದ ಬಾಡಿಗೆ ಬಗ್ಗೆ ತಮ್ಮ ಆಕ್ಷೇಪಣೆಗಳನ್ನು ಒಡ್ಡುತ್ತಲೇ ಅನಿವಾರ್ಯವಾಗಿ ಏರಿದ ಬಾಡಿಗೆ ನೀಡುತ್ತಲೇ ವಾಸ್ತವ್ಯ ಮುಂದುವರೆಸುತ್ತಾರೆ. ಇದಕ್ಕೆ ಎಲ್ಲಾ ಮನೆಮಾಲಿಕರು ನೀಡುವ ಕಾರಣ ಮಾತ್ರ ಒಂದೇ. "ಈ ಪೀಜಿ ನಿಮಗೆ ಅತ್ಯಂತ ಸುರಕ್ಷತೆ ನೀಡುತ್ತದೆ", "ನಿಮಗೆ ಇದಕ್ಕಿಂತ ಒಳ್ಳೆಯ ಮತ್ತು ಸುರಕ್ಷಿತ ಪೀಜಿ ಇನ್ನೊಂದು ಸಿಗಲಾರದು". ಎಷ್ಟೇ ತೊಂದರೆಗಳಿದ್ದರೂ ಪೀಜಿಯ ಜೀವನ ಜೀವನಪರ್ಯಂತ ಸುಂದರ ನೆನಪುಗಳನ್ನು ಮಾತ್ರ ಉಳಿಸುತ್ತದೆ.

English summary

Things Girls Staying as Paying Guest Can Relate To

Paying guest is every girl's nightmare as well as second home. Girls travel cities (sometimes states) in search of job. After getting a good job there hunt for paying guest begins. It is a learning experience for many as paying guest accommodation teaches them to manage things by their own, be responsible and importance of family and friends.
Story first published: Wednesday, December 17, 2014, 17:03 [IST]
X
Desktop Bottom Promotion